ನಾಯಕರ ನಡುವಿನ ವೈಮನಸ್ಯ

7

ನಾಯಕರ ನಡುವಿನ ವೈಮನಸ್ಯ

ಗುರುರಾಜ ಕರಜಗಿ
Published:
Updated:

ಕೋಸಲ ರಾಜನ ಹಿರಿಯ ಅಮಾತ್ಯರಲ್ಲಿ ಹೊಂದಾಣಿಕೆ ಇರಲಿಲ್ಲ. ಒಬ್ಬರನ್ನು ಕಂಡರೆ ಮತ್ತೊಬ್ಬರು ಕೆಂಡ ಕಾರುತ್ತಿದ್ದರು. ತೀರ ಸಣ್ಣ ಸಣ್ಣ ವಿಷಯದಲ್ಲಿ ಇಬ್ಬರೂ ತಪ್ಪುಗಳನ್ನು ಕಂಡು ಹಿಡಿದು ವಾಗ್ವಾದ ಮಾಡುತ್ತಿದ್ದರು. ಇವರ ಜಗಳದ ವಿಷಯ ರಾಜ್ಯದಲ್ಲೆಲ್ಲ ಚರ್ಚೆಯ ವಿಷಯವಾಗಿತ್ತು. ರಾಜನಿಗೆ ಕೂಡ ಈ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ ಎಂಬುದು ಸಮಸ್ಯೆಯಾಗಿತ್ತು. ದಾರಿ ಕಾಣದೆ ಆತ ಸಮ್ಯಕ್ ಬುದ್ಧರನ್ನು ಕರೆದು ಸಮಸ್ಯೆಯನ್ನು ಪರಿಹರಿಸಲು ಕೇಳಿಕೊಂಡ. ಬುದ್ಧ ಬಂದು ಇಬ್ಬರೂ ಹಿರಿಯರನ್ನು ಕರೆದು ಬುದ್ಧಿ ಹೇಳಿ ಒಂದು ತನ್ನದೇ ಕಥೆಯನ್ನು ಹೇಳಿದ.

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯವಾಳುವಾಗ ಒಮ್ಮೆ ಕಾರ್ತಿಕ ಉತ್ಸವದ ಘೋಷಣೆಯಾಯಿತು. ಅದರ ಭಾಗವಾಗಿ ದೊಡ್ಡ ಜಾತ್ರೆ ನಡೆಯಿತು. ಅದನ್ನು ನೋಡಲು ಮನುಷ್ಯರು, ದೇವತೆಗಳು, ನಾಗಗಳು, ಗರುಡರು, ಯಕ್ಷರು, ಕಿನ್ನರರು ಎಲ್ಲರೂ ಬಂದಿದ್ದರು. ಒಂದು ಕಡೆಗೆ ಭಾರೀ ಪ್ರದರ್ಶನ ನಡೆದಿತ್ತು. ಸುತ್ತಲೂ ಜನ ನೆರೆದು ಬೆರಗುಗಣ್ಣಿನಿಂದ ಪ್ರದರ್ಶನವನ್ನು ನೋಡುತ್ತಿದ್ದರು. ಎಲ್ಲರೂ ಮೈಮರೆತಿದ್ದರು. ಆ ಒಬ್ಬ ನಾಗ ಪಕ್ಕದಲ್ಲಿ ನಿಂತವನು ಗರುಡನೆಂಬುದನ್ನು ಅರಿಯದೆ ಅವನ ಹೆಗಲಮೇಲೆ ಕೈಯನ್ನಿಟ್ಟುಬಿಟ್ಟ. ಗರುಡ ಯಾರು ಕೈ ಇಟ್ಟವರು ಎಂದು ತಿರುಗಿ ನೋಡಿದ. ಅವನಿಗೆ ಆಶ್ಚರ್ಯವೂ ಆಯಿತು, ಕೋಪವೂ ಬಂತು. ಈ ನಾಗನಿಗೆ ಗರುಡನ ಹೆಗಲಮೇಲೆ ಕೈ ಇಡುವಷ್ಟು ಧೈರ್ಯವೇ? ದುರುಗುಟ್ಟಿಕೊಂಡು ನೋಡಿದ. ನಾಗನಿಗೆ ಎದೆಬಡಿತ ನಿಂತುಹೋಯಿತು. ತನ್ನ ಪ್ರಾಣ ಉಳಿಯಲಾರದೆಂದು ಭಯವಾಗಿ ಅಲ್ಲಿಂದ ಓಡಿದ. ಗರುಡ ಬಿಟ್ಟಾನೆಯೇ? ಅವನು ನಾಗನನ್ನು ಬೆನ್ನಟ್ಟಿದ.

ಆಗ ಬೋಧಿಸತ್ವ ಒಬ್ಬ ತಪಸ್ವಿಯಾಗಿದ್ದ. ಅವನು ಆ ಸಮಯದಲ್ಲಿ ವಲ್ಕಲವನ್ನು ತೆಗೆದಿಟ್ಟು, ಸ್ನಾನದ ಬಟ್ಟೆಯನ್ನುಟ್ಟು ನದಿಯಲ್ಲಿ ಇಳಿದಿದ್ದ. ಓಡಿಬಂದ ನಾಗ ತನ್ನನ್ನು ಉಳಿಸಿಕೊಳ್ಳಲು ಬೋಧಿಸತ್ವ ತೆಗೆದಿಟ್ಟಿದ್ದ ವಲ್ಕಲದಲ್ಲಿ ಒಂದು ಪುಟ್ಟ ಮಣಿಯಾಗಿ ಸೇರಿಕೊಂಡ. ತಾನು ಋಷಿಯ ವಲ್ಕಲದಲ್ಲಿರುವುದರಿಂದ ಗರುಡ ಮುಟ್ಟಲಾರನೆಂಬ ನಂಬಿಕೆ ನಾಗನಿಗೆ ಇತ್ತು. ಗರುಡನೂ ಅಲ್ಲಿಗೆ ಬಂದ. ನಾಗ ವಲ್ಕಲದಲ್ಲಿ ಸೇರಿಕೊಂಡದ್ದನ್ನು ಗಮನಿಸಿದ. ಅವನಿಗೆ ಋಷಿಯ ವಲ್ಕಲದಲ್ಲಿ ತುಂಬ ಗೌರವ. ಆದ್ದರಿಂದ ಆತ ಬೋಧಿಸತ್ವನ ಬಳಿಗೆ ಬಂದು ಹೇಳಿದ, ‘ಭಂತೇ, ನನಗೆ ಹಸಿವಾಗಿದೆ ಮತ್ತು ಒಂದು ನಾಗನ ಮೇಲೆ ತುಂಬ ಕೋಪ ಬಂದಿದೆ. ಆದರೆ ಆ ನಾಗ ತಮ್ಮ ವಲ್ಕಲದಲ್ಲಿ ಸೇರಿಕೊಂಡಿದೆ. ನಾನು ಅದನ್ನು ಮುಟ್ಟಲಾರೆ. ದಯವಿಟ್ಟು ತಾವು ವಲ್ಕಲವನ್ನು ತೆಗೆದುಕೊಂಡು ನಾಗನನ್ನು ಹೊರಬಿಟ್ಟರೆ ನಾನು ಕೃತಜ್ಞ’.

ಬೋಧಿಸತ್ವ ಈ ಮಾತುಗಳನ್ನು ಕೇಳಿಸಿಕೊಂಡು ಮನದಲ್ಲೇ ನಕ್ಕ. ನದಿ ನೀರಿನಲ್ಲಿ ನಿಂತುಕೊಂಡೇ ಗರುಡನ ವಿನಯವನ್ನು, ತಾಳ್ಮೆಯನ್ನು ಪ್ರಶಂಸೆ ಮಾಡಿದ. ಹಾಗೆ ಮಾತನಾಡುತ್ತಲೇ ಕ್ಷಮಾಗುಣದ ಬಗ್ಗೆ ಹೇಳಿದ. ಅದು ಹೇಗೆ ವ್ಯಕ್ತಿಯನ್ನು ದೈವತ್ವಕ್ಕೆ ಕರೆದುಕೊಂಡು ಹೋಗುತ್ತದೆ ಎಂಬುದನ್ನು ತಿಳಿಸಿದ. ಗರುಡನಿಗೆ ಅರಿವಾಗದಂತೆ ಅವನ ಮನಸ್ಸನ್ನು ಬದಲಾಯಿಸಿ ಕೋಮಲವನ್ನಾಗಿಸಿದ. ಅದು ಬದಲಾಗಿದೆ ಎಂದು ತಿಳಿದಾಗ ನೀರಿನಿಂದ ಹೊರಗೆ ಬಂದು ಗರುಡನನ್ನು ಹಾಗೂ ನಾಗನನ್ನು ತನ್ನ ಪರ್ಣಕುಟಿಯಲ್ಲಿ ಕರೆದುಕೊಂಡು ಹೋಗಿ ನಾಗನ ಮನಸ್ಸನ್ನು ಬದಲಾಯಿಸಿದ. ನಂತರ ಇಬ್ಬರಿಗೂ ಊಟಕ್ಕೆ ಹಾಕಿ ಸ್ನೇಹಿತರನ್ನಾಗಿ ಮಾಡಿ ಕಳುಹಿಸಿದ.

ಈ ಕಥೆಯನ್ನು ಸಮ್ಯಕ್ ಬುದ್ಧ ಅಮಾತ್ಯರಿಗೆ ಹೇಳಿ ನಾಗ, ಗರುಡರೇ ಸ್ನೇಹಿತರಾಗುವುದಾದರೆ ತಮಗಿರುವ ಕಷ್ಟವೇನು? ರಾಜ್ಯದ ಹಿರಿಯರು ಹೀಗೆ ಕಿತ್ತಾಡಿದರೆ ಜನತೆಯ ಕಣ್ಣಲ್ಲಿ ಸಣ್ಣವರಾಗುವುದಿಲ್ಲವೇ? ಹೀಗೆಲ್ಲ ವಿವರಿಸಿ ಅವರಿಬ್ಬರನ್ನೂ ಸೋತಾಪನ್ನರನ್ನಾಗಿ ಮಾಡಿದ. ನಂತರ ಅವರಿಬ್ಬರೂ ಆತ್ಮೀಯರಾಗಿ ಬದುಕಿ ರಾಜನಿಗೆ ಸಹಕಾರಿಗಳಾದರು.

ಇಂದಿಗೂ ನಮ್ಮ ನಾಯಕರ ನಡುವಿನ ಹೋರಾಟ, ಅವರ ವೈರತ್ವಗಳನ್ನು ಕಂಡಾಗ, ಅದರಿಂದ ಸಮಾಜಕ್ಕಾಗುವ ಹಾನಿಯನ್ನು ಗಮನಿಸಿದಾಗ ಮತ್ತೊಮ್ಮೆ ಬುದ್ಧನೇ ಬರಬೇಕೇನೋ ಎನ್ನಿಸುತ್ತದಲ್ಲವೇ?

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !