ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಅಂಗಾಂಗ ಸಂಬಂಧ

Last Updated 20 ಮೇ 2019, 19:38 IST
ಅಕ್ಷರ ಗಾತ್ರ

ಏಕದಿಂದಲನೇಕ ಮತ್ತನೇಕದಿನೇಕ |
ವೀ ಕ್ರಮವೆ ವಿಶ್ವದಂಗಾಂಗ ಸಂಬಂಧ ||
ಲೋಕದಲಿ ಜಾತಿಯಲಿ ವ್ಯಕ್ತಿಯಲಿ ಸಂಸ್ಥೆಯಲಿ
ಸಾಕಲ್ಯದರಿವಿರಲಿ - ಮಂಕುತಿಮ್ಮ ||

ಪದ-ಅರ್ಥ: ಏಕದಿಂದಲನೇಕ=ಏಕದಿಂದ+ಅನೇಕ, ಮತ್ತನೇಕದಿನೇಕ=ಮತ್ತೆ+ಅನೇಕದಿಂ+ಏಕ, ಸಾಕಲ್ಯದರಿವಿರಲಿ=ಸಾಕಲ್ಯದ(ಪರಿಪೂರ್ಣದ)+ಅರಿವಿರಲಿ.
ವಾಚ್ಯಾರ್ಥ: ಏಕದಿಂದ ಅನೇಕವಾಗುವುದು, ಮತ್ತೆ ಅನೇಕದಿಂದ ಏಕವಾಗುವುದು ಇದೇ ವಿಶ್ವದ ಅಂಗಾಂಗ ಸಂಬಂಧ. ಇದು ಲೋಕದಲ್ಲಿ, ಜಾತಿಯಲ್ಲಿ, ವ್ಯಕ್ತಿಯಲ್ಲಿ, ಸಂಸ್ಥೆಯಲ್ಲಿ ಇರುವಂಥದ್ದು. ಅದಕ್ಕೆ ಪರಿಪೂರ್ಣದ ಅರಿವು ಬೇಕು.

ವಿವರಣೆ: ನಮ್ಮ ಅಧ್ಯಾತ್ಮ ಪರಂಪರೆಯಲ್ಲಿ ಮೂಲ ಸಿದ್ಧಾಂತವೆಂದರೆ ಇಡೀ ವಿಶ್ವ ಬ್ರಹ್ಮ ವಸ್ತುವಿನಿಂದ ಆಯಿತು. ಅದನ್ನು ಬ್ರಹ್ಮವೆನ್ನಿ, ಪರಮಾತ್ಮ, ಭಗವಂತ, ದೇವರು ಎಂಬ ಯಾವ ಹೆಸರಿನಿಂದ ಕರೆದರೂ ಅದೊಂದು ಅಪರಂಪಾರ ಶಕ್ತಿ. ಎಲ್ಲ ಸೃಷ್ಟಿಗೂ ಅದೇ ಕಾರಣ ಮತ್ತು ಅದೇ ಮೊದಲು. ಅದು ಮೊದಲು ಒಂದೇ ಆಗಿ ಇದ್ದದ್ದು ತನ್ನ ಇಚ್ಛೆಯಿಂದ ಎರಡಾಯಿತು, ನೂರಾಯಿತು, ಕೋಟಿ ಕೋಟಿಯಾಯಿತು. ನಮ್ಮಲ್ಲಿ ಎಂಭತ್ನಾಲ್ಕು ಲಕ್ಷ ಜೀವರಾಶಿಗಳಿವೆ ಎಂದು ನಂಬುತ್ತೇವೆ. ಇವೆಲ್ಲ ಆ ಮೂಲ ಒಂದರಿಂದಲೇ ಬಂದದ್ದು. ಅದನ್ನೇ ಕಗ್ಗ-ಏಕದಿಂದ ಅನೇಕ ಎನ್ನುತ್ತದೆ. ಹೀಗೆ ಅನೇಕವಾದವುಗಳು ತಮ್ಮ ತಮ್ಮ ಜೀವಿತಾವಧಿಗಳನ್ನು ಮುಗಿಸಿಕೊಂಡು ಮತ್ತೆ ಆ ಏಕವನ್ನೇ ಸೇರುತ್ತವೆ. ಆದ್ದರಿಂದ ಅನೇಕವಾಗಿದ್ದುದು ಮತ್ತೆ ಏಕವಾಗುತ್ತದೆ. ಇದೇ ವಿಶ್ವದಲ್ಲಿರುವ ಅಂಗಾಂಗ ಸಂಬಂಧ.

ತೈತ್ತರೀಯ ಉಪನಿಷತ್ತು ಹೇಳುತ್ತದೆ:
ಅಸನ್ನೇವ ಸ ಭವತಿ |
ಅಸದ್ಬ್ರಹ್ಮೇತಿ ವೇದ ಚೇತ್ |
ಅಸ್ತಿ ಬ್ರಹ್ಮೇತಿ ಚೇದ್ಪೇದ |
ಸನ್ತಮೇನಂ ತತೋ ವಿದು: ||

‘ಯಾವನು ಬ್ರಹ್ಮನು ಇಲ್ಲವೆಂದು ತಿಳಿಯುತ್ತಾನೋ, ಅವನು ತಾನೇ ಇಲ್ಲವಾಗುತ್ತಾನೆ. ಯಾರು ಬ್ರಹ್ಮನು ಇದ್ದಾನೆಂದು ತಿಳಿಯುತ್ತಾನೋ ಅವನು ತನ್ನ ಇರುವಿಕೆಯನ್ನು ತಿಳಿಯುತ್ತಾನೆ ಅಥವಾ ಒಳ್ಳೆಯದು (ಸತ್) ಎಂಬುದನ್ನು ತಿಳಿಯುತ್ತಾನೆ’.

ಹೀಗೆಂದರೆ ಏನರ್ಥ? ಮೂಲವಾದ ಬ್ರಹ್ಮವಸ್ತುವಿಗೂ, ಅವನಿಂದ ಸೃಷ್ಟಿಯಾದ ಮನುಷ್ಯನಿಗೂ ಒಂದು ವಿಶೇಷವಾದ ಸಂಬಂಧ ಉಂಟು. ಫ್ರೆಂಚ್‌ ತತ್ವಜ್ಞಾನಿ ರೆನೆ ಡೆಕಾರ್ಟ ಹೇಳಿದ, ‘Cogito ergo sum’. ಹೀಗೆಂದರೆ ನಾನು ವಿಚಾರಮಾಡುತ್ತಿದ್ದೇನೆ; ಆದ್ದರಿಂದ ಇದ್ದೇನೆ. ವಿಚಾರವಿರಬೇಕಾದರೆ ವಿಚಾರ ಮಾಡುವವನೊಬ್ಬನಿರಬೇಕು. ಅವನಿದ್ದರೆ ಅವನಿಗೊಂದು ಮೂಲವಿರಬೇಕು, ಹುಟ್ಟಿರಬೇಕು, ಇತ್ಯಾದಿ. ಈ ಸಂಬಂಧ ಲೋಕದಲ್ಲಿ, ಜಾತಿಯಲ್ಲಿ, ವ್ಯಕ್ತಿಯಲ್ಲಿ ಮತ್ತು ಸಂಸ್ಥೆಗಳಲ್ಲಿ ಇದ್ದೇ ಇದೆ. ಪರಿಪೂರ್ಣದ ಅರಿವಾದಾಗ ಪ್ರಪಂಚದ ಈ ಅಂಗಾಂಗ ಸಂಬಂಧದ ಸ್ಪಷ್ಟಕಲ್ಪನೆ ದೊರೆತೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT