ಗುರುವಾರ , ನವೆಂಬರ್ 21, 2019
21 °C

ಸತ್ಯವಂತರೆಲ್ಲಿ ?

ಗುರುರಾಜ ಕರಜಗಿ
Published:
Updated:

ಸತ್ಯವಂತನನರಸಲೆನುತ ಪೇಟೆಗಳೊಳಗೆ |
ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು ||
ಕೆಟ್ಟುದೀ ಜಗವೆಂದು ತೊಟ್ಟ್ಟಿಯೊಳೆ ವಸಿಸಿದನು |
ತಾತ್ವಿಕ ಡಯೋಜೆನಿಸ್ – ಮಂಕುತಿಮ್ಮ || 198 ||

ಪದ-ಅರ್ಥ: ಸತ್ಯವಂತನನರಸಲೆನುತ=ಸತ್ಯವಂತನನು+ಅರಸಲೆನುತ, ವಸಿಸಿದನು=ವಾಸಿಸಿದನು.
ವಾಚ್ಯಾರ್ಥ: ಯಾರಾದರೂ ಸತ್ಯವಂತರಿದ್ದಾರೆಯೇ ಎಂದು ಹುಡುಕಲು ತತ್ವಜ್ಞಾನಿ ಡಯೋಜೆನಿಸ್ ಮಧ್ಯಾನ್ಹದಲ್ಲಿಯೇ ದೀಪವನ್ನು ಹಿಡಿದು ನಡೆದು ಕೊನೆಗೆ ಜಗತ್ತೇ ಕೆಟ್ಟು ಹೋಗಿದೆ ಎಂದು ಮಾರುಕಟ್ಟೆಯ ತೊಟ್ಟಿಯಲ್ಲೇ ವಾಸಮಾಡಿದನಂತೆ.

ವಿವರಣೆ: ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಗ್ರೀಸ್ ದೇಶದಲ್ಲಿ ಬದುಕಿದ್ದ ತತ್ವಜ್ಞಾನಿಗಳಲ್ಲಿ ಒಬ್ಬನಾಗಿದ್ದ ಡಯೋಜೆನಿಸ್‍ನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಇಲ್ಲಿ ಹೇಳಲಾಗಿದೆ. ಡಯೋಜೆನಿಸ್ ಒಬ್ಬ ವಿಕ್ಷಿಪ್ತ ಮನುಷ್ಯ, ಅತ್ಯಂತ ಸಿನಿಕ. ಸಿನಿಕ ಸಿದ್ಧಾಂತದ ಸ್ಥಾಪಕರಲ್ಲಿ ಅವನೊಬ್ಬ. ಸಿನಿಕರೆಂದರೆ ಅವರಿಗೆ ಬದುಕಿನಲ್ಲಿ ಯಾವ ಸೊಗವೂ ಕಾಣದು, ಎಲ್ಲದರಲ್ಲೂ ಏನಾದರೂ ಹುಳುಕು ಹುಡುಕಿ ಅದು ಸರಿ ಇಲ್ಲ ಎನ್ನುವಂಥವರು. ಸ್ವರ್ಗದಲ್ಲೂ ನರಕದ ವಾಸನೆಯನ್ನು ಕಾಣುವವರು.

ಅವನ ತಂದೆ ಟಂಕಸಾಲೆಯಲ್ಲಿ ನಾಣ್ಯಗಳನ್ನು ಮಾಡುತ್ತಿದ್ದರು. ಈತ ಅಲ್ಲಿ ಹೋಗಿ ಏನನ್ನೋ ಬೆರಸಿ ಲೋಹವನ್ನು ಕೆಡಿಸಿದ್ದರಿಂದ ಇವನನ್ನು ಗಡೀಪಾರು ಮಾಡಿದ್ದರು. ಆಗ ಡಯೋಜೆನಿಸ್ ಅಥೇನ್ಸಿಗೆ ಬಂದ. ಅವನ ಪ್ರಕಾರ ಎಲ್ಲರೂ ಮೋಸಗಾರರು, ಲಂಪಟರು. ಅವರಲ್ಲಿ ಸರಳತೆ ಇಲ್ಲ ಎನ್ನುತ್ತ ತಾನು ಅತಿಯಾಗಿ ಸರಳತೆಯನ್ನು ತೋರಲು ಹೋಗಿ ಅಶ್ಲೀಲವಾಗಿ ವರ್ತಿಸತೊಡಗಿದ. ಎಲ್ಲಿಯೋ ಮಲಗುವುದು, ಎಲ್ಲಿಯೋ ತಿನ್ನುವುದು, ಜನಸಂದಣಿಯಲ್ಲಿಯೇ ಮಲ, ಮೂತ್ರ ವಿಸರ್ಜನೆ ಮಾಡುವುದು ಅವನ ಜೀವನ ವಿಧಾನ. ನಾಯಿ ಹೇಗೆ ನಿರಾಳವಾಗಿ ತನಗೆ ಮನಬಂದಂತೆ ಇರುತ್ತದೋ ಹಾಗಿರಬೇಕು ಎಂದುಕೊಂಡು ಸುಮಾರು ಹಾಗೆಯೇ ಬದುಕಿದವನು.

ಒಂದು ದಿನ ಸತ್ಯವಂತರು ಯಾರಾದರೂ ಅಥೆನ್ಸಿನಲ್ಲಿ ಇದ್ದಾರೆಯೇ ಎಂದು ನೋಡಲು ಹಗಲಿನಲ್ಲಿ ದೀಪವನ್ನು ಹಿಡಿದುಕೊಂಡು ನಗರವನ್ನೆಲ್ಲ ಸುತ್ತಿಬಂದು ಕೊನೆಗೆ ಯಾರೊಬ್ಬರೂ ಸತ್ಯವಂತರಲ್ಲ ಎಂದು ತೀರ್ಮಾನಿಸಿ ಮಾರುಕಟ್ಟೆಯಲ್ಲಿದ್ದ ತೊಟ್ಟಿಯಲ್ಲೇ ಇದ್ದು ಬಿಟ್ಟನಂತೆ.

ಈ ಕಗ್ಗದಲ್ಲಿ ಎರಡು ಧ್ವನಿಗಳು ಇರುವ ಸಾಧ್ಯತೆ ಇದೆ. ಮೊದಲನೆಯದು, ಡಯೋಜೆನಿಸ್ ಮೂಲತ: ಸಿನಿಕ. ಅಂದರೆ ಒಳ್ಳೆಯದರಲ್ಲೂ ಕೆಟ್ಟ್ಟದ್ದನ್ನು ಕಾಣುವವ, ದೋಷಾನ್ವೇಷಿ. ಅವನಿಗೆ ಸತ್ಯವಂತರು ಕಾಣದಿರುವುದು ಸಹಜ. ದುರ್ಯೋಧನ ನಗರವನ್ನೆಲ್ಲ ಸುತ್ತಿ ಬಂದು ತನ್ನ ಗುರುಗಳಿಗೆ, “ಜಗತ್ತಿನಲ್ಲಿ ಒಳ್ಳೆಯವರಾರೂ ಇಲ್ಲ” ಎಂದು ಹೇಳಿದಂತೆ. ಆದರೆ ಧರ್ಮರಾಜ ನಗರ ಸುತ್ತಿ ಬಂದು, “ನನಗೆ ಕೆಟ್ಟವರಾರೂ ಕಾಣಲಿಲ್ಲ” ಎಂದ. ಅಂದರೆ ಸತ್ಯವಂತರನ್ನು ಕಾಣಲು ನಿರ್ಮಲವಾದ ಕಣ್ಣುಬೇಕು. ಎರಡನೆಯ ದೃಷ್ಟಿಯೆಂದರೆ ಕ್ಲಿಷ್ಟವಾಗುತ್ತಿರುವ ಜಗತ್ತಿನಲ್ಲಿ ಸತ್ಯವಂತರ ಸಂಖ್ಯೆ ಅಪರೂಪವಾಗುತ್ತಿದೆ.

ಎರಡೂ ದೃಷ್ಟಿಗಳು ಸರಿಯಾದವುಗಳೇ.

ಪ್ರತಿಕ್ರಿಯಿಸಿ (+)