ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಕರ್ಮಯೋಗಿ ಲಿಂಕನ್

Published 20 ಜೂನ್ 2023, 22:17 IST
Last Updated 20 ಜೂನ್ 2023, 22:17 IST
ಅಕ್ಷರ ಗಾತ್ರ

ಸಾಮಾನ್ಯರೊಳ್ ಪುಟ್ಟಿ, ಸಾಮಾನ್ಯರೊಳ್ ಬೆಳೆದು |
ಭೂಮಿಪತಿ ಪಟ್ಟವನು ಜನತನಗೆ ಕಟ್ಟಲ್ ||
ಸಾಮರ್ಥ್ಯದಿಂದವರನಾಳ್ದ ಲಿಂಕನನAತೆ |
ಸ್ವಾಮಿ ಲೋಕಕೆ ಯೋಗಿ – ಮಂಕುತಿಮ್ಮ || 910 ||

ಪದ-ಅರ್ಥ: ಪುಟ್ಟ=ಹುಟ್ಟಿ, ಭೂಮಿಪತಿಪಟ್ಟವನು=ಭೂಮಿಪತಿ(ರಾಷ್ಟ್ರಪತಿ)+ಪಟ್ಟವನು, ಸಾಮರ್ಥ್ಯದಿಂದವರನಾಳ್ದ=ಸಾಮರ್ಥ್ಯದಿಂದ+ಅವರನು+ಆಳ್ದ(ಆಳಿದ)
ವಾಚ್ಯಾರ್ಥ: ಸಾಮಾನ್ಯರಲ್ಲಿ ಹುಟ್ಟಿ, ಸಾಮಾನ್ಯರಲ್ಲಿಯೇ ಬೆಳೆದು, ಜನರು ರಾಷ್ತ್ರಪತಿ ಪಟ್ಟವನ್ನು ಕಟ್ಟಿದಾಗ ಅದನ್ನು ಸಾಮರ್ಥ್ಯದಿಂದ ಆಳಿದ ಲಿಂಕನ್ ಲೋಕಕ್ಕೆ ಒಬ್ಬ ಯೋಗಿ ಇದ್ದಂತೆ. ಅವನೇ ಸ್ವಾಮಿ.
ವಿವರಣೆ: ಅಮೇರಿಕೆಯ ಹದಿನಾರನೇ ಅಧ್ಯಕ್ಷ ಅಬ್ರಾಹಂ ಲಿಂಕನ್‌ರವರ ಜೀವನ ಗಾಥೆ, ಒಂದು ದಂತಕಥೆ ಇದ್ದಂತೆ. ತುಂಬ ಬಡತನದಲ್ಲಿ ಹುಟ್ಟಿ, ಅತ್ಯಂತ ಸಾಮಾನ್ಯವಾದ ಪರಿಸರದಲ್ಲಿ ಬೆಳೆದು, ವ್ಯವಸ್ಥಿತವಾದ ಶಿಕ್ಷಣವಿಲ್ಲದೆ, ಸ್ವಂತ ಪರಿಶ್ರಮದಿಂದ ಓದಿಕೊಂಡು ಲಾಯರ್ ಆಗಿ, ಸಾಮಾಜಿಕ ಹೋರಾಟಗಾರನಾಗಿ ಬೆಳೆದದ್ದು ಒಂದು ಪವಾಡ ಸದೃಶ ಜೈತ್ರಯಾತ್ರೆ. ಅವರ ಜೀವನ ಅನೇಕ ತರುಣರಿಗೆ ಒಂದು ಮಾದರಿ. ಅವರಿಗೆ ಯಾವುದೂ ಸುಲಭವಾಗಿ ದಕ್ಕಲಿಲ್ಲ. ಪ್ರತಿಬಾರಿ ಸೋಲು ಮುಖಕ್ಕೆಅಪ್ಪಳಿಸುತ್ತಿತ್ತು. ಆದರೆ ಆ ಪ್ರತಿಯೊಂದು ಸೋಲು ಅವರನ್ನು ಕುಗ್ಗಿಸುವ ಬದಲು ಮತ್ತೊಂದು ಹೋರಾಟಕ್ಕೆ ಪ್ರೇರೇಪಿಸುತ್ತಿತ್ತು. ಹೀಗೆ ಛಲಬಿಡದೆ ಮುನ್ನುಗ್ಗಿದ ಲಿಂಕನ್ ಕೊನೆಗೆ ಅಮೇರಿಕೆಯ ರಾಷ್ಟçಪತಿಯಾಗಿ ಆಯ್ಕೆಯಾಗಿ, ಆ ದೇಶದ ಅತ್ಯಂತ ಯಶಸ್ವೀ ಹಾಗೂ ಪ್ರಬುದ್ಧ ರಾಷ್ಟ್ರ‍ಪತಿಗಳಲ್ಲಿ ಒಬ್ಬರಾದರು.

ಅವರ ಅಧಿಕಾರಾವಧಿಯ ಪ್ರತಿಯೊಂದು ದಿನವೂ ಪರೀಕ್ಷಾಕಾಲ. ಅಮೇರಿಕೆ ಆಗ ಅಂತ:ಕಲಹದಿಂದ ಬೇಯುತ್ತಿತ್ತು. ದಿನನಿತ್ಯವೂ ಯುದ್ಧದ ಘಟನೆಗಳು ಅವರನ್ನು ಗಾಸಿಮಾಡುತ್ತಿದ್ದವು. ಇಷ್ಟಾದರೂ ತಾವು ಮನದಲ್ಲಿ ತೀರ್ಮಾನಿಸಿಕೊಂಡಿದ್ದಂತೆ, ಶತಮಾನಗಳಿಂದ ಬಂದಿದ್ದ, ನಿಗ್ರೋ ಗುಲಾಮರ ಗುಲಾಮಗಿರಿಯನ್ನು ತೆಗೆದುಹಾಕುವ ಕಾಯದೆಯನ್ನು ಮಾಡಿಯೇ ಬಿಟ್ಟು ಇತಿಹಾಸದಲ್ಲಿ ಅಮರರಾದರು.
ಕಗ್ಗ ಮೊದಲಿನ ಮೂರು ಸಾಲುಗಳಲ್ಲಿ ಅಬ್ರಾಹಂ ಲಿಂಕನ್‌ನವರ ಜೀವನಗಾಥೆಯನ್ನು ಹೊಗಳುತ್ತದೆ. ಅವರ
ಕಾರ್ಯ ಒಬ್ಬ ಯೋಗಿಯ ಕಾರ್ಯಕ್ಕೇನೂ ಕಡಿಮೆಯಲ್ಲ ಎಂಬುದನ್ನು ಸೂಚಿಸುತ್ತದೆ. ಯಾರು ಯೋಗಿ? ಅವನಲಕ್ಷಣಗಳೇನು? ಯೋಗಿಯಾದವನು ದು:ಖ-ಸುಖ, ಅಪಮಾನ- ಮಾನ ಇಂಥ ದ್ವಂದ್ವಗಳಲ್ಲಿ ಅಥವಾ ಯಾವುದೇ ಅನುಕೂಲವಾದ ಅಥವಾ ಪ್ರತಿಕೂಲವಾದ ಸಂದರ್ಭಗಳಲ್ಲಿ ವಿಕಾರಕ್ಕೆ ಒಳಗಾಗಿ ಆತುರದ ನಿರ್ಣಯ ತೆಗೆದುಕೊಳ್ಳುವುದಿಲ್ಲ. ಯಾರನ್ನೂ ದ್ವೇಷಿಸುವುದಿಲ್ಲ. ಹೀಗಿದ್ದವನು ಪ್ರಪಂಚದಿಂದ ಏನನ್ನೂ ಅಪೇಕ್ಷಿಸುವುದಿಲ್ಲ. ಆತ ಕೊಡುವುದರಲ್ಲಿಯೇ ನಿರತನಾಗಿರುವುದರಿಂದ ಅವನೇ ಯಜಮಾನ, ಸ್ವಾಮಿ. ಕಗ್ಗ ಹೇಳುತ್ತದೆ, ಅಬ್ರಾಹಂ ಲಿಂಕನ್‌ರವರಂಥ ಕರ್ಮಯೋಗಿಗಳು ಸದಾಕಾಲ ಸಮತ್ವದಿಂದಿದ್ದು, ಪಡೆಯುವುದಕ್ಕಿಂತ ನೀಡುವುದನ್ನೇ ಮನೋಧರ್ಮವನ್ನಾಗಿ ಮಾಡಿಕೊಂಡದ್ದರಿಂದ, ಅವರೂ ಯೋಗಿಗಳೇ. ಆದ್ದರಿಂದ ಅವರು ಲೋಕಕ್ಕೆ ಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT