ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಪ್ರಪಂಚವೆಂಬ ಮೆರವಣಿಗೆ

Published 5 ಜೂನ್ 2023, 0:50 IST
Last Updated 5 ಜೂನ್ 2023, 0:50 IST
ಅಕ್ಷರ ಗಾತ್ರ

ನರನರೀ ಚಿತ್ರಗಳು, ನಾಟಕದ ಪಾತ್ರಗಳು |
ಪರಿಪರಿಯ ವೇಷಗಳು, ವಿವಿಧ ಭಾಷೆಗಳು ||
ಬರುತಿಹವು, ಬೆರಗೆನಿಸಿ ಮೆರೆಯುವುವು, ತೆರಳುವುವು |
ಮೆರವಣಿಗೆಯೋ ಲೋಕ – ಮಂಕುತಿಮ್ಮ || 898 ||

ಪದ-ಅರ್ಥ: ನರನರೀ=ಪುರುಷ-ಸ್ತ್ರೀ, ಬೆರಗೆನಿಸಿ=ಬೆರಗು+ಎನಿಸಿ,

ವಾಚ್ಯಾರ್ಥ: ಈ ಲೋಕವೊಂದು ದೊಡ್ಡ ಮೆರವಣಿಗೆ, ಇಲ್ಲಿ ಸ್ತ್ರೀ- ಪುರುಷಾಕಾರದ ಚಿತ್ರಗಳು. ಇವೆಲ್ಲ ನಾಟಕದ ಪಾತ್ರಗಳು, ತರತಹದ ವೇಷಗಳು, ವಿವಿಧ ಭಾಷೆಗಳು. ಇವು ಈ ಲೋಕದಲ್ಲಿ ಬರುತ್ತವೆ, ಬೆರಗಾಗಿ ಮೆರೆಯುತ್ತವೆ, ನಂತರ ಮರೆಯಾಗಿ ತೆರಳುತ್ತವೆ.

ವಿವರಣೆ: ಈ ಪ್ರಪಂಚವೇ ಒಂದು ಮಾಯೆ ಎಂದು ಜ್ಞಾನಿಗಳು ಹೇಳುತ್ತಾರೆ. ಮಾಯೆಯೆಂದರೆ ಏನು? ಅದು ಇದ್ದ ಹಾಗೆ ತೋರುತ್ತದೆ, ಭ್ರಮೆ ಹುಟ್ಟಿಸುತ್ತದೆ, ಒದ್ದಾಡಿಸುತ್ತದೆ, ಕೊನೆಗೆ ಮರೆಯಾಗುತ್ತದೆ. ಪ್ರಪಂಚ ಇರುವುದೇ ಹಾಗೆ. ಅದರ ಆಕರ್ಷಣೆ, ಮೆರಗು, ಬೆರಗು ಹುಟ್ಟಿಸುತ್ತದೆ. ಅದೊಂದು ಅತ್ಯದ್ಭುತವಾದ ಮೆರವಣಿಗೆ ಅದು ಯಾರನ್ನೂ ಆಕರ್ಷಿಸಿಬಿಡುವಂಥದ್ದು.

ನಾರದ, ಪರಮಾತ್ಮನ ಅಂತರಂಗ ಭಕ್ತ. ನಿತ್ಯ ಅವನನ್ನು ಕಾಣುವವನು. ಅವನಿಗೂ ಒಮ್ಮೆ ಭಗವಂತನ ಮಾಯೆಯ ಪ್ರಭಾವವನ್ನು ಕಾಣಬೇಕೆನ್ನಿಸಿತು. ತಾನು ಮಾಯೆಯಿಂದ ಹೊರಗಾದವನು ಎಂಬ ನಂಬಿಕೆ ಅವನಿಗೆ. ಅದಕ್ಕೆ ನಾರಾಯಣನನ್ನು ಪ್ರಾರ್ಥಿಸಿದ. ಪರಮಾತ್ಮ ನಕ್ಕು ‘ಆಗಲಿ’ ಎಂದ. ಒಂದೆರಡು ದಿನಗಳ ನಂತರ ಪರಮಾತ್ಮ ನಾರದನನ್ನು ಕರೆದು, ‘ನನಗೆ ಬಾಯಾರಿಕೆಯಾಗಿದೆ. ಕುಡಿಯಲು ನೀರು ತರುತ್ತೀಯಾ?’ ಎಂದ ಕೇಳಿದ. ತಕ್ಷಣ ಹೊರಟ ನಾರದ. ಹತ್ತಿರದಲ್ಲೊಂದು ಹಳ್ಳಿ. ಅಲ್ಲೊಂದು ಮನೆ. ನಾರದ ಬಾಗಿಲು ತಟ್ಟಿದ. ಬಾಗಿಲನ್ನು ತೆರೆದವಳು ಅಪರೂಪದ ಸುಂದರಿ. ಪ್ರೇಮಾಂಕುರವಾಯಿತು, ಮದುವೆಯಾಯಿತು. ಅನೇಕ ಮಕ್ಕಳಾದವು. ಮಾವ ಸತ್ತು ಅವನ ಆಸ್ತಿಯೆಲ್ಲ ಇವನಿಗೇ ಬಂತು. ಹೆಂಡತಿ ಮಕ್ಕಳೊಡನೆ ಅಪರಿಮಿತ ಸಂತೋಷ. ಒಮ್ಮೆ ಭಾರೀ ಪ್ರವಾಹ ಬಂತು. ಪಾರಾಗಲು ಒಂದು ಕೈಯಲ್ಲಿ ಹೆಂಡತಿ, ಮತ್ತೊಂದು ಕೈಯಲ್ಲಿ ಒಂದು ಮಗು ಮತ್ತು ಹೆಗಲ ಮೇಲೆ ಇನ್ನೊಂದು ಮಗುವನ್ನು ಹಿಡಿದು ಹೊರಟ. ಹೆಗಲ ಮೇಲಿನ ಮಗು ಪ್ರವಾಹದಲ್ಲಿ ಬಿದ್ದು ಕೊಚ್ಚಿಕೊಂಡು ಹೋಯಿತು. ಅಯ್ಯೋ ಎನ್ನುವುದರಲ್ಲಿ ಮತ್ತೊಂದು ಮಗುವೂ ತೇಲಿಹೋಯಿತು. ಶಕ್ತಿ ಮೀರಿ ಪ್ರಯತ್ನಿಸಿದರೂ ಹೆಂಡತಿಯನ್ನು ಹಿಡಿದುಕೊಳ್ಳಲಾಗಲಿಲ್ಲ. ದುಃಖದಿಂದ, ಎಲ್ಲವನ್ನೂ ಕಳೆದುಕೊಂಡ ನಾರದ ಭೋರೆಂದು ಅಳುತ್ತ, ನದಿಯ ದಂಡೆಯ ಮೇಲೆ ಕುಳಿತಾಗ, ನಾರಾಯಣ ಬಂದು, ‘ಯಾಕೆ ನಾರದ ನೀರು ತರಲಿಲ್ಲ, ಆಗಲೇ ಅರ್ಧ ಗಂಟೆಯಾಯಿತಲ್ಲ?’ ಎಂದು ಕೇಳಿದ. ನಾರದನಿಗೆ ಅರ್ಥವಾಯಿತು. ಇಡೀ ಜೀವನದ ಮೆರವಣಿಗೆ ನಡೆದದ್ದು ಕೇವಲ ಅರ್ಧಗಂಟೆಯಲ್ಲಿ ಎಂದು.

ಕಗ್ಗ ಅದನ್ನು ಹೇಳುತ್ತದೆ. ಈ ಪ್ರಪಂಚ ಒಂದು ಮೆರವಣಿಗೆ. ಮೆರವಣಿಗೆ ಯಾವಾಗಲೂ ಇರುವುದಿಲ್ಲ. ಕೆಲಕಾಲ ಸಂಭ್ರಮವನ್ನು ಸೃಷ್ಟಿಸಿ, ಬೆರಗುಗೊಳಿಸಿ ಕೊನೆಯಾಗುತ್ತದೆ. ಅದಕ್ಕೇ ಇಲ್ಲಿ ಸ್ತ್ರೀ- ಪುರುಷ ಆಕಾರಗಳು, ನಾಟಕದ ಪಾತ್ರಗಳಂತೆ ಬರುತ್ತವೆ. ಪರಿಪರಿಯ ವೇಷಗಳನ್ನು ಹಾಕಿಕೊಳ್ಳುತ್ತವೆ, ವಿವಿಧ ಭಾಷೆಗಳನ್ನು ಬಳಸುತ್ತವೆ. ಎಲ್ಲ ಪಾತ್ರಗಳು ಪ್ರಪಂಚದ ರಂಗಭೂಮಿಯ ಮೇಲೆ ಬಂದು, ಬೆರಗು ಹುಟ್ಟಿಸುವಂತೆ ಮೆರೆಯುತ್ತವೆ. ತಮ್ಮ ಪಾತ್ರ ಮುಗಿದೊಡನೆ ಮರೆಯಾಗಿಬಿಡುತ್ತವೆ. ಇದೊಂದು ದೊಡ್ಡ ಮೆರವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT