ಅಧಿಕಾರದ ಬಳಿ ಇರುವ ನಾಯಿಗಳೂ ಪ್ರಬಲವೇ

7

ಅಧಿಕಾರದ ಬಳಿ ಇರುವ ನಾಯಿಗಳೂ ಪ್ರಬಲವೇ

ಗುರುರಾಜ ಕರಜಗಿ
Published:
Updated:

ಬ್ರಹ್ಮದತ್ತ ರಾಜನಾಗಿದ್ದಾಗ ಬೋಧಿಸತ್ವ ಪೂರ್ವಜನ್ಮ ಕರ್ಮದಿಂದ ನಾಯಿಯಾಗಿ ಹುಟ್ಟಿ ಜೊತೆಗಾರರೊಂದಿಗೆ ಸ್ಮಶಾನದಲ್ಲಿ ವಾಸವಾಗಿದ್ದ. ಒಂದು ದಿನ ರಾಜ ಬೇಟೆಯಿಂದ ರಾತ್ರಿ ತಡವಾಗಿ ಬಂದ. ರಥವನ್ನು ಅಂಗಳದಲ್ಲಿ ನಿಲ್ಲಿಸಿ ಅರಮನೆಯೊಳಗೆ ಹೋದ. ರಾತ್ರಿ ಮಳೆ ಬಂದು ರಥ ನೆನೆದು ಹೋಯಿತು. ಅರಮನೆಯಲ್ಲಿಯ ನಾಯಿಗಳು ಕೆಳಗೆ ಬಂದು ರಥವನ್ನೇರಿ ಹಾಸಿಗೆ, ರಥದ ಚರ್ಮ, ಕುದುರೆಯ ಚರ್ಮದ ಹಗ್ಗವನ್ನು ಕಡಿದು ತಿಂದು ಹಾಕಿದವು. ಬೆಳಿಗ್ಗೆ ಅದನ್ನು ಕಂಡ ಸೇವಕರು ತಮ್ಮನ್ನು ರಕ್ಷಿಸಿಕೊಳ್ಳಲು ರಾಜನ ಬಳಿ ಬಂದು ದೂರಿದರು, “ಸ್ವಾಮಿ, ನಗರದ ನಾಯಿಗಳು ಮೋರಿಯಿಂದ ಒಳಗೆ ನುಗ್ಗಿ ಬಂದು ರಥವನ್ನೆಲ್ಲ ಹಾಳು ಮಾಡಿವೆ”. ರಾಜ ಕೋಪದಿಂದ ರಾಜ್ಯದಲ್ಲಿಯ ಎಲ್ಲ ನಾಯಿಗಳನ್ನು ಕೊಂದು ಹಾಕುವಂತೆ ಆಜ್ಞೆ ಮಾಡಿದ. ರಾಜದೂತರಿಂದ ನಾಯಿಗಳ ಹತ್ಯೆ ಪ್ರಾರಂಭವಾಯಿತು.

ಗಾಬರಿಯಾದ ಉಳಿದ ನಾಯಿಗಳು ಗುಂಪು ಕಟ್ಟಿಕೊಂಡು ಬೋಧಿಸತ್ವನ ಬಳಿಗೆ ಸ್ಮಶಾನಕ್ಕೆ ಬಂದವು. ಅವನು ನಿಧಾನವಾಗಿ ವಿಷಯವನ್ನೆಲ್ಲ ಕೇಳಿ ತಿಳಿದುಕೊಂಡ. ನಂತರ ಕೇಳಿದ, “ಈ ಕೆಲಸವನ್ನು ಮಾಡಿದವರಾರು?” ನಾಯಿಗಳು ಹೇಳಿದವು, ‘ಇದನ್ನು ಮಾಡಿದ್ದು ಅರಮನೆಯ ನಾಯಿಗಳೇ. ಆದರೆ ಅಪವಾದವನ್ನು ನಮ್ಮ ಮೇಲೆ ಹಾಕಲಾಗಿದೆ’. ಬೋಧಿಸತ್ವ ಯೋಚಿಸಿದ. ಬಿಗಿ ಭದ್ರತೆಯಲ್ಲಿರುವ ರಥದ ಹತ್ತಿರ ಅರಮನೆಯ ನಾಯಿಗಳಲ್ಲದೇ ಹೊರಗಿನ ನಾಯಿಗಳು ಹೋಗುವುದು ಸಾಧ್ಯವಿಲ್ಲ. ಹೇಗಾದರೂ ಈ ನಾಯಿಗಳನ್ನು ಉಳಿಸಬೇಕೆಂದು ತೀರ್ಮಾನಿಸಿದ.

ಮರುದಿನ ರಾಜಸಭೆ ನಡೆಯುವ ಹೊತ್ತಿನಲ್ಲಿ ಜನರ ಕಣ್ಣಿಗೆ ಕಾಣದಷ್ಟು ವೇಗದಲ್ಲಿ ಓಡುತ್ತ ಹೋಗಿ ರಾಜ ಸಿಂಹಾಸನದ ಮುಂದೆ ನಿಂತ. ಎಲ್ಲರಿಗೂ ಆಶ್ಚರ್ಯ. ಈ ನಾಯಿ ಬಂದದ್ದು ಹೇಗೆ? ರಾಜದೂತರು ಅದನ್ನು ಕೊಲ್ಲಲು ಮುಂದೆ ನುಗ್ಗಿದರು. ತಕ್ಷಣ ನಾಯಿ ರಾಜನಿಗೆ ನಮಸ್ಕಾರ ಮಾಡಿ, ‘ದೊರೆಗಳೇ ಈ ದೂತರನ್ನು ತಡೆಯಿರಿ. ನಾನು ತಮ್ಮ ಹತ್ತಿರ ಮಾತನಾಡಬೇಕು’ ಎಂದಿತು. ರಾಜ ಕೈ ಮಾಡಿ ದೂತರನ್ನು ತಡೆದ. ನಾಯಿ ಕೇಳಿತು, ‘ನೀವು ನಗರದ ನಾಯಿಗಳನ್ನೆಲ್ಲ ಕೊಲ್ಲಿಸುವುದು ಏಕೆ?’. ‘ನಿನಗೆ ತಿಳಿಯದೇ? ಈ ನಾಯಿಗಳು ನನ್ನ ರಥವನ್ನೆಲ್ಲ ಕಡಿದು ಹಾಳು ಮಾಡಿವೆ. ಅದಕ್ಕೇ ಈ ಶಿಕ್ಷೆ’ ಎಂದ ರಾಜ. ‘ಹಾಗಾದರೆ ಈ ರಾಜ್ಯದ ಎಲ್ಲ ನಾಯಿಗಳನ್ನು ಕೊಲ್ಲಿಸುತ್ತೀರಾ?’ ಕೇಳಿತು ನಾಯಿ. ‘ಇಲ್ಲ, ಅರಮನೆಯ ನಾಯಿಗಳನ್ನು ಮಾತ್ರ ಕೊಲ್ಲಿಸುವುದಿಲ್ಲ’ ಎಂದ ಬ್ರಹ್ಮದತ್ತ. ನಾಯಿ ಬಲವಾಗಿ ಹೇಳಿತು. ‘ಇದೇ ದುರ್ದೈವ. ಅರಮನೆಯ ನಾಯಿಗಳು ಅಪಚಾರ ಮಾಡಿದರೂ ಅವುಗಳಿಗೆ ರಕ್ಷೆ. ಇದೇ ಭ್ರಷ್ಟಾಚಾರಕ್ಕೆ ಮೂಲ. ನಿಮ್ಮ ನಾಯಿಗಳನ್ನು ಕರೆತನ್ನಿ. ಅದರೊಂದಿಗೆ ಒಂದಷ್ಟು ಗರಿಕೆ ಮತ್ತು ಮಜ್ಜಿಗೆ ತರಿಸಿ’. ರಾಜ ಹಾಗೆಯೇ ಮಾಡಿದ. ಗರಿಕೆಯನ್ನು ಕುಟ್ಟಿಸಿ ಅದರ ರಸವನ್ನು ಮಜ್ಜಿಗೆಯಲ್ಲಿ ಬೆರೆಸಿ ಅರಮನೆಯ ನಾಯಿಗಳಿಗೆ ಕುಡಿಸಿತು ಬೋಧಿಸತ್ವ ನಾಯಿ. ಕ್ಷಣಾರ್ಧದಲ್ಲಿ ಅರಮನೆಯ ನಾಯಿಗಳು ವಾಂತಿ ಮಾಡಿಕೊಂಡವು. ಅದರಲ್ಲಿ ಚರ್ಮದ ತುಣುಕುಗಳು ಕಂಡವು. ಬ್ರಹ್ಮದತ್ತನಿಗೆ ತನ್ನ ತಪ್ಪಿನ ಅರಿವಾಗಿ ನಾಯಿಗಳ ಹತ್ಯೆ ನಿಲ್ಲಿಸಿದ.

ಭ್ರಷ್ಟತೆ ಇರುವುದೇ ಅಧಿಕಾರದ ಸುತ್ತಮುತ್ತ. ಆದರೆ ರಾಜ್ಯವಾಳುವವರು ಅವರನ್ನು ಮಾತ್ರ ಬಿಟ್ಟು ಉಳಿದವರ ಶುದ್ಧೀಕರಣಕ್ಕೆ ಕೈ ಹಾಕುತ್ತಾರೆ. ಭ್ರಷ್ಟತೆ ಉಳಿದು ಬೆಳೆಯುತ್ತದೆ. ಮುಗ್ಧರು ಬಲಿಯಾಗುತ್ತಾರೆ. ಇದು ಇಂದಿಗೂ ಪ್ರಸ್ತುತ.

ಬರಹ ಇಷ್ಟವಾಯಿತೆ?

 • 29

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !