ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಕೈಗಳ ಆಟ

Last Updated 14 ಜುಲೈ 2019, 20:00 IST
ಅಕ್ಷರ ಗಾತ್ರ

ಕರವೆರಡದೃಷ್ಟಕ್ಕೆ: ನರನ ಪೂರ್ವಿಕವೊಂದು |
ಪೆರತೊಂದು ನವಸೃಷ್ಟಿ ಸತ್ತ್ವವಾ ಬೊಗಸೆ ||
ಧರಿಸಿಹುದು ಮನುಜಜೀವಿತವನದರೊತ್ತಡದೆ |
ಪರಿದಾಟ ನಮಗೆಲ್ಲ – ಮಂಕುತಿಮ್ಮ || 158 ||

ಪದ-ಅರ್ಥ: ಕರವೆರಡದೃಷ್ಟಕ್ಕೆ=ಕರ+ಎರಡು+ಅದೃಷ್ಟಕ್ಕೆ, ಪೂರ್ವಿಕವೊಂದು=ಪೂರ್ವಿಕ(ಪೂರ್ವಕರ್ಮ)+ಒಂದು, ಪೆರತೊಂದು=ಮತ್ತೊಂದು, ಹಿರಿದಾದದ್ದು, ಮನುಜಜೀವಿತವನದರೊತ್ತಡದೆ=ಮನುಜ+ಜೀವಿತವನು+ಅದರ+ಒತ್ತಡದೆ. ಪರಿದಾಟ=ಪರದಾಟ, ಒದ್ದಾಟ.

ವಾಚ್ಯಾರ್ಥ: ಮನುಷ್ಯನ ಅದೃಷ್ಟಕ್ಕೆ ಎರಡು ಕೈಗಳು. ಒಂದು ಅವನ ಪೂರ್ವಕರ್ಮದ ಫಲ. ಎರಡನೆಯದು ಹೊಸಸೃಷ್ಟಿಯನ್ನು ಮಾಡಬಹುದಾದ ಮನುಷ್ಯನ ಸತ್ವ, ಶಕ್ತಿ. ಇವೆರಡೂ ಬೊಗಸೆಯಂತೆ ಎರಡೂ ಕೈಗಳ ಮಧ್ಯೆ ಮನುಷ್ಯನ ಜೀವಿತೆಯನ್ನು ಹಿಡಿದು ಒತ್ತಡ ಸೃಷ್ಟಿ ಮಾಡುತ್ತಿವೆ. ಇದರಿಂದಾಗಿಯೇ ನಮಗೆಲ್ಲ ಪರದಾಟವಾಗಿರುವುದು.

ವಿವರಣೆ: ಅ-ದೃಷ್ಟವೆಂದರೆ ಕಣ್ಣಿಗೆ ಕಾಣದ್ದು. ಈ ಕಣ್ಣಿಗೆ ಕಾಣದ ಶಕ್ತಿಗೆ ಎರಡು ಕೈಗಳು, ಒಂದು ಕೈ ಆ ವ್ಯಕ್ತಿಯ ಪೂರ್ವಕರ್ಮದ ಫಲ. ಹಿಂದೆಂದೋ ಅಥವಾ ಹಿಂದಿನ ಜನ್ಮಗಳಲ್ಲೋ ಮಾಡಿದ ಒಳ್ಳೆಯ, ಕೆಟ್ಟ ಕೆಲಸಗಳ ಫಲ ನಮ್ಮನ್ನು ಬೆನ್ನಟ್ಟಿ ಬರುತ್ತದೆ. ಇದೊಂದು ಕೈ ನಮ್ಮ ಬದುಕನ್ನು ನಿರ್ದೇಶಿಸುತ್ತದೆ. ಮತ್ತೊಂದು ಕೈ, ಹೊಸಸೃಷ್ಟಿಯನ್ನು ಮಾಡಬಹುದಾದ ಮನುಷ್ಯನ ಶಕ್ತಿ. ಅದೇ ಪುರುಷ ಪ್ರಯತ್ನ. ಹಿಂದೆ ಮಾಡಿದ ಕರ್ಮಫಲ ನಮ್ಮ ಬದುಕನ್ನು ಹಿಡಿದೆಳೆದು ಕುಕ್ಕುತ್ತಿದೆ. ಅದಕ್ಕೆ ನಾವೇನು ಮಾಡಲಾದೀತು ಎಂದು ನಿರಾಶೆಯನ್ನು, ಅಸಹಾಯಕತೆಯನ್ನು ಒಂದು ಕೈ ತೋರಿಸುತ್ತದೆ, ಆದರೆ ಹಳೆಯದ್ದಕ್ಕೆ ಯಾಕೆ ಚಿಂತಿಸುತ್ತೀ, ನಿನ್ನಲ್ಲಿ ಅಸಾಧ್ಯವಾದ ಶಕ್ತಿ ಇದೆ, ಅದನ್ನು ಬಳಸಿ ಸಾಧನೆ ಮಾಡು ಎನ್ನುತ್ತದೆ ಮತ್ತೊಂದು ಕೈ. ಹೀಗೆ ಬೊಗಸೆಯ ಎರಡು ಕೈಗಳು ಎರಡು ವಿರುದ್ಧದ ಸೂಚನೆ ಕೊಟ್ಟಾಗ ಪರದಾಟವಾಗುತ್ತದೆ, ಮನುಷ್ಯ ಜೀವನ ಒತ್ತಡಕ್ಕೆ ಬೀಳುತ್ತದೆ.

ಹಾಗಾದರೆ ನಮ್ಮ ಧೋರಣೆ ಏನಿರಬೇಕು? ಪೂರ್ವಜನ್ಮದ, ಪೂರ್ವಿಕದ ಕರ್ಮವೇನಿದೆಯೋ ತಿಳಿಯದು. ಅದು ನಿಜವಾಗಿದ್ದರೂ, ನಮಗೆ ಅದನ್ನು ಇಂದು ಬದಲಾಯಿಸುವುದು ಸಾಧ್ಯವಿಲ್ಲ. ಆದರೆ ಪ್ರೋತ್ಸಾಹದ ಇನ್ನೊಂದು ಕೈ ಇದೆಯಲ್ಲ! ಪ್ರತಿಯೊಬ್ಬ ಸಾಧಕ ಬಳಕೆ ಮಾಡಿಕೊಂಡಿದ್ದೇ ಈ ಎರಡನೆಯ ಕೈ. ವಾಲ್ಮೀಕಿಯ ಪೂರ್ವಕರ್ಮವೇನಿತ್ತೋ? ಆದರೆ ಹೊಸಸೃಷ್ಟಿಯನ್ನು ಮಾಡುವ ಸಾಧನೆಯ ತೀವ್ರ ಅಪೇಕ್ಷೆ ಅವರನ್ನು ಉನ್ನತ ಶಿಖರಕ್ಕೆ ಕರೆದೊಯ್ದಿತು, ಮಹಾಕವಿಯನ್ನಾಗಿ ಮಾಡಿತು. ಪೂರ್ವ ಕರ್ಮದಿಂದ ಡಕಾಯಿತನಾಗಿದ್ದ ನಾಮದೇವ ಮಹಾನ್ ಸಂತನಾದದ್ದು ಇಂಥದೇ ಪುರುಷ ಪ್ರಯತ್ನದಿಂದ. ಇಂಗ್ಲೆಂಡಿನ ಹೊಲದಲ್ಲಿ ಆಲೂಗಡ್ಡೆಯನ್ನು ಕಿತ್ತುತ್ತ ವಿಜ್ಞಾನಿಯಾಗುವ ಕನಸನ್ನು ಕಾಣುತ್ತಿದ್ದ ಹುಡುಗ ಮುಂದೆ ನೊಬೆಲ್ ಪಾರಿತೋಷಕವನ್ನು ಪಡೆದ ರುದರ್‍ಫೋರ್ಡನೆಂಬ ರಸಾಯನಶಾಸ್ತ್ರಜ್ಞನಾದದ್ದು ಇದೇ ನವಸೃಷ್ಟಿ ಸತ್ವದಿಂದಲೇ. ಮನುಷ್ಯ ತನ್ನ ಕೈಯನ್ನು ಎಷ್ಟು ದೂರ ಚಾಚುವುದು ಸಾಧ್ಯವೋ ಅಷ್ಟು ದೂರ ಹಿಗ್ಗಿಸಿಕೊಂಡು ಪ್ರಯತ್ನಿಸುವುದು ಪುರುಷಪ್ರಯತ್ನ, ಅವನ ಸತ್ವ. ಎಲ್ಲಿ ತನ್ನ ಕೈ ಸಾಗದೋ ಅಲ್ಲಿ ಬಂದದನ್ನು ಭಗವಂತನ ಇಚ್ಛೆ ಅಥವಾ ಅದೃಷ್ಟ ಎಂದು ಸ್ವೀಕರಿಸುವುದೂ ಅವನ ಕರ್ತವ್ಯ. ಆತ್ಮವಿಶ್ವಾಸ ಒಂದು ಕೈ, ದೈವಭಕ್ತಿ ಇನ್ನೊಂದು ಕೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT