ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಜ - ಕೃತಕ

Last Updated 28 ನವೆಂಬರ್ 2019, 3:50 IST
ಅಕ್ಷರ ಗಾತ್ರ

ಇಹುದಕಿಂತೊಳಿತಿಹುದು; ಒಳಿತ ಗಳಿಸಲ್ಬಹುದು |
ಸಹಿಸಿಸುವೆನದಕೆನುವ ಮತಿಯಿನೇ ಪ್ರಗತಿ ||
ರಹಸಿಯದ ಬುಗ್ಗೆಯದು, ಚಿಮ್ಮುತಿಹುದೆಲ್ಲರೊಳು |
ಸಹಜವಾ ಮತಿ ಕೃತಕ – ಮಂಕುತಿಮ್ಮ || 215 ||

ಪದ-ಅರ್ಥ: ಇಹುದಕಿಂತೊಳಿತಿಹುದು=ಇಹುದಕಿಂತ(ಇರುವುದಕಿಂತ)+ ಒಳಿತಿಹುದು(ಒಳ್ಳೆಯದಿಹುದು), ಗಳಿಸಲ್ಬಹುದು=ಗಳಿಸಲು+ಬಹುದು, ಸಹಿಸಿಸುವೆನದಕೆನುವ=ಸಹಿಸಿಸುವೆನು(ಸಾಹಸಮಾಡುವೆನು)
+ಅದಕೆ+ಎನುವ (ಎನ್ನುವ), ಮಿತಿಯಿನೇ=ಬುದ್ಧಿಯಿಂದಲೇ, ರಹಸಿಯದ=ರಹಸ್ಯದ, ಬುಗ್ಗೆ=ಚಿಲುಮೆ.

ವಾಚ್ಯಾರ್ಥ: ಈಗಿರುವುದಕ್ಕಿಂತ ಒಳಿತಾದುದೊಂದು ಇದೆ, ಆ ಒಳಿತನ್ನು ಗಳಿಸಬಹುದು, ಅದಕ್ಕಾಗಿ ಸಾಹಸ ಮಾಡುತ್ತೇನೆ ಎನ್ನುವ ಬುದ್ಧಿಯಿಂದಲೇ ಪ್ರಗತಿ. ಈ ರಹಸ್ಯದ ಚಿಲುಮೆಯೇ ಎಲ್ಲರೊಳು ಸಹಜವಾಗಿ ಚಿಮ್ಮುತಿಹುದು. ಆದರೆ ಪ್ರಗತಿ ತರುವ ಬುದ್ಧಿ ಕೃತಕವಾದದ್ದು.

ವಿವರಣೆ: ಹಿಂದಿನ ಕಾಲದ ಅತ್ಯಂತ ಪರಾಕ್ರಮಶಾಲಿಗಳಾದ ಅಶೋಕ, ಅಕ್ಬರ್ ಮುಂತಾದ ಚಕ್ರವರ್ತಿಗಳಿಗಿಂತ ನಾವಿಂದು ಹೆಚ್ಚು ಶಕ್ತಿಶಾಲಿಗಳಾಗಿದ್ದೇವೆ, ಮುಂದುವರೆದಿದ್ದೇವೆ. ಅವರ ದರ್ಬಾರಿನಲ್ಲಿ ಬೆಳಕು ಮೂಡಬೇಕಾದರೆ ನಾಲ್ಕಾರು ಜನ ಸೇವಕರು ಬಂದು ಗೋಡೆಗೆ ನೇತು ಹಾಕಿದ್ದ ದೀಪಗಳಿಗೆ ಬೆಂಕಿಯನ್ನು ತಗುಲಿಸಬೇಕಿತ್ತು, ಆ ದೀಪಗಳಿಗೆ ಎಣ್ಣೆ ಹಾಕಿ ನೋಡಿಕೊಳ್ಳಬೇಕಿತ್ತು. ಇಂದು ಒಂದು ಬಟನ್ ಒತ್ತಿದರೆ ಸಾಕು, ಝಕ್ಕನೇ ಎಲ್ಲೆಡೆಗೆ ಬೆಳಕಾಗುತ್ತದೆ. ಆ ಚಕ್ರವರ್ತಿಗಳು ತಮ್ಮ ದೇಶದ ಪರಿವೀಕ್ಷಣೆಗೆ ಹೊರಟರೆ ತುಂಬ ಚುರುಕಾದ ಕುದುರೆಗಳ ಮೇಲೆ ದಿನಗಟ್ಟಲೆ ಪ್ರಯಾಣ ಮಾಡಬೇಕಾಗಿತ್ತು. ಇಂದು ಒಂದೇ ದಿನದಲ್ಲಿ ಹತ್ತಾರು ಸಾವಿರ ಮೈಲಿಗಳ ಯಾನವನ್ನು ಮಾಡಬಲ್ಲೆವು. ಯುದ್ಧ ಮಾಡಲು ಹಿಂದೆ ಖಡ್ಗ ಹಿಡಿದು ವೈರಿಯ ಎದುರು ನಿಂತು ಹೋರಾಡಬೇಕಾಗಿತ್ತು. ಇಂದು ಎಲ್ಲಿಯೋ ಕುಳಿತು, ಸಾವಿರಾರು ಮೈಲಿ ದೂರದಲ್ಲಿರುವ ವೈರಿಯ ಮೇಲೆ ಬಾಂಬ್‌ ಅನ್ನು ನಿಖರವಾಗಿ ಹಾಕಬಹುದು. ಮೊದಲು ಸಣ್ಣ, ಸಣ್ಣ ರೋಗಗಳಿಗೆ ಇಡೀ ಗ್ರಾಮಗಳೇ ಆಹುತಿಯಾಗಿ ಹೋಗಿಬಿಡುತ್ತಿದ್ದವು. ಇಂದು ಆ ರೋಗಗಳು ಮಾಯವಾಗಿವೆ, ಮನುಷ್ಯನ ಜೀವಿತಾವಧಿ ಹೆಚ್ಚಾಗಿದೆ. ಇದೆಲ್ಲ ಆದದ್ದು ಹೇಗೆ ಮತ್ತು ಏಕೆ?

ಮನುಷ್ಯನಲ್ಲಿ ಒಂದು ವಿಶೇಷ ಗುಣವಿದೆ. ಇದನ್ನು Constructive dissatisfaction ಎನ್ನುತ್ತಾರೆ. ಈ ರಚನಾತ್ಮಕ ಅತೃಪ್ತಿಯೇ ಸಾಧನೆಯ ಏಣಿ. ನಾನು ಹೀಗಿದ್ದೇನೆ, ಸಂತೋಷವಾಗಿಯೂ ಇದ್ದೇನೆ. ಆದರೆ ಇದಕ್ಕಿಂತ ಚೆನ್ನಾಗಿ ಬದುಕುವುದು ಸಾಧ್ಯ. ಇದಕ್ಕಿಂತ ಒಳ್ಳೆಯದೂ ಇದೆ, ಅದನ್ನು ಪಡೆಯಬೇಕೆಂಬ ಹಂಬಲ ಮನುಷ್ಯನನ್ನು ಹೊಸ ಹೊಸ ಸಾಹಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ಈ ಸಾಹಸಗಳು ಮನುಷ್ಯನ ಬದುಕನ್ನು ಪ್ರಗತಿಯತ್ತ ಕರೆದೊಯ್ಯುತ್ತವೆ.

ಈ ಸಾಹಸದ ಪ್ರವೃತ್ತಿ ಒಂದು ರಹಸ್ಯವಾದ ಚಿಲುಮೆ ಇದ್ದಂತೆ. ಯಾಕೆಂದರೆ ಅದು ಯಾವಾಗ, ಎಲ್ಲಿ, ಯಾರಲ್ಲಿ, ಯಾವ ಪ್ರಮಾಣದಲ್ಲಿ ಎಂಬುದನ್ನು ಹೇಳುವುದು ಕಷ್ಟ. ಇದು ಪ್ರತಿಯೊಬ್ಬರಲ್ಲಿಯೂ ಚಿಮ್ಮುವ ಬುಗ್ಗೆ. ಇದು ಅತ್ಯಂತ ಸಹಜವಾದದ್ದು. ಅದನ್ನು ಪ್ರಚೋದಿಸುವ, ಮುಂದೆ ಸಾಗಿಸುವ ಬುದ್ಧಿ ಮನುಷ್ಯನ ಸೃಷ್ಟಿ – ಕೃತಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT