ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ವಡಬಾನಲ

Last Updated 14 ಏಪ್ರಿಲ್ 2020, 1:04 IST
ಅಕ್ಷರ ಗಾತ್ರ

ಧಾರುಣೀಸುತೆಯವೊಲು ಧೃಡಮನಸ್ಕರದಾರು? |
ಮಾರೀಚಹರಿಣವಡ್ಡಾಡಲೇನಾಯ್ತು?||
ವಾರಿಧಿಯೊಳಡಗಿ ನಿದ್ರಿಪ ಬಾಡವವೊ ತೃಷ್ಣೆ |
ಆರದನು ಕೆರಳಿಪರೊ ! – ಮಂಕುತಿಮ್ಮ || 277 ||

ಪದ-ಅರ್ಥ: ಧಾರುಣೀಸುತೆ
ಯವೊಲು=ಧಾರುಣಿಸುತೆಯ(ಸೀತೆಯ) ಹಾಗೆ, ಧೃಡಮನಸ್ಕರದಾರು=ಧೃಡ+ಮನಸ್ಕರು(ಮನಸ್ಸಿನವರು)+ಆದಾರು(ಯಾರು), ಮಾರೀಚಹರಣವಡ್ಡಾಡಲೇನಾಯ್ತು=ಮಾರೀಚ+ಹರಿಣ(ಜಿಂಕೆ), ಅಡ್ಡಾಡಲು+ಏನಾಯ್ತು, ವಾರಿಧಿಯೊಳಡಗಿ=ವಾರಧಿಯೊಳು=ಸಮುದ್ರದಲ್ಲಿ+ಅಡಗಿ, ಬಾಡವ=ಬೆಂಕಿ, ತೃಷ್ಣೆ=ಆಸೆ, ಆರದನು=
ಆರು(ಯಾರು)+ಅದನು, ಕೆರಳಿಪರೋ=ಕೆರಳಿಸುವರೋ.

ವಾಚ್ಯಾರ್ಥ: ಭೂಮಿಯ ಮಗಳಾದ ಸೀತೆಯ ಹಾಗೆ ಧೃಡಮನಸ್ಸಿನವರು ಯಾರು? ಆದರೆ ಮಾರೀಚನೆಂಬ ಬಂಗಾರದ ಜಿಂಕೆ ಅಡ್ಡಾಡಲು ಏನಾಯ್ತು? ಆಸೆ ಎನ್ನುವುದು ಸಮುದ್ರದ ತಳದಲ್ಲಿ ಶಾಂತವಾಗಿ ಕುಳಿತ ಬೆಂಕಿ. ಯಾರು ಅದನ್ನು ಕೆರಳಿಸುವರೋ?

ವಿವರಣೆ: ಮನಸ್ಸು ಧೃಡವಾಗಿರಬೇಕು ಎಂದು ಹೇಳುವುದು, ಬಯಸುವುದು ತುಂಬ ಸುಲಭ. ಆದರೆ ಅದನ್ನು ಸಾಧಿಸುವುದು ಸುಲಭವಲ್ಲ. ಅದನ್ನು ತಿಳಿಸುವುದಕ್ಕೆ ಈ ಕಗ್ಗ ಒಂದು ಉದಾಹರಣೆಯನ್ನು ಕೊಡುತ್ತದೆ. ಧೃಡತೆಗೆ, ಸಹನೆಗೆ, ತಾಳ್ಮೆಗೆ, ಭೂಮಿ ಒಂದು ಶ್ರೇಷ್ಠ ಮಾದರಿ. ಇಂಥ ಭೂಮಿಯ ಮಗಳಾದ ಸೀತೆ ಕೂಡ ಧೃಡತೆಗೆ ಮತ್ತೊಂದು ಹೆಸರು. ರಾಣಿಯಾಗಲೆಂದು ರಾಮನ ಹೆಂಡತಿಯಾಗಿ ಆಯೋಧ್ಯೆಗೆ ಬಂದ ತರುಣಿ ಆಕೆ. ಮರುದಿನ ಗಂಡನಿಗೆ ಯುವರಾಜ ಪಟ್ಟಾಭಿಷೇಕವಾಗುತ್ತದೆಂದು ತಿಳಿದು ಸಂಭ್ರಮಿಸಿದ ಹುಡುಗಿಗೆ, ಅಂದೇ ರಾತ್ರಿ ತನ್ನ ಗಂಡ ರಾಜ್ಯವನ್ನು ಬಿಟ್ಟು ಕಾಡಿಗೆ ಹೋಗಬೇಕೆಂದು ತೀರ್ಮಾನವಾದಾಗ, ಏನು ಎನ್ನಿಸಿರಬೇಕು? ದುಃಖವಾಯಿತೆ, ನಿರಾಸೆಯಾಯಿತೆ, ಕೋಪ ಬಂತೆ? ಇಲ್ಲ, ತನ್ನ ಬದುಕು ಗಂಡನೊಂದಿಗೇ, ಅದು ಅಯೋಧ್ಯೆಯಾಗಲಿ, ಕಾಡಾಗಲಿ ಎಂದು ನಿರ್ಧಾರ ಮಾಡಿ, ಹಟ ಹಿಡಿದು ಅವನೊಂದಿಗೆ ಕಾಡಿಗೇ ಹೊರಟುಬಿಟ್ಟಳಲ್ಲ, ಅಂಥ ಧೃಡತೆ ಆಕೆಯದು.

ಆದರೆ ಕಾಡಿನಲ್ಲಿ ರಾಕ್ಷಸ ಮಾರೀಚ ಚಿನ್ನದ ಜಿಂಕೆಯ ರೂಪದಲ್ಲಿ ಮುಂದೆ ಸುಳಿದಾಗ ಏನಾಯಿತು? ಗಂಡ ಶ್ರೀರಾಮ ಹೇಳಿದ, ಅದು ಮಾಯಾ ಜಿಂಕೆ ಅದರ ಆಸೆ ಬೇಡ. ಮೈದುನ ಲಕ್ಷ್ಮಣನೂ ಹೇಳಿ ನೋಡಿದ. ಅಷ್ಟು ಧೃಡ ಮನಸ್ಸುಳ್ಳ ಸೀತೆಯ ಮನಸ್ಸು ಆ ಕ್ಷಣದಲ್ಲಿ ಅಲುಗಿ ಹೋಯಿತು. ಅದು ಹಾಗೆ ಯಾಕೆ ಆಯಿತು? ಅದನ್ನು ಹೇಳುವುದು ಕಷ್ಟ. ಬದುಕಿನಲ್ಲಿ ಒಂದೊಂದು ಬಾರಿ ಮನಸ್ಸು ನಿರ್ಧಾರ ಮಾಡಿಬಿಡುತ್ತದೆ. ಎಷ್ಟೋ ವರ್ಷಗಳು ಕಳೆದ ನಂತರ ಅದೇ ವ್ಯಕ್ತಿಗೆ ಅಂದು ತೆಗೆದುಕೊಂಡ ತನ್ನ ನಿರ್ಧಾರದ ಬಗ್ಗೆ ಆಶ್ಚರ್ಯವಾಗಬಹುದು. ಅದನ್ನು ಕಗ್ಗ ತುಂಬ ಚೆನ್ನಾಗಿ ಹೇಳುತ್ತದೆ. ಅದು ಸಮುದ್ರದ ಆಳದಲ್ಲಿದ್ದ ಬೆಂಕಿಯಂತೆ ಎಂದು. ಅದನ್ನು ವಡಬಾಗ್ನಿ ಅಥವಾ ವಡಬಾನಲ ಎನ್ನುತ್ತಾರೆ. ಸಮುದ್ರದ ನೀರು ತಂಪಲ್ಲವೇ? ಸಮುದ್ರದ ತಳದಲ್ಲಿ ಬೆಂಕಿ ಇರುವುದು ಸಾಧ್ಯವೇ? ನೆಲದ ಗರ್ಭದಲ್ಲಿ ಅಡಗಿದ್ದ ಬೆಂಕಿ ಯಾವಾಗ, ಎಲ್ಲಿ ಪುಟಿದೆದ್ದು ಉಲ್ಕೆಯಾಗಿ ಹೊರಗೆ ಧುಮುಕುತ್ತದೋ ತಿಳಿಯದು. ಆದರೆ ಅದು ಆಗುವುದು ಪ್ರಕೃತಿಯ ವಿಚಿತ್ರ. ಹಾಗಾದಾಗಲೇ ಸಮುದ್ರ ಮಧ್ಯದ ದ್ವೀಪಗಳಾದದ್ದು, ಉಲ್ಕಾ ಪರ್ವತಗಳಾದದ್ದು. ಮನುಷ್ಯನ ಮನದಾಳದಲ್ಲಿ ಕುಳಿತ ಆಸೆ ಯಾವಾಗ, ಯಾವ ಪ್ರೇರಣೆಯಿಂದ, ಎಲ್ಲಿ ಹೊರಗೆ, ಯಾವ ರೀತಿಯಲ್ಲಿ ಬರುತ್ತದೆ ಎಂಬುದನ್ನು ಹೇಳುವುದು ಅಸಾಧ್ಯ. ಸೀತೆಯ ಮನಸ್ಸು ಚಂಚಲವಾದದ್ದೂ ಹೀಗೆ ಒಂದು ವಿವರಿಸಲಾರದ, ಅಸಾಮಾನ್ಯ ಘಟನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT