ಮಂಗಳವಾರ, ಏಪ್ರಿಲ್ 20, 2021
31 °C

ಬೆರಗಿನ ಬೆಳಕು: ಸತ್ಯದ ಅಂಶಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಕನಸು ದಿಟ, ನೆನಸು ದಿಟ, ತನುವೊಳಿಹ ಚೇತನವ |
ಕನಲಿಸುವ ಕುಣಿಸುವಾ ಹಬೆಗಳೆಲ್ಲ ದಿಟ ||
ಇನಿತನಿತು ದಿಟಗಳಿವು – ತುಂಬುದಿಟದಂಶಗಳು |
ಗಣನೀಯವವು ಬಾಳ್ಗೆ – ಮಂಕುತಿಮ್ಮ || 394 ||

ಪದ-ಅರ್ಥ: ದಿಟ= ಸತ್ಯ, ನೆನಸು= ನೆನಪು, ತನುವೊಳಿಹ= ತನುವೊಳು (ದೇಹದಲ್ಲಿರುವ)+ ಇಹ(ಇರುವ), ಕನಲಿಸುವ= ಕೆರಳಿಸುವ, ಹಬೆ= ಆವಿ, ಪ್ರಚೋದನೆಗಳು, ಇನಿತನಿತು= ಸ್ವಲ್ಪ ಸ್ವಲ್ಪ, ತುಂಬುದಿಟದಂಶಗಳು= ತುಂಬುದಿಟದ (ಸಂಪೂರ್ಣಸತ್ಯದ)+ ಅಂಶಗಳು, ಗಣನೀಯ= ಮುಖ್ಯ.

ವಾಚ್ಯಾರ್ಥ: ನಾವು ಕಾಣುವ ಕನಸುಗಳು, ನೆನಪುಗಳು, ದೇಹದಲ್ಲಿರುವ ಚೇತನವನ್ನು ಕೆರಳಿಸಿ, ಕುಣಿಸುವ ಪ್ರಚೋದನೆಗಳೆಲ್ಲ ಸತ್ಯವೇ. ಇಂತಹ ಸಣ್ಣ ಸಣ್ಣ ಸತ್ಯಗಳು, ಸಂಪೂರ್ಣಸತ್ಯದ ಅಂಶಗಳು. ಅವು ನಮ್ಮ ಬಾಳಿಗೆ ಮುಖ್ಯವಾದವುಗಳು.

ವಿವರಣೆ: ಬದುಕಿನಲ್ಲಿ ಬರುವ ಅನೇಕ ಸಂಗತಿಗಳು, ಘಟನೆಗಳು ನಮಗರಿವಿಲ್ಲದಂತೆ ನಮ್ಮನ್ನು ಮಾಗಿಸುತ್ತವೆ. ನಾವು ಕಂಡ ಕನಸುಗಳು, ಕೆದಕಿದಾಗ ಬರುವ ಹಳೆಯ ನೆನಪುಗಳು, ನಮ್ಮ ಬದುಕಿನಚೇತನವನ್ನು ಸತತವಾಗಿ ಪ್ರಚೋದಿಸುವ, ಕೆರಳಿ
ಸುವ, ಹಣ್ಣು ಮಾಡುವ ಎಲ್ಲವೂ ಸತ್ಯಗಳೇ. ಇವುಗಳನ್ನು ನಾವು ಅನುಭವಿಸುವುದು ನಮ್ಮ ಮನಸ್ಸಿನಿಂದ ಮತ್ತು ಅದು ಹೊರಡಿಸುವ ಭಾವನೆಗಳಿಂದ. ಕಪ್ಪು, ಬಿಳುಪು, ಕಠಿಣ, ಮೃದು, ಸಿಹಿ, ಕಹಿ, ವಾಸನೆ, ಸಪ್ಪಳ ಇವೆಲ್ಲ ನಮ್ಮ ಇಂದ್ರಿಯ ಭಾವನೆಗಳು. ಸುಖ, ದು:ಖ, ಆಸೆ, ನಿರಾಸೆ,ಧೈರ್ಯ, ಉತ್ಸಾಹ, ಹೆದರಿಕೆ ಇವೆಲ್ಲ ಮಾನಸಿಕ ಭಾವನೆಗಳು. ಇವುಗಳನ್ನು ಮಾಯೆಯೆಂದು ಮರೆಯಲಾಗುತ್ತದೆಯೆ? ಪಾರಮಾರ್ಥಿಕದ ಅಂತಿಮ ಹಂತದಲ್ಲಿ ವಿಶ್ವವೆಲ್ಲ ಚಿನ್ಮಯವೆಂದು ಒಪ್ಪಿದರೂ ಜಾಗರದ ವಸ್ತುಗಳು ಸತ್ಯವೇ ಎಂದು ನಂಬಬೇಕಾಗುತ್ತದೆ.

ಪರಮ ಬ್ರಹ್ಮವನ್ನು ತಿಳಿದವನಿಗೆ ಜಾಗರದ ವಸ್ತುಗಳೂ ಕನಸಿನ ವಸ್ತುಗಳಂತೆ ಕಲ್ಪನೆಗಳೇ. ಆ ಜ್ಞಾನಿಗೆ ಜಾಗರದ ಎಚ್ಚರದ ಕನಸು. ಆದರೆ ಸಾಮಾನ್ಯರಿಗೆ ಈ ಪ್ರಪಂಚ ಸತ್ಯ, ಅದು ನೀಡುವ ಅನುಭವಗಳೆಲ್ಲ ಸತ್ಯ. ಈ ಅನುಭವ ಸಾಪೇಕ್ಷವಾದದ್ದು, ಪ್ರತಿಯೊಬ್ಬ ವ್ಯಕ್ತಿಗೂ ವಿಶಿಷ್ಟವಾದದ್ದು. ಒಬ್ಬೊಬ್ಬರದು ಒಂದೊಂದು ಅನುಭವ. ನಮಗೆ ಅನುಭವ ದೊರೆಯುವುದು ಇಂದ್ರಿಯಗಳಿಂದ. ಒಂದು ಇಂದ್ರಿಯ ತಿಳಿಸಿದ್ದನ್ನು ಮತ್ತೊಂದು ಇಂದ್ರಿಯ ತಿಳಿಯಲಾರದು. ಬಣ್ಣವನ್ನು ತಿಳಿಸುವ ಕಣ್ಣು ಶಬ್ದವನ್ನು ಗ್ರಹಿಸಲಾರದು. ಕಿವಿಗೆ ತಾಗುವ ಶಬ್ದವನ್ನು ಮೂಗು ತಿಳಿಯಲಾರದು. ಮೂಗು ಕಂಡು ಹಿಡಿಯುವ ವಾಸನೆಯನ್ನು ನಾಲಗೆ ಗುರುತಿಸಲಾರದು. ಆದರೆ ಅವೆಲ್ಲ ತಂದು ಹಾಕುವ ವಿವರಗಳಿಂದ ಮನಸ್ಸು ಒಂದು ಗ್ರಹಿಕೆಯನ್ನು ಮಾಡುತ್ತದೆ. ಅದು ಅನುಭವವಾಗುತ್ತದೆ. ಕಗ್ಗದ ಸಂದೇಶ ಇದು. ಪ್ರಪಂಚವೇ ಮಾಯೆ ಇರಬಹುದೇನೋ. ಆದರೆ ನಮಗೆ ದೊರಕುವ ಅನುಭವ ಒಂದು ಸತ್ಯ. ಹೀಗೆ ಬದುಕಿನಲ್ಲಿ ಬರುವ ಸಾವಿರಾರು ಅನುಭವಗಳೆಲ್ಲ ಪುಟ್ಟ ಪುಟ್ಟ ಸತ್ಯಗಳು. ಇವೆಲ್ಲವುಗಳನ್ನು ಮೀರಿದ, ಇವೆಲ್ಲವುಗಳನ್ನು ಒಳಗೊಂಡ ಪರಮಸತ್ಯವೊಂದಿದೆ. ನಮ್ಮ ಅನುಭವಗಳು ಆ ಪರಮಸತ್ಯದ ಅಂಶಗಳು. ಈ ಅನುಭವಗಳೇ ನಮ್ಮ ಬಾಳಿಗೆ ಮುಖ್ಯವಾದವುಗಳು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.