ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಉತ್ಕೃಷ್ಟತೆಯ ಲಕ್ಷಣ

Last Updated 11 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ


ನಾಸಿಕದೊಳುಚ್ಛ್ವಾಸ ನಿಶ್ವಾಸ ನಡೆವಂತೆ |

ಸೂಸುತ್ತಲಿರಲಿ ನಿನ್ನಿರವು ಮಂಗಳವ ||

ಆಶಿಸದೆ ಸಂಕಲ್ಪಯತ್ನಗಳನಿನಿತುಮಂ |

ಸಾಜವಾಗಲಿ ಸಯ್ಪು – ಮಂಕುತಿಮ್ಮ || 712 ||

ಪದ-ಅರ್ಥ: ನಾಸಿಕದೊಳುಚ್ಛ್ವಾಸ=ನಾಸಿಕದೊಳು (ಮೂಗಿನಲ್ಲಿ)+ಉಚ್ಛ್ವಾಸ(ಉಸಿರನ್ನು ಒಳಗೆ ಎಳೆದುಕೊಳ್ಳುವುದು), ನಿಶ್ವಾಸ (ಉಸಿರು ಹೊರಗೆ ಬಿಡುವುದು), ಸೂಸುತ್ತಲಿರಲಿ=ಸೂಸುತ್ತಲು+ಇರಲಿ, ನಿನ್ನಿರವು=ನಿನ್ನ+ಇರವು, ಸಂಕಲ್ಪಯತ್ನಗಳನಿನಿತುಮಂ=ಸಂಕಲ್ಪ+ಯತ್ನಗಳನು+ ಇನಿತುಮಂ(ಸ್ವಲ್ಪವಾದರೂ), ಸಾಜವಾಗಲಿ=ಸಹಜವಾಗಲಿ, ಸಯ್ಪು=ಸರಿಯಾದ ಕಾರ್ಯ.

ವಾಚ್ಯಾರ್ಥ: ಶ್ವಾಸೋಚ್ಛ್ವಾಸ ನಿನ್ನಲ್ಲಿ ಅತ್ಯಂತ ಸಹಜವಾಗಿ ನಡೆವಂತೆ, ನಿನ್ನ ಬದುಕು ಅನಾಯಾಸವಾಗಿ ಮಂಗಳವನ್ನು ಸೂಸುತ್ತಿರಲಿ, ವಿಶೇಷವಾದ ಸಂಕಲ್ಪ ಮತ್ತು ಯತ್ನಗಳಿಲ್ಲದೆ ಸಹಜವಾಗಿ ನಡೆಯಲಿ ಸರಿಯಾದ ಕಾರ್ಯಗಳು.

ವಿವರಣೆ: ಇದೊಂದು ಅದ್ಭುತವಾದ ಚೌಪದಿ. ಅಷ್ಟೊಂದು ಬಹುದೊಡ್ಡ ಚಿಂತನೆಯನ್ನು ಪುಟ್ಟ ನಾಲ್ಕು ಸಾಲುಗಳಲ್ಲಿ ಹೇಳಲು ಸಾಧ್ಯವಾಗಿರುವುದೇ ಅಚ್ಚರಿ. ಈ ಸಾಲುಗಳು ಮನುಷ್ಯನ ಸಾಧನೆಯ ಉತ್ಕೃಷ್ಟತೆಯ ಬಗ್ಗೆ ಹೇಳುತ್ತವೆ. ಇಂಥ ವಿಷಯದ ಮೇಲೆ ಅನೇಕ ಗ್ರಂಥಗಳನ್ನು ಕಂಡಿದ್ದೇನೆ. ಅವೆಲ್ಲವುಗಳ ಸಾರರೂಪ ಈ ಚೌಪದಿ. ಮನುಷ್ಯ ಸಾಮಾನ್ಯ ಸ್ಥಿತಿಯಿಂದ ಅತ್ಯುನ್ನತ ನೆಲೆಗೆ ಅನೇಕ ಹಂತಗಳನ್ನು ದಾಟಿ ಬರುತ್ತಾನೆ. ಮೊದಲನೆಯ ಹಂತದಲ್ಲಿ ಆತ ಮುಗ್ಧ. ಅವನಿಗೆ ಏನೂ ತಿಳಿಯದು. ಮುಖ್ಯವಾಗಿ ಅವನಿಗೂ ತನಗೆ ಏನೂ ತಿಳಿದಿಲ್ಲ ಎನ್ನುವುದೂ ತಿಳಿದಿಲ್ಲ. ((He does not know that he does not know).). ಆತ ಮಾನಸಿಕವಾಗಿ, ಬೌದ್ಧಿಕವಾಗಿ ಬೆಳೆದಂತೆ ತನಗೆ ಬಹಳಷ್ಟು ತಿಳಿದಿಲ್ಲ ಎಂಬುದು ಅರಿವಾಗುತ್ತ ಹೋಗುತ್ತದೆ. ((He knows that he does not know).). ಆತ ಮುಂದೆ ಸಾಧನೆ ಮಾಡುತ್ತ ಸಾಗಿದಂತೆ ಬಹಳಷ್ಟು ಜ್ಞಾನವನ್ನು ಸಂಪಾದನೆ ಮಾಡುತ್ತಾನೆ. ತನಗೆ ಸಾಕಷ್ಟು ವಿಷಯಗಳು ತಿಳಿದಿವೆ ಎನ್ನಿಸತೊಡಗುತ್ತದೆ. (He believes that he knows)...

ಇದೊಂದು ಭ್ರಮಾಲೋಕ. ಅದು ಅಹಂಕಾರದ ಬೀಜವೂ ಆದೀತು. ಈ ಹಂತದಲ್ಲಿ ವ್ಯಕ್ತಿ ತಾನು ತಿಳಿದವನು, ಬುದ್ಧಿವಂತ ಎಂದು ಪ್ರಯತ್ನಪೂರ್ವಕವಾಗಿ ಜನರನ್ನು ಮೆಚ್ಚಸಲು ತೊಡಗುತ್ತಾನೆ. ಆ ನಂತರದ ಹಂತವನ್ನು ಕೆಲವೇ ಕೆಲವು ಜನರು ಏರಲು ಪ್ರಯತ್ನಿಸುತ್ತಾರೆ. ಅದರಲ್ಲಿ ಒಂದಿಬ್ಬರು ಮಾತ್ರ ಸಫಲರಾದಾರು. ಅದೊಂದು ಮಾನವತೆಯ ಅತ್ಯುತ್ತಮತ್ವದ ನೆಲೆ. ಆಗ ವ್ಯಕ್ತಿ ಏನೇನೂ ಪ್ರಯತ್ನವಿಲ್ಲದೆ, ಯಾವ ಸೋಗೂ ಇಲ್ಲದೆ ಎಲ್ಲವನ್ನು ತಿಳಿಯುತ್ತಾನೆ, ತಿಳಿಸುತ್ತಾನೆ. ((He does not know that he knows).). ಅದು ಎಲ್ಲವೂ ತಿಳಿದಿದ್ದ ಮುಗ್ಧತೆ. ಮಗುತನ. ಆಗ ಆತ ಮಾತನಾಡಿದ್ದೆಲ್ಲ ಉಪನಿಷತ್ತು. ಅಪ್ರಯತ್ನವಾಗಿ ಆಗ ನಡೆದದ್ದೆಲ್ಲ ಲೋಕಕ್ಕೆ ಮಾದರಿ. ರಾಮಕೃಷ್ಣ ಪರಮಹಂಸ, ಬಸವಣ್ಣ, ಬುದ್ಧ, ಅಲ್ಲಮಪ್ರಭು ಇಂಥವರು ತಲುಪಿದ್ದು ಈ ನೆಲೆಗೆ. ಕಗ್ಗ ಅದನ್ನು ಹೇಳುತ್ತದೆ. ನಾವು ಉಸಿರಾಡುವುದು ಅಪ್ರಯತ್ನವಾಗಿ. ಉಸಿರಾಡುವುದೇ ನಮಗೆ ತಿಳಿದಿಲ್ಲ, ಅದು ನಿಲ್ಲುವವರೆಗೆ. ಹಾಗೆ ನಮ್ಮ ಬದುಕು ಯಾವ ವಿಶೇಷ ಪ್ರಯತ್ನವೂ ಇಲ್ಲದೆ ಮಂಗಳವನ್ನು ಸೂಸಲಿ. ಮಾಡಿದ ಕಾರ್ಯಗಳೆಲ್ಲ ಶ್ರಮವಿಲ್ಲದೆ ಶುಭಕಾರ್ಯಗಳಾಗಲಿ. ಹೂವು ಯಾವ ಪ್ರಯತ್ನವೂ ಇಲ್ಲದೆ ಸುಗಂಧವನ್ನು ಪಸರಿಸುವಂತೆ, ಹಿಮ ತಂಪನ್ನು ಹರಡುವಂತೆ, ಉನ್ನತಿಕೆಯನ್ನು ಪಡೆದವನು ನಿರ್ಯತ್ನದಿಂದಲೇ, ಸಹಜವಾಗಿ, ಒಳ್ಳೆಯ ಕಾರ್ಯ ಪ್ರಚೋದಕನಾಗುತ್ತಾನೆ. ನಮ್ಮ ಬಾಳು ಹಾಗಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT