ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ದರ್ಶನದಿಂದ ಅದ್ಭುತ

Last Updated 7 ಆಗಸ್ಟ್ 2022, 21:28 IST
ಅಕ್ಷರ ಗಾತ್ರ

ಅತ್ಯಂತದುತ್ಕಟದ ಸನ್ನಿವೇಶಗಳ ಭರ |
ಪ್ರತ್ಯಕ್ಷ ದರ್ಶನದಿನಲ್ಲದೆಂತಹುದು? ||
ಪುಸ್ತಕದ ಚಿತ್ರದಿಂದೂಹಿಪೆಯ ಹಿಮಗಿರಿಯ |
ವಿಸ್ತಾರದದ್ಭುತವ ?- ಮಂಕುತಿಮ್ಮ || 687 ||

ಪದ-ಅರ್ಥ: ಅತ್ಯಂತದುತ್ಕಟದ=ಅತ್ಯಂತದ+ಉತ್ಕಟದ, ಭರ=ಭಾವ, ಪ್ರತ್ಯಕ್ಷದರ್ಶನದಿನಲ್ಲದೆಂತಹುದು=ಪ್ರತ್ಯಕ್ಷ+ದರ್ಶನದಿ+ ಅಲ್ಲದೆ+ಎಂತಹುದು, ಚಿತ್ರದಿಂದೂಹಿಪೆಯ=ಚಿತ್ರದಿಂದ+ಊಹಿಪೆಯ(ಊಹಿಸುವೆಯಾ),
ವಿಸ್ತಾರದದ್ಭುತವ=ವಿಸ್ತಾರದ+ಅದ್ಭುತವ

ವಾಚ್ಯಾರ್ಥ: ಪ್ರತ್ಯಕ್ಷ ದರ್ಶನವಿಲ್ಲದೆ ಅತ್ಯಂತ ಉತ್ಕಟವಾದ ಸನ್ನಿವೇಶಗಳ ಭಾವ ದೊರೆತೀತು ಹೇಗೆ? ಪುಸ್ತಕದಲ್ಲಿ ದೊರೆತ ಹಿಮಾಲಯದ ಚಿತ್ರವನ್ನು ನೋಡಿ ಅದರ ಅಗಾಧ ವಿಸ್ತಾರ ಮತ್ತು ಅದ್ಭುತವನ್ನು ಊಹಿಸಲು ಸಾಧ್ಯವೆ?

ವಿವರಣೆ: ಇಂದ್ರಿಯಗಳ ಅನುಭವ ಮತ್ತು ಅರ್ಥ ಇವುಗಳ ಸಂಯೋಗದಿಂದ ಆದ ಜ್ಞಾನವೇ ಪ್ರತ್ಯಕ್ಷಜ್ಞಾನ ಎಂದು ಭಾರತೀಯ ತತ್ವಶಾಸ್ತ್ರ ಪರಿಣಿತರು ಅಭಿಪ್ರಾಯ ಪಡುತ್ತಾರೆ
(ಇಂದ್ರಿಯಾರ್ಥ ಸಂನಿಕರ್ಷಜನ್ಯ ಜ್ಞಾನಂ ಪ್ರತ್ಯಕ್ಷಂ).

ಇಂದ್ರಿಯಗಳಿಗೆ ತೋರದ ಜ್ಞಾನ ಕೇವಲ ಭ್ರಾಂತಿ, ಕಲ್ಪನೆ. ಇಂದ್ರಿಯಗಳ ಅನುಭವಕ್ಕೆ ಬಂದರೂ ಅರ್ಥವಾಗದಿದ್ದರೆ ಅದು ವಿಪರೀತ ಜ್ಞಾನ. ಹೀಗೆ ಸನ್ನಿವೇಶವೊಂದು ನಮಗೆ ಪ್ರತ್ಯಕ್ಷ ಜ್ಞಾನವಾಗುವುದಕ್ಕೆ ದರ್ಶನದ ಅವಶ್ಯಕತೆ ಇದೆ. ಮೊನ್ನೆ ಪತ್ರಿಕೆಯೊಂದರಲ್ಲಿ ಘಟನೆಯೊಂದು ವರದಿಯಾಗಿತ್ತು. ರಶಿಯಾದ ಸೈನ್ಯದೊಡನೆ ಹೋರಾಡುವಾಗ ಯುಕ್ರೇನ್‌ನ ಸೈನಿಕನೊಬ್ಬ ಸತ್ತನೆಂದು ಸೈನ್ಯಾಧಿಕಾರಿಗಳು ಅವನ ಮನೆಗೆ ಸುದ್ದಿ ಮುಟ್ಟಿಸಿದ್ದರು. ಮನೆಯಲ್ಲಿ ಪರಿವಾರದ ದುಃಖ ಹೇಳತೀರದು. ಸೈನಿಕನ ತಾಯಿಯಂತೂ ಪ್ರಜ್ಞೆ ಕಳೆದುಕೊಂಡರು.

ಸೈನಿಕನ ದೇಹ ಮನೆಗೆ ಬರುತ್ತದೆಂದು ಕಾಯುತ್ತಿರುವಾಗ ನಡೆದದ್ದು ಆಶ್ಚರ್ಯ! ಸತ್ತನೆಂದು ವರದಿಯಾಗಿದ್ದ ಸೈನಿಕನೇ ಮನೆಗೆ ಬಂದ! ಗುರುತಿಸುವುದರಲ್ಲಿ ತಪ್ಪಾಗಿತ್ತು. ಅವನ ತಾಯಿಗೆ ಎಷ್ಟು ಸಂತೋಷವಾಗಿರಬೇಡ? ಆಕೆ ಓಡಿ ಬಂದು ಅವನನ್ನು ತಬ್ಬಿಕೊಂಡು ಸಂತೋಷದ ಅತಿರೇಕದಲ್ಲಿ ಬಿಕ್ಕಿ ಬಿಕ್ಕಿ ಅತ್ತದ್ದರ ಬಗ್ಗೆ ಲೇಖನ ವಿವರ ನೀಡಿತ್ತು. ಅದನ್ನು ಓದಿದ ನಮಗೆ ಕಣ್ಣುಹನಿಯಾದರೂ, ಆ ತಾಯಿಯ ಅನುಭವದ, ಉತ್ಕಟತೆಯ,ಭಾವಪೂರದ ಒಂದಂಶವೂ ನಮ್ಮನ್ನು ತಟ್ಟಲಾರದು. ಅದು ಪ್ರತ್ಯಕ್ಷ ದರ್ಶನದ ಫಲ. ಪತ್ರಿಕೆಯಲ್ಲಿ ನಾವು ಓದಿದ್ದುಆಕೆಯ ಅನುಭವದ ಕೇವಲ ಒಂದು ಚೂರು ಮಾತ್ರ. ತಾಯಿಗೆ ಆದದ್ದು ಪ್ರತ್ಯಕ್ಷ ದರ್ಶನ, ನಮಗೆ ದೊರೆತದ್ದು ಸನ್ನಿವೇಶದ ಊಹೆ. ಕಲ್ಪನೆಗೂ, ಪ್ರತ್ಯಕ್ಷಾನುಭವಕ್ಕೂ ಅಜಗಜಾಂತರ ವ್ಯತ್ಯಾಸ.

ಅರ್ಜುನ ಶ್ರೀಕೃಷ್ಣನನ್ನು ಸ್ನೇಹಿತನೆಂದುಕಂಡವನು. ಅವನ ಜೊತೆಗೆ ಆಮೋದ, ವಿನೋ ದಗಳಲ್ಲಿ ದಿನ ಕಳೆದವನು. ಆದರೆ ಯುದ್ಧಭೂಮಿಯಲ್ಲಿ ಆತನ ವಿಶ್ವರೂಪವನ್ನು ಕಂಡಾಗ ನಡುಗಿ ಹೋದ, ಭಯದಿಂದ ಬೆವರಿದ. ಇವನೇನಾ ತಾನು ಸ್ನೇಹಿತನೆಂದು ಭಾವಿಸಿದ ವ್ಯಕ್ತಿ ಎಂದುಕಂಗಾಲಾದ. ತನ್ನ ಊಹೆಗೂ ಮೀರಿದ ವ್ಯಕ್ತಿತ್ವವನ್ನುಪ್ರತ್ಯಕ್ಷದರ್ಶನದಿಂದ ಅನುಭವಿಸಿದ್ದ. ಅದಕ್ಕೇ ಕಗ್ಗಕೇಳುತ್ತದೆ, ಪುಸ್ತಕದಲ್ಲಿಯ ಹಿಮಾಲಯದ ಚಿತ್ರವನ್ನು ನೋಡುವುದು ಹಿಮಾಲಯದ ಪ್ರತ್ಯಕ್ಷ ದರ್ಶನವೆ? ಆ ಪರ್ವತದ ವಿಸ್ತಾರ, ಅದ್ಭುತದ ಅನುಭವ ಚಿತ್ರದಿಂದ ದೊರಕೀತೇ?ದರ್ಶನದಿಂದಮಾತ್ರ ಅನುಭವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT