ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರಾಡಿ ಬಂದವರು

Last Updated 31 ಅಕ್ಟೋಬರ್ 2019, 17:45 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯನ್ನು ಬ್ರಹ್ಮದತ್ತ ಆಳುತ್ತಿದ್ದಾಗ ಬೋಧಿಸತ್ವ ರಾಧಎಂಬ ಗಿಳಿಯಾಗಿ ಹುಟ್ಟಿದ್ದ. ಅವನಿಗೊಬ್ಬ ತಮ್ಮ. ಅವನ ಹೆಸರು ಪೊಟ್ಟಪಾದ.

ಒಮ್ಮೆ ಬೇಡನೊಬ್ಬ ಎರಡೂ ಗಿಳಿಗಳನ್ನು ಹಿಡಿದು ರಾಜನಿಗೆ ಕೊಟ್ಟ. ಅವನು ಅವುಗಳನ್ನು ಪಂಜರದಲ್ಲಿ ಕೂಡಿಟ್ಟು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದ. ಕಾಲಕಾಲಕ್ಕೆ ಆರೋಗ್ಯಕರವಾದ ಆಹಾರ, ಸ್ವಚ್ಛವಾದ ನೀರುಗಳನ್ನು ಪಡೆದು ಎರಡೂ ಗಿಳಿಗಳು ತೃಪ್ತಿಯಿಂದ ಇದ್ದವು. ಬೋಧಿಸತ್ವನಿಗೆ ಯಾವುದರಲ್ಲಿಯೂ ಅತೀವ ಆಸಕ್ತಿ ಇರಲಿಲ್ಲ. ಆದರೆ ಅದರ ತಮ್ಮ ಪೊಟ್ಟಪಾದನಿಗೆ ಚಿತ್ತಸ್ಥಿರತೆ ಇರಲಿಲ್ಲ.

ಹೀಗಿರುವಾಗ ಒಂದು ದಿನ ಬೇಡನೊಬ್ಬ ಕಾಳಬಾಹು ಎಂಬ ಹೆಸರಿನ ದೊಡ್ಡ ಕಪ್ಪು ಕೋತಿಯನ್ನು ಹಿಡಿದು ತಂದು ರಾಜನಿಗೆ ಕೊಟ್ಟ. ಅದನ್ನೊಂದು ದೊಡ್ಡ ಪಂಜರದಲ್ಲಿಟ್ಟರು. ಅದು ಹೊಸದಾಗಿ ಸೇರಿದ ಪ್ರಾಣಿಯಾದ್ದರಿಂದ ಸಹಜವಾಗಿಯೇ ಅದು ರಾಜನ ಹಾಗೂ ಪರಿವಾರದವರ ಆಸಕ್ತಿಯ ಕೇಂದ್ರವಾಯಿತು. ಆಗ ಎರಡೂ ಗಿಳಿಗಳಿಗೆ ದೊರಕುತ್ತಿದ್ದ ಮನ್ನಣೆ ಕಡಿಮೆಯಾಯಿತು. ಕೋತಿಗೆ ವಿಶೇಷ ಆಹಾರ, ಸತ್ಕಾರಗಳು ದೊರೆಯುವುದನ್ನು ಕಂಡು ಪೊಟ್ಟಪಾದನಿಗೆ ವಿಪರೀತಕೋಪ ಬಂದಿತು. ಅದು ಅಣ್ಣನಿಗೆ ಹೇಳಿತು, “ಅಣ್ಣಾ, ನಾವು ಇಷ್ಟುಸುಂದರವಾಗಿದ್ದೇವೆ. ಆದರೆ ಈಗ ಕರೀಮುಸುಡಿಯ ಕೋತಿ ಬಂದಾಗಿನಿಂದ ಎಲ್ಲರೂ ಅದನ್ನೇ ಸಂತೋಷಪಡಿಸುತ್ತಿದ್ದಾರೆ. ನಮಗೆ ಮೊದಲಿನ ರುಚಿಕರವಾದ ಭೋಜನ ಹಾಗೂ ಅಕ್ಕರತೆ ದೊರೆಯುತ್ತಿಲ್ಲ. ಮರ್ಯಾದೆ ದೊರೆಯದ ಸ್ಥಳದಲ್ಲಿ ನಾವೇಕೆ ಇರಬೇಕು? ಇಬ್ಬರೂ ಹಾರಿ ಕಾಡಿಗೆ ಹೋಗಿಬಿಡೋಣ”. ಆಗ ಬೋಧಿಸತ್ವ ಗಿಳಿ ಹೇಳಿತು, “ತಮ್ಮಾ, ಲಾಭ-ನಷ್ಟ, ಯಶಸ್ಸು-ಅಪಯಶಸ್ಸು, ನಿಂದೆ-ಹೊಗಳಿಕೆ, ಸುಖ-ದುಃಖ ಇವೆಲ್ಲ ಈ ಲೋಕದ ಅನಿತ್ಯವಾದ ಧರ್ಮಗಳು, ಯಾವವೂ ಶಾಶ್ವತವಾಗಿ ಇರುವುದಿಲ್ಲ. ಆದ್ದರಿಂದ ಚಿಂತೆ ಮಾಡದೆ, ಮನಸ್ಸನ್ನು ಕೆಡಿಸಿಕೊಳ್ಳದೆ ಸ್ಥಿರವಾಗಿರು”. ಪೊಟ್ಟಪಾದನಿಗೆ ಸಮಾಧಾನವಿಲ್ಲ, “ಅಣ್ಣಾ, ಈ ಕೋತಿ ಇರುವವರೆಗೆ ನಮಗೆ ಒಳ್ಳೆಯ ಕಾಲ ಬರಲಾರದು. ಕೋತಿಯನ್ನು ಇಲ್ಲಿಂದ ಓಡಿಸುವುದು ಹೇಗೆ?” ಎಂದು ಕೇಳಿತು. ಬೋಧಿಸತ್ವ ನಕ್ಕು ಹೇಳಿತು, “ತಮ್ಮ, ಅದನ್ನು ಓಡಿಸಲು ನಾವು ಪ್ರಯತ್ನ ಮಾಡುವುದೇ ಬೇಡ. ಕೋತಿಯ ಸ್ವಭಾವವೇ ಹಾಗೆ. ಕಿವಿಗಳನ್ನು ಅಲುಗಾಡಿಸುತ್ತದೆ. ಮುಖವನ್ನು ಅಣಕಿಸುತ್ತದೆ. ಹಲ್ಲು ಕಿರಿದು ರಾಜಕುಮಾರರನ್ನು ಹೆದರಿಸುತ್ತದೆ. ಅದರ ಚಂಚಲಚಿತ್ತದಿಂದ ಈ ಕಾಳಬಾಹು ಕೋತಿ ತಾನೇ ತನ್ನನ್ನು ಹೊರಹಾಕಿಸಿಕೊಳ್ಳುತ್ತದೆ, ನೋಡುತ್ತಿರು”.
ಬೋಧಿಸತ್ವ ಹೇಳಿದಂತೆ ದಿನಕಳೆದಂತೆ ಕಪಿಚೇಷ್ಟೆ ತುಂಬ ಹೆಚ್ಚಾಯಿತು. ಪುಟ್ಟ ರಾಜಕುಮಾರರು ಅದನ್ನು ಕಂಡು ಹೆದರಿದರು. ಸೇವಕರು ಕೋತಿಯ ಬಗ್ಗೆ ಆದರವನ್ನು ಕಡಿಮೆ ಮಾಡಿದರು. ಒಂದು ದಿನ ಅದರ ಕಾಟವನ್ನು ತಾಳಲಾರದೆ ಓಡಿಸಿಬಿಟ್ಟರು. ಮತ್ತೆ ಗಿಳಿಗಳಿಗೆ ಮೊದಲಿನ ಆದರ-ಸತ್ಕಾರಗಳು ದೊರೆಯತೊಡಗಿದವು.

ನಮ್ಮ ಬದುಕಿನಲ್ಲೂ ಕೆಲವೊಂದು ಜನ ಬರುತ್ತಾರೆ, ಅಬ್ಬರದಿಂದ ಹಾರಾಡುತ್ತಾರೆ, ಜನರ ಮನಸ್ಸು ಸೆಳೆಯುತ್ತಾರೆ. ಆಗ ನಮ್ಮ ಶಕ್ತಿ ಕುಂಠಿತವಾಯಿತೋ ಎನ್ನಿಸುತ್ತದೆ. ಅತಿಯಾಗಿ ಹಾರಾಡುವವರು ಬಹುಬೇಗ ಸುಸ್ತಾಗುತ್ತಾರೆ. ಅವರೊಡನೆ ಸ್ಪರ್ಧೆ ಬೇಡ. ಮನಸ್ಸನ್ನುಶಾಂತವಾಗಿಟ್ಟುಕೊಂಡು ನಮ್ಮ ಕರ್ತವ್ಯಗಳನ್ನು ಏಕಮನಸ್ಸಿನಿಂದ ಮಾಡುತ್ತ ಬಂದಾಗ ಹೋರಾಡಿ ಬಂದವರು ಹಾರಾಡಿ ಹೋಗಿಬಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT