ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮೋಸಕ್ಕೆ ಮದ್ದು

Last Updated 24 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಏಕವಾಗವೆ ದೈವಚಿತ್ತ ನರಚಿತ್ತಗಳು ? |
ಏಕೆನ್ನ ಮನವನಾಳನು ಲೋಕದೊಡೆಯಂ ? ||
ಬೇಕೆನಿಪುದೊಂದೆನಗೆ, ವಿಧಿಗೈವುದಿನ್ನೊಂದು |
ಈ ಕುಟಿಲಕೇಂ ಮದ್ದು ? – ಮಂಕುತಿಮ್ಮ || 369||

ಪದ-ಅರ್ಥ:ಏಕವಾಗವೆ=ಒಂದಾಗವೆ,ದೈವಚಿತ್ತ=ಭಗವಂತನ ಮನಸ್ಸು,ನರಚಿತ್ತ=ಮನುಷ್ಯನ ಮನಸ್ಸು,ಮನವನಾಳನು=ಮನವ+ಆಳನು, ಬೇಕೆನಿಪುದೊಂದೆನಗೆ=ಬೇಕು+ಎನಿಪುದು+ಒಂದು+ಎನಗೆ, ವಿಧಿಗೈವುದಿನ್ನೊಂದು=ವಿಧಿ+ಗೈವುದು(ಮಾಡುವುದು)+ಇನ್ನೊಂದು, ಕುಟಿಲ=ಮೋಸ.

ವಾಚ್ಯಾರ್ಥ:ದೈವ ಮತ್ತು ಮನುಷ್ಯನ ಮನಸ್ಸು ಒಂದೇ ಏಕೆ ಆಗುವುದಿಲ್ಲ? ಲೋಕದ ಒಡೆಯ ಯಾಕೆ ನನ್ನ ಮನಸ್ಸನ್ನು ಆಳುವುದಿಲ್ಲ? ನನಗೆ ಯಾವುದೋ ಬೇಕೆನ್ನಿಸುತ್ತದೆ ಆದರೆ ವಿಧಿ ಮಾಡುವುದು ಮತ್ತೊಂದು. ಈ ಮೋಸಕ್ಕೆ ಏನು ಉಪಾಯ ?

ವಿವರಣೆ:ಈ ಕಗ್ಗ ಪುರಂದರದಾಸರ ಕೀರ್ತನೆಯೊಂದನ್ನು ಜ್ಞಾಪಕಕ್ಕೆ ತರುತ್ತದೆ.
ಹರಿಚಿತ್ತ ಸತ್ಯ, ನಮ್ಮ ಹರಿಚಿತ್ತ ಸತ್ಯ |
ನರಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು ||
ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪಾದಚಾರಿಯಾಗೋದು ಹರಿಚಿತ್ತವಯ್ಯ ||
ಪುರಂದರವಿಠಲನ ಬಯಸೋದು ನರಚಿತ್ತ |
ದುರಿತವ ಕಳೆವುದೆ ಹರಿಚಿತ್ತವಯ್ಯ ||

ಮೇಲ್ನೋಟಕ್ಕೆ ಇದು ದೈವದ ನಿಯಂತ್ರಣ ಹಾಗೂ ಮಾನವನ ಅಸಹಾಯಕತೆಯನ್ನು ತೋರುತ್ತದೆ. ಮನುಷ್ಯನ ಅಪೇಕ್ಷೆಗಳೇ ಬೇರೆ, ದೈವದ ತೀರ್ಮಾನವೇ ಬೇರೆ. ಆದರೆ ಈ ಸಾಲುಗಳ ಹಿಂದೆ, ಆಂತರ್ಯದಲ್ಲಿ ಇನ್ನೊಂದು ಭಾವ ನೆಲೆ ನಿಂತಿದೆ. ಅದು ಮನುಷ್ಯ ಪ್ರಯತ್ನ. ದುರಿತ ಕಳೆವುದು ಹರಿಚಿತ್ತವೇನೋ ಸರಿ, ಆದರೆ ಅದಕ್ಕಾಗಿ ಪುರಂದರವಿಠಲನನ್ನು ಬಯಸುವುದು ನರನ ಚಿತ್ತ ಮಾತ್ರವಲ್ಲ, ಕರ್ತವ್ಯವೂ ಹೌದು. ರೋಗ ಬಂದಾಗ ದೈವದ ಇಚ್ಛೆಯಂತಾಗಲಿ ಎಂದು ಕೈಕಟ್ಟಿ ಕುಳಿತರೆ ಆದೀತೇ? ಒಂದು ಪೂರ್ವಿಕರ ಮಾತಿದೆ.

‘ಔಷಧಂ ಜಾನ್ಹವೀ ತೋಯಂ, ವೈದ್ಯೋ ನಾರಾಯಣೋ ಹರಿ:’ ಗಂಗೆಯ ನೀರೇ ಔಷಧಿ, ನಾರಾಯಣನೇ ವೈದ್ಯ. ಇದು ಎಷ್ಟು ಚೆಂದದ ಮಾತು! ಗಂಗೆಯ ನೀರು ಔಷಧಿಯೇನೋ ಇದ್ದೀತು. ಅದನ್ನು ಕುಡಿಸು. ಆದರೆ ಹಾಗೆಯೇ ಅದನ್ನೇ ನಂಬಿ ಕುಳಿತುಕೊಳ್ಳಬೇಡ, ರೋಗಿಯನ್ನು ವೈದ್ಯನ ಕಡೆಗೆ ಕರೆದುಕೊಂಡು ಹೋಗು. ಅಂದರೆ ಹರಿಚಿತ್ತಕ್ಕೆ ಒಪ್ಪಿತವಾಗಬೇಕಾದರೆ ನರಪ್ರಯತ್ನ ಅತ್ಯಂತ ಮುಖ್ಯ. ನರಪ್ರಯತ್ನ ಸಾರ್ಥಕವಾದಾಗ ಅದಕ್ಕೆ ದೈವಚಿತ್ತ ಒಲಿಯದಿರದೆ?

ಕಗ್ಗ ಈ ಚಿಂತನೆಯ ಧಾಟಿಯಲ್ಲೇ, ಪ್ರಶ್ನೆ ಕೇಳಿದಂತೆ ಮಾಡಿ ಉತ್ತರವನ್ನು ಪ್ರೇರೇಪಿಸುತ್ತದೆ. ದೈವಚಿತ್ತ, ನರಚಿತ್ತ ಏಕೆ ಒಂದಾಗಲಾರವು? ನನ್ನ ಮನಸ್ಸನ್ನು ನನಗೇ ಬಿಟ್ಟ ಲೋಕದೊಡೆಯ ಯಾಕೆ ಅದನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ನಡೆಸಲೊಲ್ಲ? ಹಾಗೆ ಆತನೇ ನಿಯಂತ್ರಣಕ್ಕೆ ತೆಗೆದುಕೊಂಡರೆ ನಾನು ಬಯಸುವುದು, ಆತ ಮಾಡುವುದು ಎರಡೂ ಒಂದೇ ಆಗಬಹುದಲ್ಲವೇ? ಈಗಾಗುತ್ತಿರುವ ದ್ವಂದ್ವದ ಮೋಸಕ್ಕೆ ಔಷಧವೇನು? ಔಷಧ ಬಹುಶಃ ಒಂದೇ - ಮನುಷ್ಯ ಪ್ರಯತ್ನ. ಅದರ ಸಾರ್ಥಕತೆ ದೈವಕ್ಕೆ ಒಪ್ಪಿತವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT