ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಇಬ್ಬರು ಉಪಕಾರಿಗಳು

Last Updated 7 ಆಗಸ್ಟ್ 2022, 21:29 IST
ಅಕ್ಷರ ಗಾತ್ರ

ದಿವಸಕೊಳಗದಿನ್ ಆಯುರಾಶಿಯನು ರವಿಯಳೆಯಲ್ |

ಅವನ ಮಗ ಜವನ್ ಅದರ ಲೆಕ್ಕವಿರಿಸುವನು ||

ದಿವಿಜರೊಳಗಿವರಿರ್ವರುಪಕಾರಿಗಳು ನಮಗೆ |

ಸವೆಸುವರು ತನುಘಟವ – ಮಂಕುತಿಮ್ಮ || 684 ||

ಪದ-ಅರ್ಥ: ದಿವಸಕೊಳಗದಿನ್=ದಿವಸ +ಕೊಳಗದಿನ್(ಕೊಳಗದಿಂದ),
ಆಯುರಾಶಿಯನು=ಆಯುಸ್ಸಿನ ಮೊತ್ತವನ್ನು,
ರವಿಯಳೆಯಲ್=ರವಿ+ಅಳೆಯಲ್(ಅಳೆಯಲು), ಜವನ್=ಯಮ,
ದಿವಿಜರೊಳಗಿವರಿರ್ವರುಪಕಾರಿಗಳು=ದಿವಿಜರೊಳಗೆ+ಇವರು+ಇರ್ವರು(ಇಬ್ಬರು)+ಉಪಕಾರಿಗಳು, ತನುಘಟವ=ದೇಹವೆಂಬ ಮಡಕೆ

ವಾಚ್ಯಾರ್ಥ: ದಿವಸವೆಂಬ ಕೊಳಗದಿಂದ ಸೂರ್ಯ ನಮ್ಮ ಬದುಕಿನ ಮೊತ್ತವನ್ನು ಅಳೆಯುತ್ತಾನೆ. ಅವನ ಮಗ ಯಮ ಅದರ ಲೆಕ್ಕವಿಡುತ್ತಾನೆ. ದೇವತೆಗಳಲ್ಲಿ ಇವರಿಬ್ಬರೂ ನಮಗೆಉಪಕಾರಿಗಳು. ಯಾಕೆಂದರೆ ಅವರು ದೇಹವೆಂಬ ಮಡಕೆಯನ್ನು ಸವೆಸುತ್ತಾರೆ.

ವಿವರಣೆ: ಹಿಂದೂ ಧರ್ಮದ ಚಿಂತನೆಯಂತೆ ಮನುಷ್ಯನಿಗೆ ಮುಕ್ತಿ ದೊರಕುವುದು ದೇಹದಿಂದ ವಿಮೋಚನೆ ಪಡೆದಾಗ. ಆದರೆ ದೇಹ ಹಾವಿನ ಪೊರೆಯಂತೆ ಒಂದರಿಂದ ಪಾರಾಗಿ ಪುನರ್ಜನ್ಮದಲ್ಲಿ ಮತ್ತೊಂದನ್ನು ಪಡೆಯುತ್ತದೆ. ಹೀಗೆ ಒಂದಾದ ಮೇಲೊಂದರಂತೆ ದೇಹಗಳ ಸರಮಾಲೆ
ನಡೆಯುತ್ತದೆ. ರಾಜನಿಗೊಬ್ಬ ಮಗ ದೇವತೆಗಳ ಕೃಪೆಯಿಂದ ಜನಿಸಿದ. ಆದರೆ ಒಂದು ವರ್ಷವಾಗುವುದರೊಳಗೆ ಮೃತನಾದ. ರಾಜ-ರಾಣಿಯರ ಶೋಕಕ್ಕೆ ಮಿತಿಯಿಲ್ಲ. ನಾರದರು ಅಲ್ಲಿಗೆ ಬಂದು ಸಾವಿಗಾಗಿ ಅಳಬೇಡ ಎಂದು ಸಾಂತ್ವನ ಹೇಳಿದರು. ಆಗ ರಾಜ ತನ್ನ ಮಗನೊಡನೆ ಮಾತನಾಡಬೇಕೆಂದು ಆರ್ತನಾಗಿ ಬೇಡಿದಾಗ ನಾರದರು, “ರಾಜಾ, ನಿನ್ನ ಮಗ ಈಗ ನಿನ್ನೊಡನೆ ಎರಡು ಕ್ಷಣ ಮಾತನಾಡುತ್ತಾನೆ. ಅವನ ಮಾತಿನ ಅರ್ಥ ಮಾಡಿಕೊ” ಎಂದರು.

ಸತ್ತ ಮಗ ಎದ್ದು ಕುಳಿತ. “ದಯವಿಟ್ಟು ಅಳಬೇಡಿ. ನಾನು ಕೇವಲ ನಿಮ್ಮ ಮಗ ಅಲ್ಲ. ಹಿಂದಿನ ಜನ್ಮಗಳಲ್ಲಿ ನನಗೆ ಬೇರೆ ಬೇರೆ ತಂದೆ-ತಾಯಿಯರು, ಸಂಬಂಧಿಗಳು ಇದ್ದರು. ಈಗ ಒಂದು
ವರ್ಷ ನೀವು ತಂದೆ-ತಾಯಿಯರಾಗಿದ್ದೀರಿ. ಮತ್ತೆ ನನಗೆ ಎಷ್ಟು ಜನ್ಮಗಳಿವೆಯೋ ತಿಳಿಯದು. ಪ್ರತಿಯೊಂದರಲ್ಲಿ ಒಬ್ಬ ಹೊಸ ತಂದೆ-ತಾಯಿ, ಬಂಧು ಬಳಗದವರಿರುತ್ತಾರೆ. ಹೀಗಿರುವಾಗ ನನ್ನ
ನಿಜವಾದ ಜನಕರು ಯಾರು? ಎಲ್ಲ ಜನ್ಮಗಳಲ್ಲಿ ನನಗೆ ಬರುವ ದೇಹಕ್ಕೆ ಸಂಬಂಧಗಳು ಅಂಟುತ್ತಲೇ ಬರುತ್ತವೆ. ಎಲ್ಲಿಯವರೆಗೆ ದೇಹದ ಬಂಧ ಇದೆಯೋ ಅಲ್ಲಿಯವರೆಗೆ ನನಗೆ ಮುಕ್ತಿ ಇಲ್ಲ. ದಯವಿಟ್ಟು ದೇಹ ಒಮ್ಮೆ ಅಂತಿಮವಾಗಿ ಕರಗಿಹೋಗುವಂತೆ ನನಗಾಗಿ ಪ್ರಾರ್ಥಿಸಿ” ಎಂದು ಹೇಳಿ ಮತ್ತೆ ಪ್ರಾಣ ಕಳೆದುಕೊಂಡ. ದೇಹವನ್ನು ಶಾಶ್ವತವಾಗಿ ಕಳೆದುಕೊಳ್ಳುವುದು ವಿದೇಹ ಮುಕ್ತಿ. ದೇಹವನ್ನು ಸವೆಸಿ ಕಳೆಯುವವರುಇಬ್ಬರುದೇವತೆಗಳು. ಒಬ್ಬ ಸೂರ್ಯ. ಆತ ಉದಯ ಮತ್ತು ಅಸ್ತಮಾನಗಳಿಂದ, ದಿವಸವೆಂಬ ಕೊಳಗದಿಂದ, ನಮ್ಮ ಆಯಸ್ಸನ್ನು ಅಳೆಯುತ್ತಾನೆ. ಅವನ ಮಗ ಯಮರಾಜ ಅದರ
ಸರಿಯಾದ ಲೆಕ್ಕವನ್ನಿಟ್ಟು, ಅದು ಪೂರ್ತಿಯಾದ ಕೂಡಲೆ ಒಂದು ಕ್ಷಣ ಕೂಡ ತಡಮಾಡದೆ ಸೆಳೆದುಕೊಂಡು ಹೋಗಿಬಿಡುತ್ತಾನೆ. ಹೀಗೆ ದೇಹವೆಂಬ ಮಡಕೆಯನ್ನು ಸವೆಸುವ ಕಾರ್ಯವನ್ನು
ಮಾಡುವ ಈ ದೇವತೆಗಳು ನಮಗೆ ದೊಡ್ಡಉಪಕಾರಿಗಳು. ಅವರಿಂದಲೇ ನಮಗೆ ದೇಹದಿಂದ ಮುಕ್ತಿ.

ಮಹದೇವಿಯಕ್ಕ ಕಗ್ಗದ ಈ ಮಾತುಗಳನ್ನೇ ಒಂಭೈನೂರು ವರ್ಷಗಳ ಹಿಂದೆ
ಧ್ವನಿಸಿದ್ದಾಳೆ.

“ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ,

ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ

ಶಿವನ ನೆನೆಯಿರೆ”
ಎನ್ನುತ್ತಾಳೆ. ಎಂಥ ಸಮಾನ ಚಿಂತನೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT