ಭಾನುವಾರ, ಫೆಬ್ರವರಿ 23, 2020
19 °C

ಕಪಟದ ವೇಷ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಪಕ್ಷಿಯಾಗಿ ಹುಟ್ಟಿದ್ದ. ಅವನು ದೊಡ್ಡವನಾದಂತೆ ತುಂಬ ಬಲಿಷ್ಠನಾಗಿ ತನ್ನದೇ ಒಂದು ದೊಡ್ಡ ಗುಂಪನ್ನು ಕಟ್ಟಿಕೊಂಡು ಸಮುದ್ರದ ದ್ವೀಪದಲ್ಲಿ ನೆಲೆಸಿದ್ದ.

ಒಮ್ಮೆ ಕಾಶಿಯ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಸಮುದ್ರದಲ್ಲಿ ಹೊರಡುವಾಗ ದಿಕ್ಕು ತೋರಿಸುವ ಕಾಗೆಯನ್ನು ತಮ್ಮೊಡನೆ ಕರೆದೊಯ್ದರು. ಮಧ್ಯದಲ್ಲಿ ಬಿರುಗಾಳಿ ಬೀಸಿ ಹಡಗು ಒಡೆದುಹೋಯಿತು. ಆಗ ಅಲ್ಲಿಂದ ಹಾರಿಬಂದ ಕಾಗೆ ಪಕ್ಷಿಗಳಿರುವ ದ್ವೀಪಕ್ಕೆ ಬಂದಿತು. ಅಲ್ಲಿ ಅನೇಕ ಸುಂದರ ಪಕ್ಷಿಗಳನ್ನು ಗಮನಿಸಿತು. ತಾನು ಹೇಗಿದ್ದರೂ ಅವುಗಳಿಗೆ ಅಪರಿಚಿತವಾದ ಪಕ್ಷಿ. ತಾನು ನಾಟಕವಾಡುತ್ತ ಈ ಪಕ್ಷಿಗಳ ಮೊಟ್ಟೆಗಳನ್ನು ಹಾಗೂ ಮರಿಗಳನ್ನು ತಿನ್ನಬಹುದೆಂದು ಯೋಜನೆ ಹಾಕಿತು. ಆಗ ಕಾಗೆ ಪಕ್ಷಿಗಳು ಸಾಯಂಕಾಲ ಬಂದು ಕೂಡುವ ಸ್ಥಳದಲ್ಲಿ ಒಂದೇ ಕಾಲಿನ ಮೇಲೆ ನಿಂತು ಬಾಯಿಯನ್ನು ತೆರೆದುಕೊಂಡಿತು.

ಹಾರಿಬಂದ ಪಕ್ಷಿಗಳಿಗೆ ಇದೊಂದು ವಿಚಿತ್ರ ಪಕ್ಷಿಯಂತೆ ಕಂಡಿತು. ಒಂದು ಪಕ್ಷಿ ಕೇಳಿತು, “ಸ್ವಾಮಿ, ತಾವು ಯಾರು?”
ಕಾಗೆ ಗಂಭೀರವಾಗಿ ಹೇಳಿತು, “ನನ್ನ ಹೆಸರು ಧಾರ್ಮಿಕ”
“ಆದರೆ ತಾವು ಒಂಟಿಕಾಲಿನ ಮೇಲೆ ಏಕೆ ನಿಂತಿದ್ದೀರಿ?”
“ನನ್ನ ಶಕ್ತಿ ಅಸಮಾನವಾದದ್ದು. ನಾನು ಇನ್ನೊಂದು ಕಾಲನ್ನು ನೆಲದ ಮೇಲೆ ಊರಿದರೆ ಅದರ ಭಾರವನ್ನು ಭೂಮಿ ತಾಳಲಾರದು”.
“ಆದರೆ ಬಾಯಿಯನ್ನು ಏಕೆ ತೆರೆದು ನಿಂತಿದ್ದೀರಿ?”
“ನಾನು ಧರ್ಮಿಷ್ಠನಾದ್ದರಿಂದ ಬೇರೆ ಏನನ್ನು ತಿನ್ನುವುದಿಲ್ಲ. ಕೇವಲ ಗಾಳಿಯನ್ನು ಕುಡಿಯುತ್ತೇನೆ” ಪಕ್ಷಿಗಳೆಲ್ಲ ಈ ಕಾಗೆಯನ್ನು ಧರ್ಮಾತ್ಮನೆಂದು ತಿಳಿದು ನಮಸ್ಕಾರ ಮಾಡಿದವು. ಕಾಗೆ ಅವರಿಗೆ ನಿತ್ಯ ಧರ್ಮಬೋಧೆ ಮಾಡುತ್ತಿತ್ತು. ನಂತರ ಇದನ್ನು ನಂಬಿ ತಮ್ಮ ಮರಿಗಳು ಹಾಗೂ ಮೊಟ್ಟೆಗಳನ್ನು ಬಿಟ್ಟು ಆಹಾರವನ್ನು ಹುಡುಕಿಕೊಂಡು ಹೋಗುತ್ತಿದ್ದವು. ಕಾಗೆ ಅವರಿಲ್ಲದಾಗ ಹೊಟ್ಟೆತುಂಬ ಮರಿಗಳನ್ನು, ಮೊಟ್ಟೆಗಳನ್ನು ತಿಂದು ಮತ್ತೆ ಆ ಪಕ್ಷಿಗಳು ಬರುವುದಕ್ಕಿಂತ ಮೊದಲೇ ಮೊದಲಿನ ಹಾಗೆ ನಿಂತುಬಿಡುತ್ತಿತ್ತು.

ದಿನದಿನವೂ ಮೊಟ್ಟೆಗಳ ಹಾಗೂ ಮರಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಕಂಡು ಪಕ್ಷಿಗಳಿಗೆ ಆತಂಕವಾಯಿತು. ಅವುಗಳು ದೂರನ್ನು ಬೋಧಿಸತ್ವನಿಗೆ ನೀಡಿದವು. ಬೋಧಿಸತ್ವ ಪಕ್ಷಿ ಚಿಂತಿಸಿತು. ಈ ಹೊಸ ಪಕ್ಷಿ ಬರುವ ಮೊದಲು ಹೀಗೆಂದೂ ಆಗಿರಲಿಲ್ಲ. ಆದ್ದರಿಂದ ಅದನ್ನು ಗಮನಿಸಬೇಕೆಂದು ಎಲ್ಲ ಪಕ್ಷಿಗಳು ಆಹಾರ ಹುಡುಕುವುದಕ್ಕೆ ಹೋದಾಗ ಅದು ಒಂದು ಮರದ ಹಿಂದೆ ಅವಿತುಕೊಂಡು ಅದನ್ನೇ ಗಮನಿಸುತ್ತಿತ್ತು. ಕಾಗೆ ನಿಧಾನಕ್ಕೆ ಬಂದು ಮೊಟ್ಟೆ, ಮರಿಗಳನ್ನು ತಿಂದು ಮತ್ತೆ ಹೋಗಿ ಸನ್ಯಾಸಿಯಂತೆ ನಿಲ್ಲುವುದನ್ನು ಕಂಡಿತು.

ಪಕ್ಷಿಗಳೆಲ್ಲ ಮರಳಿ ಬಂದ ಮೇಲೆ, “ಇದು ಕಪಟ ಪಕ್ಷಿ. ಅದು ಮೋಸಮಾಡುತ್ತಿದೆ. ಸನ್ಯಾಸಿಯಂತೆ, ತ್ಯಾಗಿಯಂತೆ ನಾಟಕಮಾಡುತ್ತ ನಮ್ಮ ಮೊಟ್ಟೆ ಮರಿಗಳನ್ನು ತಿನ್ನುತ್ತಿದೆ. ಇನ್ನು ಮೇಲೆ ಅದಕ್ಕೆ ಅವಕಾಶಕೊಡಬಾರದು. ನನ್ನ ಜೊತೆಗೆ ಬನ್ನಿ” ಎಂದು ತಾನೇ ಮುಂದೆ ಹಾರಿ ಹೋಗಿ ತನ್ನ ಕೊಕ್ಕಿನಿಂದ ಕಾಗೆಯ ತಲೆಯನ್ನು ಕುಕ್ಕಿತು. ಉಳಿದ ಹಕ್ಕಿಗಳೂ ಅದನ್ನು ಸೇರಿಕೊಂಡು ಕಾಗೆಯನ್ನು ಕೊಂದು ಹಾಕಿದವು.

ಕಪಟಿಗಳು ಸನ್ಯಾಸಿಗಳ ವೇಷ ಹಾಕಬಾರದು ಅಥವಾ ವೇಷ ಹಾಕಿದರೆ ಕಪಟಿಯಾಗಿರಬಾರದು. ಹಾಗಾಗದೆ ಹೋದರೆ ಸಮಾಜ ಒಂದು ದಿನ ಅವರಿಗೆ ಸರಿಯಾದ ಪಾಠ ಕಲಿಸುವುದು ನಿಶ್ಚಿತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)