ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸುಂಟರಗಾಳಿ

Last Updated 15 ಜುಲೈ 2021, 19:30 IST
ಅಕ್ಷರ ಗಾತ್ರ

ಏಳಿಸುವುದೊಂದು ಹೊರಸುಳಿವೆನ್ನ ಹೃದಯದಲಿ |
ಗಾಳಿಸುಂಟರೆಯನದು ಹರಣಗಳ ಕುಲುಕಿ ||
ಬಾಳನಲ್ಲಾಡಿಪುದು ಬೇರಿಂದ ತುದಿವರೆಗೆ |
ಧೂಳದರೊಳೀ ಜನ್ಮ – ಮಂಕುತಿಮ್ಮ || 839 ||

ಪದ-ಅರ್ಥ: ಏಳಿಸುವುದೊಂದು= ಏಳಿಸುವುದು+ ಒಂದು, ಹೊರಸುಳಿವೆನ್ನ= ಹೊರಸುಳಿವು+ ಎನ್ನ, ಗಾಳಿಸುಂಟರೆಯನದು= ಗಾಳಿಸುಂಟರೆಯನು (ಸುಂಟರಗಾಳಿ, ಬಿರುಗಾಳಿ)+ ಅದು, ಹರಣ= ಪ್ರಾಣ, ಶಕ್ತಿ, ಬಾಳನಲ್ಲಾಡಿಪುದು= ಬಾಳನು+ ಅಲ್ಲಾಡಿಪುದು,
ಧೂಳದರೊಳೀ= ಧೂಳು+ ಅದರೊಳು+ ಈ

ವಾಚ್ಯಾರ್ಥ: ಒಂದು ಹೊರಸುಳಿವು ನನ್ನ ಹೃದಯದಲ್ಲಿ ಸುಂಟರಗಾಳಿಯನ್ನು ಎಬ್ಬಿಸಿ ನನ್ನ ಶಕ್ತಿಯನ್ನೆಲ್ಲ ಹೀರಿ, ಬಾಳನ್ನು ಬೇರಿನಿಂದ ತುದಿಯವರೆಗೆ ಅಲ್ಲಾಡಿಸುತ್ತಿದೆ. ಈ ಜನ್ಮ ಆ ಗಾಳಿಯಲ್ಲೊಂದು ಧೂಳಿಕಣ.

ವಿವರಣೆ: ಆತ ಮತ್ತು ಆಕೆ ಅಮೆರಿಕದ ಪ್ರಖ್ಯಾತ ಎಂ.ಬಿ.ಎ ಕಾಲೇಜಿನಲ್ಲಿ ಸಹಪಾಠಿಗಳು. ಕಲಿಕೆ ಮುಗಿದ ಮೇಲೆ ಭಾರತಕ್ಕೆ ಬಂದರು. ಇಬ್ಬರಿಗೂ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ದೊರೆಯಿತು. ಇಬ್ಬರೂ ಸೇರಿ ಸುಮಾರು ಮೂರು ಕೋಟಿ ವಾರ್ಷಿಕ ವರಮಾನ. ಮನೆಯವರೆಲ್ಲ ಒಪ್ಪಿ ಮದುವೆಯಾದರು. ಕೆಲಸಕ್ಕಾಗಿ, ಸಂತೋಷಕ್ಕಾಗಿ ದೇಶ ದೇಶ ಅಲೆದರು. ದೊಡ್ಡ ಮನೆ, ದೊಡ್ಡ ಕಾರು, ಸಮಾಜದಲ್ಲಿ ಅಂತಸ್ತು ಅವರದಾದವು. ಸ್ವರ್ಗ ಇದಕ್ಕಿಂದ ಚೆನ್ನಾಗಿರುವುದು ಸಾಧ್ಯವೇ? ಒಂದು ದಿನ ಪರದೇಶದಿಂದ ಮರಳಿ ದೆಹಲಿಗೆ ಬಂದಿಳಿದಾಗ ಇನ್ನೊಬ್ಬ ಅಕಸ್ಮಾತ್ತಾಗಿ ಸಿಕ್ಕಿದ ವಿಮಾನನಿಲ್ದಾಣದಲ್ಲಿ. ಆಕೆಗೆ ಆಶ್ಚರ್ಯ, ಸಂತೋಷ. ಇನ್ನೊಬ್ಬ ಆಕೆಗೆ ಪ್ರಾಥಮಿಕ ಶಾಲೆಯಲ್ಲಿ ಸಹಪಾಠಿ. ಒಂದೇ ಊರಿನಲ್ಲಿ ಜೊತೆಗೇ ಬೆಳೆದವರು. ಇಬ್ಬರೂ ಹಳೆಯ, ಬಾಲ್ಯದ ನೆನಪುಗಳನ್ನು ಕೆದಕಿ, ಕಣ್ಣರಳಿಸಿ, ಬಾಯಿ ತುಂಬ ನಕ್ಕರು. ಆಕೆ ಇನ್ನೊಬ್ಬನಿಗೆ ಗಂಡನ ಪರಿಚಯ ಮಾಡಿದಳು. ನಂತರ ಆ ತರುಣ ಆಗಾಗ ಅವಳ ಮನೆಗೆ ಬರುತ್ತಿದ್ದ. ಆದರೆ ಗಂಡನಿಗೆ ಏನೋ ಅಡ್ಡವಾಸನೆ ಬಂದಂತೆ ತೋರಿತು. ಅವರಿಬ್ಬರ ನಡವಳಿಕೆಯಲ್ಲಿ ವ್ಯತ್ಯಾಸವಿದ್ದಂತೆ ಈತನಿಗೆ ಕಂಡಿತು. ಅದು ಸಂಶಯವಾಯಿತು, ದ್ವೇಷದ ಬೀಜವಾಯಿತು. ಅಪನಂಬಿಕೆಯ ನೆಲದಲ್ಲಿ ದ್ವೇಷದ ಬೀಜ ಮೊಳೆಯುವುದು ಬಲು ಬೇಗ. ಆಕೆಯ ಮನದಲ್ಲಿ ಯಾವ ಕಸವೂ ಇಲ್ಲ. ಆದರೆ ಈತ ಕುದಿದುಹೋದ. ಹಾಗೆ ಮನ ತೀರ ಅಸ್ವಸ್ಥವಾದ ಗಳಿಗೆಯಲ್ಲಿ ಯಾರಿಗೋ ಹಣ ಕೊಟ್ಟು ಇನ್ನೊಬ್ಬನನ್ನು ಕೊಲ್ಲಿಸಿಬಿಟ್ಟ. ತನಿಖೆ ನಡೆದಾಗ ಈತನ ಕೈವಾಡ ಬಯಲಿಗೆ ಬಂದು ಜೀವಾವಧಿ ಶಿಕ್ಷೆಯಾಗಿ ಜೈಲಿಗೆ ಹೋದ. ಅಪವಾದ ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳು. ಸ್ವರ್ಗವಾಗಿದ್ದ ಮನೆ ನರಕದ ನೆಲೆಯಾಯಿತು.

ಕಗ್ಗ ಇದನ್ನು ಧ್ವನಿಪೂರ್ಣವಾಗಿ ಹೇಳುತ್ತದೆ. ಹೊರಗೆ ನಡೆದಂಥ ಒಂದು ಘಟನೆ, ಚಿಂತನೆ ನಮ್ಮ ಮನಸ್ಸಿನಲ್ಲಿ ಒಂದು ಬಿರುಗಾಳಿಯನ್ನೇಳಿಸುತ್ತದೆ. ನಮ್ಮ ಪ್ರಾಣಗಳನ್ನು, ಶಕ್ತಿಗಳನ್ನು ಕುಲುಕಿ, ಬದುಕನ್ನು ಬುಡಸಮೇತವಾಗಿ ಅಲ್ಲಾಡಿಸಿಬಿಡುತ್ತದೆ. ಹಾಗೆ ಬಿರುಗಾಳಿ ಬೀಸಿದಾಗ ಮೇಲೆದ್ದ ದೂಳಿನಲ್ಲಿ ಕಣವೊಂದು ಹೇಗೆ ಅಸಹಾಯಕವಾಗಿ, ದಿಕ್ಕುದಿಕ್ಕಿಗೆ ಹಾರಾಡಿ ಗೊತ್ತುಗುರಿಯಿಲ್ಲದೇ ಸಾಗಿ ಹೋಗುವಂತೆ ಬದುಕು ಅತಂತ್ರವಾಗುತ್ತದೆ. ಈ ಸುಂಟರಗಾಳಿ ಪ್ರಾರಂಭವಾಗುವುದು ಹೊರಗೆ, ಗದ್ದಲ ಎಬ್ಬಿಸುವುದು ಆಂತರ್ಯದಲ್ಲಿ. ಒಬ್ಬ ಮಂಥರೆ ಎಂಬ ಬಿರುಗಾಳಿ ರಾಮನ ಪಟ್ಟಾಭಿಷೇಕವನ್ನು ಬದಲಿಸಿ ಕಾಡಿಗೆ ಕಳುಹಿಸಿತು. ಒಬ್ಬ ಸಾಮಾನ್ಯನ ಕೊಂಕು ಮಾತು ರಾಮ- ಸೀತೆಯರನ್ನು ಕೊನೆಯವರೆಗೂ ಬೇರ್ಪಡಿಸಿತು. ಎಲ್ಲಿಯೋ ದೂರದಲ್ಲಿ ಚರ್ಚೆ ಮಾಡುತ್ತಿದ್ದ ವಶಿಷ್ಠ, ವಿಶ್ವಾಮಿತ್ರರವಾಗ್ವಾದ, ಸಂತೋಷವಾಗಿದ್ದ ಹರಿಶ್ಚಂದ್ರನ ಬದುಕನ್ನು ಧೂಳಿಯಂತೆ ಹಾರಿಸಿ, ನಲುಗಿಸಿಬಿಟ್ಟಿತು. ಆದಷ್ಟು ಹೊರಗಿನ ಸುಂಟರಗಾಳಿ ಆಂತರ್ಯದ ನೆಮ್ಮದಿಯನ್ನು ಕೆಡಿಸದಂತೆ ಎಚ್ಚರವಹಿಸುವುದು ಕ್ಷೇಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT