ಹಿಂದೆ ಬ್ರಹ್ಮದತ್ತ ವಾರಣಾಸಿಯನ್ನು ಅಳುತ್ತಿದ್ದಾಗ ಬೋಧಿಸತ್ವ ಒಬ್ಬ ಶ್ರೇಷ್ಠಿಯ ಮನೆಯಲ್ಲಿ ಜನ್ಮವೆತ್ತಿದ್ದ. ಆತ ತಾರುಣ್ಯಕ್ಕೆ ಬರುವ ಹೊತ್ತಿಗೆ ವ್ಯಾಪಾರದಲ್ಲಿ ಪರಿಣಿತನಾಗಿದ್ದ. ಒಮ್ಮೆ ಐದುನೂರು ಬಂಡಿಗಳಲ್ಲಿ ಸರಕನ್ನು ತುಂಬಿಕೊಂಡು ವ್ಯಾಪಾರಕ್ಕೆ ಹೊರಟ. ಹೀಗೆ ಹೋಗುವಾಗ ಒಂದು ದಟ್ಟ ಕಾಡನ್ನು ದಾಟಬೇಕಿತ್ತು.
ಆಗ ಕಾಡನ್ನು ಪ್ರವೇಶ ಮಾಡುವ ಮೊದಲು ಬೋಧಿಸತ್ವ ತನ್ನೆಲ್ಲ ಜೊತೆಗಾರರರನ್ನು ಕರೆದು ಹೇಳಿದ, ‘ಕಾಡಿನಲ್ಲಿ ವಿಚಿತ್ರವಾದ ಗಿಡಗಳಿರುತ್ತವೆ. ಅವುಗಳಲ್ಲಿ ವಿಷಪೂರಿತ ಹೂವುಗಳು, ಹಣ್ಣುಗಳು ಮತ್ತು ವಿಷಪೂರಿತ ಜೇನುಗೂಡುಗಳಿರುತ್ತವೆ. ನೀವು ಇದುವರೆಗೂ ತಿನ್ನದೇ ಇರುವ ಯಾವುದನ್ನೂ ನನ್ನನ್ನು ಕೇಳದೆ ತಿನ್ನಬೇಡಿ’. ಅವರೆಲ್ಲ ಒಪ್ಪಿ ಕಾಡನ್ನು ಪ್ರವೇಶಿಸಿದರು.
ಅಲ್ಲಿ ಕಾಡಿನ ಅಂಚಿನಲ್ಲಿದ್ದ ಹಳ್ಳಿಯ ಹೊರಗೆ ಒಂದು ದೊಡ್ಡ ಮಾವಿನ ಹಣ್ಣಿನ ಮರವಿತ್ತು. ಅದನ್ನು ಹತ್ತುವುದೂ ಕಷ್ಟವಿರಲಿಲ್ಲ. ಮರದ ತುಂಬೆಲ್ಲ ಹಣ್ಣುಗಳು ಸುರಿದಿವೆ! ಅವುಗಳ ಬಣ್ಣ, ಆಕಾರ ತುಂಬ ಆಕರ್ಷಕವಾಗಿವೆ. ಅವುಗಳ ವಾಸನೆ ಅಷ್ಟೂ ದೂರಕ್ಕೆ ಬರುತ್ತಿತ್ತು.
ಕೆಲವು ಬಾಯಿ ಚಪಲದ ಜನ ಮುಂದೆ ಹೋದವರು ಆಸೆಯಿಂದ ಹಣ್ಣುಗಳನ್ನು ಕಿತ್ತು ತಿಂದುಬಿಟ್ಟರು. ಮರುಕ್ಷಣದಲ್ಲಿ ಎಚ್ಚರ ತಪ್ಪಿ ಬಿದ್ದರು. ಮತ್ತೆ ಕೆಲವರು ಬೋಧಿಸತ್ವನನ್ನು ಕೇಳಲೆಂದು ಹಣ್ಣುಗಳನ್ನು ಕೈಯಲ್ಲಿ ಹಿಡಿದು ಕಾಯುತ್ತಿದ್ದರು. ಬೋಧಿಸತ್ವ ಅಲ್ಲಿಗೆ ಬಂದೊಡನೆ ಸಂತೋಷದಿಂದ ಕೇಳಿದರು, ‘ನಾಯಕ, ನೋಡು ಈ ಹಣ್ಣುಗಳು ಎಷ್ಟು ಅಪರೂಪದ್ದಾಗಿವೆ. ನಾವೆಂದೂ ಇಂಥ ರಸಭರಿತ ಹಣ್ಣುಗಳನ್ನು ತಿಂದಿರಲಿಲ್ಲ.
ಈಗ ತಿನ್ನೋಣವೇ?’. ಬೋಧಿಸತ್ವ ಮರವನ್ನು, ಅದರ ಸ್ಥಾನವನ್ನು ಸೂಕ್ಷ್ಮವಾಗಿ ಗಮನಿಸಿ ಜೋರಾಗಿ ಕೂಗಿದ, ‘ಈ ಹಣ್ಣುಗಳನ್ನು ಯಾರೂ ತಿನ್ನಬೇಡಿ. ಇದು ಭಾರೀ ವಿಷಪೂರಿತವಾದ ವೃಕ್ಷ. ಇದರ ಹಣ್ಣು ತಿಂದರೆ ಪ್ರಾಣನಾಶವಾದೀತು’. ಎಲ್ಲರೂ ಕೈಯಲ್ಲಿದ್ದ ಹಣ್ಣುಗಳನ್ನು ಬಿಸಾಡಿದರು. ಈಗಾಗಲೇ ಹಣ್ಣು ತಿಂದು ಬಿದ್ದಿದ್ದವರಿಗೆ ಚತುಮಧುರ ಔಷಧಿಯನ್ನು ಕುಡಿಸಿ, ವಾಂತಿ ಮಾಡಿಸಿ ಉಳಿಸಿಕೊಂಡ. ಆಗ ರಾತ್ರಿಯಾದ್ದರಿಂದ ಎಲ್ಲರೂ ಅಲ್ಲಿಯೇ ವಸತಿ ಹೂಡಿದರು.
ಇದುವರೆಗೂ ಏನಾಗುತ್ತಿತ್ತೆಂದರೆ ಅಲ್ಲಿಗೆ ಬರುತ್ತಿದ್ದ ಅಮಾಯಕ ಜನ ಈ ಹಣ್ಣು ತಿಂದು ಸತ್ತು ಬೀಳುತ್ತಿದ್ದರು. ಹತ್ತಿರದ ಗ್ರಾಮದ ಜನ ಬೆಳಿಗ್ಗೆ ಬಂದು ಸತ್ತವರನ್ನೆಲ್ಲ ಎಳೆದು ಹಾಕಿ ಅವರೊಂದಿಗಿದ್ದ ಸರಕು, ಸಾಮಗ್ರಿಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಹಂಚಿಕೊಂಡು ಹೋಗುತ್ತಿದ್ದರು. ಅದರಂತೆಯೇ ಸಂಜೆ ಮರದ ಹತ್ತಿರ ಸಾಕಷ್ಟು ಜನ ಬಂದಿದ್ದನ್ನು ಕಂಡ ಹಳ್ಳಿಯ ಜನ ಬೆಳಿಗ್ಗೆ ಅಲ್ಲಿಗೆ ಬಂದರು. ಯಾವ ಯಾವ ವಸ್ತುಗಳನ್ನು ತಾವು ತೆಗೆದುಕೊಳ್ಳಬೇಕು ಎಂದು ಚರ್ಚಿಸುತ್ತಿದ್ದರು.
ಇಲ್ಲಿ ಬಂದು ನೋಡಿದಾಗ ಎಲ್ಲರೂ ಬದುಕಿದ್ದನ್ನು ಕಂಡು ಆಶ್ಚರ್ಯವಾಯಿತು. ಅವರು, ‘ಇದು ವಿಷಪೂರಿತವಾದ ಮರವೆಂದು ಹೇಗೆ ತಿಳಿಯಿತು?’ ಎಂದು ಬೋಧಿಸತ್ವನನ್ನು ಕೇಳಿದಾಗ ಅತ ಹೇಳಿದ, ‘ಇದು ಹತ್ತಲು ಕಷ್ಟವಾದ ಮರವೂ ಇಲ್ಲ, ಊರಿನಿಂದ ದೂರವೂ ಇಲ್ಲ. ಆದರೂ ಯಾರೂ ಇವುಗಳನ್ನು ತಿಂದಿಲ್ಲವೆಂದರೆ ಅವು ವಿಷದ ಹಣ್ಣುಗಳೇ ಆಗಿರಬೇಕಲ್ಲವೇ?’ ನಂತರ ಅವರಿಗೆಲ್ಲ ಬುದ್ಧಿ ಹೇಳಿ. ಹೀಗೆ ಜನರಿಗೆ ಮೋಸ ಮಾಡಬಾರದೆಂದು ಹೇಳಿ ಅಲ್ಲಿಂದ ಜೊತೆಗಾರರನ್ನು ಹೊರಡಿಸಿದ.
ಬದುಕಿನಲ್ಲಿ ಸುಲಭವಾಗಿ, ಅನಾಯಾಸವಾಗಿ ಪ್ರಯತ್ನವಿಲ್ಲದೇ ದೊರೆತದ್ದು ಎಂದಿಗೂ ಒಳ್ಳೆಯದನ್ನು ಮಾಡಲಾರದು ಎಂಬುದು ಈ ಕಥೆಯ ಸಂದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.