ಭಾನುವಾರ, ಜನವರಿ 17, 2021
19 °C

ಬೆರಗಿನ ಬೆಳಕು: ಲೋಕ ವ್ಯವಸ್ಥೆಯ ವ್ಯತ್ಯಾಸ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ನಾಗರಾಜ ಧೃತರಾಷ್ಟ್ರನಿಗೆ ಮಾನವ ಹೆಂಡತಿ ಸಮುದ್ರಜನ್ಮಳಿಂದ ನಾಲ್ಕು ಮಕ್ಕಳಾದವು. ಎರಡನೆಯ ಮಗ ಬೋಧಿಸತ್ವ. ನಾಲ್ಕು ಮಕ್ಕಳೂ ನಾಗಗಳೇ. ಸಮುದ್ರಜನ್ಮಳಿಗೆ ನಾಗಭವನ ಎಂದು ಎಷ್ಟೋ ಕಾಲ ತಿಳಿದಿರಲಿಲ್ಲ. ಗೊತ್ತಾದ ಮೇಲೆ ಬೇರೆ ವಿಧಿಯಿರಲಿಲ್ಲ. ತಂದೆ ನಾಲ್ಕೂ ಮಕ್ಕಳಿಗೆ ನೂರು ನೂರು ಯೋಜನ ರಾಜ್ಯವನ್ನು ಹಂಚಿಬಿಟ್ಟ. ಮಕ್ಕಳು ತಂದೆ-ತಾಯಿಯರನ್ನು ನೋಡಲು ತಿಂಗಳಿಗೊಮ್ಮೆ ಬರುತ್ತಿದ್ದರು. ಬೋಧಿಸತ್ವ ಮಾತ್ರ ಹದಿನೈದು ದಿನಕ್ಕೊಮ್ಮೆ ಬಂದು ಯಾವುದಾದರೂ ಸಮಸ್ಯೆ ಇದ್ದರೆ ಪರಿಹರಿಸಿ ಹೋಗುತ್ತಿದ್ದ.

ಒಂದು ಸಲ ಅವನಿಗೆ ಉಪೋಸಥ ವೃತ ಮಾಡುವ ಇಚ್ಛೆಯಾಯಿತು. ಯಾರಿಗೂ ಹೇಳದೆ ಮನುಷ್ಯರ ಮಧ್ಯೆ ಹೋಗಿ ಅದನ್ನು ಪೂರೈಸುವುದೆಂದು ತೀರ್ಮಾನಿಸಿದ. ತನ್ನ ಹೆಂಡತಿಗೆ ಹೇಳಿದ, ‘ಭದ್ರೆ, ನಾನು ಮನುಷ್ಯರ ಲೋಕಕ್ಕೆ ಹೋಗುತ್ತೇನೆ. ಯಮುನಾ ನದಿಯ ತೀರದಲ್ಲಿ ಒಂದು ವಿಶಾಲವಾದ ಆಲದ ಮರವಿದೆ. ಅದರ ಕೆಳಗಿರುವ ಹುತ್ತದ ಮೇಲೆ ಹೆಡೆಯನ್ನಿಟ್ಟು ಸಂಪೂರ್ಣ ವೃತಾಧಿಷ್ಠಾನ ಮಾಡಿ, ಉಪೋಸಥ ವೃತ ಮಾಡುತ್ತೇನೆ. ಬೆಳಗಿನ ಸಮಯಕ್ಕೆ ನಾಗಕನ್ನಿಕೆಯರು ಹೂವು, ಸುಗಂಧಾದಿ ದ್ರವ್ಯಗಳೊಡನೆ ವಾದ್ಯಸಹಿತ ಬಂದು ನನ್ನನ್ನು ಕರೆತರಲಿ’. ಹೀಗೆ ಹೇಳಿ ಆಲದ ಮರದ ಕೆಳಗಿದ್ದ ಹುತ್ತದ ಮೇಲೆ ಹೆಡೆಯಿಟ್ಟು ಮಲಗಿದ. ಅರುಣೋದಯವಾಗುತ್ತಿದ್ದಂತೆ ನಾಗಕನ್ನಿಕೆಯರು ಸಡಗರದಿಂದ ಅವನನ್ನು ಕರೆದೊಯ್ದರು.

ಆ ಸಮಯದಲ್ಲಿ ವಾರಾಣಸಿಯ ಹತ್ತಿರದ ಗ್ರಾಮದಲ್ಲಿದ್ದ ಸೋಮದತ್ತನೆಂಬ ಬೇಡ ಪ್ರಾಣಿಗಳನ್ನು ಬೇಟೆಯಾಡಲು ಮಗನನ್ನು ಕರೆದುಕೊಂಡು ಆ ಕಡೆಗೆ ಬಂದ. ಅಂದು ಒಂದು ಪ್ರಾಣಿಯೂ ಸಿಕ್ಕಲಿಲ್ಲ, ಇಂದು ರಾತ್ರಿ ಇಲ್ಲಿಯೇ ಉಳಿದು, ಮರುದಿನ ಬೇಟೆಯನ್ನು ತೆಗೆದುಕೊಂಡೇ ಹೋಗಬೇಕೆಂದು ತಂದೆ-ಮಗ ಇಬ್ಬರೂ ಮರದ ಕೊಂಬೆಯನ್ನೇರಿ ಮಲಗಿದರು. ಬೆಳಗಾಗುತ್ತಿದ್ದಂತೆ ಬೋಧಿಸತ್ವ ತನ್ನ ನಾಗದೇಹವನ್ನು ಕಳೆದುಕೊಂಡು ದೇವತೆಯಂತೆ ಹೊಳೆಯುತ್ತ ಕುಳಿತ. ನಾಗತರುಣಿಯರು ಗಂಧ, ಮಾಲೆಗಳಿಂದ ಅವನ ಪೂಜೆ ಮಾಡಿ, ವಾದ್ಯ ನುಡಿಸಿ, ನರ್ತನ ಮಾಡಿದರು. ಸೋಮದತ್ತ ಆ ವಿಚಿತ್ರವನ್ನು ಕಂಡು ಕೆಳಗಿಳಿದ. ಅವನನ್ನು ನೋಡಿದೊಡನೆ ನಾಗಕನ್ನಿಕೆಯರು ಗಾಬರಿಯಿಂದ ಮಾಯವಾದರು. ಬೋಧಿಸತ್ವ ಉಳಿದುಬಿಟ್ಟ. ಗಾಬರಿಯಾದ ಸೋಮದತ್ತ, ‘ಸ್ವಾಮೀ ತಾವು ಯಾರು? ಇಂದ್ರನೋ, ದೇವತೆಯೋ?’ ಎಂದು ಕೇಳಿದ. ಬೋಧಿಸತ್ವ ಸತ್ಯವನ್ನೇ ಹೇಳುತ್ತ. ತಾನು ನಾಗನೆಂದೂ, ಉಪೋಸಥ ವೃತಕ್ಕೆ ಬಂದವನೆಂದೂ ಹೇಳಿದ. ಈ ಮನುಷ್ಯನನ್ನೇ ನಾಗಲೋಕಕ್ಕೆ ಕರೆದುಕೊಂಡು ಹೋದರೆ ತಾನು ಮನುಷ್ಯ ಲೋಕಕ್ಕೆ ಬರುವ ಕಾರಣವಿಲ್ಲ. ಇವನ ಬಳಿ ಇದ್ದೇ ವೃತ ಮಾಡಬಹುದು ಎಂದು ಯೋಚಿಸಿ, ಅಪಾರವಾದ ಹಣ ನೀಡುವುದಾಗಿ ಹೇಳಿ, ತಂದೆ-ಮಗನನ್ನು ನಾಗಲೋಕಕ್ಕೆ ಕರೆದೊಯ್ದ. ಸೋಮದತ್ತ ಮತ್ತು ಮಗನಿಗೆ ವಿಶಾಲವಾದ ಅರಮನೆಗಳನ್ನು ಕೊಟ್ಟು ಒಬ್ಬೊಬ್ಬರಿಗೆ ನಾಲ್ಕು ನೂರು ಸುಂದರಿಯರಾದ ನಾಗ ತರುಣಿಯರನ್ನು ನೀಡಿದ. ಅಂಥ ಭೋಗಭಾಗ್ಯಗಳನ್ನು ಅವರೆಂದೂ ಕಂಡಿರಲಿಲ್ಲ.

ಪುಣ್ಯದ ಕೊರತೆಯಿಂದ ಒಂದು ವರ್ಷದಲ್ಲಿ ತಂದೆ-ಮಕ್ಕಳಿಗೆ ಭೂಲೋಕಕ್ಕೆ ಬರುವ ಮನಸ್ಸಾಯಿತು. ಅವರಿಗೆ ಆಸೆ, ಇಲ್ಲಿಯ ಸಮಸ್ತ ಐಶ್ವರ್ಯದೊಂದಿಗೆ ಭೂಮಿಗೆ ಹೋದರೆ ತಾವು ರಾಜರಂತೆ ಬದುಕಬಹುದು. ಹೀಗೆ ಚಿಂತಿಸಿ ಬೋಧಿಸತ್ವನಿಗೆ ದುಂಬಾಲು ಬಿದ್ದರು. ಆತ ಒಪ್ಪಿ ನಾಗತರುಣರನ್ನು ಜೊತೆ ಮಾಡಿ ಭೂಲೋಕಕ್ಕೆ ಕಳುಹಿಸಿದ. ಅವರು ಪುಷ್ಕರಿಣಿಯಿಂದ ಮೇಲೆ ಬಂದು ತಮ್ಮ ದಿವ್ಯಾಭರಣಗಳನ್ನು, ಅಪಾರವಾದ ಚಿನ್ನ, ವಜ್ರಗಳ ಮೂಟೆಗಳನ್ನು ಬಟ್ಟೆಯಲ್ಲಿ ಕಟ್ಟಿ ಸ್ನಾನಕ್ಕಿಳಿದರು. ಸ್ನಾನ ಮಾಡಿ ಮೇಲೆ ಬಂದರೆ ಅವೆಲ್ಲ ಮಾಯವಾಗಿ ನಾಗಭವನಕ್ಕೆ ಹೋಗಿಬಿಟ್ಟಿದ್ದವು. ಮತ್ತೆ ಅವರಿಗೆ ಹಳೆಯ, ಮಾಸಿದ ಚಿಂದಿಯ ಬಟ್ಟೆಗಳೇ ಗತಿಯಾದವು.

ಲೋಕ-ಲೋಕಗಳ ಅವಸ್ಥೆ, ವ್ಯವಸ್ಥೆಗಳು ಬೇರೆ. ಆಸೆಯಿಂದ ಒಂದರ ಅನುಕೂಲತೆಗಳನ್ನು ಮತ್ತೊಂದಕ್ಕೆ ಅನ್ವಯಿಸಲಾಗದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.