ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವರಯೋಗ ಸೂತ್ರ

Last Updated 24 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ |
ಹೊರಕೋಣೆಯಲಿ ಲೋಗರಾಟಗಳನಾಡು ||
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ |
ವರಯೋಗ ಸೂತ್ರವಿದು – ಮಂಕುತಿಮ್ಮ || 701 ||
ಪದ-ಅರ್ಥ: ನೀಂ=ನೀನು, ಮನದಾಲಯದಿ=ಮನದ+ಆಲಯದಿ, ಲೋಗರಾಟಗಳನಾಡು=ಲೋಗರ(ಜನರ)+ಆಟಗಳನ್ನು+ಆಡು,
ವಿರಮಿಸೊಬ್ಬನೆ=ವಿರಮಿಸು(ವಿಶ್ರಾಂತಿಪಡೆ)+
ಒಬ್ಬನೆ, ಮೌನದೊಳಮನೆಯ=ಮೌನದ+ಒಳ ಮನೆಯ
ವಾಚ್ಯಾರ್ಥ: ಮನವೆಂಬ ಆಲಯದಲ್ಲಿ ಎರಡು ಕೋಣೆಗಳನ್ನು ಮಾಡು. ಹೊರಗಿನ ಕೋಣೆಯಲ್ಲಿ ಪ್ರಪಂಚದ ಆಟಗಳನ್ನು ಆಡು. ಮೌನದ ಒಳಮನೆಯನ್ನು ಸೇರಿ ಆ ಶಾಂತಿಯಲ್ಲಿ ವಿಶ್ರಾಂತಿ
ಪಡೆ. ಇದೊಂದು ಶ್ರೇಷ್ಠ ಯೋಗಸೂತ್ರ.

ವಿವರಣೆ: ಒಂದೇ ಒಂದು ಕ್ಷಣ ಸಮಯವನ್ನು ವ್ಯರ್ಥಮಾಡದೆ ಸತತವಾಗಿ ದುಡಿದವರು ಮಹಾತ್ಮಾ ಗಾಂಧೀಜಿ. ಅವರ ಕಾರ್ಯದರ್ಶಿ ಮಹಾದೇವ ದೇಸಾಯಿಯವರಿಗೆ ಗಾಂಧೀಜಿಯ ದಿನಚರಿಯನ್ನು ನಿಭಾಯಿಸುವುದು ತುಂಬ ಕಷ್ಟದ ಕೆಲಸವಾಗಿತ್ತು. ಇಡೀ ದಿನ ಒಂದಾದ ಮೇಲೆ ಒಂದರಂತೆ ಕಾರ್ಯ
ಕ್ರಮಗಳು, ಪ್ರತಿಯೊಂದಕ್ಕೂ ನಿಗದಿಯಾದ ಸಮಯ. ಮೊದಲೇ ಅತಿ ಮಿತಿಯಾದ ಊಟ ಮಾಡುವಾಗಲೂ ಜನರ ಸಂದರ್ಶನ. ಸಾಮಾನ್ಯ ಜನ ಸಮಯವನ್ನು ಹೇಗೆ ಕಳೆಯುವುದೆಂದು ಯೋಚಿಸುವಾಗ,
ಗಾಂಧೀಜಿ ಸಮಯವನ್ನು ಹೇಗೆ ಕೂಡಿಸಬೆಕು ಎಂದು
ನೋಡುತ್ತಿದ್ದರಂತೆ. ಅವರ ಬಳಿ ಬರುವವರು ಕೇವಲ
ರಾಜಕೀಯ ವ್ಯಕ್ತಿಗಳಲ್ಲ. ಸಮಾಜದಲ್ಲಿ ತುಳಿತಕ್ಕೆ ಸಿಕ್ಕವರು, ಸಂಕಟದಲ್ಲಿ ತಳಮಳಿಸುವವರು, ವ್ಯಾಪಾರಿಗಳು, ಧರ್ಮಗುರುಗಳು, ತರುಣರು ಎಲ್ಲರೂ ಗಾಂಧೀಜಿಯ ಸಮಯವನ್ನು ಅಪೇಕ್ಷಿಸುವವರೆ. ಈ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಗಾಂಧೀಜಿ ತಮ್ಮನ್ನು ತಾವೇ ಉಜ್ಜೀವನಗೊಳಿಸಿಕೊಂಡದ್ದು ಮೌನದಲ್ಲಿ ವಿರಮಿಸಿದಾಗ.

ವಾರಕ್ಕೊಂದು ದಿನದ ಮೌನವನ್ನು ಅವರು ವೃತದಂತೆ ಪಾಲಿಸಿದರು. ಅವರಿಗೆ ಭಜನೆ, ಧ್ಯಾನ ಮುಖ್ಯವಾಗಿದ್ದವು. ಇಡೀ ದಿನದ ಚಟುವಟಿಕೆಯಲ್ಲಿ ಕಳೆದುಕೊಂಡ ಶಕ್ತಿಯನ್ನು ಬಹುಶಃ ಅವರು ಧ್ಯಾನದಲ್ಲಿ ಮತ್ತು ಮೌನದಲ್ಲಿ ಸಂಪಾದಿಸಿಕೊಳ್ಳುತ್ತಿದ್ದರು. ಸದಾ ಪಾದರಸದಂತೆ ಚಲಿಸುತ್ತ, ಒಂದೆಡೆಗೆ ನಿಲ್ಲದೆ ಜನರನ್ನು ಪ್ರೇರೇಪಿಸುತ್ತ ಹಗಲು-ರಾತ್ರಿ ಶ್ರಮಿಸಿದ ಸ್ವಾಮಿ ವಿವೇಕಾನಂದರೂ ಶಕ್ತಿಯನ್ನು ಅರ್ಜಿಸಿದ್ದು ಧ್ಯಾನದಲ್ಲಿ, ಮೌನದಲ್ಲಿ.ಈ ಮಾತನ್ನು ಕಗ್ಗ ಹೇಳುತ್ತದೆ.

ನಮಗೆ ಪ್ರಪಂಚದಲ್ಲಿ ಕರ್ಮಗಳನ್ನು ಬಿಟ್ಟು ಹೋಗುವುದು ಸಾಧ್ಯವಿಲ್ಲ. ನಮಗೆ ಯಾವುಯಾವುದೋ ಜವಾಬ್ದಾರಿಗಳಿವೆ. ಯಾರಿಗೊ ಗಂಡ, ಯಾರಿಗೋ ಹೆಂಡತಿಯಾಗಿದ್ದೇವೆ. ಅಣ್ಣ, ತಮ್ಮ, ಮಕ್ಕಳು, ಬಂಧುಗಳು ಎಂಬ ಸಂಬಂಧಗಳ ಸುಳಿಯಲ್ಲಿ ಸಿಲುಕಿದ್ದೇವೆ. ಆ ಎಲ್ಲ ಜವಾಬ್ದಾರಿಗಳನ್ನು ನಗುನಗುತ್ತ ನಿರ್ವಹಿಸಬೇಕು. ಆದರೆ ಅಲ್ಲಿಯೇ ಇದ್ದರೆ ಶಕ್ತಿಪಾತವಾಗುತ್ತದೆ. ಅದನ್ನು ಪುನ: ವೃದ್ಧಿಸಿಕೊಳ್ಳಲು ಏಕಾಂತಕ್ಕೆ ಹೊರಡಬೇಕು. ಮನಸ್ಸು ಧ್ಯಾನಕ್ಕೆ ಎಡೆಮಾಡಬೇಕು. ಕಗ್ಗ ಅದನ್ನು ಕಾವ್ಯಮಯವಾಗಿ ಎರಡು ಕೋಣೆಗಳು ಎನ್ನುತ್ತದೆ. ಹೊರಗಿನ ಕೋಣೆಯಲ್ಲಿ ಜವಾಬ್ದಾರಿಗಳನ್ನು ಹೊರಬೇಕು, ಜವಾಬ್ದಾರಿಗೆ ತಕ್ಕುದಾದ ಪಾತ್ರಗಳನ್ನು ವಹಿಸಿ ನಟಿಸಬೇಕು. ಅಲ್ಲಿಯೇ ಕೂಡ್ರುವುದು ಬೇಡ. ಮೌನದಲ್ಲಿ, ಶಾಂತಿಯನ್ನು ಪಡೆಯಲು ಒಳಕೋಣೆಗೆತೆರಳಿ ಅಂತರೀಕ್ಷಣೆ ಮಾಡಿಕೊಳ್ಳಬೇಕು.

ಮೌನದಲ್ಲಿ ಧ್ಯಾನ, ಚಿಂತನೆ ನಡೆಸಬೇಕು. ಇವೆರಡು ಕೋಣೆಗಳಲ್ಲಿ ಸರಿಯಾಗಿ ನಡೆದುಕೊಂಡು ಸಾಗಿಸುವ ಬದುಕು ಸಾರ್ಥಕ. ಅದೇ ಪರಮ ಯೋಗದ ಸೂತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT