ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಧರ್ಮದ ಸುಂದರ ವ್ಯಾಖ್ಯೆ

Last Updated 9 ಮೇ 2022, 17:02 IST
ಅಕ್ಷರ ಗಾತ್ರ

ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ |
ವಿಹಿತದ ಸ್ಥಾನದಿಂ ಸಹಜಗುಣಬಲದಿಂ- ||
ದಿಹಪರಸಮನ್ವಯದೆ ಸರ್ವಹಿತ ಸಂಸ್ಥಿತಿಗೆ |
ಸಹಕರಿಪುದೆಲೆ ಧರ್ಮ – ಮಂಕುತಿಮ್ಮ || 623 ||

ಪದ-ಅರ್ಥ: ಲೋಕಸಂಗತದಿ=ಲೋಕ ವ್ಯವಹಾರದಲ್ಲಿ, ವಿಹಿತದ=ದೊರಕಿದ, ಸಹಜ ಗುಣಬಲದಿಂದಹಪರಸಮನ್ವಯದೆ=ಸಹಜ ಗುಣಬಲದಿಂದ+ಇಹಪರ+ಸಮನ್ವಯದೆ.

ವಾಚ್ಯಾರ್ಥ: ಮನೆಯಲ್ಲಿ, ದೇಶದಲ್ಲಿ, ಸಮಾಜದಲ್ಲಿ, ಲೋಕವ್ಯವಹಾರದಲ್ಲಿ, ದೊರಕಿದ ಸ್ಥಾನದಿಂದ ನಮಗಿರುವ ಸಹಜವಾದ ಗುಣಗಳ ಶಕ್ತಿಯಿಂದ, ಇಹ ಮತ್ತು ಪರಗಳ ಸಮನ್ವಯದಿಂದ ಎಲ್ಲರ ಅಭ್ಯುದಯಕ್ಕೆ ಸಹಕಾರಿಯಾಗುವುದೇ ಧರ್ಮ.

ವಿವರಣೆ: ಇದೊಂದು ಅದ್ಭುತವಾದ ಚೌಪದಿ. ಬಹುಶಃ ಇದು ಅತ್ಯಂತ ವಿಸ್ತಾರವಾದ, ಎಲ್ಲವನ್ನೂ ಒಳಗೊಂಡ ಧರ್ಮದ ವ್ಯಾಖ್ಯೆ.

ನಮ್ಮೆಲ್ಲ ಶಾಸ್ತ್ರಗಳು ಹೇಳುವುದು ಸರ್ವಾತ್ಮತ್ವ. ಹಾಗೆಂದರೆ, ಯಾವ ಮನುಷ್ಯ ಪ್ರಕೃತಿಯ ಎಲ್ಲ ಜೀವ ಜಂತುಗಳು ತನ್ನೊಳಗೆ, ತನ್ನಂತೆಯೇ ಸೇರಿಕೊಂಡಿವೆ ಎನ್ನುವಂತೆ. ಅಭೇದ ಬುದ್ಧಿಯಿಂದ ನಡೆದುಕೊಳ್ಳುತ್ತಾನೋ ಮತ್ತು ನನ್ನ ಒಳಗಿರುವ ಆತ್ಮವನ್ನೇ ಸಮಸ್ತ ಪ್ರಾಣಿಗಳಲ್ಲಿ ಕಾಣುತ್ತ, ಅವುಗಳ ಅನುಭವಗಳಲ್ಲಿ ಸಹಭಾಗಿಯಾಗುತ್ತಾನೋ ಅವನು ಸರ್ವಾತ್ಮತ್ವವನ್ನು ಸಾಧಿಸಿದವನು. ಇದು ಹೇಳುವುದಕ್ಕೆ ಬಲು ಸುಲಭ. ಆದರೆ ಅನುಭವಕ್ಕೆ ತಂದುಕೊಳ್ಳುವುದು ಬಹಳ ಕಷ್ಟ. ಅದನ್ನು ಒಮ್ಮೆಗೇ ಸಾಧಿಸುವುದು ಸಾಧ್ಯವಿಲ್ಲ. ಬೆಟ್ಟವನ್ನು ಏರುವಾಗ ಒಂದೊಂದೇ ಮೆಟ್ಟಿಲನ್ನು ಏರಿದಂತೆ ಹಂತಹಂತವಾಗಿ ಏರಬೇಕು.

ಮೊದಲು ತನ್ನಿಂದಲೇ ಪ್ರಾರಂಭವಾಗಬೇಕು. ಅದೇ ಕೇಂದ್ರ. ಹೃದಯವಿಸ್ತಾರದಲ್ಲಿ ಒಂದನೆಯ ಹಂತ, ‘ನಾನು’ ಎನ್ನುವುದು ಕರಗಿ ‘ನಾವು’ ಬರಬೇಕು. ನಿಧಾನಕ್ಕೆ ನಾನು ಎನ್ನುವುದು ಪರಿವಾರದ ಎಲ್ಲರನ್ನೂ ಒಳಗೊಳ್ಳತೊಡಗುತ್ತದೆ. ಇತರರ ಕಷ್ಟಗಳೂ, ತನ್ನ ಕಷ್ಟಗಳೇ ಎನ್ನಿಸತೊಡಗುತ್ತದೆ. ಅಲ್ಲಿ ಬರುವ ಕಷ್ಟ-ಸುಖಗಳು, ಜೀವನದ ಸಹಭಾಗಿತೆಗೆ ಒಳ್ಳೆಯ ಸಂಸ್ಕಾರವಾಗುತ್ತವೆ. ಇಲ್ಲಿಂದ ಸ್ವಕೇಂದ್ರಿತ ವೃತ್ತ ಅರಳುತ್ತ ಸಾಗಬೇಕು. ಮನೆಗೆ ಮಾತ್ರ ಸೀಮಿತವಾಗಿದ್ದ ಮಮತೆ, ಸಮಾಜಕ್ಕೆ ಹರಿಯಬೇಕು. ಆಗ ಜಾತಿ, ಮತ, ಕುಲಗಳ ಭೇದ ಅಳಿಸಿಹೋಗಿ, ಎಲ್ಲರೂ ನಮ್ಮವರೇ ಎಂಬ ಭಾವ ಜಾಗ್ರತವಾಗುತ್ತದೆ. ಮುಂದೆ ಬೆಳೆದಂತೆ ಭಾಷೆ, ಸಾಹಿತ್ಯ, ಕಲೆಗಳು, ಸಂಸ್ಕೃತಿಗಳು ಸಮಾಜ ವಿಭಜನೆಗೆ ಕಾರಣವಾಗದೆ, ಅವು ವೈವಿಧ್ಯತೆಯ ಸುಂದರ ಮುಖಗಳಾಗುತ್ತವೆ. ಅಂಥ ವ್ಯಕ್ತಿ, ಯಾವುದೇ ಮಾತಿನಿಂದ, ಕೃತಿಯಿಂದ ಸಮಾಜದಲ್ಲಿ ಭಿನ್ನತೆಯನ್ನು ತರದೆ, ಎಲ್ಲರನ್ನೂ ಒಂದುಗೂಡಿಸಲು ಪ್ರಯತ್ನಿಸುತ್ತಾನೆ.

ಮುಂದಿನ ವೃತ್ತ ರಾಷ್ಟ್ರ. ಭಾರತದ ಯಾವುದೇ ರಾಜ್ಯದ, ಯಾವುದೇ ಭಾಷೆಯ, ಯಾವುದೇ ಮತದ ಜನವಾಗಲಿ, ಅವರು ಭಾರತೀಯರು, ನಮ್ಮವರು ಎಂಬ ಚಿಂತನೆ ಮೂಡಬೇಕು. ರಾಜ್ಯಗಳ ಸೃಷ್ಟಿ ವಿಭಜನೆಗೆ ಅಲ್ಲ, ಆಡಳಿತಕ್ಕೆ ಅನುಕೂಲವಾಗಲಿ ಎಂದು. ರಾಜ್ಯ-ರಾಜ್ಯಗಳ ನಡುವಿನ ಹೊಡೆದಾಟ ಹುಚ್ಚುತನ. ಹೋರಾಡುವುದು ಯಾರೊಂದಿಗೆ? ಭಾರತೀಯತೆಯ ಮಹಾತೀರ್ಥದಲ್ಲಿ ಎಲ್ಲ ಒಳಭೇದಗಳು ಲಯವಾಗಿ ಹೋಗಬೇಕು. ನಮ್ಮ ಭಾರತ ಪ್ರೀತಿ ವಿಸ್ತಾರವಾಗಿ ಹರಿದು ಇಡೀ ಪ್ರಪಂಚವನ್ನು ಆವರಿಸಬೇಕು. ಅದಕ್ಕೇ ನಮ್ಮ ಪೂರ್ವಜರು, ‘ವಸುಧೈವ ಕುಟುಂಬಕಂ’ ಎಂದರು. ಪ್ರಪಂಚ ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ನಮಗಿರುವ ಶಕ್ತಿಯಿಂದ, ನಮಗಿರುವ ಅವಕಾಶಗಳಿಂದ, ಸ್ವಂತದ ವ್ಯಕ್ತಿತ್ವ ವಿಕಾಸಕ್ಕೂ, ಆತ್ಮವಿಕಾಸಕ್ಕೂ ಅನುವಾಗುವಂತೆ, ಸರ್ವರ ಹಿತಕ್ಕಾಗಿ ಸಹಕರಿಸುವುದು ಧರ್ಮ. ಇದನ್ನೇ ಸ್ವಾಮಿ ವಿವೇಕಾನಂದರು ‘ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯ ಚ’ ಎಂದರು. ಸ್ವಂತದ ಮೋಕ್ಷದೊಡನೆ ಜಗತ್ತಿಗೆ ಹಿತವೂ ಆಗಬೇಕು. ಇದು ಧರ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT