ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸುಂದರತೆಯ ಕಾರಣಗಳು

Last Updated 7 ಅಕ್ಟೋಬರ್ 2021, 15:29 IST
ಅಕ್ಷರ ಗಾತ್ರ

ಕವಿ ಚಿತ್ರಕೋವಿದನು ಪರತತ್ವಶೋಧಕನು |
ವಿವಿಧ ವಾದನ ಗೀತ ನೃತ್ಯ ಕುಶಲಿಗಳು ||
ನವನವತೆಯಿಂ ಮನಸಿಗೀವೆಲ್ಲ ಕಲೆಗಾರ |
ರವರಿಂದ ಸುಂದರತೆ – ಮಂಕುತಿಮ್ಮ || 472 ||

ಪದ-ಅರ್ಥ: ಚಿತ್ರಕೋವಿದ=ಚಿತ್ರಕಲೆಯಲ್ಲಿ ಪರಿಣಿತ, ನವನವತೆಯಿಂ=ಹೊಸತನದಿಂದ, ಮನಸಿಗೀವೆಲ್ಲ=ಮನಸಿಗೆ+ಈವ (ಕೊಡುವ)+ಎಲ್ಲ.

ವಾಚ್ಯಾರ್ಥ: ಕವಿ, ಚಿತ್ರಗಾರ, ಪರತತ್ವಶೋಧಕ, ಬೇರೆ ಬೇರೆ ವಾದ್ಯಗಳ ವಾದಕ, ಹಾಡುಗಾರ, ನೃತ್ಯಪಟು, ಇವರೆಲ್ಲ ನಮ್ಮ ಮನಸ್ಸಿಗೆ ಹೊಸ ಹೊಸದನ್ನು ನೀಡುವ ಕಲೆಗಾರರು. ಅವರಿಂದಲೇ ಜಗತ್ತಿಗೆ ಸುಂದರತೆ.

ವಿವರಣೆ: ಒಬ್ಬ ತರುಣನಿಗೆ ಹಣ ಮಾಡುವ ಉಮೇದು ಮೆಟ್ಟಿಕೊಂಡಿತು. ಅವನಿಗೆ ಬೇರೆ ಯಾವುದೂ ಮುಖ್ಯವಲ್ಲ. ಕಲೆ, ಸಾಹಿತ್ಯ, ಸಂಗೀತಗಳೆಲ್ಲ ನಿಷ್ಪ್ರಯೋಜಕ ಎನ್ನುವುದು ಅವನ ವಾದ. ಹಿರಿಯರು ಹಣದ ಹಿಂದೆ ಓಡಬೇಡ ಎಂದು ಹೇಳಿದ್ದು ಅಪಥ್ಯವಾಯಿತು. ಒಂದು ಬಾರಿ ಹಿರಿಯರು ಅವನನ್ನು ಕೇಳಿದರು, ‘ಇಷ್ಟು ದುಡಿದು ಏನು ಮಾಡುತ್ತೀ?’

‘ಸಾಕಷ್ಟು ಹಣ ಗಳಿಸುತ್ತೇನೆ’ ಎಂದ ತರುಣ.

‘ಆಯ್ತು, ಹಣವನ್ನು ಏನು ಮಾಡುತ್ತೀ?’

‘ದೊಡ್ಡ ಬಂಗಲೆ ಕಟ್ಟಿಸುತ್ತೇನೆ, ನಾಲ್ಕಾರು ಕಾರು ಕೊಳ್ಳುತ್ತೇನೆ, ತೋಟ ಮಾಡಿಸುತ್ತೇನೆ’.

‘ಅದೂ ಆಯ್ತು, ಮುಂದೇನು ಮಾಡುತ್ತೀ?’

‘ಮುಂದೇನು ಮಾಡುವುದು? ಆರಾಮವಾಗಿ ಪ್ರಪಂಚವನ್ನು ಸುತ್ತುತ್ತೇನೆ’

‘ಯಾಕೆ ಸುತ್ತುತ್ತೀ? ಏನು ನೋಡಬಯಸುತ್ತೀ?’ ಕೇಳಿದರು ಹಿರಿಯರು

‘ಆತ ಹೇಳಿದ, ‘‘ಹಿಮಾಲಯದ ಬದರಿನಾಥ, ಕೇದಾರ್‌ನಾಥಗಳಿಗೆ ಹೋಗುತ್ತೇನೆ, ಆಗ್ರಾದ ತಾಜಮಹಲ್ ನೋಡುತ್ತೇನೆ, ಚೀನಾದ ಗೋಡೆಯನ್ನು, ರೋಮ್‌ನಲ್ಲಿರುವ ವ್ಯಾಟಿಕನ್, ಈಜಿಪ್ಟ್‌ನ ಪಿರಾಮಿಡ್‌ಗಳನ್ನು, ನಯಾಗರಾ ಜಲಪಾತವನ್ನು ನೋಡುತ್ತೇನೆ. ನಂತರ ರಷ್ಯಾದ ಬ್ಯಾಲೆ ನೃತ್ಯ ನೋಡುತ್ತೇನೆ, ಅತ್ಯದ್ಛುತ ಸಂಗೀತ ಕೇಳುತ್ತೇನೆ’. ಹಿರಿಯರು ನಕ್ಕು ಹೇಳಿದರು. ‘ಎಲ್ಲರೂ ನಿನ್ನ ಹಾಗೆಯೇ ಹಣ ಗಳಿಸುವುದನ್ನೇ ವೃತ್ತಿ ಮಾಡಿಕೊಂಡಿದ್ದರೆ, ನೀನು ನೋಡಬೇಕೆಂದಿರುವ ಎಲ್ಲ ಸುಂದರತೆಯ ತಾಣಗಳನ್ನು ಯಾರು ನಿರ್ಮಾಣ ಮಾಡುತ್ತಿದ್ದರು? ಅವರು ಅವನ್ನೆಲ್ಲ ನಿರ್ಮಾಣ ಮಾಡಿರದಿದ್ದರೆ ನಿನ್ನ ಹಣದಿಂದಾಗುವ ಪ್ರಯೋಜನವೇನು?’

ಇದೊಂದು ಕಾಲ್ಪನಿಕ ಸಂಭಾಷಣೆಯೆಂದರೂ ಅದರ ಅರ್ಥ ಆಳವಾದದ್ದು. ಬದುಕಿಗೆ ಹಣ ಬೇಕು ಆದರೆ ಎಲ್ಲವೂ ಹಣದಿಂದಲೇ ಆಗುವುದಿಲ್ಲ. ನಮ್ಮ ಬದುಕಿಗೆ ಸೊಗಸು, ನಾವೀನ್ಯತೆ, ಸಂತೋಷ ದೊರಕುವುದು ಕಲೆಗಾರರ ಕೊಡುಗೆಗಳಿಂದ. ಒಂದು ಅದ್ಭುತ ಚಿತ್ರ ಮನಸ್ಸನ್ನು ಅರಳಿಸಬಲ್ಲದು. ರವಿಶಂಕರ್‌ರವರ ಸಿತಾರ, ಅಮ್ಜದ್ ಅಲಿಖಾನ್‌ರ ಸರೋದ, ಶಿವಕುಮಾರ ಶರ್ಮಾರ ಸಂತೂರ್, ದೊರೆಸ್ವಾಮಿಯವರ ವೀಣೆ, ಹರಿಪ್ರಸಾದ್ ಚೌರಸಿಯಾರ ಕೊಳಲು ಇವೆಲ್ಲ ನಮ್ಮಲ್ಲಿ ನವಚೇತನವನ್ನು ತುಂಬಬಲ್ಲವು. ಅದ್ಭುತ ನೃತ್ಯಪ್ರದರ್ಶನ ಮನವನ್ನು ಹಿಡಿದಿಡಬಲ್ಲದು.

ಬಾಲಮುರಳಿಕೃಷ್ಣ, ಭೀಮಸೇನ್ ಜೋಶಿ, ಲತಾ ಮಂಗೇಶಕರ್‌ರಂಥವರ ಗಾಯನ ಯಾರ ಹೃದಯವನ್ನೂ ಸೂರೆ ಮಾಡುವ ಶಕ್ತಿಯುಳ್ಳವುಗಳು. ಇವರೊಂದಿಗೆ ತತ್ವಜ್ಞಾನಿಗಳ ಮಾತುಗಳು ನಮ್ಮ ದಿನನಿತ್ಯದ ಬದುಕಿಗೆ ಹೊಸ ಅರ್ಥ ನೀಡಿ ಪ್ರಚೋದಿಸಬಲ್ಲವು.

ಈ ಎಲ್ಲವುಗಳು ನಮ್ಮ ಜೀವನಕ್ಕೆ ನವೀನತೆಯನ್ನು ತಂದು ಬದುಕನ್ನು ಸುಂದರಗೊಳಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT