ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅಖಂಡಚೇತನದ ಕುಣಿತ

Last Updated 5 ಜನವರಿ 2023, 19:45 IST
ಅಕ್ಷರ ಗಾತ್ರ

ಮನಸು ಬೆಳೆಯಲಿ ಭುಜಿಸಿ ನೂರು

ನೂರನುಭವವ |ಹೊನಲು ನೂರೀ ಬಾಳ ಕಡಲನುಬ್ಬಿಸಲಿ ||
ತನುಬಂಧ ಕಳಚಿ, ಜೀವವಖಂಡಚೇತನದ |
ಕುಣಿತದಲಿ ಕೂಡಿರಲಿ - ಮಂಕುತಿಮ್ಮ || 792 ||

ಪದ-ಅರ್ಥ: ಭುಜಿಸಿ=ಉಂಡು, ನೂರನುಭವವ=ನೂರು+ಅನುಭವವ, ಹೊನಲು=ಹೊಳೆ, ನೂರೀ=ನೂರು+ಈ, ಕಡಲನುಬ್ಬಿಸಲಿ=ಕಡಲನು+ಉಬ್ಬಿಸಲಿ(ಬೆಳೆಸಲಿ), ತನುಬಂಧ=ದೇಹದ ವಿಪರೀತ ಅಭಿಮಾನ, ಜೀವವಖಂಡಚೇತನದ=ಜೀವ+ಅಖಂಡ(ಸಮಗ್ರವಾದ)+ಚೇತನದ.
ವಾಚ್ಯಾರ್ಥ: ನೂರಾರು ಅನುಭವಗಳನ್ನು ಪಡೆದು ಮನಸ್ಸು ಬೆಳೆಯಲಿ, ಅವು ನೂರು ನದಿಗಳಂತೆ ಬಂದು ಸೇರಿ ಬದುಕಿನ ಕಡಲನ್ನು ಬೆಳೆಸಲಿ. ದೇಹಭಾವ ಕರಗಿ, ಜೀವ ಅಖಂಡ ಚೇತನವೆಂಬ ಪರವಸ್ತುವಿನ ಕುಣಿತದಲಿ ಕೂಡಿ ಹೋಗಲಿ.

ವಿವರಣೆ: ಬಾಳುವುದು ಎಂದರೆ ಬೆಳೆಯುವುದು. ಅದು ಸಹಜ. ಮನುಷ್ಯ ಏನನ್ನೂ ಮಾಡದೆ ಹೋದರೂ ಬೆಳೆಯುತ್ತಾನೆ.ಆದರೆ ಬೆಳವಣಿಗೆ ಸಮರ್ಪಕವಾಗಬೇಕಾದರೆ ಅದಕ್ಕೆ ಸರಿಯಾದ ಸಂಸ್ಕಾರ ದೊರೆಯಬೇಕು. ಸಂಸ್ಕಾರ ಎಂದರೇನು? ಅದೊಂದು ಅನುಭವ. ಅದಕ್ಕೆ ಮನಸ್ಸು ಪಕ್ಕಾಗಬೇಕು. ಹುಟ್ಟಿದಾಗಿನಿಂದ ಸಾಯುವವರೆಗೆ ದೇಹ, ಮನಸ್ಸುಗಳು ನೂರಾರು ಅನುಭವಗಳನ್ನು ಪಡೆಯುತ್ತವೆ. ಪ್ರತಿಯೊಂದು ಅನುಭವ ಜೀವಕ್ಕೊಂದು ಪ್ರೇರಣೆ ಕೊಡುತ್ತದೆ. ಸಾಮಾನ್ಯರನ್ನು ಕಷ್ಟದ ಅನುಭವ ನಿರಾಸೆಯ ಕೂಪಕ್ಕೆ ತಳ್ಳಿದರೆ, ಅದು ಮಹಾತ್ಮರನ್ನು ಮತ್ತಷ್ಟು ಪರಿಪಕ್ವರನ್ನಾಗಿ ಮಾಡುತ್ತದೆ. ಯಾಕೆಂದರೆ ದೇಹಾಭಿಮಾನ ಅವರಲ್ಲಿ ತುಂಬ ಕಡಿಮೆ. ಅದಕ್ಕೇ ನೆಮ್ಮದಿ. ದೇಹದ ಅಭಿಮಾನ ಹೆಚ್ಚಾದಾಗ ದು:ಖದ ಅನುಭವ ದೊಡ್ಡ ಪೆಟ್ಟು ಕೊಡುತ್ತದೆ.

ಹೀಗೆ ಜೀವನ, ಬದುಕಿನ ವಿವಿಧ ಹಂತಗಳಲ್ಲಿ ಅನುಭವಗಳನ್ನು ಪಡೆಯುತ್ತ ಕೊನೆಗೆ ದಿವ್ಯಾನುಭವದ ಮಂದಿರವನ್ನು ಪ್ರವೇಶಿಸುತ್ತದೆ. ಅಲ್ಲಿ ದೇಹ, ಜಗತ್ತು ಎಂಬ ಮಾಯೆ ಮರೆಯಾಗುತ್ತ ಅದರ ಹಿಂದಿರುವ ಪರವಸ್ತುವಿನ ಅನಂತತೆ ಕಾಣುತ್ತದೆ. ಆ ಮೂಲವಸ್ತುವಿನಲ್ಲಿ ತಾನೂ ಒಂದಾಗಿ ಕುಣಿಯುವ ವಿಶೇಷ ಅನುಭವವನ್ನು ಜೀವ ಪಡೆಯುತ್ತದೆ. ತನ್ನನ್ನೇ ತಾನು ಮರೆತುಬಿಡುತ್ತದೆ. ಅದನ್ನು ಮಡಿವಾಳ ಮಾಚಿದೇವರು ಹೇಳುವ ಪರಿ ಅಪೂರ್ವವಾದದ್ದು. ತನು ನಷ್ಟ, ಮನ ನಷ್ಟ, ನೆನಹು
ನಷ್ಟ, ಭಾವ ನಷ್ಟ, ಜ್ಞಾನ ನಷ್ಟ, ಇಂತೀ ಪಂಚನಷ್ಟದೊಳಗೆ ನಾ ನಷ್ಟವಾದೆನು. ಆ ನಷ್ಟದೊಳಗೆ ನೀ ನಷ್ಟವಾದೆ, ಕಲಿದೇವರ
ದೇವಾ ಎಂಬು ನುಡಿ ‘ನಿ:ಶಬ್ದಂ ಬ್ರಹ್ಮ ಉಚ್ಯತೇ’ ಎನ್ನುತ್ತಿದ್ದಿತು.

ಎಲ್ಲ ಭಾವಗಳು ನಷ್ಟವಾದಾಗ, ನಾನು ಎನ್ನುವ ದೇಹಭಾವ ಅಡಗಿದಾಗ ಬಂದ ನೋವೆಲ್ಲ ಪಾವಕವಾಗುತ್ತದೆ. ಆ ಮಾತನ್ನೇ
ಈ ಕಗ್ಗ ಹೇಳುತ್ತದೆ. ಜೀವ ಅನೇಕ ಅನುಭವಗಳನ್ನು ಪಡೆಯಲಿ, ಅದರ ಮೂಲಕ ಮನಸ್ಸು ಹದವಾಗಿ ಬೆಳೆಯಲಿ. ಅನುಭವಗಳ ಪೂರ ಬದುಕಿನ ಕಡಲನ್ನು ವಿಸ್ತರಿಸಲಿ. ಹಾಗೆ ವಿಸ್ತಾರವಾಗುತ್ತ ಹೋದಂತೆ ವಿಪರೀತವಾದ ದೇಹಾಭಿಮಾನ ಕಳಚುತ್ತ, ಎಲ್ಲಕ್ಕೂ ಮೂಲವಸ್ತುವಾದ ಅಖಂಡ ಚೇತನದ ಕುಣಿತದಲ್ಲಿ ಮೈಮರೆತು ಸೇರಿಕೊಂಡು,ಆನಂದಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT