ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಖಚಿತತೆ

Last Updated 29 ಅಕ್ಟೋಬರ್ 2019, 17:25 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಂದು ಬ್ರಾಹ್ಮಣ ವಂಶದಲ್ಲಿ ಹುಟ್ಟಿದ್ದ. ದೊಡ್ಡವನಾದಂತೆ ತಕ್ಷಶಿಲೆಗೆ ಹೋಗಿ ಸಕಲ ವಿದ್ಯೆಗಳನ್ನು ಕಲಿತು ಬಂದ. ಅವನಿಗೆ ಮದುವೆ, ಸಂಸಾರ ಈ ವಿಷಯಗಳಲ್ಲಿ ಸ್ವಲ್ಪವೂ ಆಸಕ್ತಿ ಇರಲಿಲ್ಲ. ಪ್ರವ್ರಜಿತನಾಗಬೇಕೆಂದು ಮನದಲ್ಲಿ ತೀರ್ಮಾನಿಸಿದ್ದ.

ಆದರೆ ಅವನ ತಂದೆ-ತಾಯಿಯರಿಗೆ ಇದ್ದೊಬ್ಬ ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಆಸೆ. ಅವರು ಅವನನ್ನು ಒತ್ತಾಯಿಸತೊಡಗಿದರು. ಅವರ ಒತ್ತಾಯವನ್ನು ತಡೆಯಲಾರದೆ ಬೋಧಿಸತ್ವ ಒಂದು ಅತ್ಯಂತ ಸುಂದರವಾದ ಬಂಗಾರದ ಸ್ತ್ರೀ ವಿಗ್ರಹವನ್ನು ಮಾಡಿ, ಇಂಥ ಹುಡುಗಿ ಸಿಕ್ಕರೆ ಮದುವೆಯಾಗುವುದಾಗಿ ಹೇಳಿದ. ಅವನ ತಂದೆ-ತಾಯಿಯರು ಹತ್ತಾರು ಜನ ಸೇವಕರನ್ನು ಕರೆದು, ಈ ವಿಗ್ರಹವನ್ನು ಕೊಟ್ಟು ಊರೂರು ಅಲೆದು ಅಂಥ ಹುಡುಗಿ ಸಿಕ್ಕಾಳೆಯೇ ಎಂದು ಹುಡುಕಲು ಕಳುಹಿಸಿದರು. ಅಂಥವಳೇನಾದರೂ ಸಿಕ್ಕರೆ ಈ ಬಂಗಾರದ ವಿಗ್ರಹವನ್ನು ಆಕೆಯ ಮನೆಯವರಿಗೆ ಕೊಟ್ಟು ಬಿಡಿ ಎಂದು ತಿಳಿಸಿದರು.

ಈ ಸಮಯದಲ್ಲಿ ದೇವತೆಯೊಬ್ಬಳು ಯಾವುದೋ ಪುಟ್ಟ ತಪ್ಪಿಗೆ ಶಿಕ್ಷೆಯಾಗಿ ಬ್ರಹ್ಮಲೋಕವನ್ನು ತೊರೆದು ಭೂಲೋಕಕ್ಕೆ ಬಂದು ಕಾಶೀನಗರದ ಹತ್ತಿರವಿದ್ದ ನಗರದಲ್ಲಿ ಅತ್ಯಂತ ಶ್ರೀಮಂತನಾದ ಬ್ರಾಹ್ಮಣನ ಮಗಳಾಗಿ ಹುಟ್ಟಿದಳು. ಆಕೆಯನ್ನು ಸಮ್ಮಿಲಹಾಸಿನಿ ಎಂದು ಕರೆದರು. ಆಕೆ ಬೆಳೆದು ಹದಿನಾರು ವರ್ಷವಾಗುವ ಹೊತ್ತಿಗೆ ಅಪ್ಸರೆಯಂತೆ ಸುಂದರಳಾದ, ಅಷ್ಟಾಂಗಸಂಪೂರ್ಣಳಾದ ಯುವತಿಯಾದಳು. ಅವಳ ಮನಸ್ಸಿನಲ್ಲಿ ಯಾವ ವಿಕಾರಗಳೂ ಇಲ್ಲದೆ ಸನ್ಯಾಸಿನಿಯಂತಿದ್ದಳು. ಬೋಧಿಸತ್ವನ ತಂದೆ-ತಾಯಿಯರು ಕಳುಹಿಸಿದ ಸೇವಕರು ಈ ಗ್ರಾಮಕ್ಕೆ ಬಂದು ಸ್ವರ್ಣವಿಗ್ರಹವನ್ನು ತೋರಿಸಿ ನಿಮ್ಮ ಊರಿನಲ್ಲಿ ಇಂಥ ಈ ಲಕ್ಷಣಗಳಿರುವ ಕನ್ಯೆ ಇದ್ದಾಳೆಯೇ ಎಂದು ಕೇಳಿದರು. ಅವರು ಸಮ್ಮಿಲಹಾಸಿನಿಯನ್ನು ತೋರಿಸಿದರು. ಎರಡೂ ಕಡೆಯ ತಂದೆ-ತಾಯಿಯರು ಹುಡುಗ-ಹುಡುಗಿಯರಿಬ್ಬರಿಗೂ ಮನಸ್ಸಿಲ್ಲದಿದ್ದರೂ ಒತ್ತಾಯದಿಂದ ಮದುವೆ ಮಾಡಿದರು. ಹೊರಪ್ರಪಂಚಕ್ಕೆ ಅವರು ಗಂಡ-ಹೆಂಡಿರಾದರೂ ಮನೆಯಲ್ಲಿ ಅವರಿಬ್ಬರೂ ಭಿಕ್ಷುಗಳಂತೆಯೇ ಬದುಕಿದರು.

ಮುಂದೆ ಬೋಧಿಸತ್ವನ ತಾಯಿತಂದೆಯರು ಕಾಲವಾದರು. ಆಗ ಬೋಧಿಸತ್ವ ಹೇಳಿದ, ‘ನನಗೆ ಸಂಸಾರದಲ್ಲಿ ಆಸಕ್ತಿ ಇಲ್ಲ. ನನ್ನ ಮನೆತನದ ಸಮಸ್ತ ಆಸ್ತಿಯನ್ನು ನೀನೇ ತೆಗೆದುಕೊಂಡು ನಿಮ್ಮ ಕುಟುಂಬವನ್ನು ಪಾಲಿಸು. ನಾನು ಹಿಮಾಲಯಕ್ಕೆ ಹೊರಡುತ್ತೇನೆ’ ಎಂದ. ಆಕೆ, ‘ನನಗೂ ಯಾವುದರಲ್ಲೂ ಆಸಕ್ತಿ ಇಲ್ಲ. ಎಲ್ಲ ಆಸ್ತಿಯನ್ನು ಎಂಜಲಿನಂತೆ ದಾನಮಾಡಿ ಇಬ್ಬರೂ ಹೊರಟುಬಿಡೋಣ’ ಎಂದಳು. ಹಾಗೆಯೇ ಮಾಡಿ ಹಿಮಾಲಯ ಸೇರಿ ಇಬ್ಬರೂ ಪ್ರವ್ರಜ್ಯ ಸ್ವೀಕರಿಸಿದರು. ಗಡ್ಡೆ ಗೆಣಸುಗಳನ್ನು ತಿನ್ನುತ್ತ, ಉಳಿದ ಸನ್ಯಾಸಿಗಳೊಡನೆ ಬದುಕುತ್ತ ಧ್ಯಾನಸ್ಥರಾದರು. ಒಂದು ದಿನ ಸಮ್ಮಿಲಹಾಸಿನಿಗೆ ಆರೋಗ್ಯ ವಿಷಮಿಸಿ ಸತ್ತು ಹೋದಳು. ಉಳಿದ ಸನ್ಯಾಸಿಗಳು, ಜನರು ಈ ಅಪೂರ್ವ ಸುಂದರಿಯ ಲಾವಣ್ಯವನ್ನು ನೋಡುತ್ತ ಅವಳ ಅಕಾಲಿಕ ಸಾವಿಗೆ ದುಃಖಿಸುತ್ತಿದ್ದರೆ ಬೋಧಿಸತ್ವ ನಿರ್ವಿಕಾರವಾಗಿ ಇದ್ದು ಸಂಸ್ಕಾರಗಳನ್ನು ಮಾಡಿದ. ‘ನಿನಗೆ ಆಕೆಗೆ ಏನು ಸಂಬಂಧ? ನಿನಗೇಕೆ ದುಃಖವಿಲ್ಲ?’ ಎಂದು ಕೇಳಿದಾಗ ಆತ, ‘ಆಕೆ ಕೆಲಕಾಲ ನನಗೆ ಹೆಂಡತಿಯಾಗಿದ್ದಳು. ಈಗ ಲೋಕ ತೊರೆದಿರುವುದರಿಂದ ನನಗೆ ಯಾವ ಸಂಬಂಧವೂ ಇಲ್ಲ. ಪ್ರತಿಕ್ಷಣವೂ ನಮ್ಮ ಆಯಸ್ಸು ಕಳೆದು ಸಾವಿನತ್ತ ಧಾವಿಸುತ್ತಿದ್ದೇವೆ. ಸಾವು ನಿಶ್ಚಿತವಾದ್ದರಿಂದ ದುಃಖವೇಕೆ? ಆದ್ದರಿಂದ ಪ್ರತಿಯೊಂದು ಪ್ರಾಣಿಗಳ ಬಗ್ಗೆ ದಯೆ ಇರಲಿ ಆದರೆ ಕಳೆದುಹೋದ ಜೀವಗಳ ಬಗ್ಗೆ ಶೋಕ ಬೇಡ’ ಎಂದ.

ಸಾವು-ಬದುಕಿನ ಬಗ್ಗೆ ಇದೊಂದು ಅದ್ಭುತ ವ್ಯಾಖ್ಯೆ. ಖಚಿತವಾದದ್ದರ ಬಗ್ಗೆ ದುಃಖವೇಕೆ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT