ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಹೊಸ ದೇಶದಲ್ಲಿ ಹೊಸ ಪರೀಕ್ಷೆ

Last Updated 20 ಮೇ 2021, 19:30 IST
ಅಕ್ಷರ ಗಾತ್ರ

ವಿದೇಹರಾಜ, ಬ್ರಹ್ಮದತ್ತನ ಮಗಳು ಪಂಚಾಲ ಚಂಡಿಯನ್ನು ಮದುವೆಯಾದ ಮೇಲೆ ಸುಖವಾಗಿದ್ದ. ಮರುವರ್ಷ ಆಕೆ ಒಬ್ಬ ಪುತ್ರನಿಗೆ ಜನ್ಮವಿತ್ತಳು. ರಾಜಕುಮಾರನಿಗೆ ಹತ್ತು ವರ್ಷವಾದಾಗ ವಿದೇಹರಾಜ ತೀರಿಹೋದ. ಆಗ ಬೋಧಿಸತ್ವನಾದ ಮಹೋಷಧಕುಮಾರ, ರಾಜಕುಮಾರನಿಗೆ ಹೇಳಿದ. ‘ರಾಜಕುಮಾರ, ನಾನು ಹಿರಿಯರಿಗೆ, ಪಂಡಿತರಿಗೆ ಹೇಳಿ ನಿನ್ನ ಛತ್ರಧಾರಣೆಯನ್ನು ಮಾಡಿಸಿ, ನಾನು ಚೂಳನಿ ರಾಜ ಬ್ರಹ್ಮದತ್ತನ ಕಡೆಗೆ ಹೋಗಿಬಿಡುತ್ತೇನೆ. ಯಾಕೆಂದರೆ, ನಿಮ್ಮ ತಾಯಿಯನ್ನು ಕರೆ ತರುವಾಗ ರಾಜ ನನ್ನನ್ನು ಅಲ್ಲಿಗೆ ಬರಲು ಆಮಂತ್ರಿಸಿದ್ದ. ಆದರೆ ನಾನು ರಾಜ ವಿದೇಹನಿಗೆ ನನ್ನ ರಾಜನಿಷ್ಠೆ, ಅವನಿರುವವರೆಗೂ ಅವನನ್ನು ಬಿಟ್ಟು ಬರಲಾರೆ ಎಂದು ಹೇಳಿದ್ದೆ. ಅವನು ತೀರಿದ ಮೇಲಾದರೂ ನಮ್ಮ ರಾಜ್ಯಕ್ಕೆ ಬಂದುಬಿಡು ಎಂದು ಆತ ಕೇಳಿದ್ದಕ್ಕೆ ನಾನು ಒಪ್ಪಿಗೆ ಕೊಟ್ಟಿದ್ದೆ. ಈಗ ಆ ಸಮಯ ಬಂದಿದೆ. ಈ ದೇಶವೂ ಅಬಾಧಿತವಾಗಿದೆ. ಯಾವ ಶತ್ರುಭಯವೂ ಇಲ್ಲ’. ಪಂಚಾಲಚಂಡಿ, ‘ಪಂಡಿತ, ರಾಜಕುಮಾರ ತುಂಬ ಚಿಕ್ಕವನು, ಅವನನ್ನು ಬಿಟ್ಟು ಹೋಗಬೇಡ. ಬೇಕಾದರೆ ನಾನು ನನ್ನ ತಂದೆಯನ್ನು ಕೇಳಿಕೊಳ್ಳುತ್ತೇನೆ’ ಎಂದು ಬೇಡಿಕೊಂಡಳು. ಆದರೆ ಮಾತು ಕೊಟ್ಟಂತೆ ಮಹೋಷಧಕುಮಾರ ಮಿಥಿಲೆಯನ್ನು ತೊರೆದು ಬ್ರಹ್ಮದತ್ತನ ಪಂಚಾಲನಗರಕ್ಕೆ ಬಂದ.

ಅವನ ಆಗಮನದ ವಿಷಯವನ್ನು ತಿಳಿದು ರಾಜ ಬ್ರಹ್ಮದತ್ತ ತಾನೇ ಸ್ವತ: ಅವನ ಸ್ವಾಗತ ಮಾಡಿ, ಆದರ ಸತ್ಕಾರದದೊಂದಿಗೆ ನಗರದಲ್ಲಿ ಕರೆತಂದ. ಆದರೆ ವಿಚಿತ್ರವೆಂದರೆ, ಹಿಂದೆ ತಾನೇ ಕೊಟ್ಟಿದ್ದ ಎಂಭತ್ತು ಹಳ್ಳಿಗಳ ಹೊರತಾಗಿ ಯಾವ ವಿಶೇಷ ಸ್ಥಾನವನ್ನು, ಮರ್ಯಾದೆಯನ್ನು ನೀಡಲಿಲ್ಲ. ಆದರೂ ಗೊಣಗದೆ ಮಹೋಷಧಕುಮಾರ ರಾಜನ ಸೇವೆಯಲ್ಲಿ ತೊಡಗಿದ. ಬ್ರಹ್ಮದತ್ತನ ರಾಜ್ಯದಲ್ಲಿ ಎಲ್ಲರೂ ಮಹೋಷಧಕುಮಾರನನ್ನು ಒಪ್ಪಿಕೊಂಡರೂ, ಪಟ್ಟದ ರಾಣಿ ನಂದಾದೇವಿಗೆ ಅಸಮಾಧಾನವಿತ್ತು. ವಿದೇಹರಾಜನ ಮಂತ್ರಿಯೊಬ್ಬ ತಮ್ಮ ನಾಡಿಗೆ ಬಂದು ತಮ್ಮ ರಾಜನನ್ನು, ಮಂತ್ರಿಗಳನ್ನು ಮತ್ತು ಸೈನ್ಯವನ್ನು ಮೋಸಗೊಳಿಸಿ ತಮ್ಮನ್ನು ವಿದೇಹಕ್ಕೆ ಕರೆದೊಯ್ದದು ಆಕೆಗೆ ತುಂಬ ಅಪಮಾನಕರವಾಗಿತ್ತು. ತನ್ನ ಮಗಳು ಪಂಚಾಲಚಂಡಿ ಪ್ರಬಲದೇಶದ ರಾಜನನ್ನು ಮದುವೆಯಾದದ್ದು ಸಂತೋಷವೇ ಆದರೂ ಈ ರೀತಿ ಕಪಟದಿಂದ ಕದ್ದುಕೊಂಡು ಹೋದದ್ದು ಒಪ್ಪತಕ್ಕದ್ದಲ್ಲ ಎಂಬುದು ಆಕೆಯ ಮತ. ಹೀಗಾಗಿ ತನ್ನ ಗಂಡ ಬ್ರಹ್ಮದತ್ತ ಅವನಿಗೆ ಅಷ್ಟು ಮರ್ಯಾದೆ ಕೊಟ್ಟದ್ದು ಸರಿ ಎನ್ನಿಸಿರಲಿಲ್ಲ. ಕುಮಾರ ನಿಜವಾಗಿಯೂ ಬುದ್ಧಿವಂತನೇ ಅಥವಾ ಅದೊಂದು ಘಟನೆ ಆಕಸ್ಮಿಕವೇ ಎಂಬುದನ್ನು ಆಕೆ ತಿಳಿಯಬೇಕಿತ್ತು. ಆದ್ದರಿಂದ ರಾಣಿ ನಂದಾದೇವಿ ಸಾಮಾನ್ಯವಾಗಿ ರಾಜನ ಹತ್ತಿರವೇ ಇರುವ, ಐದು ಜನ ದಾಸಿಯರನ್ನು ಕರೆದು, ಮಾತನಾಡಿಸಿ, ಸಾಧ್ಯವಿದ್ದಾಗಲೆಲ್ಲ ಮಹೋಷಧಕುಮಾರನ ಬಗ್ಗೆ ಸಂಶಯ ಬರುವಂಥ ಮಾತುಗಳನ್ನು ಆಡಲು ಪ್ರೇರೇಪಿಸಿದ್ದಳು. ಅವರೂ ಅವಕಾಶಕ್ಕಾಗಿ ಕಾಯುತ್ತಿದ್ದರು. ಈ ಸಮಯದಲ್ಲಿ ಭೇರಿ ಎಂಬ ಪರಿವ್ರಾಜಿಕೆ ಅರಮನೆಯಲ್ಲಿ ನೆಲೆಸಲು ಬಂದಳು. ಆಕೆ ಮಹಾಸಾಧಕಿ, ಪಂಡಿತೆ ಹಾಗೂ ಭಾರೀ ಶಾಸ್ತ್ರವಿದೆಯಾಗಿದ್ದಳು. ರಾಣಿ ನಂದಾದೇವಿ ಆ ಪರಿವ್ರಾಜಿಕೆಯನ್ನು ಕಂಡು ಮಹೋಷಧಕುಮಾರನನ್ನು ಪರೀಕ್ಷಿಸಲು ಹೇಳಿದಳು. ದೇಶ ಬಿಟ್ಟು ಬೇರೆ ರಾಜನ ಬಳಿಗೆ ಬಂದರೂ ತನ್ನ ಪರೀಕ್ಷೆ ಮಾತ್ರ ತಪ್ಪಲಿಲ್ಲ ಎಂದು ಚಿಂತಿಸಿದ ಕುಮಾರ. ಯಾವುದೇ ಪರೀಕ್ಷೆಗೂ ಸಿದ್ಧನಾಗಲು ತೀರ್ಮಾನಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT