ಶನಿವಾರ, ಡಿಸೆಂಬರ್ 14, 2019
24 °C

ಯಾವುದೂ ಅತಿಯಾಗಬಾರದು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಒಬ್ಬ ಶ್ರೇಷ್ಠಿಯ ಮನೆಯಲ್ಲಿ ಜನಿಸಿದ್ದ. ಆತ ತಂದೆಯಿಂದ ವ್ಯವಹಾರದ ಜ್ಞಾನವನ್ನು ಪಡೆದು ಬೆಳೆದ. ತಂದೆ ಕಾಲವಾದ ಮೇಲೆ ಅವನೇ ನಗರಶ್ರೇಷ್ಠಿಯಾದ. ಅವನ ಬಳಿ ಎಂಭತ್ತು ಕೋಟಿ ಹಣವಿತ್ತು.

ಆತನಿಗೆ ದಾನ ಮಾಡುವುದರಲ್ಲಿ ತುಂಬ ಸಂತೋಷ. ದಿನಗಳೆದಂತೆ ಈ ದಾನ ಮಾಡುವ ಮನಸ್ಸು ದೊಡ್ಡದಾಗುತ್ತ ಬಂದಿತು. ಅವನು ನಗರದ ನಾಲ್ಕು ಮೂಲೆಗಳಲ್ಲಿ ನಾಲ್ಕು ಧರ್ಮಛತ್ರಗಳನ್ನು ಕಟ್ಟಿಸಿದ. ಮನೆಯ ಹತ್ತಿರ, ನಗರ ಮಧ್ಯದಲ್ಲೊಂದು ಭವನ ಕಟ್ಟಿಸಿದ. ಈ ಎಲ್ಲ ಸ್ಥಳಗಳಲ್ಲಿ ದಿನನಿತ್ಯ ದಾನ, ಉಚಿತ ಊಟ ದೊರೆಯುವಂತೆ ಮಾಡಿದ. ಪ್ರತಿದಿನ ಆರು ಸಾವಿರ ಹಣವನ್ನು ದಾನಕ್ಕಾಗಿ ನೀಡುತ್ತಿದ್ದ.

ಇದನ್ನು ಮೇಲಿನಿಂದ ಇಂದ್ರ ನೋಡಿದ. ಈತ ಈ ಪ್ರಮಾಣದ ದಾನ ಮಾಡಿ ತುಂಬ ಖ್ಯಾತನಾಗುತ್ತಿದ್ದಾನೆ. ಮುಂದೆ ಇವನೇ ತನ್ನ ದಾನದ ಪ್ರಭಾವದಿಂದ ತನ್ನ ಸ್ಥಾನಕ್ಕೆ ಸಂಚಕಾರ ತರಬಹುದೆಂಬ ವಿಚಾರ ಇಂದ್ರನಿಗೆ ಬಂದಿತು. ಶ್ರೇಷ್ಠಿಯನ್ನು ಪರೀಕ್ಷೆ ಮಾಡಲು ತನ್ನ ಶಕ್ತಿಯಿಂದ ಅವನ ಖಜಾನೆಯನ್ನು, ಧನ, ಧಾನ್ಯಗಳನ್ನು, ಎಣ್ಣೆ, ಸಕ್ಕರೆ, ಜೇನುತುಪ್ಪ ಇವುಗಳನ್ನು ಮಾಯ ಮಾಡಿಬಿಟ್ಟ. ಅಷ್ಟೇ ಅಲ್ಲ, ಅವನ ದಾನ ಕಾರ್ಯಕ್ಕೆ ಸಹಾಯಕರಾಗಿ ನಿಂತಿದ್ದ ದಾಸ-ದಾಸಿಯರು, ಅಡುಗೆಯವರು, ಬಡಿಸುವವರು ಎಲ್ಲರೂ ಮಾಯವಾಗಿಬಿಟ್ಟರು.

ನಗರದ ನಾಲ್ಕು ಧರ್ಮಛತ್ರದ ಮೇಲ್ವಿಚಾರಕರು ಬಂದು, ‘ಶ್ರೇಷ್ಠಿಗಳೇ, ನಮ್ಮ ದಾನಶಾಲೆಯಲ್ಲಿ ದಾನಕ್ಕೆ ಯಾವ ವಸ್ತುವೂ ಉಳಿದಿಲ್ಲ, ಎಲ್ಲ ವಸ್ತುಗಳು ಕಾಣದಂತೆ ಮಾಯವಾಗಿವೆ. ಕೆಲಸಗಾರರೂ ಕಾಣುತ್ತಿಲ್ಲ. ಏನು ಮಾಡುವುದು?’ ಎಂದು ಕೇಳಿದರು. ಶ್ರೇಷ್ಠಿ, ‘ಏನಾದರೂ ದಾನವನ್ನು ನಿಲ್ಲಿಸಬೇಡಿ. ಯಾಕೆ ಧರ್ಮಛತ್ರದಲ್ಲಿಯ ವಸ್ತುಗಳು ಕಾಣೆಯಾದವೊ ತಿಳಿಯದು. ನಮ್ಮ ಮನೆಯಿಂದ ವಸ್ತುಗಳನ್ನು ಕೊಡಿಸುತ್ತೇನೆ, ತೆಗೆದುಕೊಂಡು ಹೋಗಿ ಕೊಡಿ’ ಎಂದ.

ತನ್ನ ಹೆಂಡತಿಯನ್ನು ಕರೆದು ಅವರೆಲ್ಲರಿಗೂ ಬೇಕಾದ ವಸ್ತುಗಳನ್ನು ಕೊಡುವಂತೆ ಹೇಳಿದ. ಆಕೆ ಮನೆಯನ್ನೆಲ್ಲ ಹುಡುಕಿದರೂ ಒಂದು ಕಾಳು ಧಾನ್ಯ, ಒಂದು ಹಣದ ಚೂರು ದೊರಕಲಿಲ್ಲ. ಆಕೆ ಹೌಹಾರಿದಳು. ಬಂದು ಗಂಡನಿಗೆ ಹೇಳಿದಳು, ‘ಏನು ವಿಚಿತ್ರವೋ ನಾವು ಧರಿಸಿರುವ ಬಟ್ಟೆಯನ್ನು ಬಿಟ್ಟರೆ ಏನೂ ಉಳಿದಿಲ್ಲ. ಮನೆಯಲ್ಲಿ ಯಾವ ನೌಕರನೂ ಇಲ್ಲ, ಚಾಕರನೂ ಇಲ್ಲ. ನಾನು ಇವರಿಗೆ ಏನು ಕೊಡಲಿ?’

ದಾನವನ್ನು ಮಾಡಲೇಬೇಕೆಂಬ ಹಟ ತೊಟ್ಟಿದ್ದ ಶ್ರೇಷ್ಠಿ, ‘ಮನೆಯಲ್ಲಿ ಏನು ಉಳಿದಿದೆಯೋ, ಅದು ಒಂದು ಚೂರಾದರೂ ಸಾಕು, ಅದನ್ನೇ ತಾ’ ಎಂದು ಹೆಂಡತಿಗೆ ಹೇಳಿದ. ಆ ಸಮಯಕ್ಕೆ ತೋಟದ ಕೆಲಸಕ್ಕೆ ಹೋಗಿದ್ದವನೊಬ್ಬ ಹುಲ್ಲು ಕತ್ತರಿಸುವ ಕುಡುಗೋಲು ಮತ್ತು ಹುಲ್ಲಿನ ಹೊರೆಕಟ್ಟುವ ಹಗ್ಗವನ್ನು ಇಟ್ಟು ಹೋದ. ಅದನ್ನು ಕಂಡು ಶ್ರೇಷ್ಠಿ ಹೇಳಿದ, ‘ಭದ್ರೆ, ಇದುವರೆಗೂ ನಾನು ಹುಲ್ಲು ಕೊಯ್ಯುವ ಕೆಲಸವನ್ನು ಮಾಡಿಲ್ಲ. ನಡೆ, ನಾವಿಬ್ಬರೂ ಹೋಗೋಣ. ನಾನು ಹುಲ್ಲು ಕತ್ತರಿಸುತ್ತೇನೆ, ನೀನು ಹೊರೆಯನ್ನು ಕಟ್ಟು. ಹುಲ್ಲು ಮಾರಿ ಬಂದ ಹಣವನ್ನು ದಾನ ಮಾಡೋಣ’. ಅದರಂತೆಯೇ ಮಾಡಿದರು.

ತಾವು ಊಟವಿಲ್ಲದೆ ಉಪವಾಸವಿದ್ದು ಬಂದದ್ದನ್ನೆಲ್ಲ ಕೊಟ್ಟರು. ಒಂದು ವಾರ ಹೀಗೆಯೇ ನಡೆದು ಇವರು ಶಕ್ತಿ ಕಳೆದುಕೊಂಡು ಸಾಯುವ ಸ್ಥಿತಿಗೆ ಬಂದರು. ಆಗ ಇಂದ್ರ ಮುಂದೆ ಬಂದು ಹೇಳಿದ, ‘ದಾನ ಮಾಡುವುದು ಶ್ರೇಷ್ಠ. ಆದರೆ ಅದೂ ಒಂದು ಮಿತಿಯಲ್ಲಿರಬೇಕು. ಯಾವುದೂ ಅತಿಯಾದರೆ ರೋಗವಾಗುತ್ತದೆ. ಶಕ್ತಿ ಹೀರುತ್ತದೆ. ಇನ್ನು ಮುಂದೆ ಒಂದು ಮಿತಿಯಲ್ಲಿ ದಾನ ಮಾಡು’. ನಂತರ ಅವರ ಐಶ್ವರ್ಯವನ್ನು ಮರಳಿಸಿ ಮಾಯವಾದ.

ಶ್ರೇಷ್ಠಿಗೆ ಅರಿವಾಯಿತು ಒಳ್ಳೆಯದನ್ನು ಮಾಡುವುದು ಶ್ರೇಷ್ಠ, ಆದರೆ ತೀರ ಹೆಚ್ಚಾದರೆ ಅದೇ ಅಶಕ್ತತೆಯಾಗುತ್ತದೆ.

ಪ್ರತಿಕ್ರಿಯಿಸಿ (+)