ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಎರಡು ಮೌಲ್ಯಗಳು

Last Updated 3 ಜುಲೈ 2022, 19:30 IST
ಅಕ್ಷರ ಗಾತ್ರ

ಎರಡುತೆರ ಮೌಲ್ಯಂಗಳೆಲ್ಲಕಂ ಲೋಕದಲಿ|
ಪರಮಾರ್ಥಕೊಂದು, ಸಾಂಪ್ರತದರ್ಥಕೊಂದು||
ಪರಿಕಿಸೆರಡಂ ನೀನು; ಹೊರ ಬೆಲೆಯ ಗುಣಿಪಂದು|
ಮರೆಯಬೇಡೊಳಬೆಲೆಯ – ಮಂಕುತಿಮ್ಮ ||663||

ಪದ-ಅರ್ಥ: ಎರಡು ತೆರ= ಎರಡು ರೀತಿಯ, ಮೌಲ್ಯಗಳೆಲ್ಲಕಂ= ಮೌಲ್ಯಗಳು+ ಎಲ್ಲಕಂ (ಎಲ್ಲಕ್ಕೂ), ಸಾಂಪ್ರತದರ್ಥಕೊಂದು= ಸಾಂಪ್ರತದ (ಸಧ್ಯದ)+ ಅರ್ಥಕ್ಕೆ+ ಒಂದು, ಪರಿಕಿಸೆರಡಂ= ಪರಿಕಿಸು (ಪರೀಕ್ಷಿಸು)+ ಎರಡಂ (ಎರಡನ್ನೂ), ಗುಣಿಪಂದು= ಪರಿಗಣಿಸುವಾಗ, ಮರೆಯಬೇಡೊಳಬೆಲೆಯ= ಮರೆಯಬೇಡ+ ಒಳ ಬೆಲೆಯ

ವಾಚ್ಯಾರ್ಥ: ಪ್ರಪಂಚದಲ್ಲಿ ಎಲ್ಲದಕ್ಕೂ ಎರಡು ತೆರದ ಮೌಲ್ಯಗಳಿವೆ. ಪರಮಾರ್ಥಕ್ಕೆ ಒಂದು ಮೌಲ್ಯ ಮತ್ತು ಇಂದಿನ ಲೋಕವ್ಯವಹಾರಕ್ಕೆ ಒಂದು ಮೌಲ್ಯ. ಅವೆರಡನ್ನೂ ಸರಿಯಾಗಿ ಪರೀಕ್ಷಿಸು. ವಸ್ತುವಿನ ಹೊರಬೆಲೆಯನ್ನು ಅಳೆಯುವಾಗ ಅದರ ಒಳಬೆಲೆಯನ್ನು ಮರೆಯಬೇಡ.

ವಿವರಣೆ: ಕಗ್ಗ ಹೇಳುತ್ತದೆ, ಪ್ರತಿಯೊಂದು ವಸ್ತುವಿಗೆ ಎರಡು ಮೌಲ್ಯಗಳಿವೆ. ಒಂದು ದಿನನಿತ್ಯದ ವ್ಯವಹಾರದಲ್ಲಿ ಬಳಕೆಯಾಗುವ ಮೌಲ್ಯವಾದರೆ ಮತ್ತೊಂದು ಪರಮಾರ್ಥಕ್ಕೆ. ಪರಮಾರ್ಥವೆಂದರೆ ವಿಶೇಷ ಅರ್ಥ. ಪರಮವೆಂದರೆ, ವಿಶೇಷವಾದದ್ದು ಸರ್ವಶ್ರೇಷ್ಠವಾದದ್ದು, ಅತ್ಯುತ್ಕಷ್ಟವಾದದ್ದು. ಒಂದು ಪೆನ್ನಿನ ಬೆಲೆ ಐವತ್ತೋ ನೂರೋ ರೂಪಾಯಿಗಳಾದೀತು. ಅದು ವ್ಯಾವಹಾರಿಕ ಬೆಲೆ. ಆದರೆ ಆ ಪೆನ್ನು ನಿಮಗೆ ಅತ್ಯಂತ ಪ್ರಿಯರು, ಗೌರವಾನ್ವಿತರು ನೆನಪಿನ ಕಾಣಿಕೆಯೆಂದು ಕೊಟ್ಟಿದ್ದಾಗಿದ್ದರೆ ಅದರ ಬೆಲೆ ಅಷ್ಟೇ ಇರುತ್ತದೆಯೇ? ತಾವು ಕಂಡಿದ್ದೀರಿ, ಯಾರೋ ಮಹಾನುಭಾವರು ಹಿಂದೆ ಬಳಸಿದ ಕೊಡೆಯೋ, ಕೋಲೋ, ಕ್ರಿಕೆಟ್ ಬ್ಯಾಟೋ ಲಕ್ಷಾಂತರ ರೂಪಾಯಿಗಳಿಗೆ ಹರಾಜಾಗಿವೆ. ಅವುಗಳಿಗೆ ವ್ಯಾವಹಾರಿಕವಾಗಿ ಯಾವ ಬೆಲೆಯೂ ಇಲ್ಲ. ಆದರೆ ಮಹಾನುಭಾವರ ಸ್ಪರ್ಶದಿಂದ ಅದರ ಭಾವನಾತ್ಮಕ ಬೆಲೆ ತುಂಬ ಹೆಚ್ಚು.

ಮಹಾತ್ಮಾ ಗಾಂಧೀಜಿ ನಿತ್ಯ ಸ್ನಾನಮಾಡುವಾಗ ಕಾಲು ಉಜ್ಜಿಕೊಳ್ಳುವುದಕ್ಕೆ ಒಂದು ದುಂಡಗಿನ ಕಲ್ಲನ್ನು ಇಟ್ಟುಕೊಂಡಿದ್ದರು. ದಶಕಗಳಿಂದ ಅದನ್ನು ಜೋಪಾನವಾಗಿ ಇಟ್ಟುಕೊಂಡಿದ್ದರು. ಅದು ಒಮ್ಮೆ ಪ್ರವಾಸದಲ್ಲಿ ಕಳೆದುಹೋಯಿತು. ತಮ್ಮ ಸದಾ ಊರುಗೋಲಾಗಿದ್ದ ಮನುವನ್ನು ಹಿಂದಿನ ಗ್ರಾಮಕ್ಕೆ ಕಳುಹಿಸಿ, ಹುಡುಕಾಡಿಸಿ ತರಿಸಿದರು. ಹದಿನಾರು ಮೈಲಿ ನಡೆದು ಸುಸ್ತಾಗಿದ್ದ ಹುಡುಗಿ ಆ ಕಲ್ಲನ್ನು ತಂದು ಅವರ ಮುಂದೆ ಕುಕ್ಕಿ, ‘ತೊಗೊಳ್ಳಿ ನಿಮ್ಮ ಕಲ್ಲು. ಇದೇ ನಿಮಗೆ ಬೇಕಿತ್ತು. ಇಂಥ ಕಲ್ಲು ಎಲ್ಲಿ ಬೇಕಾದರೂ ಸಿಗುತ್ತಿತ್ತು’ ಎಂದು ಮೂತಿ ಸೊಟ್ಟ ಮಾಡಿದಳು. ಆಗ ಗಾಂಧೀ, ‘ಮಗೂ, ಇದು ಬರೀ ಕಲ್ಲಲ್ಲ. ಮೀರಾಬೆನ್ ನನ್ನ ಸಲುವಾಗಿ ಕಲ್ಲನ್ನು ಬೇರೊಂದಿಗೆ ಕಲ್ಲಿಗೆ ಉಜ್ಜಿ ಉಜ್ಜಿ ನಯವಾಗುವಂತೆ ಮಾಡಿದ ಕಲ್ಲು. ಇದು ಆಕೆಯ ಪ್ರೀತಿಯ, ಗೌರವದ ಸಂಕೇತ. ಅದನ್ನು ಹೇಗೆ ಕಳೆದುಕೊಳ್ಳಲಿ?’ ಎಂದರು! ವಾಸ್ತವದಲ್ಲಿ ಅದು ಒಂದು ಕಲ್ಲು ಮಾತ್ರ. ಆದರೆ ವಿಶೇಷ ಮೌಲ್ಯದಲ್ಲಿ ಅದು ಬೆಲೆ ಕಟ್ಟಲಾಗದ್ದು.

ಪರಮಾರ್ಥ ಪದಕ್ಕೆ ಇನ್ನೊಂದು ನೆಲೆಯಿದೆ. ಸತ್ಯಗಳಲ್ಲೆಲ್ಲ ಪರಮಸತ್ಯವಾದದ್ದು ಆತ್ಮವಸ್ತು ಅಥವಾ ಪರಮಾತ್ಮ ತತ್ವ. ಅದು ಸರ್ವಕಾಲದಲ್ಲೂ, ಅನಂತವಾಗಿ ಶಾಶ್ವತವಾಗಿ ಇರುವಂಥದ್ದು. ಅದರ ಅನ್ವೇಷಣೆ ಪಾರಮಾರ್ಥಿಕ ಚಿಂತನೆ. ಪೂಜೆ, ಅಲಂಕಾರ ಎಲ್ಲ ವ್ಯವಹಾರಿಕವಾದರೆ ಅದರ ಹಿಂದಿನ ಸಮರ್ಪಣಾ ಮನೋಭಾವ ಪಾರಮಾರ್ಥಿಕ. ಕಗ್ಗ ಅದನ್ನೇ ಒತ್ತಿ ಹೇಳುತ್ತದೆ, ವ್ಯವಹಾರಿಕ ಮತ್ತು ಪಾರಮಾರ್ಥಿಕ ಎಂಬ ಎರಡು ಮೌಲ್ಯಗಳಿವೆ. ವ್ಯವಹಾರಿಕ ಹೊರಬೆಲೆಯಾದರೆ ಪಾರಮಾರ್ಥಿಕ ಅದರ ಒಳ ಬೆಲೆ. ಬರೀ ಹೊರಬೆಲೆಯನ್ನು ನೋಡದೆ ಅದರ ಒಳಬೆಲೆಯನ್ನು ಗಮನಿಸಿ ಬದುಕುವುದು ಸಾತ್ವಿಕರ ಹಾದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT