ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರದ ಸುತ್ತ ಬರುವ ಕೂಟ

Last Updated 12 ಆಗಸ್ಟ್ 2019, 19:15 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಅವನ ಮಹಾರಾಣಿಯ ಗರ್ಭದಲ್ಲಿ ಜೇಷ್ಠಪುತ್ರನಾಗಿ ಹುಟ್ಟಿಬಂದ. ಮುಂದೆ ತಕ್ಕಶಿಲೆಗೆ ಹೋಗಿ ಸರ್ವವಿದ್ಯೆಗಳನ್ನು ಪಡೆದು ಬಂದು ತಂದೆ ತೀರಿದ ಮೇಲೆ ತಾನೇ ರಾಜನಾದ.

ಬೋಧಿಸತ್ವನ ತಂದೆ ರಾಜನಾಗಿದ್ದಾಗ ಅತ್ಯಂತ ಮೇಧಾವಿಯಾದ, ಜ್ಞಾನಿಯಾದ ಪುರೋಹಿತನಿದ್ದ. ಅವನ ಜನಪ್ರಿಯತೆಯನ್ನು ಮತ್ತು ರಾಜನಿಗೆ ಅವನ ಮೇಲಿದ್ದ ವಿಶ್ವಾಸವನ್ನು ಕಂಡು ಉಳಿದ ಮಂತ್ರಿಗಳು ಒಂದು ಕೂಟವನ್ನು ರಚಿಸಿಕೊಂಡು, ಪದೇ ಪದೇ ಅವನ ವಿರುದ್ಧ ಅಪಚಾರವನ್ನು ಮಾಡುತ್ತ ಬಂದರು. ಕೆಲವು ಕಾಲ ಅದನ್ನು ನಂಬದ ರಾಜ ಕೊನೆಗೆ ಅದನ್ನು ನಂಬಿ ಅವನನ್ನು ಪದಚ್ಯುತಿಗೊಳಿಸಿ, ಅಪಮಾನಮಾಡಿ ಹೊರಗೆ ಹಾಕಿಬಿಟ್ಟ. ರಾಜಪುರೋಹಿತ ದುಃಖದಿಂದ ರಾಜಧಾನಿಯ ತುದಿಯಲ್ಲಿ ಪುಟ್ಟ ಗುಡಿಸಲು ಕಟ್ಟಿಕೊಂಡು ಹೆಂಡತಿಯೊಂದಿಗೆ ವಾಸವಾಗಿದ್ದ. ಸ್ವಾಭಿಮಾನಿಯಾಗಿದ್ದ ಆತ ಯಾರ ಸಹಾಯವನ್ನು ಬೇಡದೆ ಬಡತನದಲ್ಲೇ ಬದುಕಿದ್ದ.

ಒಂದು ದಿನ ಬೋಧಿಸತ್ವ ನಗರದಲ್ಲಿ ಸುರಕ್ಷಿತತೆ ಹೇಗಿದೆಯೆಂದು ಪರೀಕ್ಷಿಸಲು ಮಾರುವೇಷದಿಂದ ರಾತ್ರಿ ನಗರ ಪ್ರದಕ್ಷಿಣೆ ಮಾಡಲು ಹೊರಟ. ಸುತ್ತಾಡುತ್ತ ನಗರದ ಹೊರಭಾಗಕ್ಕೆ ಬಂದ. ನಗರವೆಲ್ಲ ಸ್ತಬ್ಧವಾಗಿತ್ತು. ಆಗ ಹೆಂಡದಂಗಡಿಯಿಂದ ನಾಲ್ಕಾರು ಜನ ದಾಂಡಿಗರು ಹೊರಗೆ ಬಂದರು. ಅವರ ಕೈಯಲ್ಲಿ ಮಾರಕ ಅಸ್ತ್ರಗಳಿದ್ದವು. ಅವರೆಲ್ಲ ಚೆನ್ನಾಗಿ ಕುಡಿದಿದ್ದರು. ಅಲ್ಲದೆ ಇಬ್ಬರು ದೊಡ್ಡ ಮಡಿಕೆಗಳಲ್ಲಿ ಹೆಂಡವನ್ನು ತುಂಬಿಕೊಂಡು ಹೊರಟಿದ್ದರು. ಮಾರುವೇಷದಲ್ಲಿದ್ದ ರಾಜನನ್ನು ಅವರಲ್ಲೊಬ್ಬ ಕಂಡ. ಓಡಿಬಂದು ಅವನನ್ನು ಹಿಡಿದುಕೊಂಡ. ಉಳಿದವರು ಸೇರಿಕೊಂಡು ರಾಜನನ್ನು ಪಟಪಟನೇ ಹೊಡೆದು ಅವನಲ್ಲಿದ್ದ ಪುಟ್ಟ ಆಯುಧವನ್ನು ಮತ್ತು ಹೊದ್ದಿಕೆಯನ್ನು ಕಿತ್ತು ಅವನ ತಲೆಯ ಮೇಲೆ ಹೆಂಡದ ಮಡಿಕೆಯನ್ನು ಹೊರಿಸಿ ಜೊತೆಗೆ ಕರೆದುಕೊಂಡು ನಡೆದರು.

ಆಗ ಹಳೆಯ ರಾಜಪುರೋಹಿತ ಪಂಚಾಂಗ ನೋಡುತ್ತಿದ್ದ. ತಕ್ಷಣವೇ ರಸ್ತೆಗೆ ಬಂದು ಹೆಂಡತಿಗೆ ಕೂಗಿ ಹೇಳಿದ, ‘ಪ್ರಿಯೆ, ನಮ್ಮ ರಾಜನನ್ನು ಕ್ರೂರಿಗಳು ಸೆರೆ ಹಿಡಿದಿದ್ದಾರೆ’ ಹೆಂಡತಿಗೆ ಇನ್ನೂ ಮನಸ್ಸಿನಲ್ಲಿ ಕೋಪವಿತ್ತೆಂದು ತೋರುತ್ತದೆ. ಆಕೆ, ‘ನೀವೇಕೆ ತಲೆಕೆಡಿಸಿಕೊಳ್ಳುತ್ತೀರಿ? ರಾಜನ ಹತ್ತಿರ ಅತ್ಯಂತ ಪ್ರತಿಭಾವಂತರಾದ ಪುರೋಹಿತರು ಇದ್ದಾರಲ್ಲವೇ?’ ಈ ಮಾತುಗಳು ರಾಜನಿಗೆ ಕೇಳಿಸಿದವು. ಆಗ ಪುರೋಹಿತ, ‘ಚಿಂತೆ ಬೇಡ. ನಮ್ಮ ರಾಜನಿಗೆ ಏನೂ ಆಗುವುದಿಲ್ಲ. ಈ ಕ್ರೂರಿಗಳು ತಮ್ಮತಮ್ಮಲ್ಲೇ ಹೊಡೆದಾಡಿಕೊಂಡು ಅವನನ್ನು ಬಿಟ್ಟುಬಿಡುತ್ತಾರೆ’ ಎಂದ. ಅದು ಯಾವ ಕಾರಣಕ್ಕೋ ಆ ಕುಡುಕರ ಮಧ್ಯೆ ಜಗಳ ಪ್ರಾರಂಭವಾಗಿ ಹೊಡೆದಾಡತೊಡಗಿದರು. ರಾಜ ಅಲ್ಲಿಂದ ಹೊರಟು ಅರಮನೆ ಸೇರಿಕೊಂಡ.

ಮರುದಿನ ರಾಜ ತನ್ನ ಆಸ್ಥಾನ ಪುರೋಹಿತರನ್ನು ಕರೆದು ನಿನ್ನೆಯ ರಾತ್ರಿ ತನ್ನ ಗ್ರಹಗತಿಗಳು ಹೇಗಿದ್ದವು ಎಂದು ಕೇಳಿದ. ಅವರು ಪಂಚಾಂಗ ನೋಡಿ, ‘ಸ್ವಾಮಿ, ನಿನ್ನೆ ಯಾವ ವಿಶೇಷವೂ ಇರಲಿಲ್ಲ. ತಾವು ದಿನದಂತೆ ಸುಖನಿದ್ರೆಯನ್ನೇ ಮಾಡಿದಿರಿ’ ಎಂದರು. ರಾಜನಿಗೆ ಕೋಪಬಂದು ದೂತರನ್ನು ಕಳುಹಿಸಿ ಹಳೆಯ ಪುರೋಹಿತನನ್ನು ಅರಮನೆಗೆ ಕರೆಸಿಕೊಂಡ. ಅವನಿಗೆ ಸತ್ಕಾರ ಮಾಡಿ ಅವನನ್ನೇ ರಾಜಪುರೋಹಿತನನ್ನಾಗಿ ಮಾಡಿಕೊಂಡು ಬುದ್ಧಿವಂತರಂತೆ ನಟಿಸುತ್ತಿದ್ದ ನಾಟಕಮಂಡಳಿಯನ್ನು ಹೊರಗೆ ಹಾಕಿದ.

ಇದೊಂದು ದೊಡ್ಡ ಸಮಸ್ಯೆ. ಯಾರಾದರೂ ಮುಖ್ಯಸ್ಥರಾದರೆ ಅವರ ಸುತ್ತ ಒಂದು ಕೂಟ ಸೇರಿಕೊಳ್ಳುತ್ತದೆ. ನಾಯಕನಲ್ಲಿ ಇಲ್ಲದ ಗುಣಗಳನ್ನು ಹೊಗಳಿ ಹಾಡಿ, ಇದ್ದ ಗುಣಗಳನ್ನು ವಿಸ್ತರಿಸಿ ಬೊಬ್ಬೆ ಹಾಕಿ ಅವನ ಮೈಮರೆಸಿ ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುತ್ತದೆ. ನಾಯಕರಾದವರು ಇಂಥವರನ್ನು ಸರಿಯಾಗಿ ಗಮನಿಸಿ ದೂರದಲ್ಲಿಟ್ಟು ನಿಜವಾದ ಪ್ರತಿಭೆ ಇದ್ದವರನ್ನು ಹತ್ತಿರಕ್ಕೆ ತೆಗೆದುಕೊಂಡು ಆಡಳಿತ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT