ಮಂಗಳವಾರ, ಸೆಪ್ಟೆಂಬರ್ 21, 2021
25 °C

ನೀಡುವವರ ಮುಂದೆ ಬೇಡಿಕೆ | ಬುದ್ಧನ ಜಾತಕ ಕಥೆಗಳು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Gururaja karajagi

ಹಿಂದೆ ವಾರಣಾಸಿಯನ್ನು ಬ್ರಹ್ಮದತ್ತ ಆಳುತ್ತಿದ್ದಾಗ ಒಮ್ಮೆ ಭೀಕರ ಬರಗಾಲ ಬಿತ್ತು. ಜನ ಕಂಗಾಲಾದರು. ಒಂದು ಹೊತ್ತಿನ ಊಟಕ್ಕೂ ತತ್ಪಾರ. ಆದರೆ ರಾಜ ಮಾತ್ರ ತನ್ನ ಖಜಾನೆಯನ್ನು ತುಂಬಿಕೊಳ್ಳಲು ಭಾರೀ ಕರಗಳನ್ನು ಹಾಕಿ ಜನರನ್ನು ತೊಂದರೆಗೀಡುಮಾಡಿ ಹಣ ಕಸಿದುಕೊಳ್ಳುತ್ತಿದ್ದ. ಆ ಸಮಯದಲ್ಲಿ ಬೋಧಿಸತ್ವ ಹತ್ತಿರದ ಗ್ರಾಮವೊಂದರಲ್ಲಿ ಬ್ರಾಹ್ಮಣನ ಮಗನಾಗಿ ಹುಟ್ಟಿದ. ದೊಡ್ಡವನಾದ ಮೇಲೆ ತಕ್ಕಶಿಲೆಗೆ ಬಂದು ಸಕಲವಿದ್ಯೆಗಳನ್ನು ಕಲಿತ. ಅವನ ಹತ್ತಿರ ಗುರುದಕ್ಷಿಣೆ ಕೊಡುವುದಕ್ಕೂ ಹಣವಿರಲಿಲ್ಲ. ತಾನು ಮನೆಗೆ ಮರಳಿದ ಮೇಲೆ ಭಿಕ್ಷೆ ಬೇಡಿ, ಜ್ಞಾನ ನೀಡಿ, ಹಣ ಸಂಪಾದನೆ ಮಾಡಿ ತಂದು ಗುರುದಕ್ಷಿಣೆ ನೀಡುತ್ತೇನೆ ಎಂದು ಗುರುಗಳಿಗೆ ಹೇಳಿದ. ಇವನ ಪರಿಸ್ಥಿತಿಯನ್ನು ತಿಳಿದ ಅವರು ಒಪ್ಪಿದರು.

ಈ ತರುಣ ವಾರಣಾಸಿಗೆ ಬರುವ ಮುನ್ನ ಅಲ್ಲಲ್ಲಿ ಹಳ್ಳಿ, ನಗರಗಳಲ್ಲಿ ಸುತ್ತಾಡಿ, ಪಾಠ ಹೇಳಿ ಏಳು ಬಂಗಾರದ ನಾಣ್ಯಗಳನ್ನು ಸಂಪಾದಿಸಿದ. ಅವುಗಳನ್ನು ಗುರುಗಳಿಗೆ ದಕ್ಷಿಣೆಯಾಗಿ ಕೊಡಬೇಕೆಂದು ತೀರ್ಮಾನಿಸಿ ನಡೆದು ಬರುವಾಗ ದಾರಿಯಲ್ಲಿ ಆತ ಗಂಗಾನದಿಯನ್ನು ದಾಟಬೇಕಾಯಿತು. ಈತನೂ ಉಳಿದವರಂತೆ ನಾವೆಯನ್ನು ಏರಿದ. ಆದರೆ ಮಧ್ಯದಲ್ಲಿ ಜೋರಾಗಿ ಗಾಳಿ ಬೀಸಿದ್ದರಿಂದ ನಾವೆ ಮುಗುಚಿಕೊಂಡಿತು. ಯಾರ ಜೀವಕ್ಕೆ ಅಪಾಯವಾಗದಿದ್ದರೂ ಇವನ ಬಂಗಾರದ ನಾಣ್ಯಗಳು ನೀರಿನಲ್ಲಿ ಬಿದ್ದು ಹೋದವು. ಮತ್ತೆ ಅಷ್ಟು ನಾಣ್ಯಗಳನ್ನು ಸಂಗ್ರಹಿಸುವುದು ಕಷ್ಟ ಮತ್ತು ತುಂಬ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ರಾಜನನ್ನು ಬೇಡಿದರೆ ಆತ ಗುರುದಕ್ಷಿಣೆಯ ಹಣವನ್ನು ದಾನವಾಗಿ ಕೊಡಬಹುದು ಎನ್ನಿಸಿತು. ಅದಕ್ಕಾಗಿ ಆತ ಗಂಗಾತೀರದಲ್ಲಿಯೇ ಉಪವಾಸ ಕುಳಿತುಕೊಳ್ಳುವ ನಿರ್ಧಾರ ಮಾಡಿದ. ಈ ವಿಷಯ ರಾಜನಿಗೆ ತಿಳಿಯುತ್ತದೆ. ಆತ ತನ್ನ ಮಂತ್ರಿಗಳನ್ನು ಕಳುಹಿಸಬಹುದು. ತಾನು ಅವರೊಂದಿಗೆ ಮಾತನಾಡದಿದ್ದರೆ ಬಹುಶ: ರಾಜನೇ ಅಲ್ಲಿಗೆ ಬಂದಾನು. ಆಗ ಅವನನ್ನು ಬೇಡಿ ಗುರುದಕ್ಷಿಣೆ ಪಡೆಯಬೇಕು ಎಂಬುದು ಅವನ ಉಪಾಯವಾಗಿತ್ತು.

ತೀರ್ಮಾನದಂತೆ ದೇಹದ ಮೇಲೆ ಬಿಳೀ ಬಟ್ಟೆ ಹೊದ್ದುಕೊಂಡು, ಜನಿವಾರ ಹೊರಗೆ ಕಾಣುವಂತೆ ಇಟ್ಟುಕೊಂಡು ಉಪವಾಸ ಪ್ರಾರಂಭಿಸಿದ. ಊರಿನ ಹಿರಿಯರು ಉಪವಾಸದ ಕಾರಣ ಕೇಳಿದರು. ಆತ ಮಾತನ್ನೇ ಆಡಲಿಲ್ಲ. ವಿಷಯ ಅರಮನೆಗೆ ಹೋಯಿತು. ರಾಜ ಮಂತ್ರಿಗಳನ್ನು ಕಳುಹಿಸಿದ. ಅವರೂ ಬಂದು ಉಪವಾಸದ ಕಾರಣವನ್ನು ಕೆದಕಿ, ಕೆದಕಿ ಕೇಳಿದರು. ಈತ ಬಾಯಿ ಬಿಡಲಿಲ್ಲ. ಕೊನೆಗೆ ರಾಜನೇ ಅವನ ಬಳಿಗೆ ಬಂದು ಕಾರಣ ಕೇಳಿದಾಗ ಈತ ತಾನು ಏಳು ಬಂಗಾರದ ನಾಣ್ಯಗಳನ್ನು ಗಳಿಸಿದ ಕಷ್ಟ, ಕಳೆದುಕೊಂಡ ರೀತಿಯನ್ನು ವಿವರಿಸಿ, ತನ್ನ ಗುರುದಕ್ಷಿಣೆಯ ಹಣವನ್ನು ದಾನವಾಗಿ ಕೊಡಬೇಕು ಎಂದು ಪ್ರಾರ್ಥಿಸಿದ. ರಾಜ ಅಷ್ಟು ಹಣವನ್ನು ತಕ್ಷಣವೇ ಕೊಟ್ಟು, “ಮೊದಲು ಎಲ್ಲರೂ ಉಪವಾಸದ ಕಾರಣವನ್ನು ಕೇಳಿದರೆ ಏಕೆ ಹೇಳಲಿಲ್ಲ?” ಎಂದು ಕೇಳಿದ. ಅದಕ್ಕೆ ಯುವಕ ಹೇಳಿದ, “ಪ್ರಭೂ, ಬೇಡಿದರೆ, ನೀಡುವ ಶಕ್ತಿ, ಮನಸ್ಸು ಇದ್ದವರನ್ನು ಮಾತ್ರ ಬೇಡಬೇಕು. ಕುತೂಹಲಕ್ಕಾಗಿ ಪ್ರÀಶ್ನೆ ಮಾಡುವವರ ಮುಂದೆ ದೀನನಾಗಿ ಮಾತನಾಡಬಾರದು. ಉಳಿದವರು ಮಾತು ಕೇಳಿ ಸಹಾನುಭೂತಿ ತೋರಿಸುವವರೆ ವಿನ: ಕೊಡುವವನು ನೀನೊಬ್ಬನೆ”. ರಾಜ ಅವನ ವ್ಯವಹಾರ ಜ್ಞಾನವನ್ನು ಮೆಚ್ಚಿ ಅವನನ್ನು ತನ್ನ ಆಸ್ಥಾನದಲ್ಲೇ ಉಳಿಸಿಕೊಂಡ.

ಎಲ್ಲರ ಮುಂದೆ ದೀನತ್ವವನ್ನು ತೋರಿಸುವುದು, ಅಸಹಾಯಕತೆ, ವ್ಯರ್ಥ ಪ್ರಲಾಪ. ಕೊಡುವವರ ಮುಂದೆ ಕೇಳುವುದು ಬುದ್ಧಿವಂತಿಕೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.