ಭಾನುವಾರ, ಸೆಪ್ಟೆಂಬರ್ 27, 2020
24 °C
ವರ್ತಮಾನದ ನೆಮ್ಮದಿ, ಶಾಂತಿ, ಸಾಮರಸ್ಯ, ಸಮನ್ವಯ ಕದಡುವುದಕ್ಕೆ ಇತಿಹಾಸ ನೆಪವಾಗಬಾರದು

ಪ್ರಕೃತಿ ಕಲಿಸಿದ ಪಾಠ ಸಾಮರಸ್ಯವಲ್ಲದೆ ಬೇರೇನಲ್ಲ

ಟಿ.ಕೆ. ತ್ಯಾಗರಾಜ್‌ Updated:

ಅಕ್ಷರ ಗಾತ್ರ : | |

Deccan Herald

ತೊಂಬತ್ತರ ದಶಕದ ಮಧ್ಯಭಾಗದಲ್ಲೊಮ್ಮೆ ಪ್ರಳಯ ಎಂಬ ಕಟ್ಟುಕತೆಗೆ ಕೈಕಾಲು, ರೆಕ್ಕೆಪುಕ್ಕಗಳೆಲ್ಲ ಹುಟ್ಟಿಕೊಂಡು ಇನ್ನೇನು ಈ ನಾಡೇ ನಾಶವಾಗಲಿದೆ ಎಂಬ ಅನಗತ್ಯ ಭೀತಿ ಆವರಿಸಿದ್ದ ದಿನಗಳಲ್ಲಿ ನಾನು ತಮಿಳು ತಾಯ್ನುಡಿಯ ವಿಜ್ಞಾನಿಯೊಬ್ಬರನ್ನು ಭೇಟಿಯಾಗಿದ್ದೆ. ಹಿಂದುಳಿದ ಜಾತಿಗೆ ಸೇರಿದ ತೆಲುಗು ತಾಯ್ನುಡಿಯ ಐಎಎಸ್ ಅಧಿಕಾರಿಯೊಬ್ಬರ ಪತಿ ಅವರು. ಇಬ್ಬರೂ ಅಚ್ಚರಿ ಹುಟ್ಟಿಸುವಂತೆ ಕನ್ನಡಿಗರಂತಿದ್ದರು. ಪ್ರಳಯದ ಬಗ್ಗೆ ಮಾತಿಗೆಳೆದಾಗ ಆ ವಿಜ್ಞಾನಿ ಹೇಳಿದ್ದಿಷ್ಟು: ‘ಪ್ರಕೃತಿ ಕರುಣಾಮಯಿ. ಒಂದರ್ಥದಲ್ಲಿ ಮನುಕುಲದ ತಾಯಿ. ಉಸಿರಾಟಕ್ಕೆ ಗಾಳಿ, ಕುಡಿಯಲು ನೀರು, ತಿನ್ನಲು ಆಹಾರವಷ್ಟೇ ಅಲ್ಲ, ಬೆಟ್ಟ, ಕಾಡು, ನದಿ, ಸಮುದ್ರ, ಮಳೆ, ನಮ್ಮ ಮನೆ ನಿರ್ಮಿಸಲು ಬೇಕಾದ ಮಣ್ಣು, ಪೀಠೋಪಕರಣಗಳಿಗೆ ಬೇಕಾದ ಮರ ಎಲ್ಲವೂ ಪ್ರಕೃತಿಯ ಕೃಪೆಯೇ. ನಾವು ಬದುಕುತ್ತಿರುವುದು ಪ್ರಕೃತಿಯ ಔದಾರ್ಯದಿಂದಲೇ ಹೊರತು ನಮ್ಮದು ಅನ್ನುವುದು ಏನಿದೆ? ಇಷ್ಟೆಲ್ಲವನ್ನೂ ಕೊಡುತ್ತಿರುವ ಪ್ರಕೃತಿ ನಮ್ಮ ಪ್ರಾಣ ತೆಗೆಯುತ್ತಾಳೆಯೇ? ಪ್ರಾಕೃತಿಕ ಸಮತೋಲನ ಕಾಪಾಡುವ ಕ್ರಿಯೆಯಲ್ಲಿ ಆಗುವ ಅನಿವಾರ್ಯ ಪರಿಣಾಮಗಳನ್ನು ನಾವು ಸಹಿಸಿಕೊಳ್ಳಬೇಕು. ನಾವು ಮಾಡುವ ತಪ್ಪುಗಳು ಮಾಡಿದ್ದುಣ್ಣೋ ಮಹರಾಯ ಎನ್ನುವಂತಿವೆ ಅಷ್ಟೇ. ಪ್ರಕೃತಿ ಮನುಷ್ಯನಷ್ಟು ನಿರ್ದಯಿಯಲ್ಲ. ಹೀಗಾಗಿ ಪ್ರಳಯದ ಪ್ರಶ್ನೆಯೇ ಇಲ್ಲ’.

ಇಂಥ ಮಾತುಗಳನ್ನೇ ದೇವರದಾಸಿಮಯ್ಯ, ‘ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ’ ಎಂದು ವಚನರೂಪದಲ್ಲಿ ಎಂಟುನೂರು ವರ್ಷಗಳ ಹಿಂದೆಯೇ ಹೇಳಿದ್ದಾನೆ. ಮನುಕುಲದ ಒಳಿತು, ಅನುಕೂಲಕ್ಕಾಗಿ ಮಾಡಿರುವ ಅದೆಷ್ಟೋ ಆವಿಷ್ಕಾರಗಳನ್ನು ಮನುಷ್ಯ ತನ್ನ ಸ್ವಾರ್ಥ ಮತ್ತು ವಿನಾಶಕ್ಕಾಗಿ ಬಳಸುತ್ತಿರುವ ಬಗೆಯನ್ನು ಬರ್ಟ್ರಂಡ್‌ ರಸೆಲ್ ತನ್ನ ಒಂದು ಲೇಖನದಲ್ಲಿ ವಿವರಿಸಿದ್ದಾನೆ. ಪ್ರಕೃತಿಯ ವಿಚಾರದಲ್ಲೂ ಸ್ವಾರ್ಥಿಯಾಗಿರುವ ಮನುಷ್ಯನಿಂದ ಅರಣ್ಯ ನಾಶ, ತನ್ನ ಜಮೀನು ವಿಸ್ತರಣೆಗಾಗಿ ಪ್ರಾಣಿಗಳ ವಾಸಸ್ಥಾನದ ಅತಿಕ್ರಮಣ, ಅವುಗಳೇ ತನ್ನ ಮೇಲೆ ದಾಳಿ ಮಾಡುತ್ತಿವೆ ಎಂಬ ಸ್ವಯಂಕೃ ತಾಪರಾಧದ ಗೋಳಾಟ, ಬೆಳೆಗಾಗಿಯೇ ಇರುವ ನೆಲವನ್ನೆಲ್ಲ ರೆಸಾರ್ಟ್, ಹೋಮ್‌ಸ್ಟೇಗಳಂಥ ವ್ಯಾಪಾರಕ್ಕಾಗಿ ಮಾಡಿರುವ ಪರಿವರ್ತನೆ ಇವೇ ಮೊದಲಾದ ಕಾರಣಗಳು ವಿಕೋಪ ಎಂಬ ಪ್ರಕ್ರಿಯೆಯನ್ನು ಸೃಷ್ಟಿಸಿವೆ.

ಈವರೆಗೆ ವಿವಿಧ ಕಾರಣಗಳಿಂದ ಗುಟ್ಟಾಗಿ ಅಳುತ್ತಿದ್ದ ನನ್ನ ಪ್ರೀತಿಯ ಕೊಡಗು ಈಗ ಬಿಕ್ಕಿಬಿಕ್ಕಿ ಅಳುತ್ತಿರುವುದು ಎಲ್ಲೆಡೆಯೂ ಪ್ರತಿಧ್ವನಿಸುತ್ತಿರುವುದರ ಹಿಂದೆಯೂ ಇಂಥದ್ದೇ ಕಾರಣವಿದೆ. ಕಳೆದ ಕೆಲವು ದಿನಗಳಿಂದ ಅಬ್ಬರಿಸಿದ ಮಳೆರಾಯನಿಂದಾಗಿ ಭಾರತದ ಸ್ಕಾಟ್ಲೆಂಡ್, ದಕ್ಷಿಣದ ಕಾಶ್ಮೀರ ಎಂದೆಲ್ಲ ಕರೆಸಿಕೊಂಡಿರುವ ಕೊಡಗಿನ ಬಹುಭಾಗ ಸದ್ಯ ಅಕ್ಷರಶಃ ನರಕವಾಗಿದೆ. ಯಾವುದೇ ಜಾತಿ, ಮತ, ಅಂತಸ್ತಿನ ತಾರತಮ್ಯವಿಲ್ಲದೇ ಪ್ರಕೃತಿತಾಯಿ ತನ್ನ ಮುನಿಸಿನ ಪರಿಣಾಮಗಳನ್ನು ಅನುಗ್ರಹಿಸಿದ್ದಾಳೆ! ಯಾವ್ಯಾವುದೋ ಊರು, ರಾಜ್ಯ, ದೇಶಗಳಿಂದ ಕೊಡಗಿಗೆ ಯಾರ‍್ಯಾರೋ ಸಹಾಯಹಸ್ತ ಚಾಚುತ್ತಿದ್ದಾರೆ. ಅಂಥವರಲ್ಲೂ ಯಾರಿಗೆ ನೆರವಾಗಬೇಕೆಂಬ ಆಯ್ಕೆಯಿಲ್ಲ. ಅದು ಜಾತಿ, ಧರ್ಮ, ಅಂತಸ್ತಿನ ತಾರತಮ್ಯಗಳಿಲ್ಲದ ನಿಸ್ವಾರ್ಥದ ನೆರವು. ಕೊನೆಗೂ ಗೆಲ್ಲುವುದು, ವಿಜೃಂಭಿಸುವುದು ಮನುಷ್ಯತ್ವವೇ.

ಇದು ನನ್ನ ಜಿಲ್ಲೆ. ಸಹಜವಾಗಿಯೇ ನನ್ನ ಸಂಬಂಧ ಹೆಚ್ಚು ಆಪ್ತವಾದದ್ದು. ಹುಟ್ಟಿ, ಬೆಳೆದು, ಆಡಿ, ನಡೆದಾಡಿದ ರಸ್ತೆ, ಗುಡ್ಡಗಳು ನನ್ನಷ್ಟೇ ಜೀವಂತ. ಒಂದರ್ಥದಲ್ಲಿ ನನ್ನ ಪರಮಾಪ್ತ ‘ಜೀವಿ’ಗಳು! ಕೊಡಗಿನ ಒಂದೊಂದೂ ಗ್ರಾಮ, ನಾಡಹಬ್ಬಗಳು, ಜಾತಿ, ಜನಾಂಗಗಳು, ಬುಡಕಟ್ಟು ಜನರ ಕುಂಡೆಹಬ್ಬ, ಹುತ್ತರಿ, ಕೈಲ್‍ಪೊಳ್ದ್, ಪಂದಿಕರಿ ನಾಗರಹೊಳೆಯ ಹಾಡಿಗಳು, ಮಡಿಕೇರಿ ದಸರಾ, ಕೊಡಗಿನ ವಾದ್ಯ, ನೃತ್ಯ ಎಲ್ಲವುಗಳ ಬಗ್ಗೆ ಕೊಡಗಿನಲ್ಲೇ ಹುಟ್ಟಿ ಬೆಳೆದ ನನ್ನಂಥವರಿಗೆ ಎಲ್ಲಿಲ್ಲದ ಸಹಜ ಪ್ರೀತಿ. ಈಗ ಅದೇ ಕೊಡಗಿನಲ್ಲಿ ಕುಸಿಯುತ್ತಿರುವ ಬೆಟ್ಟಗಳು, ನಾಪತ್ತೆಯಾಗಿರುವ ಗ್ರಾಮಗಳು, ಬೀದಿಗೆ ಬಿದ್ದಿರುವ ಕುಟುಂಬಗಳು ಕಾಡುವ ಬಗೆ ಇದೆಯಲ್ಲಾ ವರ್ಣಿಸಲು ಅಸಾಧ್ಯ.

ಕೊಡಗು ಅಥವಾ ಕ್ರೋಢದೇಶಕ್ಕಿಂತ ಕೋಡುಮಲೆ ಎಂಬ ಚೆಂದದ ಹೆಸರು ನನಗೆ ಇವತ್ತಿಗೂ ಪ್ರಿಯವಾದದ್ದು. ರೆವರೆಂಡ್ ಜಿ.ರಿಕ್ಟರ್ ಬರೆದ ‘ಗೆಜೆಟಿಯರ್ ಆಫ್ ಕೂರ್ಗ್’ ಪುಸ್ತಕದಲ್ಲಿ ಕೋಡುಮಲೆ ಎಂಬ ಉಲ್ಲೇಖವಿದೆ. ಕೋಡು ಮತ್ತು ಮಲೆ ಎಂಬ ಪದಗಳನ್ನು ಪ್ರತ್ಯೇಕವಾಗಿ ನೋಡಿದರೆ ಅವುಗಳ ಅರ್ಥ ಕೊಡಗಿನ ಪ್ರಾಕೃತಿಕ ಸಂಪತ್ತು, ಸಂಸ್ಕೃತಿ, ಭೂತಕಾಲ ಮತ್ತು ವರ್ತಮಾನದ ಆಗುಹೋಗುಗಳನ್ನೇ ಧ್ವನಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್‍ನ ನಿಘಂಟಿನ ಪ್ರಕಾರ ಕೋಡು ಎಂದರೆ ಶಿಖರ, ಬೆಟ್ಟದ ತುದಿಯಷ್ಟೇ ಅಲ್ಲ. ಆನೆಯ ದಂತ, ತಣ್ಣಗಿರುವಿಕೆ, ಭಯಪಡು, ದಾನ, ಕೆರೆಯ ಹೆಚ್ಚು ನೀರು ಹರಿದು ಹೋಗುವ ಭಾಗ ಎಂಬ ಅರ್ಥಗಳೂ ಇವೆ. ಹಾಗೇ ಮಲೆ ಎಂದರೆ ಬೆಟ್ಟ, ಪರ್ವತ ಮಾತ್ರ ಅಲ್ಲ. ಬೆಟ್ಟವನ್ನು ಆವರಿಸಿರುವ ಕಾಡು, ಎದುರಿಸು, ಪ್ರತಿಭಟಿಸು, ಬೀಗು, ಬಗ್ಗಡವಾಗು ಎನ್ನುವ ಅರ್ಥಗಳನ್ನೂ ಕಾಣಬಹುದಾಗಿದೆ. ಒಂದಕ್ಕೊಂದು ತಗುಲಿಕೊಂಡಂತಿರುವ ಬೆಟ್ಟಸಾಲುಗಳನ್ನು ನೋಡಿದರೆ ಅದು ಕೋಡುಮಾಲೆ ಇರಬಹುದೇ ಎಂದೂ ನನಗನ್ನಿಸಿದ್ದಿದೆ.

1585 ಚದರ ಮೈಲು ವಿಸ್ತೀರ್ಣದ ಕೊಡಗು ಇಂಗ್ಲಿಷರ ಆಡಳಿತಕ್ಕೆ ಬರುವ ಮುನ್ನ ಈಗ ದಕ್ಷಿಣ ಕನ್ನಡದಲ್ಲಿರುವ ಸುಳ್ಯ ಮತ್ತು ಪುತ್ತೂರು ತಾಲ್ಲೂಕುಗಳನ್ನೂ ಒಳಗೊಂಡಿತ್ತು. ಸುಮಾರು 6 ಲಕ್ಷ ಜನಸಂಖ್ಯೆ ಇರುವ ಕೊಡಗಿನಲ್ಲಿ ಇರುವವರೆಲ್ಲ ಕೊಡವರೇ ಎಂದು ಇತರರು ಭಾವಿಸಿರುತ್ತಾರೆ. ಇಲ್ಲಿ ಕೊಡವ ಭಾಷೆ ಮಾತನಾಡುವ, ಕೊಡಗಿನ ಪದ್ಧತಿ ಅನುಸರಿಸುವ ಇನ್ನೂ ಕೆಲವು ಜಾತಿಗಳಿವೆ. ಕನ್ನಡ ಎನ್ನುವ ಭಾಷೆ ಇದೆ, ಕನ್ನಡ ಜಾತಿ ಇಲ್ಲ. ಮಲಯಾಳ ಎನ್ನುವ ಭಾಷೆ ಇದೆ, ಮಲಯಾಳ ಜಾತಿ ಇಲ್ಲ. ಬಹುತೇಕ ಎಲ್ಲ ಭಾಷೆಗಳದ್ದು ಇದೇ ಕತೆ. ಆದರೆ ಕೊಡವ ಭಾಷೆ ಮಾತನಾಡುವ ಇತರ ಕೆಲವು ಜಾತಿಗಳಿದ್ದರೂ ಕೊಡವ ಎನ್ನುವ ಜಾತಿಯೂ ಇಲ್ಲಿದೆ. ಕೊಡಗಿನ ಗಾಂಧಿ ಎಂದೇ ಖ್ಯಾತರಾಗಿದ್ದ ಪಿ.ಐ. ಬೆಳ್ಯಪ್ಪ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ, ಎ.ಕೆ. ಸುಬ್ಬಯ್ಯ, ಎಂ.ಸಿ. ನಾಣಯ್ಯ ಇವರೆಲ್ಲ ಕೊಡವರು. ಒಂದು ಭಾಷೆಯನ್ನು ಪಾರಂಪರಿಕವಾಗಿ ಬಳಸುವ ಇನ್ನೂ ಕೆಲವು ಜಾತಿಗಳಿದ್ದರೂ ಆ ಭಾಷೆಯ ಹೆಸರೇ ಒಂದು ಜಾತಿ ಹೇಗಾಯಿತೋ ಎನ್ನುವುದು ಸಂಶೋಧನಾರ್ಹ ವಿಷಯ.

ಕೊಡಗಿನಲ್ಲಿ ಅರೆಭಾಷೆ ಎಂಬ ಅರೆಗನ್ನಡ ಮಾತನಾಡುವ ಗೌಡರಿದ್ದಾರೆ, ಸ್ವಾತಂತ್ರ್ಯ ಹೋರಾಟಗಾರ ಗುಡ್ಡೆಮನೆ ಅಪ್ಪಯ್ಯಗೌಡ, ಡಿ.ವಿ. ಸದಾನಂದಗೌಡ, ಶೋಭಾ ಕರಂದ್ಲಾಜೆ ಈ ಸಮುದಾಯಕ್ಕೆ ಸೇರಿದವರು. ಹೆಗ್ಗಡೆ, ಅಮ್ಮಕೊಡವ, ಐರಿ, ಕೆಂಬಟ್ಟಿ, ಕೋಯವ ಜಾತಿಗಳ ಜನರ ತಾಯ್ನುಡಿ ಕೂಡ ಕೊಡವ. ಧರ್ಮದ ತೆಕ್ಕೆಗೆ ತರುವ ಮೂಲಕವಾದರೂ ಕೊಡವರನ್ನು ಇಂಗ್ಲಿಷರ ವಿರುದ್ಧದ ಹೋರಾಟಕ್ಕೆ ಸಜ್ಜುಗೊಳಿಸಬೇಕೆಂದು ಟಿಪ್ಪುಸುಲ್ತಾನ್ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಕೊಡವ ಮುಸ್ಲಿಮರೂ ಇದ್ದಾರೆ. ಕೊಡವ ಭಾಷೆ ಮಾತನಾಡುವ ಈ ಇತರ ಜಾತಿಗಳಲ್ಲಿ ಪ್ರಖ್ಯಾತ ಶಿಲ್ಪಿಗಳೂ, ಇತಿಹಾಸಕಾರರೂ, ಪತ್ರಕರ್ತರೂ ನಮ್ಮ ನಡುವೆ ಬಂದು ಹೋಗಿದ್ದಾರೆ. ಆದರೆ ಇಂಗ್ಲಿಷರ ಕಾಲದಿಂದಲೂ ಕೊಡಗು ಭಾಷಿಕರಿಗೆ ಸಂಬಂಧಿಸಿದ ಬಹುತೇಕ ಎಲ್ಲ ರಾಜಕೀಯ ಪ್ರಾತಿನಿಧ್ಯಗಳನ್ನೂ ಪಡೆಯುವ ಅದೃಷ್ಟ ಕೊಡವ ಭಾಷೆ ಮಾತನಾಡುವ ಕೊಡವ ಸಮುದಾಯಕ್ಕೆ ಬಿಟ್ಟರೆ ಇತರ ಕೊಡವ ಭಾಷಿಕರಿಗೆ ಒಲಿದಿಲ್ಲ!‌

ಕೊಡಗಿನಲ್ಲಿ ಕೊಡವರು ಮತ್ತು ಅರೆಭಾಷೆ ಗೌಡರು ಎರಡೂವರೆ ಲಕ್ಷದಷ್ಟಿದ್ದರೆ ಇತರ ಜಾತಿಗಳ ಜನರು ಸುಮಾರು ಮೂರೂವರೆ ಲಕ್ಷದಷ್ಟಿದ್ದಾರೆ. ಇದರಲ್ಲಿ ಮುಸ್ಲಿಮರು, ತಮಿಳರು, ತೆಲುಗರು, ಮಲಯಾಳಿಗಳು, ಮರಾಠಿಗರು, ದಲಿತರು, ಬುಡಕಟ್ಟು ಜನರೂ ಸೇರಿದ್ದಾರೆ. ಕೊಡಗಿನ ಮೂಲನಿವಾಸಿಗಳು ಸಹಿಷ್ಣುಗಳಲ್ಲದೇ ಹೋಗಿದ್ದರೆ ಇತರ ಭಾಷಿಕರು ಬಂದು ಕೊಡಗಿನಲ್ಲೇ ನೆಲೆಸುವುದು ಸಾಧ್ಯವಾಗುತ್ತಿರಲಿಲ್ಲ. ಮೂಲನಿವಾಸಿಗಳು ಆತಿಥ್ಯಕ್ಕೆ, ಮನುಷ್ಯಪ್ರೀತಿಗೆ ಬೆಲೆ ನೀಡಿದವರು. ಆ ದಿನಗಳಲ್ಲಿ ಅಂಥ ಸಾಮರಸ್ಯ ಇತ್ತು.

ಕಾಲಾಂತರದಲ್ಲಿ ಆಗಿರುವ ಬೆಳವಣಿಗೆಗಳನ್ನು ನೋಡಿದರೆ ನಿಮಗೂ ಅಚ್ಚರಿಯಾಗಬಹುದು. ಇವತ್ತು ಕ್ರಿಕೆಟ್ ಎನ್ನುವುದು ಭಾರತೀಯರ ಧರ್ಮದಂತೆ ಹೇಗೆ ಆಗಿದೆಯೋ ಹಾಗೆ ಹಾಕಿ ಕೂಡ ಕೊಡಗಿನ ಧರ್ಮ ಆಗಿತ್ತು. ನನಗೆ, ನನ್ನ ತಮ್ಮನಿಗೆ ನಮ್ಮ ತಂದೆ ಆಟಕ್ಕೆಂದು ಮೊದಲು ತಂದುಕೊಟ್ಟಿದ್ದೇ ಎರಡು ಹಾಕಿಸ್ಟಿಕ್‍ಗಳು. ಭಾರತೀಯ ಹಾಕಿ ತಂಡಕ್ಕೆ ಎಂ.ಪಿ. ಗಣೇಶರಂಥ ಕೊಡವರಷ್ಟೇ ಅಲ್ಲದೇ ಬಿ.ಪಿ. ಗೋವಿಂದ ಸೇರಿದಂತೆ ಜಿಲ್ಲೆಯ ಇತರ ಸಮುದಾಯಗಳಿಗೆ ಸೇರಿದ ಆಟಗಾರರ ಕೊಡುಗೆಯೂ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿವಿಧ ಸಮುದಾಯಗಳ ನಡುವಿನ ಸಾಮರಸ್ಯ ಹದಗೆಟ್ಟ ನಂತರ ಕೊಡವರು ತಮ್ಮ ಕುಟುಂಬಗಳಿಗಾಗಿ ಕೊಡವ ಕಪ್ ಹಾಕಿ ಟೂರ್ನಿ ಆರಂಭಿಸಿದ್ದು ಜಾಗತಿಕ ಸುದ್ದಿಯಾಗಿದ್ದಿರಬಹುದು. ಅದು ಸಾಮರಸ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಆಗಿರಲಿಲ್ಲ. ಅದನ್ನೇ ಕೊಡಗು ಕಪ್ ಎಂಬ ಟೂರ್ನಿಯ ಮೂಲಕ ನಡೆಸುವಂತಾಗಿದ್ದರೆ ಜಿಲ್ಲೆಯ ಇತರ ಸಮುದಾಯಗಳೂ ಪಾಲ್ಗೊಳ್ಳಬಹುದಿತ್ತು. ಮತ್ತೆ ಕೊಡಗಿನ ಹಾಕಿ ತೋಟದಲ್ಲಿ ಸಮೃದ್ಧ ಬೆಳೆ ತೆಗೆಯಬಹುದಾಗಿತ್ತು. ಆದರೆ ಕೊಡವ ಕಪ್‍ನ ಫಲವಾಗಿ ಈಗ ಅರೆಭಾಷೆ ಗೌಡರ ಕ್ರಿಕೆಟ್ ಟೂರ್ನಿ, ಕೊಡಗು ಮುಸ್ಲಿಂ ಕಪ್ ವಾಲಿಬಾಲ್ ಟೂರ್ನಿ, ದಲಿತರಿಂದ ಜೈಭೀಮ್ ಕಪ್ ಕ್ರಿಕೆಟ್ ಟೂರ್ನಿ ಸೇರಿದಂತೆ ಒಂದೊಂದು ಸಮುದಾಯವೂ ತಮ್ಮ ಜಾತಿಯ ಹೆಸರಿನ ವಿವಿಧ ಟೂರ್ನಿಗಳನ್ನು ಆಯೋಜಿಸುವ ಮಟ್ಟಕ್ಕೆ ಬಂದು ತಲುಪಿವೆ.

ಜಿಲ್ಲೆಯ ಕೇಂದ್ರ ಸ್ಥಳವಾದ ಮಡಿಕೇರಿಯಲ್ಲಿ ನಡೆಯುವ ದಸರಾ ಎಂದರೆ ಅಲ್ಲಿನ ದೇವಾಲಯಗಳ ಮಂಟಪಗಳ ನಿರ್ಮಾಣ ಕಾರ್ಯದಲ್ಲಿ ಮುಸ್ಲಿಮರು, ಕ್ರೈಸ್ತರು ಎಂಬ ಯಾವುದೇ ಧರ್ಮ ಭೇದವಿಲ್ಲದೇ ಒಗ್ಗೂಡಿ ಸಂಭ್ರಮದಿಂದ ಆಚರಿಸುತ್ತಿದ್ದ ಕಾಲವೊಂದಿತ್ತು. ಮೂವತ್ತು ವರ್ಷಗಳ ಹಿಂದೆ ದಸರಾ ದಿನವೇ ಕೋಮುವಾದಿಗಳ ಗುಂಪೊಂದು ಮೆರವಣಿಗೆ ಮಾಡುತ್ತಾ ಗೋಮಾಂಸ ಭಕ್ಷಕರಿಗೆ ಧಿಕ್ಕಾರ ಇವೇ ಮೊದಲಾದ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದು, ದಸರಾ ದಿನವೇ ಮುಸ್ಲಿಂ ಯುವಕನೊಬ್ಬನ ಕೊಲೆಯಾಗಿದ್ದು ಇವೇ ಮೊದಲಾದ ಘಟನೆಗಳಿಂದ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಬಾಂಧವ್ಯ ಕೆಡಿಸುವ ಪ್ರಯತ್ನವೂ ನಡೆದಿತ್ತು. ಈ ಬೆಳವಣಿಗೆಗಳಿಂದ ಇತರ ಧರ್ಮೀಯರು ದಸರಾದಲ್ಲಿ ಪಾಲ್ಗೊಳ್ಳುವುದರಿಂದೇನೂ ಹಿಂದೆ ಬಿದ್ದಿಲ್ಲ. ಆದರೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ಇದ್ದೇ ಇತ್ತು.

‘ಈ ಹಿಂದೆ ಕೊಡವ ಮುಸ್ಲಿಮರೂ ಸೇರಿದಂತೆ ಎಲ್ಲ ಜಾತಿಯವರೂ ಕೊಡವ ಸಾಂಪ್ರದಾಯಿಕ ಉಡುಪು ಧರಿಸಿ ಕೋಲಾಟದಲ್ಲಿ ಭಾಗವಹಿಸಬಹುದಿತ್ತು. ಈಗ ಅಂಥ ವಾತಾವರಣ ಇಲ್ಲ. ಪೂರ್ವಜರನ್ನು ಮತ್ತು ಹಿರಿಯರನ್ನು ಪೂಜೆ ಮಾಡುವ ಬುಡಕಟ್ಟಾಗಿದ್ದ ಕೊಡವ ಸಮುದಾಯ ಈಗ ವೈದಿಕ ಚಿಂತನೆಗಳತ್ತ ಮಾರು ಹೋಗುತ್ತಿರುವುದರಿಂದ ಕೊಡವ ಸಂಸ್ಕೃತಿ ಮರೆಯಾಗುತ್ತಿದೆ. ಕೋಮುವಾದಿಗಳ ಪ್ರಭಾವದಿಂದ ಕೊಡವರು ಮತ್ತು ಅರೆಭಾಷೆಗೌಡರು ಮುಕ್ತರಾದರೆ ಕೊಡಗಿನಲ್ಲಿ ಮತ್ತೆ ನೆಮ್ಮದಿಯ ವಾತಾವರಣ ನಿರ್ಮಾಣವಾಗಬಹುದು’ ಎಂದು ಎ.ಕೆ. ಸುಬ್ಬಯ್ಯ ಆಶಿಸುತ್ತಾರೆ.

ಕೋಮುವಾದದ ಪ್ರಭಾವ, 1837ರ ಅಮರ ಸುಳ್ಯದ ಸ್ವಾತಂತ್ರ್ಯ ಸಮರ, ಇಸ್ಲಾಂ ಧರ್ಮಕ್ಕೆ ಕೊಡವರ ಮತಾಂತರ ಸೇರಿದಂತೆ ವಿವಿಧ ಐತಿಹಾಸಿಕ ಕಾರಣಗಳಿಂದ ವಿವಿಧ ಸಮುದಾಯಗಳ ನಡುವಿನ ಸಾಮರಸ್ಯ ಹದಗೆಟ್ಟಿರಬಹುದು. ಈಗ ಬೆಟ್ಟಗಳೇ ನೆಲಕಚ್ಚುವಂಥ ಮಳೆಯ ಪರಿಣಾಮದಿಂದಾಗಿ ಬೀದಿಗೆ ಬಿದ್ದವರನ್ನು ಕಾಪಾಡುವಲ್ಲಿ ಎಲ್ಲ ಜಾತಿ, ಧರ್ಮ, ಅಂತಸ್ತುಗಳ ಜನರೂ ಯಾವುದೇ ತಾರತಮ್ಯ ಇಲ್ಲದೇ ಒಬ್ಬರಿಗೊಬ್ಬರು ನೆರವಾಗುತ್ತಿದ್ದಾರೆ ಎಂದರೆ ಅದು ಪ್ರಕೃತಿ ಕಲಿಸಿದ ಸಹಬಾಳ್ವೆ, ಸಾಮರಸ್ಯದ ಪಾಠವಲ್ಲದೇ ಮತ್ತೇನಲ್ಲ. ಪ್ರಕೃತಿ ಮತ್ತು ಮನುಷ್ಯರ ನಡುವೆ, ಮನುಷ್ಯ ಮನುಷ್ಯರ ನಡುವೆ, ಧರ್ಮಗಳ ನಡುವೆ, ಸಿರಿವಂತರು ಮತ್ತು ಬಡವರ ನಡುವೆ ಸಾಮರಸ್ಯ ಇರಬೇಕೆನ್ನುವುದನ್ನೇ ಪ್ರಕೃತಿ ಈ ಮೂಲಕ ಕಲಿಸಿಕೊಟ್ಟಿದೆ. ಇದೇ ಮುಂದುವರಿಯಬೇಕು. ವರ್ತಮಾನದ ನೆಮ್ಮದಿ, ಶಾಂತಿ, ಸಾಮರಸ್ಯ, ಸಮನ್ವಯ ಹಾಳುಗೆಡಹುವುದಕ್ಕೆ ಇತಿಹಾಸ ನೆಪವಾಗಬಾರದು. ಜತೆಗೂಡಿ ಬದುಕಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು