ಶುಕ್ರವಾರ, ಮೇ 29, 2020
27 °C
ಸೇನಾನಿಯ ಸ್ವಗತ

ಸೈನಿಕನ ಹೆಂಡತಿಯಾಗಿ ಹೊಂದಾಣಿಕೆಯ ಬದುಕು

ಬ್ರಿಗೇಡಿಯರ್‌ ಐ. ಎನ್‌. ರೈ Updated:

ಅಕ್ಷರ ಗಾತ್ರ : | |

ಹಿರಿಯರ ಒಪ್ಪಿಗೆ, ಅನುರಾಧಾಳೂ ಈ ಸೈನಿಕನನ್ನು ವರಿಸಲು ಒಪ್ಪಿದಳು. ಮದುವೆಯೂ ಆಯ್ತು. ಆದರೆ ಆಗ ನಮಗೊಂದು ಸಮಸ್ಯೆ ಇತ್ತು. ಅದೆಂದರೆ ಮದುವೆಯಾಗಿ ಪತ್ನಿಯೊಂದಿಗೆ ಪಾನಾಗರ್‍ಗೆ ಹೋದರೆ ಅಲ್ಲಿ ನಮಗೆ ನೆಲೆಗೊಳ್ಳಲು ವಸತಿ ವ್ಯವಸ್ಥೆ ಇರಲಿಲ್ಲ. ಹಾಗಾಗಿ ನಾವಿಬ್ಬರೂ ಎರಡು ರೂಂಗಳಿರುವ ಅವಿವಾಹಿತರ ಕೊಠಡಿಯಲ್ಲಿ ಉಳಿಯಬೇಕಾಯ್ತು. ನನ್ನ ಪತ್ನಿಗೋ ಸೈನ್ಯದ ವಾತಾವರಣ ಸಂಪೂರ್ಣ ಹೊಸದು. ಆಕೆಗೆ ಸೈನಿಕರ ಜೀವನದ ಬಗ್ಗೆ ಏನೇನೂ ತಿಳಿದಿರಲೇ ಇಲ್ಲ!. ಅದರಲ್ಲೂ ಬೇರೆ ಬೇರೆ ಭಾಷೆಯ ಜನರು. ಅಂತೂ ಹಾಗೂ ಹೀಗೂ ಆಕೆ ನಿಧಾನಕ್ಕೆ ಹೊಂದಿಕೊಳ್ಳಲಾರಂಬಿಸಿದಳು. ಅಕ್ಕ ಪಕ್ಕದ ಬೇರೆ ಬೇರೆ ಮಹಿಳೆಯರನ್ನು ಸ್ನೇಹಿತೆಯನ್ನಾಗಿಸಿಕೊಂಡು ಸೈನಿಕನ ಹೆಂಡತಿಯ ಬದುಕನ್ನು ಆರಂಭಿಸಿದಳು. ಆಕೆಗೆ ಹಿಂದಿಯೂ ಅಷ್ಟಾಗಿ ಬರುತ್ತಿರಲಿಲ್ಲ. ನಮ್ಮ ಸುತ್ತ ಮುತ್ತ ಇದ್ದುದು ಪಂಜಾಬಿ ಮಾತಾಡುವ ಮಹಿಳೆಯರು. ಅಂತೂ ಈ ಎಲ್ಲಾ ಕಾರಣಗಳೂ ಒಟ್ಟಾಗಿ ಆಕೆ ಪಂಜಾಬಿ ಮಿಶ್ರಿತ ಹಿಂದಿ ಕಲಿಯುತ್ತಾ. ಅವರೊಂದಿಗೆ ಬೆರೆಯಾರಂಭಿಸಿದಳು. ಹೀಗೆ ಅದೇ ಸಂದರ್ಭದಲ್ಲಿ ದೀಪವಳಿಯೂ ಬಂದು, ನಮ್ಮ ವೈವಾಹಿಕ ಜೀವನದ ಮೊದಲ ದೀಪಾವಳಿಯನ್ನು ಪನಾಗರ್‍ನಲ್ಲಿ ಆಚರಿಸಿದೆವು.

ಈ ಸಂದರ್ಭ ಒಂದು ರೀತಿಯಲ್ಲಿ ನಮಗೆಲ್ಲಾ ಒಂದು ಬಿಡುವಿನ ಸಂದರ್ಭವಾಗಿತ್ತು. ಅದೇ ಸಂತಸದಲ್ಲಿ ನಮ್ಮಲ್ಲಿ ಯುದ್ಧದ ಆಟೋಟ ಸ್ಪರ್ಧೆಗಳು, ಮನೋರಂಜನಾ ಸ್ಪರ್ಧೆಗಳೂ ನಡೆದುವು. ಒಂದು ರೀತಿಯ ಸಂತೋಷ, ಸಂಭ್ರಮ ತುಂಬಿದ ವಾತಾವರಣವಾಗಿತ್ತು ಅದು. ಈ ಹಂತದಲ್ಲಿಯೇ ನನಗೆ ಸೈನಿಕ ಸಿಬ್ಬಂದಿಯ ನೇಮಕಾತಿಗಾಗಿ ವರ್ಗಾವಣೆಹೊಂದಬೇಕಾದ ಆದೇಶ ಬಂತು. ನನ್ನ ಕಾರ್ಯಕ್ಷೇತ್ರ ಪನಾಗರ್ ನಿಂದ ಪಠಾಣ್ ಕೋಟ್‍ಗೆ ವರ್ಗವಾಯಿತು. ಮುಂದಿನ ಎರಡು ವರ್ಷ (1978-80) ಪಠಾಣ್ ಕೋಟ್‍ಜೀವನ.

ಭಾರತೀಯಸೇನೆಯೆ ಒಂದು ಅತ್ಯಂತ ಸುಂದರ ಅನುಭವ ಎಂದರೆ ಇಲ್ಲಿ ಮನುಜ ಕುಲವೊಂದೇ ಜಾತಿ!. ಇಲ್ಲಿ ನೀನು ಯಾವ ಜಾತಿ ಎಂದು ಯಾರೂ ಯಾರನ್ನೂ ಕೇಳುವುದಿಲ್ಲ. ಅಲ್ಲಿರುವ ಒಂದೇ ಒಂದು ನಿಯಮ ಎಂದರೆ ನಾವೆಲ್ಲಾ ಒಂದು ಮತ್ತು ದೇಶ ರಕ್ಷಣೆಗೆ ಸಜ್ಜಾದವರು. ಒಂದೇ ನಮ್ಮ ಧ್ಯೇಯ.

ಈ ಎಲ್ಲಾ ಅಂಶಗಳ ಪ್ರಾಮುಖ್ಯತೆ ಮದುವೆಯ ನಂತರ ನಮ್ಮ ಅನುಭವಕ್ಕೆ ಹೆಚ್ಚು ನಿಚ್ಚಳವಾಯಿತು. ಭಾಷೆಯೇ ಬರದ ನನ್ನ ಪತ್ನಿಯನ್ನು ಎಲ್ಲಾ ಯೋಧರ ಕುಟುಂಬ, ಯೋಧರು ಗೌರವದಿಂದ ನೋಡಲಾರಂಭಿಸಿದರು. ವಿಶೇಷವೆಂದರೆ ಪಂಜಾಬಿ, ಹಿಂದಿಗಳ ಪರಿಚಯವೂ ಇಲ್ಲದ ನನ್ನಾಕೆಯ ಪರಿಸ್ಥಿತಿ ಕಂಡ ನನ್ನ ಸವಲತ್ತನ್ನು ಒದಗಿಸುತ್ತಿದ್ದ ಆರ್ಡರ್ಲಿ, ತಾನೇ ಹರಕು ಮುರುಕು ಇಂಗ್ಲೀಷ್‍ನಲ್ಲಿ ಮಾತಾಡಲಾರಂಭಿಸಿದ. ಹೀಗೆ ಅನೇಕ ಹಾಸ್ಯಮಯ ಸನ್ನಿವೇಶಗಳೂ ನಡೆಯುತ್ತಿದ್ದುವು. ಅಂತೂ ನಮ್ಮ ಬದುಕು ಇಲ್ಲಿ ಆರಂಭವಾಯಿತು.

ಎಂದೂ ಜೀವನದ ವೈಚಿತ್ರ್ಯಗಳನ್ನು ಕಾಣದ ನನ್ನ ಪತ್ನಿ ಅಲ್ಲಿ ವಿಚಿತ್ರವಾದ ವಾತಾವರಣವನ್ನು ಎದುರಿಸಬೇಕಾಯಿತು. ಇಲ್ಲಿಚಳಿಗಾಲದಲ್ಲಿ ಮೈ ಕೊರೆಯುವ ಚಳಿ. ಬೇಸಿಗೆಯಲ್ಲಿ ಮೈ ಸುಡುವ ಸೆಖೆ. ಇಂತಹ ವಿಚಿತ್ರ ವಾತಾವರಣದಲ್ಲಿ ದೈಹಿಕ ಆರೋಗ್ಯ, ಸಮತೋಲನ ಕಾಯ್ದುಕೊಳ್ಳುವುವುದೇ ದೊಡ್ಡ ಸವಾಲು. ಚಳಿಗಾಲದಲ್ಲಿ ಆಕೆಯ ಪಾದಗಳು ನೀಲಿಗಟ್ಟುತ್ತಿದ್ದುವು. ಡಿಸೆಂಬರ್-ಜನವರಿಯಲ್ಲಿ ಸೊನ್ನೆ ಡಿಗ್ರಿ ವಾತಾವರಣ. ಈ ಹಂತದಲ್ಲಿ ನಮಗೆ ದೊಡ್ಡ ವಾಸ್ತವ್ಯದ ಕ್ವಾರ್ಟರ್ ಸಿಕ್ಕಿತು. ಈ ಹಂತದಲ್ಲಿ ನಾನೂ ಗಾಲ್ಫ್ ಆಟ ಕಲಿತೆ. ನಮ್ಮನೆಯಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿ ಗಾಲ್ಫ್ ಮೈದಾನ ಇತ್ತು. ಹೀಗೆ ಪಠಾಣ್ ಕೋಟ್ ನಲ್ಲಿನ ನಮ್ಮ ಜೀವನ ಅತ್ಯಂತ ಸ್ಮರಣೀಯ ಜೀವನ. ಎರಡು ವರ್ಷ ಮೂರು ತಿಂಗಳ ಈ ಜೀವನ ನಮ್ಮ ನೆನಪಿನಲ್ಲಿ ಸದಾ ಉಳಿಯುವ ಜೀವನ. ಬೇರೆಡೆಗೆ ಹೋಲಿಸಿದರೆ ಮತ್ತು ನಾನು ಕುಟುಂಬ ಜೀವನ ಆರಂಭಿಸಿದ ಹಿನ್ನೆಲೆಯಲ್ಲಿ ಇಲ್ಲಿ ನನಗೆ ಅನೇಕ ಹೊಸ ಸ್ನೇಹಿತರು ಸಿಕ್ಕಿದರು. ಈ ಸ್ನೇಹ ಎಷ್ಟು ಗಾಢವಾಗಿದೆ ಎಂದರೆ ಈಗಲೂ ನಾವು ಪರಸ್ಪರ ಸಂಪರ್ಕದಲ್ಲಿದ್ದೇವೆ. ಸ್ನೇಹದಲ್ಲೂ ಅಘೋಷಿತವಾದ ಒಂದು ನಿಯಮ ಪಾಲಿಸುತ್ತೇವೆ. ಅದೆಂದರೆ ಒಮ್ಮೆ ಸ್ನೇಹ ಆದರೆ ಅದು ಜೀವನ ಪರ್ಯಂತ!.

ಬೇರೆ ಬೇರೆ ಭಾಷೆಗಳಿರುವ ಪತ್ರವನ್ನು ಓದಲು ಸಂಬಂಧಿಸಿದ ಭಾಷೆಯವರೇ ಇರುತ್ತಾರೆ. ನಾವು ಸೈನ್ಯದಲ್ಲಿರುವ ಹೊತ್ತಿನಲ್ಲಿ ನಮ್ಮಿಂದ ಪರಿವಾರಕ್ಕೆ ಬರುತ್ತಿದ್ದು ಕೇವಲ ಒಳ್ಳೆಯ ಸುದ್ದಿಗಳು ಮಾತ್ರ!. ಏನೂ ಸುದ್ದಿ ಇಲ್ಲ ಎಂದರೆ ನಮ್ಮನೆಯ ಯೋಧ ಆರಾಮವಾಗಿದ್ದಾನೆ ಎಂದೇ ತಿಳಿಯುತ್ತಿದ್ದರು!. ಏನಾದರೂ ಸುದ್ದಿ ಬಂದರೆ-ಸಂಭವಿಸಬಾರದ್ದು ಏನೋ ಆಗಿದೆ ಎಂದೇ ಸಂದೇಶ.

ಪರಿಸ್ಥಿತಿ ಎಲ್ಲವೂ ಸರಿ ಇದ್ದರೆ ವರ್ಷದಲ್ಲಿ ಎರಡು ತಿಂಗಳು ರಜೆ ಇರುತ್ತಿತ್ತು. ಇಪ್ಪತ್ತು ರಜೆ ಮಾಡ ಬಹುದಿತ್ತು!. ಅದೂ ಹೆಚ್ಚೆಂದರೆ ಒಮ್ಮೆಗೆ ಎರಡು ವಾರ ಮಾತ್ರ ತೆಗೆದುಕೊಳ್ಳ ಬಹುದಿತ್ತು!. ಸೈನ್ಯದಲ್ಲಿರುವ ದಕ್ಷಿಣ ಭಾರತೀಯರಿಗೆ ಯಾವಾಗಲೂ ಕಷ್ಟವೇ. ದೂರದಿಂದ ಬಂದು ಹೋಗಲೇ ದಿನಗಟ್ಟಲೇ ಹಿಡಿಯುತ್ತಿತ್ತು.  ಸೋಜಿಗ ಎಂದರೆ ದಿನಗಟ್ಟಲೇ ಪ್ರಯಾಣದ ನಂತರ ನಾವು ಊರಿಗೆ ತಲುಪಿದರೆ, ಮತ್ತೆ ಹೊರಡುವ ಸಮಯ ಬಂದಿರುತ್ತದೆ. ಯಾಕೆಂದರೆ  ನಮ್ಮ ರಜೆ ಮುಗಿವಾಗಲೂ ಸಮಯಕ್ಕೆ ಸರಿಯಾಗಿ ಟ್ರಾನ್ಸಿಟ್ ಕ್ಯಾಂಪ್ ತಲುಪಬೇಕು.

ಹೀಗೆ ಇದೇ ಸಂದರ್ಭದಲ್ಲಿ ಊರಿನಿಂದ ಬರುವ ಪತ್ರ, ಅಕಸ್ಮಾತ್ ನಮ್ಮ ಕೈಗೆ ಸಿಕ್ಕಿದರೆ ನಮ್ಮ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ. ನಮ್ಮ ಕುಟುಂಬವರ್ಗದಿಂದ ಬರುವ ಪತ್ರಗಳು ಸ್ಕಾನ್ ಆಗುತ್ತಿರಲಿಲ್ಲ. ಯಾಕೆದರೆ ಎಲ್ಲರಿಗೂ ಗೊತ್ತು ಅದರಲ್ಲಿರುವ ವಿಷಯಗಳು ಸಾಮಾನ್ಯ ವಿಷಯಗಳಾಗಿರುತ್ತವೆ. ಯಾರದ್ದೋ ಮದುವೆ, ಮನೆಯಲ್ಲಿ ಆರ್ಥಿಕ ಅಡಚಣೆ, ಕಾಳಜಿ..ಹೀಗೆ.

ಇಂತಹ ಬದುಕಿನೊಂದಿಗೆ ಒಪ್ಪಂದವಾಗಿರುವಾಗಲೇ ಆರಂಭವಾಗಿದ್ದು ನಮ್ಮ ಲಡಾಕ್ ಜೀವನ!.

ಇದನ್ನು ದೀಪಗಳ ನಾಡು ಎನ್ನುತ್ತಾರೆ. ಬೆಳದಿಂಗಳ ನಾಡೂ ಹೌದು.
ಲೆಹ್ ಎನ್ನುವುದು ಲಡಾಕ್ ಜಿಲ್ಲೆಯ ರಾಜಧಾನಿ. ಇಲ್ಲಿಗೆ ಎಲ್ಲೆಡೆಯಿಂದಲೂ ರಸ್ತೆ ಸಂಪರ್ಕವಿದೆ. ಶ್ರೀನಗರ, ಝೊಝಿಲಾ ಪಾಸ್, ಕಾರ್ಗಿಲ್, ಚಂಡೀಗಡ್, ಮನಾಲಿ, ಉಪ್ಶಿ...ಹೀಗೆ ಎಲ್ಲೆಡೆಯಿಂದಲೂ ಸಂಪರ್ಕ ಇರುವ ಅತ್ಯಂತ ಸುಂದರ ನಗರ ಲೆಹ್. ವಾಯುಪಡೆಯ ಸಾಗಾಣಿಕಾ ವ್ಯವಸ್ಥೆಯ ಭಾಗವಾಗಿಯೂ ಚಂಡೀಗಡ್ ನಿಂದ ಹಾಗೂ ಭಾರತೀಯ ವಾಯು ಯಾನದ ಸಂಪರ್ಕವನ್ನೂ ಈ ನಾಡು ಹೊಂದಿದೆ.

ಮುಂದಿನ ವಾರ : ಬೆಳದಿಂಗಳ ನಾಡಿನಲ್ಲಿ ಬದುಕು

ನಿರೂಪಣೆ: ಅರೆಹೊಳೆ ಸದಾಶಿವರಾವ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು