ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಸಾಧನೆಯ ಮೇಲ್ಮೆಗೆ ಮಾದರಿಗಳ ಹುಡುಕಾಟ

ದಧಿಗಿಣತೋ
Last Updated 31 ಆಗಸ್ಟ್ 2018, 12:14 IST
ಅಕ್ಷರ ಗಾತ್ರ

ಕಲಾವಿದ ಸ್ನೇಹಿತರೋರ್ವರನ್ನು – ಕಲಾವಿದರೆಲ್ಲರೂ ಸ್ನೇಹಿತರೇ - ಎಂದಿನ ಚಾಳಿಯಂತೆ ಮಾತನಾಡಿಸಿದೆ! ಮಾತಿನ ಮಧ್ಯೆ ‘ಯಕ್ಷಗಾನವೆಂದರೇನು?’ ಪ್ರಶ್ನೆ ಇಣುಕಿತು. ತುಂಬಾ ಸಹಜವಾಗಿ, ಸರಳವಾಗಿ ಹೇಳಿದರು, “ಯಕ್ಷಗಾನವೆಂದರೆ ತಾಳಮದ್ದಳೆಯಲ್ಲಿ ಅರ್ಥಹೇಳುವುದು, ಆಟದಲ್ಲಿ ವೇಷ ಮಾಡುವುದು. ನಾಟ್ಯ ಕ್ಲಾಸ್ ಮಾಡುವುದು, ಒಂದಷ್ಟು ಸಂಮಾನಗಳು.. ಇದಕ್ಕಿಂತ ಆಚೆಗೆ ಏನಿದೆ?” ಅವರ ಬೌದ್ಧಿಕತೆಯ ವ್ಯಾಪ್ತಿಯಲ್ಲಿ ಮೇಲ್ನೋಟಕ್ಕೆ ಫಕ್ಕನೆ ಸರಿಯೆಂದು ತೋರುವಂತಿದೆ ಅಲ್ವಾ!

ಆಟ, ಕೂಟದಲ್ಲಿ ಭಾಗವಹಿಸಿದಾಗಲೆಲ್ಲಾ ಇವರ ಉತ್ತರವು ಕಾಡುತ್ತಿತ್ತು. ಅವರು ಹೇಳಿದಷ್ಟು ಯಕ್ಷಗಾನದ ಸೀಮಾವ್ಯಾಪ್ತಿಯಲ್ಲ. ಬಹುತೇಕ ಕಲಾವಿದರ ದೃಷ್ಟಿಯಲ್ಲಿ ಯಕ್ಷಗಾನವೆಂದರೆ ಅಷ್ಟೇ! ಯಾಕೋ ಗೊತ್ತಿಲ್ಲ. ಈ ಸೀಮೆಯೊಳಗೆ ತಮ್ಮನ್ನು ತಾವೇ ಬಂಧಿಸಿದ್ದರಿಂದಲೇ? ಇಷ್ಟು ಸಾಕು ಎಂಬ ಸ್ವ-ನಿರ್ಧಾರವೇ? ತಾನು ಬೆಳೆದಿರುವುದೇ ಪರಮೋಚ್ಛ. ಅದಕ್ಕಿಂತ ಹೆಚ್ಚು ಬೆಳೆಯಲು ಜಾಗವಿಲ್ಲವೆಂದೋ? ಹಾಗಾದರೆ ಏನೂ ವ್ಯವಸ್ಥೆಗಳಿಲ್ಲದ ಕಾಲಮಾನದಲ್ಲಿ ಹಿರಿಯರೊಳಗೆ ಯಕ್ಷಗಾನವು ಬದ್ಧತೆಯ ಕೋಶವಾಗಿ ಬೆಳೆದಿತ್ತಲ್ಲಾ. ತಾವು ಬೆಳೆದಿರುವುದು ಸಾಲದು, ಇನ್ನೂ ಇದೆ ಎನ್ನುತ್ತಿದ್ದರಲ್ಲಾ...!

ಬಹುಕಾಲದಿಂದ ಶೂನ್ಯವೇಳೆಯ ಇಂತಹ ಪ್ರಶ್ನೆಗಳಿಗೆ ಗೋಜಲು ಉತ್ತರಗಳಿಂದ ಚಡಪಡಿಸುತ್ತಿದ್ದೆ. ಕೇವಲ ಆಟ, ಕೂಟವಾದರೆ ಯಕ್ಷಗಾನ ಒಂದು ಸಾಂಸ್ಕೃತಿಕ ಕಾರ್ಯಕ್ರಮ. ಅದರಾಚೆಗಿನ ಶ್ರೀಮಂತಿಕೆ, ಆರಾಧನೆ, ವೈಭವಗಳು, ಕಲಾವಿದರ ನಿಜ ಅಭಿವ್ಯಕ್ತಿಗಳು, ರಂಗದ ಬೆರಗುಗಳು ಇವೆಯಲ್ಲಾ. ಇವನ್ನೆಲ್ಲಾ ‘ಗೌಜಿ, ಗಮ್ಮತ್ತು’ ಆಗಿ ಸ್ವೀಕರಿಸಿದ ಮನಸ್ಥಿತಿಯೇ ವ್ಯಾಪ್ತಿ ನಿರ್ಣಯಕ್ಕೆ ತೊಡಕಾಗಿದೆ. ಈ ವಿಚಾರಗಳು ರಿಂಗಣಿಸುತ್ತಿರುವಾಗ ಬಹುಕಾಲದಿಂದ ಕೈತಪ್ಪಿದ ಪುಸ್ತಕವೊಂದು ಸಿಕ್ಕಿತು. ಪುಸ್ತಕದ ಲೇಖಕ - ಅಧ್ಯಾಪಕ, ಕಲಾವಿದ, ಲೇಖಕ ಕೀರ್ತಿಶೇಷ ಪು.ಶ್ರೀನಿವಾಸ ಭಟ್ ಕಟೀಲು.

ಸುಮಾರು ನೂರ ಅರುವತ್ತು ಪುಟದ ‘ಯಕ್ಷಗಾನದ ಕಲಾವಿದರು’ ಕೃತಿಯು ನಾಲ್ಕೂವರೆ ದಶಕಗಳ ಹಿಂದೆ ಪ್ರಕಾಶನಗೊಂಡಿತ್ತು. ಇಪ್ಪತ್ತಮೂರು ಕಲಾವಿದರ ಬಣ್ಣದ ಬದುಕಿನ ಗಾಥೆ. ಒಂದು ಕಾಲಘಟ್ಟದ ರಂಗ ಸೊಬಗಿನ ಕನ್ನಡಿ. ಈಗಿನಂತೆ ‘ಫಿನಿಶಿಂಗ್’ ಯಾ ‘ಅಂದ’ ಇಲ್ಲದೇ ಇರಬಹುದು. ಆದರಲ್ಲಿ ರಂಗದ ಅಂದವಿತ್ತು. ರಂಗಸುಖವಿತ್ತು. ಸಾಧಿಸಿದ ತೃಪ್ತಿಯಿತ್ತು.

ಪುಸ್ತಕದ ಮರುಓದು ಮುಗಿಸಿದಾಗ ಯಕ್ಷಗಾನದ ವ್ಯಾಪ್ತಿಯ ಅಗಾಧತೆಯನ್ನು ಎತ್ತರದ ಜಾಗದಲ್ಲಿ ನಿಂತು ಗಟ್ಟಿಯಾಗಿ ಕೂಗಬೇಕೆಂದೆನಿಸಿತು! ನಾವೆಲ್ಲಾ ‘ಸೇವೆ, ಸಾಧನೆ, ಕೊಡುಗೆ’ ಶಬ್ದಗಳನ್ನು ಯಕ್ಷಗಾನದೊಂದಿಗೆ ‘ಅರ್ಥಶೂನ್ಯ’ವಾಗಿ ಹೊಸೆಯುತ್ತೇವಲ್ಲಾ, ಇಂತಹ ಬಲವಂತದ ಹೊಸೆಯುವಿಕೆಯು ಈ ಇಪ್ಪತ್ತಮೂರು ಮಂದಿಯ ಕಲಾಯಾನದಲ್ಲಿ ನುಸುಳಲಿಲ್ಲ! ಬಿರುದುಗಳು ಥಳಕು ಹಾಕಲಿಲ್ಲ. ಅವರೆಲ್ಲಾ ತುಂಬಿದ ಕೊಡ. ಅದು ಸದ್ದು ಮಾಡುವುದಿಲ್ಲ! ಸುದ್ದಿಯಾಗುವುದಿಲ್ಲ. ಬದ್ಧತೆಯ ಕವಚದೊಳಗೆ ಮೇಲ್ಮೆಯನ್ನು ಸಾಧಿಸುತ್ತಾ ಹರಿದು ಬಂದ ಕಲಾ ಸಂಸ್ಕøತಿಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಜವಾಬ್ದಾರಿಯಿತ್ತು.

ನಾನು ‘ಹಿಂದಿನದ್ದು ಸರಿ, ಈಗಿನದ್ದು ಅಲ್ಲ’ ಎನ್ನುವ ಸ್ಥಾಪನೆಯ ಕೆಟ್ಟ ಹಠಕ್ಕೆ ಬಿದ್ದವನಲ್ಲ. ವರ್ತಮಾನದ ರಂಗದಲ್ಲೂ ಬದ್ಧತೆಯಿರುವ ಕಲಾವಿದರ ಕಾಳಜಿ, ಪ್ರೀತಿಯೇ ಜೀವಂತಿಕೆಯ ಒಳಸುರಿಯಾಗಿದೆ. ಹಿಂದಿನವರು ರಂಗದಲ್ಲಿ, ವೈಯಕ್ತಿಕ ಬದುಕಿನಲ್ಲಿ ಅನುಸರಣೆಯ ‘ಮಾದರಿ’ಗಳನ್ನು ಹುಟ್ಟುಹಾಕಿದರು. ವರ್ತಮಾನವು ಮಾದರಿಗಳನ್ನು ಸೃಷ್ಟಿಸುವುದು ಬಿಡಿ, ಹಿಂದಿನವರು ಸ್ಥಾಪಿಸಿದ ಮಾದರಿಗಳನ್ನು ನೋಡುವಷ್ಟೂ, ಅಭ್ಯಸಿಸುವಷ್ಟೂ ಔದಾಸೀನ್ಯವಾಗುವುದು ವಿಷಾದಕರ. ಇಷ್ಟು ಹೇಳುವಾಗ ಮಾದರಿಗಳು ಎಲ್ಲಿವೆ? ಎನ್ನುವ ಪ್ರಶ್ನೆ ಎದುರಾಗುತ್ತದೆ. ಆಟ, ಕೂಟ, ತರಬೇತಿಗಳ ಹೊರತಾದ ವ್ಯಾಪ್ತಿ ಇದೆಯಲ್ಲಾ, ಅದರೊಳಗೆ ಮಾದರಿಗಳು ಕೈಗೆ ಎಟಕುತ್ತವೆ.

“ಯಕ್ಷಗಾನವು ನಾಡಿನ ಸರ್ವಾಂಗ ಸುಂದರ ಕಲೆ. ಇತ್ತೀಚೆಗೆ ಇದು ಪಂಡಿತರ ಗಮನವನ್ನೂ ಸೆಳೆದುಕೊಂಡು, ಲೋಕ ಪ್ರಖ್ಯಾತಿವನ್ನು ಪಡೆಯುವಷ್ಟು ಪ್ರಾದುರ್ಭಾವವನ್ನು ಹೊಂದಿದೆ ಎಂಬುದು ಅಭಿಮಾನಾಸ್ಪದ. ಇದರ ಉಳಿಯುವಿಕೆಗೆ ಹಲವರು ಹಲವು ವಿಧದಿಂದ ಪ್ರಯತ್ನಿಸಿದರು. ಯಕ್ಷಗಾನ ಕಲಾವಿದರು ಈ ದಿಸೆಯಲ್ಲಿ ಮಾಡಿದ ಸಾಹಸ ಗುರುತರವಾದುದು. ಕಲೆಯ ಮೇಲಿನ ಅಭಿಮಾನ ವೃದ್ಧಿಸಿಕೊಂಡು ಬಂದಂತೆ, ಕಲಾವಿದರೂ ಸಾಮಾಜಿಕರಿಂದ ಅಲ್ಲಲ್ಲಿ ಗೌರವಿಸಲ್ಪಡುತ್ತಿರುವುದು ಸಂತಸದ ವಿಷಯ.’’ಪು. ಶ್ರೀನಿವಾಸ ಭಟ್ಟರು ‘ಯಕ್ಷಗಾನ ಕಲಾವಿದರು’ ಪುಸ್ತಕದಲ್ಲಿ 15-11-1973ರಂದು ಬರೆದ ಆಶಯ.

ಶ್ರೀನಿವಾಸ ಭಟ್ಟರ ಒಡನಾಡಿ ಕೀರ್ತಿಶೇಷ ಪುಚ್ಚೆಕೆರೆ ಕೃಷ್ಣ ಭಟ್ಟರು ಬರೆಯುತ್ತಾರೆ, “ಕಲೆಗಾಗಿ ಕಲೆ – ಎಂಬ ಕಾಲ ಕಳೆದು ಜೀವನಕ್ಕಾಗಿ ಕಲೆ ಎಂಬ ಯುಗ ಆರಂಭವಾಗಿದೆ. ಈ ಕಾಲದಲ್ಲಿ ಕಲಾವಿದನ ಜೀವನ ಪರಿಚಯವು ಕಲೆಯ ಪರಿಚಯಕ್ಕೆ ಪೂರಕವಾಗಿದೆ. ಪುಸ್ತಕ ಪ್ರಕಟಣೆಯ ಮೂಲಕ ಕಲಾವಿದರನ್ನು ಗೌರವಿಸಿದಂತಾಗುವುದು, ಕಲೆಯನ್ನು ಆರಾಧಿಸಿದಂತಾಗುವುದು.” ಆಗೆಲ್ಲಾ ಪತ್ರಿಕೆಗಳಲ್ಲಿ ಕಲಾವಿದರ ಕುರಿತಾದ ಪರಿಚಯ ಲೇಖನದ ತಯಾರಿಯ ಪಾಡು ತನುಶ್ರಮವನ್ನು ಬೇಡುವಂತಹುದು. ಸಂಪರ್ಕ ವ್ಯವಸ್ಥೆಗಳಿಲ್ಲದ ಸಮಯದಲ್ಲಿ ಶ್ರೀನಿವಾಸ ಭಟ್ಟರು ಕಲಾವಿದರನ್ನು ಸಂಪರ್ಕಿಸಿ, ಮಾಹಿತಿಯನ್ನು ಕಲೆ ಹಾಕಿ, ಕಲಾವಿದರ ಕುರಿತಾದ ತನ್ನ ಸ್ವಾನುಭವವನ್ನು ಮಿಳಿತಗೊಳಿಸಿದ ಕೃತಿಯು ಮಹತ್ತಾಗಿ ಕಾಣುತ್ತದೆ. ಪುಸ್ತಕದ ಕೆಲವು ಝಲಕ್‍ಗಳು ನಿಮಗಾಗಿ –ಭಾಗವತ ಪುತ್ತಿಗೆ ರಾಮಕೃಷ್ಣ ಜೋಯಿಸರ ಪರಿಚಯ ಬರೆಹದಲ್ಲಿ ಶ್ರೀನಿವಾಸ ಭಟ್ಟರು ಆಗಿನ ಸಹಜ ಸಂಮಾನದ ವೈಖರಿಯನ್ನು ಉಲ್ಲೇಖಿಸುತ್ತಾರೆ.

‘ಜೋಯಿಸರ ಘನತೆ ಸಾಮಾನ್ಯವಾದುದಲ್ಲ. ನಮ್ಮ ಪುರಾಣದ ಕಥಾಭಾಗಗಳು ಇವರಿಗೆ ರಕ್ತಗತ. ಸುಮಾರು ನೂರು ಪ್ರಸಂಗಗಳು ಕಂಠಪಾಠ. ಆಶುಕವಿ. ನೂರು ಪ್ರಸಂಗಗಳ ರಚಯಿತರು. ಅವರು ಕೂಡ್ಲು ಮೇಳದಲ್ಲಿದ್ದಾಗ ಮುಳಿಯಾರು ವಾಸುದೇವ ಬಳ್ಳುಳ್ಳಾಯರು ಚಿನ್ನದ ಜೋಡು ಬಳೆಗಳನ್ನು ಕೈಗೆ ತೊಡಿಸಿ ಗೌರವಿಸಿದ್ದಾರೆ. ಕಾಸರಗೋಡಿನಲ್ಲಿ ಮಹಾಭಾರತ ಪ್ರಸಂಗವನ್ನು ಆಡಿಸಿದಾಗ ಚಿನ್ನದ ಬಳೆಯು ಬಹುಮಾನ ರೂಪದಲ್ಲಿ ದೊರೆತಿದೆ. ಮಂಗಳೂರಿನಲ್ಲಿ ಸ್ವರ್ಣಪದಕ, 1947ರಲ್ಲಿ ಕಾಸರಗೋಡಿನಲ್ಲಿ ಜರುಗಿದ ಮೂವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, 1965ರಲ್ಲಿ ಮಧೂರು ಕೋಟಿ ನಾಮಾರ್ಚನೆ ಸಂದರ್ಭದಲ್ಲಿ, 1966ರಲ್ಲಿ ಪುತ್ತಿಗೆ ಕುಮಾರ ಸ್ವಾಮಿ ಯಕ್ಷಗಾನ ಕಲಾ ಮಂಡಳಿಯವರಿಂದ.... ಸಂಮಾನ, ಪುರಸ್ಕಾರಗಳನ್ನು ಪಡೆದಿದ್ದರು.’

ಮವ್ವಾರು ಕಿಟ್ಟಣ್ಣ ಭಾಗವತರ ಕಲಾಯಾನ ಗಮನಿಸಿ. ’ಇವರದು ಅಪೂರ್ವ ಕವಿತಾ ಶಕ್ತಿ. ಪುಸ್ತಕ ನೋಡದೆ ಹಾಡುವ ರೂಢಿಯಿದ್ದ ಅವರ ತಿರುಗಾಟದ ಕಾಲದಲ್ಲಿ ನಿಂತಲ್ಲೇ ಪದ್ಯ ರಚಿಸಿ ಲಕ್ಷಣಬದ್ಧವಾಗಿ ಹಾಡುತ್ತಿದ್ದರು. ಅವರು ವಾರಿಜ ಪುರಾಣಾಂತರ್ಗತವಾದ ‘ಕನಕಮಾಲಿನಿ ಪರಿಣಯ’ ಪ್ರಸಂಗವನ್ನು ರಚಿಸಿದ್ದರು.’ ಮುಂದೆ ಅಡೂರು ಬಳಕಿಲ ವಿಷ್ಣಯ್ಯರ ಕವಿತಾ ಶಕ್ತಿಯನ್ನು ಬರೆಯುತ್ತಾರೆ, ’ಅವರೊಬ್ಬ ವರಕವಿ. ದಶಾವತಾರ, ಕುರುಕ್ಷೇತ್ರ, ದೇವಿಮಹಾತ್ಮೆ, ಪರಶುರಾಮ ಕ್ಷೇತ್ರೋತ್ಪತ್ತಿ, ದೇವಪಾಂಡ್ಯ ಪ್ರತಾಪ, ಶಲ್ಯಾವಸಾನ, ವೀರ ಮಕರಾಕ್ಷ, ಸಹದೇವ ವಿಜಯ, ಭಕ್ತ ಮಾರ್ಕಂಡೇಯ, ಜರಾಸಂಧ ವಧೆ, ಸುಭದ್ರಾ ಪರಿಣಯ.. ಪ್ರಸಂಗಗಳ ರಚಯಿತರು.’

ಮದವೂರು ನಾರಾಯಣ ಹಾಸ್ಯಗಾರರ ರಂಗ ಬದುಕಿನ ಮಾನ-ಸಂಮಾನಗಳು ಹೀಗಿವೆ – ’ಮಂಗಳೂರಿನಲ್ಲಿ ಜರುಗಿದ ಜೋಡಾಟದಲ್ಲಿ ಹಾಸ್ಯಗಾರರ ಅಭಿನಯಕ್ಕೆ ಮನಸೋತ ಆಗಿನ ಜಿಲ್ಲಾಧಿಕಾರಿಗಳು ಸಭೆಯಿಂದೆದ್ದು ಬಂದು ಹಸ್ತಲಾಘವನ್ನಿತ್ತು ‘ಹಾಸ್ಯಪಟು ನಾರಾಯಣ ರಾವ್’ ಎಂಬ ಬಿರುದು ನೀಡಿ ರಜತ ಪದಕವನ್ನಿತ್ತು ಕೊಂಡಾಡಿದ್ದರು. ಕಟೀಲು ಮೇಳದಲ್ಲಿದ್ದಾಗ ವೇದಮೂರ್ತಿ ಗೋಪಾಲಕೃಷ್ಣ ಆಸ್ರಣ್ಣರು ಒಂದು ವಾಸ್ಕೋಟನ್ನು ಮಾಡಿಸಿಕೊಟ್ಟಿದ್ದರು. ಅದರಲ್ಲಿ ಐವತ್ತಕ್ಕಿಂತಲೂ ಹೆಚ್ಚು ಚಿನ್ನ, ಬೆಳ್ಳಿಯ ಪದಕಗಳನ್ನು ಜೋಡಿಸಲಾಗಿತ್ತು. ಕಟೀಲು ದೇವಳದ ಆಡಳಿತ ಮೊಕ್ತೇಸರ ಕೆ. ಶ್ರೀಧರ ಶೆಟ್ಟರು, ನಡ್ಡೋಡಿಗುತ್ತು ಪದ್ಮನಾಭ ಶೆಟ್ಟರು ಸ್ವರ್ಣ ಪದಕವನ್ನಿತ್ತು ಬಹುಮಾನಿಸಿದ್ದರು. ಧರ್ಮಸ್ಥಳ ಮಂಜಯ್ಯ ಹೆಗ್ಗಡೆಯವರು ಒಂದೂವರೆ ಪವನಿನ ಮಾಲಿಕೆಯನ್ನಿಟ್ಟು ಹರಿಸಿದ್ದರು. ಬೊಂಬಾಯಿಯ ಬಿಲ್ಲವ ಸಂಘದವರು ಉಂಗುರ, ಸ್ವರ್ಣಪದಕ ನೀಡಿದ್ದು ಸ್ಮರಣೀಯವಾಗಿದೆ.’

ಹೀಗೆ ಒಬ್ಬೊಬ್ಬರ ಕಲಾಯಾನದಲ್ಲಿ ಮಾನ-ಸಂಮಾನಗಳು, ಸಾಧನೆ-ಕೊಡುಗೆಗಳು ದಾಖಲಾಗಿವೆ. ಸಂಘಟಕರು, ಅಭಿಮಾನಿಗಳು ಕಲಾವಿದರ ಅಪ್ಪಟ ಪ್ರತಿಭೆಗೆ ಮಾನವನ್ನು ಸಲ್ಲಿಸುವ ಆರ್ಧ ಶತಮಾನದ ಹಿಂದಿನ ಕಲಾ ಮನಸ್ಸುಗಳಲ್ಲಿ ಕಲೆಯನ್ನು ಬೆಳಗಿಸುವ, ಕಲಾವಿದರನ್ನು ಮಾನಿಸುವ ಮನಸ್ಥಿತಿಯಿದ್ದುದನ್ನು ಗಮನಿಸಬಹುದು. ಇದಲ್ಲವೇ ಮಾದರಿಗಳು? ಯಾರೂ ಕೂಡಾ ‘ತಮಗೆ ಸಂಮಾನ ಮಾಡಿ’ ಎಂದು ಸಂಘಟಕರನ್ನು ಗೋಗರೆದವರಲ್ಲ! ’ನಮ್ಮ ಪಾಡಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಆ ರಂಗವೇ ಗೌರವ ತಂದುಕೊಡುತ್ತದೆ,’ ಎಂದಿದ್ದ ಕೇದಗಡಿ ಗುಡ್ಡಪ್ಪ ಗೌಡರು ನೆನಪಾಗುತ್ತಾರೆ.

ವೇಷ, ಅರ್ಥಗಾರಿಕೆಯ ಹೊರತಾದ ರಂಗ ಬದ್ಧತೆ, ಸಾಮಾಜಿಕ ನ್ಯಾಯ, ವ್ಯಕ್ತಿತ್ವ ವಿಕಸನ, ಬೌದ್ಧಿಕ ಅಭಿವೃದ್ಧಿ.. ಈ ಶಬ್ದಗಳನ್ನು ಉಚ್ಛರಿಸದೆ ಅದರಂತೆ ಬಾಳಿದವರು. ದೀವಿಗೆಯಾದವರು. ಮಾದರಿಗಳನ್ನು ಸೃಷ್ಟಿಸಿದವರು. ರಂಗಕ್ಕೆ ಅಂಜಿ, ಸಮಾಜಕ್ಕೆ ಗೌರವಕೊಟ್ಟು ರಂಗದಲ್ಲಿ ರಂಗಸುಖವನ್ನು ಅನುಭವಿಸಿದ ಇವರೆಲ್ಲರ ಅನುಭವಗಳನ್ನು ಓದುತ್ತಾ ಓದುತ್ತಾ ಕುಬ್ಜನಾಗಿದ್ದೇನೆ. ಲೇಖನಾರಂಭದಲ್ಲಿ ಉಲ್ಲೇಖಿಸಿದ ಕಲಾವಿದ ಮಿತ್ರರಿಗೆ ಶ್ರೀನಿವಾಸ ಭಟ್ಟರ ಪುಸ್ತಕವನ್ನು ಓದಲು ನೀಡಬೇಕೆಂದು ನಿಶ್ಚಯಿಸಿದ್ದೇನೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT