ನಾಡದೇವಿ ಆರಾಧನೆಗೆ ದಿನಗಣನೆ; ಎಲ್ಲೆಲ್ಲೂ ಭಕ್ತಿಯ ಸಮಾರಾಧನೆ

7
ಶರನ್ನವರಾತ್ರಿಗೆ ನವ ವಧುವಿನಂತೆ ಶೃಂಗಾರಗೊಳ್ಳುತ್ತಿರುವ ಐತಿಹಾಸಿಕ ಗುಮ್ಮಟ ನಗರಿ

ನಾಡದೇವಿ ಆರಾಧನೆಗೆ ದಿನಗಣನೆ; ಎಲ್ಲೆಲ್ಲೂ ಭಕ್ತಿಯ ಸಮಾರಾಧನೆ

Published:
Updated:
Deccan Herald

ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶ್ರದ್ಧಾ ಭಕ್ತಿಯ ಶರನ್ನವರಾತ್ರಿ ಆಚರಣೆಗೆ ಸಿದ್ಧತೆಗಳು ಬಿರುಸಿನಿಂದ ನಡೆದಿವೆ. ನಾಡದೇವಿ ಪ್ರತಿಷ್ಠಾಪನೆ, ಆರಾಧನೆಗೆ ದಿನಗಣನೆ ನಡೆದಿದೆ.

ಇದೀಗ ಎತ್ತ ನೋಡಿದರೂ ದೇವಿಯ ವೈಭವ ಅನಾವರಣಗೊಳ್ಳುತ್ತಿದೆ. ಗಲ್ಲಿ–ಗಲ್ಲಿ, ಓಣಿ–ಓಣಿಗಳಲ್ಲಿ ಗಣಪನ ವೈಭವದ ಗದ್ದಲ ಮರೆಯಾಗಿ 15–20 ದಿನ ಕಳೆಯುವುದರೊಳಗಾಗಿ ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಆದಿಶಕ್ತಿ ಪ್ರತಿಷ್ಠಾಪನೆಯ ಸಿದ್ಧತೆ ಭರದಿಂದ ನಡೆದಿದೆ.

ಬಹುತೇಕ ದೇಗುಲ ನವೀಕರಣಗೊಂಡಿವೆ. ಸುಣ್ಣ–ಬಣ್ಣದಿಂದ ಕಂಗೊಳಿಸುತ್ತಿವೆ. ದೇವಿಯ ಪ್ರತಿಷ್ಠಾಪನೆಗಾಗಿ ಪ್ರತ್ಯೇಕ ಪೆಂಡಾಲ್‌ನ ನಿರ್ಮಾಣ ಎಲ್ಲೆಡೆ ಭರದಿಂದ ನಡೆದಿದೆ. ಮಂಗಳವಾರ ರಾತ್ರಿಯಿಂದ ಝಗಮಗಗೊಳಿಸುವ ವಿದ್ಯುತ್ ದೀಪಾಲಂಕಾರ ಕಣ್ಮನ ಸೆಳೆಯಲಿದೆ.

ಮಂಗಳವಾರ ಮಹಾಲಯ ಅಮಾವಾಸ್ಯೆ. ಶನಿವಾರ ನಾಡದೇವಿ ಪ್ರತಿಷ್ಠಾಪನೆಗೊಳ್ಳಲಿದ್ದು, ಒಂಭತ್ತು ದಿನ ದೇವಿ ಆರಾಧನೆ ಎಲ್ಲೆಡೆ ಶ್ರದ್ಧಾಭಕ್ತಿಯಿಂದ ನಡೆಯಲಿದೆ.

ನಂದಾದೀಪ: ಮಹಾಲಯ ಅಮಾವಾಸ್ಯೆಯ ಪೂಜೆ ಮುಗಿಯುತ್ತಿದ್ದಂತೆ, ಅಸಂಖ್ಯಾತ ಭಕ್ತರ ಮನೆಗಳಲ್ಲಿ ದೇವಿ ಪ್ರತಿಷ್ಠಾಪನೆಯ ಸಿದ್ಧತಾ ಕಾರ್ಯ ಬಿರುಸುಗೊಳ್ಳಲಿದೆ. ಈಗಾಗಲೇ ಹಲವರು ನಿತ್ಯ ಒಂದೊಂದು ಕಾಯಕವನ್ನು ಪೂರ್ಣಗೊಳಿಸುತ್ತಿರುವುದು ಎಲ್ಲೆಡೆ ಗೋಚರಿಸುತ್ತಿದೆ. ಬುಧವಾರ ಪ್ರತಿಷ್ಠಾಪನೆಗೊಳ್ಳುವ ದೇವಿ ಒಂಭತ್ತು ದಿನ ಭಕ್ತರ ಮನೆ–ಮನದಲ್ಲಿ ಶ್ರದ್ಧಾಭಕ್ತಿಯಿಂದ ಪೂಜೆಗೊಳಪಡುವಳು.

ಈಗಾಗಲೇ ದೇವಿ ಪ್ರತಿಷ್ಠಾಪನೆಯ ಸಿದ್ಧತೆಗಳು ಭರದಿಂದ ನಡೆದಿವೆ. ತಿಂಗಳ ಹಿಂದಷ್ಟೇ ಗಣಪನ ಪ್ರತಿಷ್ಠಾಪನೆಗಾಗಿ ಮನೆ ಸ್ವಚ್ಛಗೊಳಿಸಿದ್ದ ಗೃಹಿಣಿಯರು, ಇದೀಗ ಮತ್ತೆ ದೇವರ ಕೋಣೆ, ಅಡುಗೆ ಕೋಣೆಯ ಸ್ವಚ್ಛತೆ ಕೆಲಸ ನಡೆಸಿದ್ದಾರೆ. ಮಂಗಳವಾರದೊಳಗೆ ಎಲ್ಲವನ್ನೂ ಪೂರ್ಣಗೊಳಿಸಿ ಬುಧವಾರದಿಂದ ದೇವಿ ಆರಾಧನೆಗೆ ಸಜ್ಜಾಗಿದ್ದಾರೆ.

ಒಂಭತ್ತು ದಿನ ಶ್ರದ್ಧಾ ಭಕ್ತಿಯಿಂದ ಎಲ್ಲೆಡೆ ದೇವಿಯ ಆರಾಧನೆ ಶಾಸ್ತ್ರೋಕ್ತವಾಗಿ ನಡೆಯಲಿದೆ. ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಹಿರಿಯರು ಪಾಲಿಸಿಕೊಂಡು ಬಂದ ಪರಂಪರೆಯನ್ನು ಆಯಾ ಮನೆತನಗಳು ಮುಂದುವರೆಸುವುದು ದಸರಾ ವಿಶೇಷ.

ತ್ರಿಕಾಲ ಪೂಜೆ ನಡೆಯಲಿದೆ. ಮುಂಜಾನೆ–ಮುಸ್ಸಂಜೆ ದೇವಿ ಪಾರಾಯಣ, ಮಡಿಯಿಂದ ದೇವಿಯ ಜಪ–ತಪ ಮಾಡುವುದು. ಒಂಭತ್ತು ದಿನವೂ ಉಪವಾಸ ವ್ರತ ಆಚರಣೆ ಮಾಡುವುದು ಸೇರಿದಂತೆ ಕಟ್ಟುನಿಟ್ಟಿನಿಂದ ಆದಿಶಕ್ತಿಯ ಆರಾಧನೆಯನ್ನು ಬಹುತೇಕರು ನಡೆಸಲಿದ್ದಾರೆ.

ಈಗಾಗಲೇ ಬಹುತೇಕ ಮನೆಗಳು ಸುಣ್ಣ–ಬಣ್ಣಗಳಿಂದ ಕಂಗೊಳಿಸುತ್ತಿವೆ. ಹಾಸಿಗೆ–ಹೊದಿಕೆ ಸೇರಿದಂತೆ ಎಲ್ಲ ವಸ್ತುಗಳು ಮಡಿಯಾಗಿ ಸ್ವಚ್ಛಗೊಳ್ಳುತ್ತಿವೆ. ದೇವಿ ಮಹಾತ್ಮೆಯ ಹೊಸ ಪುಸ್ತಕ ಖರೀದಿಗೆ ಮಾರುಕಟ್ಟೆಗೆ ಹಲವರು ಲಗ್ಗೆಯಿಟ್ಟಿದ್ದಾರೆ. ಆದಿಶಕ್ತಿ ಆರಾಧನೆಗೊಳ್ಳುವ ಒಂಭತ್ತು ದಿನವೂ ಮನೆಯಲ್ಲಿ ಮಡಿಗೆ ಆದ್ಯತೆ ನೀಡಲಿದ್ದೇವೆ ಎನ್ನುತ್ತಾರೆ ಗೃಹಿಣಿಯರಾದ ಜಯಲಕ್ಷ್ಮೀ, ಉಮಾ.

ಗಲ್ಲಿ ಗಲ್ಲಿಯಲ್ಲೂ ಪ್ರತಿಷ್ಠಾಪನೆ: ಗಲ್ಲಿ ಗಲ್ಲಿಯಲ್ಲೂ ಗಣಪನ ಪ್ರತಿಷ್ಠಾಪನೆಯಂತೆ ಆದಿಶಕ್ತಿ ಪ್ರತಿಷ್ಠಾಪನೆಯೂ ವಿಜಯಪುರದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯುತ್ತದೆ.

ಪ್ರತಿ ವರ್ಷವೂ ವಿಭಿನ್ನವಾಗಿ ನವರಾತ್ರಿ ಆಯೋಜಿಸಿ ನಗರದ ನಾಗರಿಕರ ಗಮನ ಸೆಳೆಯುವುದು ಇಲ್ಲಿನ ತರುಣ ಮಂಡಳಿಗಳ ವೈಶಿಷ್ಟ್ಯವಾಗಿದೆ. ಪ್ರತಿ ಬಾರಿಯೂ ಲಕ್ಷ, ಲಕ್ಷ ರೂಪಾಯಿ ವ್ಯಯಿಸಿ ವಿಭಿನ್ನವಾಗಿ ನವರಾತ್ರಿ ಆಚರಿಸಲಾಗುತ್ತದೆ.

ಕೆಲ ಆದಿಶಕ್ತಿ ತರುಣ ಮಂಡಳಿಗಳು ದಶಕದ ಅವಧಿಯಿಂದಲೂ ಸಾರ್ವಜನಿಕವಾಗಿ ನಾಡದೇವಿ ಪ್ರತಿಷ್ಠಾಪಿಸಿ, ಧಾರ್ಮಿಕ ಕಾರ್ಯಕ್ರಮದ ಜತೆ ಜತೆಯಲ್ಲೇ ಕೆಲ ಆಧ್ಯಾತ್ಮಿಕ ಕಾರ್ಯಕ್ರಮ ಆಯೋಜಿಸುವುದು ವಾಡಿಕೆಯಾಗಿದೆ.

ಬಸವೇಶ್ವರ; ಬೆಳ್ಳಿ ಹಬ್ಬದ ಸಂಭ್ರಮ: ಶಹಾಪೇಟೆ ಮುಖ್ಯರಸ್ತೆಯಲ್ಲಿ ನಾಡದೇವಿ ಪ್ರತಿಷ್ಠಾಪಿಸುವ ಬಸವೇಶ್ವರ ಆದಿಶಕ್ತಿ ತರುಣ ಮಂಡಳಿಗೆ ಈ ಬಾರಿ ಬೆಳ್ಳಿ ಹಬ್ಬದ ಸಂಭ್ರಮ. ಪ್ರತಿ ಬಾರಿಯೂ ವಿಭಿನ್ನವಾಗಿ ಶರನ್ನವರಾತ್ರಿ ಆಚರಿಸುವ ಮಂಡಳಿ ಈ ಬಾರಿ ಬಾಹುಬಲಿ ಮೊರೆ ಹೊಕ್ಕಿದೆ.

‘ರಜತ ಸಂಭ್ರಮಕ್ಕಾಗಿಯೇ ವಿಶೇಷ ಸೆಟ್‌ ರೂಪಿಸುತ್ತಿದ್ದೇವೆ. ₹ 8ರಿಂದ ₹ 10 ಲಕ್ಷ ವೆಚ್ಚದಲ್ಲಿ ಕೊಲ್ಹಾಪುರದ ಕಲಾವಿದ ರಂಗಸಜ್ಜಿಕೆ ನಿರ್ಮಾಣದಲ್ಲಿ ತಲ್ಲೀನರಾಗಿದ್ದಾರೆ. ಜನರನ್ನು ಆಕರ್ಷಿಸುವ ಜತೆಯಲ್ಲೇ ದೇವಿ ಆರಾಧನೆಗೂ ಒತ್ತು ಕೊಡುವುದು ಆರಂಭದಿಂದಲೂ ನಮ್ಮಲ್ಲಿ ನಡೆದಿದೆ’ ಎಂದು ಮಂಡಳಿಯ ಅಧ್ಯಕ್ಷರಾಗಿರುವ ಮಹಾನಗರ ಪಾಲಿಕೆ ಸದಸ್ಯ ರಾಜೇಶ ದೇವಗಿರಿ ತಿಳಿಸಿದರು.

ರಾಮಮಂದಿರ ರಸ್ತೆಯಲ್ಲಿ ಪ್ರತಿ ವರ್ಷದಂತೆ ಸಿದ್ಧೇಶ್ವರ ಆದಿಶಕ್ತಿ ತರುಣ ಮಂಡಳಿ ಕಾರ್ಯಕರ್ತರು ಸಹ ವಿಭಿನ್ನವಾಗಿ ನಾಡದೇವಿ ಉತ್ಸವದ ಆಚರಣೆಗೆ ಈಗಾಗಲೇ ಮುನ್ನುಡಿ ಬರೆದಿದ್ದಾರೆ. ಇಚಲಕರಂಜಿಯ ಕಲಾವಿದರು ಕೊಲ್ಕತ್ತಾದ ಕಾಳಿ ಮಂದಿರದ ಪ್ರತಿರೂಪ ನಿರ್ಮಿಸಲು ಚಾಲನೆ ನೀಡಿದ್ದಾರೆ.

101 ಕೆ.ಜಿ. ತೂಕದ ಬೆಳ್ಳಿಯ ನಾಡದೇವಿ ಮೂರ್ತಿ ಮೆರವಣಿಗೆಗೆ ಮಂಡಳಿ ಸಜ್ಜಾಗಿದೆ. ಮೈಸೂರು ದಸರಾ ರೀತಿ ನಾಡದೇವಿ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಮಂಡಳಿಯ ಯುವಕರು ಉತ್ಸುಕತೆಯಿಂದ ಸಿದ್ಧತೆ ನಡೆಸಿದ್ದಾರೆ ಎಂದು ಮಂಡಳಿಯ ಅಧ್ಯಕ್ಷ, ಸಿದ್ಧೇಶ್ವರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಗುರು ಗಚ್ಚಿನಮಠ ಹೇಳಿದರು.

ಜೋರಾಪುರ ಪೇಟೆಯ ಶ್ರೀಶಕ್ತಿ ತರುಣ ಸಂಘ, ಸಿದ್ಧೇಶ್ವರ ದೇಗುಲದ ಬಳಿ, ಅಥಣಿ ರಸ್ತೆಯ ಜೋರಾಪುರ ಪೇಟೆ ಬಣಗಾರ ಗಲ್ಲಿಯ ಅಂಬಾ ಭವಾನಿ ದೇಗುಲ, ಮಠಪತಿ ಗಲ್ಲಿ, ಶಿವಾಜಿ ಚೌಕ್ ಸಮೀಪ ಸೇರಿದಂತೆ ನಗರದ ವಿವಿಧೆಡೆ ನವರಾತ್ರಿ ಆಚರಣೆಗೆ ಅದ್ಧೂರಿಯ ಸಿದ್ಧತೆ ನಡೆದಿವೆ.

**

ಬುಧವಾರದಿಂದ ಒಂಭತ್ತು ದಿನ ಮನೆಯಲ್ಲಿ ನಂದಾದೀಪ ಬೆಳಗಲಿದೆ. ಹಿರಿಯರು ಪಾಲಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಚಾಚೂ ತಪ್ಪದೆ ನಾವೂ ಮುಂದುವರೆಸುತ್ತಿದ್ದೇವೆ.

-ಉಮಾ, ಜಯಲಕ್ಷ್ಮೀ, ಗೃಹಿಣಿಯರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !