ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸುತ್ತು ಗೆಲ್ಲದೆ ವಿಧಿಯಿಲ್ಲ ಮೋದಿಯವರಿಗೆ

ಲೋಕಸಭಾ ಚುನಾವಣೆಯ ಸೋಲು ಗೆಲುವಿನ ಕೈಮರ ಆಗಲಿವೆ ಪಂಚರಾಜ್ಯ ಚುನಾವಣೆಗಳು
Last Updated 7 ಅಕ್ಟೋಬರ್ 2018, 19:57 IST
ಅಕ್ಷರ ಗಾತ್ರ

2014ರ ಲೋಕಸಭಾ ಚುನಾವಣೆಗಳ ಚಾಂಪಿಯನ್ ನರೇಂದ್ರ ಮೋದಿ. ರಾಜ್ಯ ಚುನಾವಣೆಗಳಲ್ಲೂ ಗೆಲುವಿನ ಮೇಲೆ ಗೆಲುವು ಗಳಿಸುತ್ತಿರುವ ಅವರು ಈಗಾಗಲೇ 2019ರ ಲೋಕಸಭಾ ಚುನಾವಣೆಗಳ ‘ಅಂತಿಮ’ ಪಂದ್ಯದಲ್ಲಿದ್ದಾರೆ. ಹೈರಾಣಾಗಿರುವ ವಿರೋಧ ಪಕ್ಷಗಳು ಬಿಡಿ ಬಿಡಿಯಾಗಿ ಬಿಡಿ, ಇಡಿಯಾಗಿಯೂ ಮೋದಿ ವಿರುದ್ಧ ‘ಫೈನಲ್’ ಪ್ರವೇಶಿಸಲು ಹೆಣಗುತ್ತಿವೆ.

‘ಧರ್ಮ- ಕೋಮು- ವಿಕಾಸ- ಪಾಕಿಸ್ತಾನ- ಅಲ್ಪಸಂಖ್ಯಾತ- ದುಷ್ಟ ಕಾಂಗ್ರೆಸ್- ಕಮ್ಯುನಿಸ್ಟ್- ದೇಶಭಕ್ತಿ- ದೇಶ
ದ್ರೋಹ’ ಎಂಬ ಪ್ರಚಂಡ ಮಿಶ್ರಣದ ದುರ್ಗಮ ರಾಜಕಾರಣವನ್ನು ಮುಂದಿನ ವರ್ಷದ ಅಂತಿಮ ಪಂದ್ಯದಲ್ಲಿ ವಿರೋಧ ಪಕ್ಷಗಳು ಮಣಿಸಬಲ್ಲವೇ ಇಲ್ಲವೇ ಎಂಬ ನಿಷ್ಠುರ ವಾಸ್ತವ ಮುಂದಿನ ಎರಡು ತಿಂಗಳಲ್ಲಿ ನಡೆಯುವ ಪಂಚ ರಾಜ್ಯ ಚುನಾವಣೆಗಳ ಮೂಸೆಯಲ್ಲಿ ರೂಪು ತಳೆದು ಡಿಸೆಂಬರ್ 11ರಂದು ಹೊರಬೀಳಲಿದೆ. ಅಂತೆಯೇ ಮೋದಿ- ಅಮಿತ್ ಶಾ ಜೋಡಿ ವರ್ಷಗಟ್ಟಲೆ ಕಟೆದು ಕಟ್ಟಿ ನಿಲ್ಲಿಸಿರುವ ಚುನಾವಣೆ ಗೆಲ್ಲುವ ಯಶಸ್ವೀ ತಂತ್ರವೂ ಅಗ್ನಿಪರೀಕ್ಷೆ ಎದುರಿಸಲಿದೆ. 2019ರ ಸೋಲು- ಗೆಲುವಿನ ಅಜಮಾಸು ರೂಪುರೇಖೆಗಳು ಮೈದಳೆಯಲಿವೆ.

ಐದು ರಾಜ್ಯಗಳ ಪೈಕಿ ಮಿಜೋರಾಂ ಮತ್ತು ತೆಲಂಗಾಣವನ್ನು ಪಕ್ಕಕ್ಕೆ ಸರಿಸಿದರೆ ಹಿಂದಿ ಸೀಮೆಯ ಹೃದಯಭಾಗದ ಮಧ್ಯಪ್ರದೇಶ, ಛತ್ತೀಸಗಡ ಹಾಗೂ ರಾಜಸ್ಥಾನದ ಕಾಳಗಗಳೇ ಈ ಅಜಮಾಸು ರೂಪುರೇಖೆಗಳನ್ನು ತೀರ್ಮಾನಿಸಲಿವೆ. ಒಟ್ಟು 65 ಲೋಕಸಭಾ ಸೀಟುಗಳನ್ನು ಹೊಂದಿರುವ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸಿದೆ.

ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಂತೂ ಸತತ ಮೂರು ಅವಧಿಗಳ ಹದಿನೈದು ವರ್ಷ ಶಿವರಾಜ್‌ ಸಿಂಗ್ ಚೌಹಾಣ್ ಮತ್ತು ರಮಣ ಸಿಂಗ್ ಅವರದೇ ಅಧಿಕಾರ. ರಾಜಸ್ಥಾನದಲ್ಲಿ ವಸುಂಧರಾ ರಾಜೇ ನೇತೃತ್ವದ ಸರ್ಕಾರ ಜನಾನುರಾಗಿ ಅಲ್ಲ ಎಂಬ ಅಂಶ ಈಗಾಗಲೇ ಜನಜನಿತ. ಅದಕ್ಕೆ ಶಿಖರವಿಟ್ಟಂತೆ ಒಂದು ಅವಧಿಗೆ ಆರಿಸಿದ ಪಕ್ಷವನ್ನು ಸತತ ಎರಡನೆಯ ಅವಧಿಗೆ ಆರಿಸದೆ ಇರುವುದು ರಾಜಸ್ಥಾನದ ಈಚಿನ ದಶಕಗಳ ರಾಜಕೀಯ ಜಾಯಮಾನ. ಹೀಗಾಗಿ ಮೂರೂ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ವಿರೋಧಿ ಜನಭಾವನೆಯನ್ನು ಎದುರಿಸಿದೆ.

ಮಧ್ಯಪ್ರದೇಶದ 29 ಲೋಕಸಭಾ ಸೀಟುಗಳ ಪೈಕಿ 2014ರ ಮೋದಿ ಅಲೆ ಗುಡಿಸಿ ಒಳ ಹಾಕಿಕೊಂಡದ್ದು 27 ಸೀಟುಗಳು. ರಾಜಸ್ಥಾನದ ಎಲ್ಲ 25 ಸೀಟುಗಳೂ ಬಿಜೆಪಿ ಪಾಲಾಗಿದ್ದವು. ಛತ್ತೀಸಗಡದ 11 ಸೀಟುಗಳಲ್ಲಿ 10ನ್ನು ಬಿಜೆಪಿ ಗೆದ್ದಿತ್ತು. ಅರ್ಥಾತ್ ಮೂರೂ ರಾಜ್ಯಗಳ ಒಟ್ಟು 65 ಸೀಟುಗಳ ಪೈಕಿ 62 ಮೋದಿ ಬೆನ್ನಿಗಿದ್ದವು.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಮೋದಿಯವರ ಮಾತು- ಕೃತಿಗಳ ಹೊಳಪು ಮಾಸಿದೆಯೇ ವಿನಾ ಮತ್ತಷ್ಟುಬೆಳಗಿದೆ ಎಂದು ಹೇಳಲು ಬಾರದು. ಮೋದಿ ಕುರಿತು ಮತದಾರರ ಮೋಹಭಂಗದ ಪ್ರಮಾಣದ ಕರಾರುವಾಕ್ಕು ಅಳತೆ ಇನ್ನೂ ಆಗಿಲ್ಲ. ಮತದಾರ ಸಮುದಾಯದಲ್ಲಿ ಅಂದು ಮೋದಿ ಬಡಿದೆಬ್ಬಿಸಿದ್ದ ಉದ್ಯೋಗಾವಕಾಶ ಸೃಷ್ಟಿ, ಬೆಲೆಯೇರಿಕೆ ನಿಯಂತ್ರಣ, ಕಪ್ಪುಹಣದ ನಿವಾರಣೆಯ ನಿರೀಕ್ಷೆಗಳು ಈಡೇರಿಲ್ಲ.

ಮೋದಿ-ಶಾ ಜೋಡಿ ನಿಶ್ಚಿತವಾಗಿ ಎದೆತಟ್ಟಿಕೊಂಡು ಈಡೇರಿಸಿದ್ದೇವೆಂದು ಹೇಳಬಹುದಾದ ‘ಸಾಧನೆ’ ಒಂದೇ ಒಂದು. ಅದು ಹಿಂದೂ -ಮುಸ್ಲಿಂ ಧ್ರುವೀಕರಣದ್ದು. ಜನತಾಂತ್ರಿಕ ಅಸಮ್ಮತಿಯನ್ನು ಮೆಟ್ಟಿ ದೇಶದ್ರೋಹದ ಹಣೆಪಟ್ಟಿ ಹಚ್ಚಿ ಹೊಸೆದು ಹಾಕಲು ಹೊರಟದ್ದು. ಎಲ್ಲ ನಾಗರಿಕರೂ ಸಮಾನರಲ್ಲ, ಬಹುಸಂಖ್ಯಾತರು ಹೆಚ್ಚು ಸಮಾನರು ಎಂಬ ಸಂವಾದವನ್ನು ಯಶಸ್ವಿಯಾಗಿ ಹುಟ್ಟಿ ಹಾಕಿ, ಬಹುಸಂಖ್ಯಾತವಾದಕ್ಕೆ ನೀರು ಗೊಬ್ಬರ ಎರೆದು ವಿಷವೃಕ್ಷದೋಪಾದಿಯಲ್ಲಿ ಬೆಳೆಸುತ್ತಿರುವುದು. ಆದರೆ ಈ ‘ಸಾಧನೆ’ಯೇನೂ ಕಡಿಮೆ ಅಲ್ಲ. ಬಹುಸಂಖ್ಯಾತರ ಪೈಕಿ ಬಹುಸಂಖ್ಯಾತವಾದಿಗಳ ಸಂಖ್ಯೆ ಮೋದಿಯುಗದಲ್ಲಿ ಬಹುವಾಗಿ ಹಿಗ್ಗಿದೆ.

ಅಲ್ಪಸಂಖ್ಯಾತರನ್ನು ಹದ್ದು ಮೀರದಂತೆ ಅಂಕೆಯಲ್ಲಿ ಇರಿಸುವುದು ತಮ್ಮ ನೇತಾರನೊಬ್ಬನಿಂದಲೇಸಾಧ್ಯ. ಹೀಗಾಗಿ ಆತ ಉಳಿದ ಭರವಸೆಗಳನ್ನು ಎಷ್ಟು ಈಡೇರಿಸಿದ್ದಾರೆ ಅಥವಾ ಈಡೇರಿಸಿಲ್ಲ ಎಂಬುದು ಮುಖ್ಯವಾಗುವುದಿಲ್ಲ. ದೇಶವನ್ನು ಅಲ್ಪಸಂಖ್ಯಾತರಿಂದ ರಕ್ಷಿಸುತ್ತಾರೆ, ಅಷ್ಟು ಸಾಕು ಎನ್ನುವ ಇವರು ತಮ್ಮ ನೇತಾರನ ಪೊಳ್ಳು ಹೇಳಿಕೆಗಳನ್ನು ಕ್ಷಮಿಸುವಷ್ಟು ಉದಾರಿಗಳು!

ಇಂತಹ ಔದಾರ್ಯದ ನಡುವೆಯೂ 2019ರಲ್ಲಿ ಈ ಮೂರು ರಾಜ್ಯಗಳ 65 ಸೀಟುಗಳಲ್ಲಿ 62ನ್ನು ಮತ್ತೊಮ್ಮೆ ಗೆಲ್ಲುವುದು ಅಸಾಧ್ಯ ಅಲ್ಲವಾದರೂ ದುಸ್ಸಾಧ್ಯವೇ ಹೌದು. ಶಿಖರ ಏರಿದ ನಂತರ ಏರುವುದಕ್ಕೆ ಮತ್ತೇನೂ ಇರದು. ಇಳಿಯುವುದೇ ಸಹಜ ನಡೆ. ಬಿಜೆಪಿಯ ಚುನಾವಣಾ ಯಂತ್ರವನ್ನು ಕರಾರುವಾಕ್ಕಾಗಿ ಜೋಡಿಸಿ ದೈತ್ಯಗಾತ್ರಕ್ಕೆ ಬೆಳೆಸಿಗೆಲುವಿನ ಸೂತ್ರದ ರಸಪಾಕವನ್ನು ಭಟ್ಟಿ ಇಳಿಸಿಕೊಂಡಿದೆ ಮೋದಿ-ಶಾ ಜೋಡಿ. ಅದರ ದೈತ್ಯ ಗಾಲಿಗಳಡಿ ಸಿಕ್ಕವರು ನಜ್ಜುಗುಜ್ಜು. ಬುದ್ಧಿ- ಭಾವಗಳನ್ನು ಒತ್ತೆ ಇರಿಸದೆ ಸ್ವತಂತ್ರ
ವಾಗಿ ಆಲೋಚಿಸುವ ಮತದಾರ ಸಮುದಾಯ ಮಾತ್ರವೇ ಈ ಹೆಗ್ಗಾಲಿಗಳ ಉರುಳನ್ನು ತಡೆ ಹಿಡಿಯಬಲ್ಲದು. ಆದರೆ ಅಂತಹ ಮತದಾರ ಸಮುದಾಯ ಸದ್ಯದೂರದಲ್ಲಿ ಕಾಣುತ್ತಿಲ್ಲ.

ಆಡಳಿತವಿರೋಧಿ ಜನಭಾವನೆಯ ರಾಜಕೀಯ ತರ್ಕವನ್ನು ಸದ್ಯಕ್ಕೆ ಗಂಭೀರವಾಗಿ ಪರಿಗಣಿಸುವುದೇ ಆದರೆ ಮೂರು ರಾಜ್ಯಗಳಲ್ಲಿ ತಮ್ಮ ಹಳೆಯ ಸಾಧನೆಯನ್ನು ಕಾಪಾಡಿಕೊಳ್ಳುವ ಬಹುದೊಡ್ಡ ಸವಾಲು ಮೋದಿ- ಶಾ ಜೋಡಿಯ ಮುಂದಿದೆ. ಈ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯನ್ನು ದಡ ಮುಟ್ಟಿಸಿದರೆ 2019ರ ಅಂತಿಮ ಪಂದ್ಯದಲ್ಲಿ ಮೋದಿ- ಶಾ ದಡ ಮುಟ್ಟುವುದು ಕಷ್ಟವಾಗುವುದಿಲ್ಲ. ಇದು ಕೇವಲ ಇಂತಿಷ್ಟು ಲೋಕಸಭಾ ಸೀಟುಗಳ ಗೆಲುವಿನ ಲೆಕ್ಕಾಚಾರಕ್ಕೆ ಸೀಮಿತ ಅಲ್ಲ.

ಫಲಿತಾಂಶಗಳು ಹೊಮ್ಮಿಸುವ ಸಂದೇಶ ಮತದಾರ ಸಮೂಹದ ಗ್ರಹಿಕೆಯನ್ನು ಸೆರೆ ಹಿಡಿಯಲಿದೆ. ‘ಬಿಜೆಪಿ 2019ರ ಚುನಾವಣೆಯನ್ನು ಗೆಲ್ಲಲಿದೆ- ಆನಂತರ 50 ವರ್ಷಗಳ ಕಾಲ ಭಾರತವನ್ನು ಆಳಲಿದೆ’ ಎಂಬ ಅಮಿತ್ ಶಾ ಅವರ ಅಪರಿಮಿತ ಆತ್ಮವಿಶ್ವಾಸಕ್ಕೆ ಈ ಪಂಚರಾಜ್ಯಗಳ ಚುನಾವಣೆಗಳ ಗೆಲುವೇ ಸೋಪಾನ ಆಗಲಿದೆ.

ಹಲವು ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಭವಿಷ್ಯ ನುಡಿದಿದ್ದ ಅದೇ ‘ಸಿ- ವೋಟರ್’ ಚುನಾವಣಾ ಸಮೀಕ್ಷಾ ಸಂಸ್ಥೆ,ಮಧ್ಯಪ್ರದೇಶ, ಛತ್ತೀಸಗಡ ಹಾಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಅನಾಯಾಸವಾಗಿ ಗೆಲ್ಲುವುದೆಂದು ಮೊನ್ನೆ ಶುಕ್ರವಾರವಷ್ಟೇ ಹೇಳಿದೆ. ಈ ಸಮೀಕ್ಷೆ ಒಂದು ವೇಳೆ ನಿಜವಾದರೂ, ಹಳೆಯ ‘ವೈಭವ’ಕ್ಕೆ ಮರಳುವುದು ಕಾಂಗ್ರೆಸ್ ಪಾಲಿಗೆ ಸದ್ಯಕ್ಕೆ ಕನಸಿನ ಮಾತೇ ಸರಿ. ಆದರೆ ದೇಶ ರಾಜಕಾರಣದ ಕಥಾನಕ ಮಗ್ಗುಲು ಬದಲಿಸುವಲ್ಲಿ ಅನುಮಾನವಿಲ್ಲ.

ಈ ಚುನಾವಣೆಗಳು ಕಾಂಗ್ರೆಸ್ ಪಕ್ಷದ ಅಳಿವು ಉಳಿವಿನ ಪ್ರಶ್ನೆಯಾಗಲಿವೆ. ಕಾಂಗ್ರೆಸ್ ಈ ಚುನಾವಣೆಗಳಲ್ಲಿ ಸೋತರೆ ಇನ್ನು ಬಹುಕಾಲ ತಲೆ ಎತ್ತಲಾರದು. ಜಾರುವ ಇಳಿಜಾರಿನ ಹಾದಿ ಹಿಡಿಯಲಿದೆ. ದೇಶದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಹಿಂದಿ ಹೃದಯಸೀಮೆಯ ಇನ್ನೆರಡು ರಾಜ್ಯಗಳಾದ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಕಾಂಗ್ರೆಸ್ ಈಗಾಗಲೇ ಮೂಲೆಗುಂಪಾಗಿ ಹೋಗಿದೆ. ಭಿನ್ನಮತ ಮತ್ತು ಅಸಮ್ಮತಿಯಂತೆ ಬಲಿಷ್ಠ ಪ್ರತಿಪಕ್ಷಗಳು ಜನತಂತ್ರದ ಜೀವಾಳ. ಸೊರಗಿದ ಪ್ರತಿಪಕ್ಷಗಳು ಸರ್ವಾಧಿಕಾರಕ್ಕೆ ನಿಶ್ಚಿತ ಹಾದಿ.

ಉಳಿದಂತೆ ಈ ಚುನಾವಣೆಗಳ ಬೇರುಮಟ್ಟದ ವಾಸ್ತವ ನೋಡೋಣ. ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಸತತ ಹದಿನೈದು ವರ್ಷಗಳ ಬಿಜೆಪಿ ಸರ್ಕಾರಗಳು ಅಲ್ಲಿನ ಮತದಾರರನ್ನು ‘ಬಿಜೆಪಿ ಬಳಲಿಕೆ’ಗೆ ತಳ್ಳಿದೆ ಎನ್ನುತ್ತಾರೆ ಸ್ಥಳೀಯ ರಾಜಕೀಯ ವಿಶ್ಲೇಷಕರು. ಆದರೆ ಬಿಜೆಪಿಯನ್ನು ಕೆಡವಲು ಮಿತ್ರಪಕ್ಷಗಳ ಕೂಟ ಕಟ್ಟುವಲ್ಲಿ ಕಾಂಗ್ರೆಸ್ ತೋರಿರುವ ಅಸಾಮರ್ಥ್ಯ ಬಿಜೆಪಿ ಪಾಲಿಗೆ ಒಳ್ಳೆಯ ಸುದ್ದಿ. ಬಿ.ಎಸ್.ಪಿ., ಗೊಂಡ್ವಾನ ಗಣತಂತ್ರ ಪಾರ್ಟಿ ಹಾಗೂ ಬಸ್ತರ್‌ನ ಒಂದೆರಡು ಸೀಟುಗಳಲ್ಲಾದರೂ ಪ್ರಭಾವಿ ಯಾಗಿರುವ ಸಿಪಿಐ ಜೊತೆಗೆ ಚುನಾವಣಾ ಮೈತ್ರಿ ಮಾಡಿಕೊಳ್ಳುವುದು ಕಾಂಗ್ರೆಸ್ ಕೈಲಾಗಲಿಲ್ಲ.

ಉತ್ತರಪ್ರದೇಶಕ್ಕೆ ಹೊಂದಿಕೊಂಡಂತಿರುವ ಮಧ್ಯಪ್ರದೇಶದ 14 ಗಡಿ ಜಿಲ್ಲೆಗಳಲ್ಲಿ ಬಿ.ಎಸ್.ಪಿ.ಗೆ ಸಾಕಷ್ಟು ಬೆಂಬಲ ಉಂಟು. 2013ರ
ಚುನಾವಣೆಗಳಲ್ಲಿ ಬಿ.ಎಸ್.ಪಿ. ನಾಲ್ಕು ಸೀಟುಗಳನ್ನು ಗೆದ್ದಿತ್ತು. ಹತ್ತು ಸೀಟುಗಳಲ್ಲಿ ಎರಡನೆಯ ಸ್ಥಾನದಲ್ಲಿತ್ತು. 62 ಸೀಟುಗಳಲ್ಲಿ ತಲಾ 10 ಸಾವಿರ ಮತಗಳನ್ನು ಗಳಿಸಿತ್ತು. 17 ಸೀಟುಗಳಲ್ಲಿ ತಲಾ 20 ಸಾವಿರ ಮತಗಳು ಈ ಪಕ್ಷದಪಾಲಾಗಿದ್ದವು. ಗಳಿಸಿದ್ದ ಮತಗಳ ಶೇಕಡಾವಾರು ಪ್ರಮಾಣ 6.42. ಮಾಯಾವತಿ ಕೈ ಬಿಟ್ಟಿದ್ದರೂ, ಕಾಂಗ್ರೆಸ್ ಆಕ್ರಮಣಕಾರಿ ಸ್ಪರ್ಧೆ ನೀಡಿರುವುದು ವಾಸ್ತವ. ಆದರೆ ಎರಡೂ ಪಕ್ಷಗಳು ಕೈ ಕಲೆಸಿದ್ದರೆ ಅನಾಯಾಸ ಗೆಲುವು ಸಾಧ್ಯವಿತ್ತು.

ಮಧ್ಯಪ್ರದೇಶದಲ್ಲಿ 2013ರ ಚುನಾವಣೆಯ ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಸೋಲು ಗೆಲುವಿನ ಅಂತರ ಶೇ 8ರಷ್ಟು. 2014ರ ಮೋದಿ ಅಲೆಯಲ್ಲಿ ಈ ಪ್ರಮಾಣ ಶೇ 14ಕ್ಕೆ ಹಿಗ್ಗಿದ್ದುಂಟು. 2013ರಲ್ಲಿ 230 ಸದಸ್ಯ ಬಲದಲ್ಲಿ ಬಿಜೆಪಿ 165, ಕಾಂಗ್ರೆಸ್‌ 58 ಹಾಗೂ ಬಿ.ಎಸ್.ಪಿ. ನಾಲ್ಕು ಸೀಟುಗಳನ್ನು ಗೆದ್ದಿತ್ತು.

ಕಾಂಗ್ರೆಸ್- ಬಿಜೆಪಿ ನಡುವೆ ನೇರ ಹಣಾಹಣಿಯನ್ನೇ ಕಾಣುತ್ತ ಬಂದಿದ್ದ ಛತ್ತೀಸಗಡ ಈ ಬಾರಿ ತೃತೀಯ ಶಕ್ತಿಯ ಹುಟ್ಟನ್ನು ಕಂಡಿತು. ಮಾಯಾವತಿ ಅವರ ಬಿ.ಎಸ್.ಪಿ. ಮತ್ತು ಅಜಿತ್ ಜೋಗಿ ಅವರ ಸಿ.ಜೆ.ಸಿ. (ಛತ್ತೀಸಗಡ ಜನತಾ ಕಾಂಗ್ರೆಸ್) ಕೈ ಕಲೆಸಿರುವ ವಿದ್ಯಮಾನ ಎರಡೇ ಪಕ್ಷಗಳ ನಡುವಣ ನೇರ ಹಣಾಹಣಿಯ ಸರಳ ರಾಜಕೀಯ ಲೆಕ್ಕಾಚಾರವನ್ನು ಕದಡಲಿದೆ. 2003ರಿಂದ ಸತತ
ಅಧಿಕಾರ ಹಿಡಿದಿರುವ ಬಿಜೆಪಿ, 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಶೇಕಡ ಒಂದಕ್ಕೂ ಕಡಿಮೆ ಮತಪ್ರಮಾಣದ ಕೂದಲೆಳೆ ಅಂತರದ ಗೆಲುವು ಗಿಟ್ಟಿಸಿತ್ತು.

ಉತ್ತರ ಛತ್ತೀಸಗಡದ ಹತ್ತು–ಹನ್ನೆರಡು ಕ್ಷೇತ್ರಗಳ ವಿನಾ ಬೇರೆಡೆಗೆ ಜೋಗಿ- ಮಾಯಾವತಿ ಮೈತ್ರಿ ಹೆಚ್ಚು ಪ್ರಭಾವ ಬೀರುವುದಿಲ್ಲ. 50 ಲಕ್ಷ ಉಚಿತ ಮೊಬೈಲ್ ಫೋನುಗಳ ವಿತರಣೆ ಸರ್ಕಾರದಿಂದ ನಡೆದಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ, ರಸ್ತೆ ಸೇತುವೆ ನಿರ್ಮಾಣದಲ್ಲಿ ರಮಣ ಸಿಂಗ್ ಒಳ್ಳೆಯ ಹೆಸರು ಗಳಿಸಿದ್ದಾರೆ. ಆದಿವಾಸಿಗಳು, ಯುವಜನರು, ಮಹಿಳೆಯರನ್ನು ಸೆಳೆಯಲು ಹಲವು ಯೋಜನೆ
ಗಳನ್ನು ರಮಣ ಸಿಂಗ್ ಪ್ರಕಟಿಸಿದ್ದಾರೆ. ನಿರುದ್ಯೋಗ ಸಮಸ್ಯೆ ಅವರಿಂದ ಬಗೆಹರಿದಿಲ್ಲ.

ರಾಜಸ್ಥಾನದಲ್ಲಿ 2013ರಲ್ಲಿ 200 ಸೀಟುಗಳ ಪೈಕಿ ಬಿಜೆಪಿ 163ರ ದಾಖಲೆ ಸಂಖ್ಯೆ ಸೀಟುಗಳನ್ನು ಗೆದ್ದಿತ್ತು. ಆದರೆ ಅಷ್ಟೇ ವೇಗವಾಗಿ ಜನಪ್ರಿಯತೆ ಕುಸಿಯಿತು. ಮುಖ್ಯಮಂತ್ರಿ ವಸುಂಧರಾ ರಾಜೇ ಜನಪ್ರಿಯತೆ ಕಳೆದುಕೊಂಡಿರುವುದೇ ಅಲ್ಲದೆ ಆಂತರಿಕ ಭಿನ್ನಮತ ಎದುರಿಸಿದ್ದಾರೆ. ಎರಡು ಲೋಕಸಭೆ ಕ್ಷೇತ್ರ ಮತ್ತು ಒಂದು ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಶೋಚನೀಯವಾಗಿ ಸೋತಿತ್ತು.

ಬಹುತೇಕ ನೇರ ಸ್ಪರ್ಧೆ ಇರುವ ಈ ರಾಜ್ಯದಲ್ಲಿ ಮೂರನೆಯ ಶಕ್ತಿಯುತ ಪಕ್ಷ ಅಥವಾ ಪಕ್ಷಗಳ ಮೈತ್ರಿಕೂಟ ಇಲ್ಲ. ಕಾಂಗ್ರೆಸ್ ಗೆಲುವಿನ ಆತ್ಮವಿಶ್ವಾಸ ಹೊಂದಿದೆ. ಗೆದ್ದರೆ ಯಾರು ಮುಖ್ಯಮಂತ್ರಿ ಎಂಬ ಚಿತ್ರ ಮತದಾರರ ಮುಂದೆ ಇಲ್ಲ. ಯುವ ನಾಯಕ ಸಚಿನ್ ಪೈಲಟ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಜನಪ್ರಿಯ ನಾಯಕ. ಇಬ್ಬರ ಪೈಕಿ ಒಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಈಗಲೇ ಘೋಷಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ಇಬ್ಬರೂ ನಾಯಕರ ಜಾತಿ ಬೆಂಬಲದ ನೆಲೆಗಳು ದುರ್ಬಲವಾಗುವ ಭಯ. ಈ ಪಕ್ಷದ ಪರಂಪರಾಗತ ವೋಟು ಬ್ಯಾಂಕುಗಳಾದ ರಜಪೂತ ಮತ್ತು ಗುಜ್ಜರ್ ಜನಾಂಗದ ಅಸಮಾಧಾನವನ್ನು
ಬಿಜೆಪಿ ಎದುರಿಸಿದೆ.

ಮಿಜೋರಾಂ ಮತ್ತು ತೆಲಂಗಾಣದಲ್ಲಿ ಬಿಜೆಪಿಗೆ ಶಕ್ತಿಯಿಲ್ಲ. ತನ್ನ ಶಕ್ತಿ ಹೆಚ್ಚದಿದ್ದರೂ ಪರವಾಗಿಲ್ಲ, ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಮೇಲುಗೈ ಆಗದಂತೆ ತಡೆಯಬೇಕು, ಮತ್ತೆ ಚಿಗುರದಂತೆ ಕಮರಬೇಕು ಎಂಬುದೇ ಬಿಜೆಪಿಯ ಆಶಯ. ಕಾಂಗ್ರೆಸ್ ಆಡಳಿತ ಹೊಂದಿದ್ದ ಮಿಜೋರಾಂ ಈಶಾನ್ಯ ಭಾರತದಲ್ಲಿ ಬಿಜೆಪಿ ಗೆಲ್ಲಬೇಕಿರುವ ಕಟ್ಟಕಡೆಯ ಕಿಲ್ಲೆ. ಗೆದ್ದುಕೊಂಡರೆ ಈಶಾನ್ಯ ಭಾರತ ಸದ್ಯಕ್ಕೆ ಕಾಂಗ್ರೆಸ್ ಮುಕ್ತ. ಲೋಕಸಭೆ ಚುನಾವಣೆಗಳಿಗೆ ಇನ್ನೂ ಆರು ತಿಂಗಳು ಉಳಿದಿವೆ.

ರಾಜಕಾರಣದಲ್ಲಿ ಆರು ತಿಂಗಳು ಬಹು ದೀರ್ಘ ಅವಧಿ. ಏನು ಬೇಕಾದರೂ ಜರುಗಬಹುದು. ಗೆಲುವನ್ನು ಒಲಿಸಿಕೊಳ್ಳಲು ಆಕಾಶ- ಭೂಮಿ ಒಂದು ಮಾಡಲೂ ಹಿಂಜರಿಯದ ಚಂಡ ಪ್ರಚಂಡ ಜೋಡಿಯೊಂದು ರಚಿಸಬಹುದಾದ ಯುದ್ಧತಂತ್ರಗಳ ಗಂಡಾಂತರಕಾರಿ ಆಳ ಅಗಲಗಳ ಊಹೆ ಸುಲಭ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT