ಶುಕ್ರವಾರ, ಮೇ 29, 2020
27 °C

ಐವರ ಬಂಧನ ಎತ್ತಿದ ಪ್ರಶ್ನೆಗಳು

ಆಕಾರ್ ಪಟೇಲ್ Updated:

ಅಕ್ಷರ ಗಾತ್ರ : | |

'ನನಗೆ ನ್ಯಾಯಾಂಗದಲ್ಲಿ ಸಂಪೂರ್ಣ ನಂಬಿಕೆ ಇದೆ' ಮತ್ತು 'ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ' ಎನ್ನುವ ಮಾತುಗಳನ್ನು ನಾವು ಭಾರತದಲ್ಲಿ ಮತ್ತೆ ಮತ್ತೆ ಕೇಳುತ್ತಿರುತ್ತೇವೆ. ನಾನು ಈ ಮಾತುಗಳನ್ನು ಬಳಸುವುದಿಲ್ಲ. ನನಗೆ ನ್ಯಾಯಾಂಗದಲ್ಲಿ ಇರುವ ನಂಬಿಕೆ ಬಹಳ ಕಡಿಮೆ. ಭಾರತದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುವುದು ಬಹುತೇಕ ಇಲ್ಲವೇ ಇಲ್ಲ ಎನ್ನುವಷ್ಟು. ಪ್ರಭುತ್ವವು ಪ್ರಜೆಗಳ ವಿರುದ್ಧ ಕಿಡಿಗೇಡಿತನ ನಡೆಸುತ್ತ ಇರುತ್ತದೆ. ಆದರೆ, ನ್ಯಾಯಾಂಗ ಸಾಮಾನ್ಯವಾಗಿ ಇದಕ್ಕೆ ಪ್ರತಿರೋಧ ಒಡ್ಡುವುದಿಲ್ಲ. ಒಂದು ಪ್ರಕರಣದ ಬಗ್ಗೆ ಅವಲೋಕನ ನಡೆಸಿ ಇದನ್ನು ನಾನು ವಿವರಿಸುತ್ತೇನೆ. ಈ ಪ್ರಕರಣ, ಅಂದರೆ ಐದು ಜನರ ಬಂಧನದ ಪ್ರಕರಣದ ಬಗ್ಗೆ ನಾವು ಇಂದು ಸಾಕಷ್ಟು ವಿಷಯಗಳನ್ನು ಕೇಳುತ್ತಿದ್ದೇವೆ. ಈ ಐದು ಜನರನ್ನು ಸರ್ಕಾರ ಮತ್ತು ಅದರ ಮಾಧ್ಯಮಗಳು 'ನಗರವಾಸಿ ನಕ್ಸಲರು' ಎಂದು ಕರೆಯುತ್ತಿವೆ.

ಈ ಐವರ ಬಗ್ಗೆ ತಮ್ಮಲ್ಲಿ ರೂಪುಗೊಂಡಿರುವ ಅಭಿಪ್ರಾಯವನ್ನು ತಡೆಹಿಡಿದುಕೊಳ್ಳುವಂತೆ ನಾನು ಓದುಗರಲ್ಲಿ ಒತ್ತಾಯ ಮಾಡುತ್ತೇನೆ- ಅದರಲ್ಲೂ ಮುಖ್ಯವಾಗಿ, ಮಾಧ್ಯಮದಲ್ಲಿ ಬರುತ್ತಿರುವ ವರದಿಗಳನ್ನು ಓದಿ, ನೋಡಿ ಅಭಿಪ್ರಾಯ ತಾಳಬಾರದು ಎಂದು ಕೇಳಿಕೊಳ್ಳುತ್ತೇನೆ. ಅಲ್ಲಿ ಕೇಳಿಬರುತ್ತಿರುವುದು ಶುದ್ಧ ಅವಿವೇಕ. ಈ ಐವರನ್ನು ಬಂಧಿಸಬಾರದಿತ್ತು. ಯಾವುದೇ ನಾಗರಿಕ ಪ್ರಜಾತಂತ್ರದಲ್ಲಿ (ಭಾರತ ನಾಗರಿಕ ಪ್ರಜಾತಂತ್ರ ಅಲ್ಲ) ಇದು ಸಾಧ್ಯವಾಗಬಾರದು. ಏಕೆಂದರೆ ನಾಗರಿಕ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಪ್ರಜೆಗಳ ಹಕ್ಕುಗಳನ್ನು ರಕ್ಷಿಸುವ ಕ್ರಿಯಾಶೀಲ ನ್ಯಾಯಾಂಗ ಇರುತ್ತದೆ. ಪ್ರಭುತ್ವವು ಪ್ರಜೆಗಳ ಹಕ್ಕುಗಳನ್ನು ಉಲ್ಲಂಘಿಸುವಂತಹ ಏನನ್ನಾದರೂ ತನ್ನ ಮುಂದಿಟ್ಟಾಗಲೆಲ್ಲ ಅದಕ್ಕೆ ಮುದ್ರೆ ಒತ್ತುವುದರಲ್ಲಿ ಆ ನ್ಯಾಯಾಂಗಕ್ಕೆ ಆಸಕ್ತಿ ಇರುವುದಿಲ್ಲ. ಆದರೆ, ಈಗ ಹೇಳುತ್ತಿರುವ ಪ್ರಕರಣದಲ್ಲಿನ ಲೋಪಗಳನ್ನು ಎತ್ತಿ ತೋರಿಸಿರುವುದು ಕೂಡ ನ್ಯಾಯಾಂಗವೇ ಎಂಬುದನ್ನು ಒಪ್ಪುತ್ತೇನೆ. ನಾನು ಇಲ್ಲಿ ಸುಪ್ರೀಂ ಕೋರ್ಟ್‌ ಬಗ್ಗೆ ಹೇಳುತ್ತಿಲ್ಲ, ದೆಹಲಿ ಹೈಕೋರ್ಟ್‌ ಬಹಿರಂಗಗೊಳಿಸಿದ ವಿಚಾರದ ಬಗ್ಗೆ ಹೇಳುತ್ತಿದ್ದೇನೆ. ಐವರಲ್ಲಿ ಒಬ್ಬರಾದ ಗೌತಮ್ ನವಲಖಾ ಅವರ ಬಂಧನ ಮತ್ತು ಅವರನ್ನು ಪುಣೆಗೆ ಕರೆದೊಯ್ಯಲು ಕೊಟ್ಟಿದ್ದ ಟ್ರಾನ್ಸಿಟ್‌ ರಿಮಾಂಡ್‌ನ ಕಾನೂನುಬದ್ಧತೆ ಬಗ್ಗೆ ದೆಹಲಿ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠ ವಿಚಾರಣೆ ನಡೆಸಿತ್ತು. ಇದಕ್ಕೆ ಸಂಬಂಧಿಸಿದ ಆದೇಶವನ್ನು ನ್ಯಾಯಮೂರ್ತಿ ಎಸ್. ಮುರಳೀಧರ್ ಅವರು ಬರೆದಿದ್ದು, ಇದು ಗಮನಾರ್ಹವಾಗಿದೆ. ಇದನ್ನು ಪ್ರತಿ ಪ್ರಜೆಯೂ ಓದಬೇಕು. ಹತ್ತು ಪುಟಗಳ ಈ ಆದೇಶ ಸರಳವಾಗಿ, ಸ್ಪಷ್ಟವಾಗಿ, ನಿಖರವಾಗಿ ಇದೆ.

ಈ ಆದೇಶದಲ್ಲಿ ಈ ಕೆಳಗಿನ ವಿವರಗಳು ಇವೆ: ಗೌತಮ್ ನವಲಖಾ ಅವರನ್ನು ಆಗಸ್ಟ್‌ 28ರಂದು ದೆಹಲಿಯಲ್ಲಿ ಬಂಧಿಸಲಾಯಿತು. ಪೊಲೀಸರ ಬಳಿ ಶೋಧದ ವಾರಂಟ್‌ ಇರಲಿಲ್ಲ, ಗೌತಮ್ ಅವರ ಮನೆಯೊಳಗೆ ಅವರು ಪ್ರವೇಶಿಸಲು ಅವರಿಗೆ ಸಾಧ್ಯವಾಗಲಿಲ್ಲ. ಪೊಲೀಸರು ವಾರಂಟ್ ಪಡೆದುಕೊಂಡು ಪುನಃ ಬಂದರು.

2017ರ ಡಿಸೆಂಬರ್ 31ರಂದು ನಡೆದ ಒಂದು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ ಈ ಪ್ರಕರಣಕ್ಕೆ ಆಧಾರ. ಆ ಎಫ್‌ಐಆರ್‌ನಲ್ಲಿ ಗೌತಮ್ ಅವರ ಹೆಸರು ಇರಲಿಲ್ಲ. ಆ ಸಭೆಯಲ್ಲಿ ತಾವು ಪಾಲ್ಗೊಂಡಿರಲಿಲ್ಲ ಎಂದು ಗೌತಮ್ ಹೇಳಿದ್ದಾರೆ. ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯ ಅಡಿ (ಈ ಕಾಯ್ದೆಯನ್ನು ಸರ್ಕಾರ ಭಯೋತ್ಪಾದನೆಯ ವಿರುದ್ಧ ಬಳಕೆ ಮಾಡುತ್ತದೆ) ಪ್ರಕರಣ ದಾಖಲಿಸಿದ್ದರ ಬಗ್ಗೆ ಮೂಲ ಎಫ್‌ಐಆರ್‌ನಲ್ಲಿ ಮೊದಲು ಉಲ್ಲೇಖ ಇರಲಿಲ್ಲ. ಅದರಲ್ಲಿ ಸೌಹಾರ್ದ ಕೆಡಿಸಲು ಯತ್ನಿಸಿದ ಸೆಕ್ಷನ್‌ಗಳಿಗೆ ಸಂಬಂಧಿಸಿದ ಉಲ್ಲೇಖ ಮಾತ್ರ ಇತ್ತು. ಬಂಧನದ ನಂತರ ಗೌತಮ್ ಅವರನ್ನು ಪುಣೆಗೆ ಕರೆದೊಯ್ಯಬೇಕಿತ್ತು. ದೆಹಲಿಯ ಸಾಕೇತದ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ ಮನಿಶ್ ಖುರಾನಾ ಅವರು ಗೌತಮ್ ಅವರನ್ನು ಪುಣೆಗೆ ಕರೆದೊಯ್ಯಲು ಅನುಮತಿ ನೀಡಿದರು. ಅಲ್ಲಿಗೆ ಕರೆದೊಯ್ಯಲು ಅನುಮತಿ ಕೋರಿದ ಅರ್ಜಿಯನ್ನು ಹಿಂದಿಯಲ್ಲಿ ಸಲ್ಲಿಸಲಾಯಿತು. ಆದರೆ, ಮ್ಯಾಜಿಸ್ಟ್ರೇಟರ ಎದುರು ಸಲ್ಲಿಸಿದ ಬಹುತೇಕ ದಾಖಲೆಗಳು ಮರಾಠಿಯಲ್ಲಿ ಇದ್ದವು.

'ಗೌತಮ್ ವಿರುದ್ಧದ ಪ್ರಕರಣ ನಿರ್ದಿಷ್ಟವಾಗಿ ಏನು ಎಂಬುದನ್ನು ಈ ದಾಖಲೆಗಳನ್ನು ನೋಡಿ ಅರ್ಥ ಮಾಡಿಕೊಳ್ಳಲು ಆಗದು' ಎಂದು ದೆಹಲಿ ಹೈಕೋರ್ಟ್‌ ಹೇಳಿತು. ನಾಗರಿಕರಾಗಿ ನಾವು ಕೇಳಬೇಕಾದ ಪ್ರಶ್ನೆಯೊಂದು ಇದೆ: ವಸ್ತುಸ್ಥಿತಿ ಹೀಗಿರುವಾಗ, ಗೌತಮ್ ಅವರನ್ನು ಪುಣೆಗೆ ಕರೆದೊಯ್ಯಲು ಮ್ಯಾಜಿಸ್ಟ್ರೇಟರು ಅನುಮತಿ ನೀಡಿದ್ದು ಏಕೆ?

ಪ್ರಕರಣದ ವಿಚಾರಣೆಯನ್ನು ಮಾರನೆಯ ದಿನ ನಡೆಸಲಾಗುವುದು, ಮ್ಯಾಜಿಸ್ಟ್ರೇಟರ ಎದುರು ತೋರಿಸಿದ ಮರಾಠಿ ದಾಖಲೆಗಳನ್ನು ಅನುವಾದಿಸಿ ತರಬೇಕು ಎಂದು ಹೈಕೋರ್ಟ್‌ ಆದೇಶಿಸಿತು. ಈ ನಡುವೆ, ಗೌತಮ್ ಅವರನ್ನು ಪೊಲೀಸರು ಎಲ್ಲಿಂದ ಕರೆತಂದಿದ್ದರೋ ಅಲ್ಲಿಗೇ ಪುನಃ ಕರೆದೊಯ್ದು ಬಿಡಬೇಕಿತ್ತು.

ದಾಖಲೆಗಳ ಅನುವಾದ ಕಾರ್ಯ ಸಮಯ ತೆಗೆದುಕೊಳ್ಳುತ್ತಿದೆ ಎಂದು ಪೊಲೀಸರನ್ನು ಪ್ರತಿನಿಧಿಸುತ್ತಿದ್ದ ವಕೀಲರು ಮಾರನೆಯ ದಿನ ಬೆಳಿಗ್ಗೆ ಹೇಳಿದರು. ಕೋರ್ಟ್‌ ಅವರಿಗೆ ಮಧ್ಯಾಹ್ನದವರೆಗೆ ಸಮಯ ನೀಡಿತು. ಮಧ್ಯಾಹ್ನ 2.15ಕ್ಕೆ ನ್ಯಾಯಾಲಯಕ್ಕೆ ಕೆಲವು ಹಾಳೆಗಳನ್ನು ತೋರಿಸಲಾಯಿತು. ಅದರಲ್ಲಿ ಎಫ್‌ಐಆರ್‌ನ ಇಂಗ್ಲಿಷ್‌ ಪ್ರತಿ ಕೂಡ ಇತ್ತು. ಆದರೆ, ದಾಖಲೆಗಳಲ್ಲಿ ಬಹುತೇಕವು ಇನ್ನೂ ಮರಾಠಿಯಲ್ಲೇ ಇದ್ದವು. ಪೊಲೀಸರ ಪರ ವಕೀಲರು ಇನ್ನಷ್ಟು ಸಮಯ ಬೇಕು ಎಂದು ಕೇಳಿದರು. ಆದರೆ, ಕೋರ್ಟ್ ಈ ಆಗ್ರಹವನ್ನು ಪುರಸ್ಕರಿಸಲಿಲ್ಲ.

'ಬಂಧನದ ಕಾನೂನು ಮಾನ್ಯತೆ ಮತ್ತು ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರು ನೀಡಿದ ಟ್ರಾನ್ಸಿಟ್ ರಿಮಾಂಡ್‌ನ (ಪುಣೆಗೆ ಕರೆದೊಯ್ಯಲು ಅನುಮತಿ) ಕಾನೂನು ಮಾನ್ಯತೆಯ ಬಗ್ಗೆ ನಾವು ಕಳವಳ ಹೊಂದಿದ್ದೇವೆ' ಎಂದು ಹೈಕೋರ್ಟ್‌ನ ನ್ಯಾಯಪೀಠ ಹೇಳಿತು. ಎಫ್‌ಐಆರ್‌ನಲ್ಲಿ ಗೌತಮ್ ಹೆಸರು ಇರಲಿಲ್ಲ ಎಂದು ಕೋರ್ಟ್‌ ಹೇಳಿತು. ಅಂದರೆ, ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರ ಎದುರು ಯಾವ ಸಾಕ್ಷ್ಯಗಳನ್ನು ತೋರಿಸಲಾಯಿತು? 'ಮ್ಯಾಜಿಸ್ಟ್ರೇಟರ ಎದುರು ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ, ಯಾವುದಾದರೂ ಹಂತದರಲ್ಲಿ ಮ್ಯಾಜಿಸ್ಟ್ರೇಟರು, ಅರ್ಜಿದಾರ ಗೌತಮ್ ಅವರ ಪಾತ್ರದ ಬಗ್ಗೆ ಮಾಹಿತಿ ಇರಬಹುದಾದ ಕೇಸ್ ಡೈರಿ ತೋರಿಸುವಂತೆ ಹೇಳಿದರೇ' ಎಂಬ ಪ್ರಶ್ನೆಯನ್ನು ಹೈಕೋರ್ಟ್‌ ಪೀಠವು ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳಿಗೆ ಕೇಳಿತು.

'ಇಲ್ಲ' ಎಂದು ಪೊಲೀಸರು ಹೇಳಿದರು. ಕೇಸ್‌ ಡೈರಿ ಕೂಡ ಮರಾಠಿಯಲ್ಲಿ ಇದೆ ಎಂಬುದು ಗೊತ್ತಾಯಿತು. ಗೌತಮ್ ಅವರು ಮಾಮೂಲಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾದ ಕಾರಣ ವಾಸ್ತವದಲ್ಲಿ ಸಮಸ್ಯೆ ಏನೂ ಇಲ್ಲ ಎಂದು ಪೊಲೀಸರ ಪರ ವಕೀಲರು ಹೇಳಿದರು. ಈ ಮಾತಿಗೆ ಪ್ರತಿಯಾಗಿ ಹೈಕೋರ್ಟ್‌, 'ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯ ಅಡಿ ದೋಷಾರೋಪ ಪಟ್ಟಿ ಸಲ್ಲಿಸುವವರೆಗೆ ಮಾಮೂಲಿ ಜಾಮೀನು ಪಡೆಯುವುದು ಅತ್ಯಂತ ಕಠಿಣ ಆಗಬಹುದು' ಎಂದು
ಹೇಳಿತು.

ಈ ಹಂತದಲ್ಲಿ, ಅಂದರೆ ಆಗಸ್ಟ್‌ 29ರಂದು, ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ಮಾಡಿದೆ ಎಂದು ಪೊಲೀಸರ ಪರ ವಕೀಲರು ತಿಳಿಸಿದರು. ಆಗ, ಟ್ರಾನ್ಸಿಟ್ ರಿಮಾಂಡ್‌ನ ಕಾನೂನು ಮಾನ್ಯತೆಯ ಬಗ್ಗೆ ವಿಚಾರಣೆಯನ್ನು ಮುಂದುವರಿಸುವುದು ಇನ್ನು ಯುಕ್ತವಾಗಲಿಕ್ಕಿಲ್ಲ ಎಂದು ಹೈಕೋರ್ಟ್‌ ಪೀಠ ಹೇಳಿತು.

ನಮಗೆ ಈಗ ತಿಳಿದಿರುವಂತೆ, ಸುಪ್ರೀಂ ಕೋರ್ಟ್‌ ಈ ಪ್ರಕರಣವನ್ನು ಸೆಪ್ಟೆಂಬರ್ 6ರಂದು ಮತ್ತೆ ವಿಚಾರಣೆಗೆ ಎತ್ತಿಕೊಳ್ಳಲಿದೆ. ಅದು ಏನು ಮಾಡಲಿದೆ ಎಂಬುದನ್ನು ನಮ್ಮಲ್ಲಿ ಹಲವರು ಬಹಳ ಆಸಕ್ತಿಯಿಂದ ನೋಡಲಿದ್ದೇವೆ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು