ಭಾನುವಾರ, ಆಗಸ್ಟ್ 25, 2019
24 °C

ಕೊನೆಯಿಲ್ಲದ ಬಲೆ

ಗುರುರಾಜ ಕರಜಗಿ
Published:
Updated:
Prajavani

ಅನುಬಂಧ ಜೀವಜೀವಕೆ ಪುರಾಕೃತದಿಂದ |

ಮನದ ರಾಗದ್ವೇಷವಾಸನೆಗಳದರಿಂ ||

ತನುಕಾಂತಿ ಮೋಹ ವಿಕೃತಿಗಳುಮಾ ತೊಡಕಿನವು |

ಕೊನೆಯಿರದ ಬಲೆಯೋ ಅದು – ಮಂಕುತಿಮ್ಮ || 168 ||

 

ಪದ-ಅರ್ಥ: ಅನುಬಂಧ=ಹೊಂದಾಣಿಕೆ, ಪುರಾಕೃತ=ಹಿಂದಿನಿಂದ ಬಂದ, ರಾಗದ್ವೇಷವಾಸನೆಗಳದರಿಂ=ರಾಗ+ದ್ವೇಷ
+ವಾಸನೆಗಳು+ಅದರಿಂ(ಅದರಿಂದ), ತನುಕಾಂತಿ=ದೇಹದ ಹೊಳಪು, ವಿಕೃತಿಗಳುಮಾ= ವಿಕೃತಿಗಳು+ಆ

ವಾಚ್ಯಾರ್ಥ: ಜೀವಜೀವಗಳ ನಡುವಿನ ಬಂಧ ಹಿಂದಿನಿಂದಲೇ ಬಂದದ್ದು. ಅದರಿಂದ ರಾಗ, ದ್ವೇಷ, ವಾಸನೆಗಳು ಹುಟ್ಟಿ ಬರುತ್ತವೆ. ದೇಹಸೌಂದರ್ಯ, ಮೋಹ, ಅದರಿಂದಾಗುವ ವಿಕೃತಿಗಳು ತೊಡಕನ್ನುಂಟುಮಾಡುತ್ತವೆ. ಇದು ಕೊನೆಯೇ ಇರದ ಬಲೆ.

ವಿವರಣೆ: ಇಬ್ಬರು, ಮೂವರು ಯಾವುದೋ ಸಂದರ್ಭದಲ್ಲಿ ಭೆಟ್ಟಿಯಾದಾಗ ನಾವು ಆಕಸ್ಮಿಕವಾಗಿ ಭೆಟ್ಟಿಯಾದೆವು ಎನ್ನುತ್ತಾರೆ. ನನ್ನ ನಂಬಿಕೆಯಲ್ಲಿ ಅದು ಆಕಸ್ಮಿಕವಲ್ಲ. ಪ್ರಪಂಚದಲ್ಲಿ ಏಳುನೂರುಕೋಟಿ ಜನ ಮನುಷ್ಯರಿದ್ದಾರೆ. ಅಷ್ಟು ಜನರಲ್ಲಿ ಈ ಮೂವರೇ ಹೇಗೆ ಭೆಟ್ಟಿಯಾದರು? ಅದೊಂದು ದೈವೀ ಸಂಕಲ್ಪ. ಯಾವುದೋ ಕಾರ್ಯಸಾಧನೆಗೆ ವಿಧಿ ಹೂಡಿದ ಆಟ. ಇದನ್ನು ಕಗ್ಗ ಪುರಾಕೃತ ಎನ್ನುತ್ತದೆ. ಜೀವ ಜೀವಗಳ ಸಂಬಂಧ ಹುಟ್ಟುವುದು ಆ ಜೀವಗಳ ಹಿಂದಿನ ಕೃತ್ಯಗಳಿಂದ. ಇದನ್ನು ನಾವು ಬದುಕಿನಲ್ಲಿ ಕಂಡಿಲ್ಲವೆ? ಎಲ್ಲಿಯದೋ ಹುಡುಗ, ಎಲ್ಲಿಯದೋ ಹುಡುಗಿ ಅದಾವ ಬಂಧದಿಂದಲೋ ಒಂದಾಗುತ್ತಾರೆ. ಇಬ್ಬರೂ ಬೇರೆ ಬೇರೆ ಹಿನ್ನೆಲೆಯಿಂದ ಬಂದವರು, ಸ್ನೇಹಿತರಾಗಿ ವ್ಯಾಪಾರ ಪ್ರಾರಂಭಿಸುತ್ತಾರೆ. ಹಣ ಅವರನ್ನು ಒಂದೆಡೆಗೆ ಬಂಧಿಸುತ್ತದೆ. ಹಣ ಹೆಚ್ಚು ಕೂಡಿಕೆಯಾದಂತೆ ಆಸೆ, ಅತಿಯಾಸೆ, ಲೋಭಗಳು ತಲೆ ಎತ್ತುತ್ತವೆ. ಅದು ದ್ವೇಷಕ್ಕೆ ಕಾರಣವಾಗುತ್ತದೆ. ಅದು ಅನಾಹುತಕ್ಕೆ ದಾರಿ ಮಾಡಿಕೊಡಬಹುದು. ಅನುಬಂಧದಿಂದಲೇ ಮನಸ್ಸಿನ ರಾಗ, ದ್ವೇಷ, ವಾಸನೆಗಳು ಉತ್ಪನ್ನವಾಗುತ್ತವೆ.

ಇದೊಂದು ಬಗೆಯಾದರೆ, ದೇಹಾಕರ್ಷಣೆಯಿಂದ ಆದ ಬಂಧಗಳ ಪರಿ ಇನ್ನೊಂದು. ನಾವು ಇಂಥದ್ದನ್ನು ವಾರ್ತೆಗಳಲ್ಲಿ ಕೇಳುತ್ತೇವೆ, ಓದುತ್ತೇವೆ. ಅಲ್ಲವೆ? ಸುಖವಾಗಿ, ಸಂತೋಷವಾಗಿದ್ದವರು ಗಂಡ ಹೆಂಡತಿಯರು. ಗಂಡನ ಸ್ನೇಹಿತನಾಗಿ ಮನೆಗೆ ಬಂದವನು ಆಕೆಯ ಸೌಂದರ್ಯದ ಸೆಳೆತದಲ್ಲಿ ಕೊಚ್ಚಿ ಹೋದ. ಆಕೆಗೂ ಅವನಲ್ಲಿ ಮೋಹ ಉಂಟಾಯಿತು. ಈ ಹೊಸದಾಗಿ ಚಿಗುರಿದ ಪ್ರೀತಿಗೆ ಗಂಡನ ಪ್ರೇಮ ಅಡ್ಡವಾಗುತ್ತಿದೆ ಎನ್ನಿಸಿತು. ಇಬ್ಬರ ಮನಸ್ಸು ವಿಕಾರಕ್ಕೆ ಒಳಗಾಯಿತು. ಇಬ್ಬರೂ ಸೇರಿದ್ದು ಗಂಡನ ಪ್ರಾಣಕ್ಕೆ ಮುಳುವಾಯಿತು. ಮುಂದೆ ಯಾವುದೋ ಎಳೆಯನ್ನು ಹಿಡಿದು ಹುಡುಕಿದ ಪೋಲೀಸರ ತನಿಖೆಗೆ ಇಬ್ಬರೂ ಸಿಕ್ಕು ಜೈಲು ಸೇರಿದರು. ಅವರಿಗೂ ಸುಖವಿಲ್ಲ, ಸುಖವಾಗಿದ್ದ ಸಂಸಾರ ಮುಳುಗಿಹೋಯಿತು. ಶರೀರದ ಸೌಂದರ್ಯ ಸಂತೋಷ ಕೊಡುವಂತೆ ಅಪಾಯದ ಹುತ್ತವೂ ಆಗಬಹುದಲ್ಲವೆ? ಇದನ್ನು ಸೂಕ್ಷ್ಮವಾಗಿ ತನುಕಾಂತಿಯ ಮೋಹ ವಿಕೃತಿಗೆ ಈಡುಮಾಡಿ ತೊಡಕನ್ನು ತಂದೀತು ಎನ್ನುತ್ತದೆ ಕಗ್ಗ.

ಪುರಾತನ ಕೃತ್ಯದಿಂದ ಅನುಬಂಧ, ಅನುಬಂಧದಿಂದ ಮನದಲ್ಲಿ ರಾಗ, ದ್ವೇಷಗಳ ಹುಟ್ಟು. ದೇಹ ಸೌಂದರ್ಯದಿಂದ ಮೋಹ, ಮೋಹದಿಂದ ಸಂಬಂಧಗಳಲ್ಲಿ ತೊಡಕು. ಹೀಗೆ ಒಂದರಿಂದ ಮತ್ತೊಂದು ಬೆಳೆಯುತ್ತಲೇ ಹೋಗುತ್ತದೆ. ಇದು ಕೊನೆಯಿಲ್ಲದ ಬಲೆ. ಈ ಬಲೆಯಿಂದಲೇ ಪ್ರಪಂಚದ ವೈವಿಧ್ಯ, ಲೋಕನಾಟಕ.

Post Comments (+)