ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊರೆ ಬಂದ ಕಣ್ಣು

Last Updated 16 ಅಕ್ಟೋಬರ್ 2018, 19:42 IST
ಅಕ್ಷರ ಗಾತ್ರ

ಮಂದಾಕ್ಷಿ ನಮಗಿಹುದು ಬಲುದೂರ ಸಾಗದದು |
ಸಂದೆ ಮಸಕಿನೊಳಿಹುದು ಜೀವನದ ಪಥವು ||
ಒಂದುಮೆಟಕದು ಕೈಗೆ; ಏನೊ ಕಣ್ಕೆಣಕುವುದು |
ಸಂದಿಯವೆ ನಮ್ಮ ಗತಿ – ಮಂಕುತಿಮ್ಮ || 44 ||

ಪದ-ಅರ್ಥ: ಮಂದಾಕ್ಷಿ=ಮಂದವಾದ ಕಣ್ಣು, ಸಂದೆ=ಸಂಜೆ, ಒಂದುಮೆಟಕದು=ಒಂದೂ+ಎಟಕದು, ಕಣ್ಕೆಣಕುವುದು=ಕಣ್+ಕೆಣಕುವುದು, ಸಂದಿಯ=ಸಂದೇಹ.

ವಾಚ್ಯಾರ್ಥ: ನಮ್ಮದು ಮಂದವಾದ ದೃಷ್ಟಿ, ಬಲುದೂರದ್ದನ್ನು ಕಾಣಲಾರದು. ಜೀವನದ ದಾರಿ ಸಂಜೆಯ ಮಂಜಿನೊಳಗೆ ಇದ್ದಂತಿದೆ. ಏನೋ ಕಣ್ಣನ್ನು ಕೆಣಕುತ್ತದೆ ಆದರೆ ಕೈಗೆ ಸಿಕ್ಕುವುದಿಲ್ಲ. ಸಂದೇಹವೆ ನಮ್ಮ ಗತಿಯಾಗಿದೆ.

ವಿವರಣೆ: ನಮಗೆ ಮಂದಾಕ್ಷಿ ಏಕೆ? ನಮ್ಮ ಗ್ರಹಿಕೆ, ತರ್ಕ ಎಲ್ಲವೂ ಪಂಚೇಂದ್ರಿಯಗಳಿಂದ ಬುದ್ಧಿಗೆ ನಿಲುಕಿದ್ದು. ಆದರೆ ನಮ್ಮ ಬುದ್ಧಿಯನ್ನು ನಾನಾ ಮೋಹ ಮಮತೆಗಳು, ರಾಗದ್ವೇಷಗಳು ಯಾವಾಗಲೂ ಹಿಡಿದುಕೊಂಡಿರುತ್ತವೆ. ನಮ್ಮ ಮನಸ್ಸಿನ ತಳದಲ್ಲಿ ಗುಪ್ತವಾಗಿ ಕುಳಿತಿರುತ್ತವೆ. ಅವುಗಳಿಂದ ಹೊರಡುವ ವಾಸನೆಗಳು ಮೋಡಗಟ್ಟಿ ನಮ್ಮ ಜೀವನದ ಕಣ್ಣನ್ನು ಆವರಿಸಿಬಿಡುತ್ತವೆ. ಈ ಮೋಡಗಳ ಮರೆಯನ್ನು ಪೂರ್ತಿಯಾಗಿ ನಿವಾರಿಸುವವರೆಗೆ ನಮ್ಮ ಕಣ್ಣು ನಿಜವಾದ, ಪೂರ್ಣವಾದ ಬೆಳಕನ್ನು ಕಾಣಲಾರದು. ನಮಗೆ ಸಾಮಾನ್ಯವಾಗಿ ದೊರಕುವ ಬೆಳಕು ಸಂಜೆಮಬ್ಬಿನ ಬೆಳಕು, ಬಣ್ಣ ಬೆರೆತ ಬೆಳಕು. ಸರಿಯಾದ ಶುದ್ಧ ಬೆಳಕನ್ನು ಕಾಣಬೇಕನ್ನುವವರು ಮೊದಲು ಕಣ್ಣನ್ನು ಶುದ್ಧಗೊಳಿಸಿಕೊಳ್ಳಬೇಕು, ಕನ್ನಡಕವನ್ನಲ್ಲ.

ಅದು ಹೇಗೆ? ಶ್ರದ್ಧೆಯಿಂದ ಮಾತ್ರ ಅದು ಸಾಧ್ಯ. ಶಿಕ್ಷಣದಲ್ಲಿ ತೊಡಗಿರುವ ಬ್ರಹ್ಮಚಾರಿಯ ಬಾಯಿಯಿಂದ ಗುರುಕುಲದಲ್ಲಿ ಹೇಳಿಸುತ್ತಿದ್ದ ಮಂತ್ರ –

‘ಸ್ವಸ್ತಿ ಶ್ರದ್ಧಾಂ ಮೇಧಾಂ ಯಶ: ಪ್ರಜ್ಞಾಂ’

ಮೊದಲು ಶ್ರದ್ಧೆ. ಶ್ರದ್ಧೆಯಿಂದ ಜ್ಞಾನ. ತರ್ಕದಿಂದ ವಿಜ್ಞಾನ. ನಮಗೆ ಎರಡೂ ಬೇಕು. ನಮ್ಮ ಬದುಕಿಗೆ ಅವೆರಡೂ ಕಣ್ಣಿದ್ದಂತೆ – ‘ಜ್ಞಾನಂ ವಿಜ್ಞಾನಸಹಿತಂ’ ಎಂಬುದು ಪೂರ್ವಿಕರ ಮಾತು. ಶ್ರದ್ಧೆಗೆ ತರ್ಕದಿಂದ ಪುಷ್ಟಿ; ತರ್ಕಕ್ಕೆ ಶ್ರದ್ಧೆಯಿಂದ ಪೋಷಣೆ. ತಾಕಿಕ ವಿಷಯದಲ್ಲಿ ತರ್ಕ ಪ್ರಯೋಜನಕಾರಿ. ಆದರೆ ಯಾವ ವಸ್ತುಗಳು ಪ್ರತ್ಯಕ್ಷವಲ್ಲವೋ ಅವುಗಳಲ್ಲಿ ಶ್ರದ್ಧೆಯೇ ಸರಿ. ದೈವ, ಅದೃಷ್ಟ, ಕಾಲಗತಿ, ಆತ್ಮ, ಜೀವ, ಮೃತ್ಯು ಇಂಥ ವಿಚಾರಗಳಲ್ಲಿ ನಮಗೆ ಶ್ರದ್ಧೆಯೇ ಗತಿ. ಇಂದಿನ ದಿನಗಳಲ್ಲಿ ಶ್ರದ್ಧೆ ಕಡಿಮೆಯಾಗುತ್ತ ತರ್ಕ ಪ್ರಬಲವಾಗುತ್ತದೆ.

ಜನರಿಗೆ ಕಣ್ಣಿನ ಶಕ್ತಿಗಿಂತ ಕನ್ನಡಕದ ಮೇಲೆ ಪ್ರೀತಿ ಹೆಚ್ಚಾಗುತ್ತಿದೆ. ಇದರ ಫಲವೇ ಮಂದ ದೃಷ್ಟಿ. ನಮ್ಮ ಜೀವನದ ಪಥವೇ ಹೀಗೆ ಸಂಜೆಗತ್ತಲಿನಲ್ಲಿ ನಡೆದಂತೆ ತೋರುತ್ತದೆ. ಕಷ್ಟಗಳಿಗೆ ಪರಿಹಾರ ತೋರಿದಂತೆ ಕಾಣುತ್ತದೆ. ಆದರೆ ಪರಿಹಾರ ದೊರೆಯದು. ಮಬ್ಬುಗತ್ತಲೆಯಲ್ಲಿ ಯಾವುದೋ ಆಸೆ ಕಣ್ಣನ್ನು ಕೆಣಕುತ್ತದೆ ಆದರೆ ನಮ್ಮ ಅಜ್ಞಾನ ಅದು ದೊರೆಯದಂತೆ ಮಾಡುತ್ತದೆ. ಹೀಗಾಗಿ ನಮ್ಮ ಬದುಕೆಲ್ಲ ಸಂದೇಹದಲ್ಲೇ ಕಳೆದುಹೋಗುತ್ತಿದೆ.

ಈ ಕಣ್ಣಿನ ದೃಷ್ಟಿ ಸ್ವಚ್ಛವಾಗಬೇಕಾದರೆ ಸಂದೇಹ ತೊಲಗಬೇಕು. ಅದಕ್ಕೆ ಶ್ರದ್ಧೆ ಬೇಕು. ಅದು ಬಲವಾದಾಗ, ರಾಗದ್ವೇಷಗಳ ಮರೆ ಕೊಂಚ ಸರಿದಾಗ ದೃಷ್ಟಿ ಬಲವಾಗುತ್ತದೆ. ಬದುಕು ಹಸನಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT