ಶುಕ್ರವಾರ, ಏಪ್ರಿಲ್ 10, 2020
19 °C

ಪೇಟೆ ಕುಸಿತ, ನೀವೇನು ಮಾಡ್ಬೇಕು?

ಕ್ಲಿಯೋನ್ ಡಿಸೋಜ Updated:

ಅಕ್ಷರ ಗಾತ್ರ : | |

ಷೇರುಪೇಟೆ ಕಳೆದ ಒಂದು ವಾರದಿಂದ ನಿರಂತರವಾಗಿ ಕುಸಿತ ಕಾಣುತ್ತಿದೆ. ‘ಕೋವಿಡ್‌–19’ ವೈರಸ್‌ನಿಂದಾಗಿ ಸೆನ್ಸೆಕ್ಸ್, ನಿಫ್ಟಿ ದಾಖಲೆಯ ಇಳಿಕೆ ಕಂಡಿವೆ. ನನ್ನ ಹೂಡಿಕೆಗಳು ನಷ್ಟ ಅನುಭವಿಸುತ್ತಿವೆ. ಷೇರು, ಮ್ಯೂಚುವಲ್ ಫಂಡ್ಸ್‌ಗಳಲ್ಲಿ ಹೂಡಿಕೆ ಮುಂದುವರಿಸಲೇ, ಇಲ್ಲ ಹಣ ಹಿಂದೆಪಡೆಯುವುದು ಸೂಕ್ತವೇ... ಇಂತಹ ಹಲವಾರು ಪ್ರಶ್ನೆಗಳನ್ನು ಸಾಮಾನ್ಯ ಹೂಡಿಕೆದಾರರು ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ಮಾರುಕಟ್ಟೆ ವಿಶ್ಲೇಷಕರು ನೀಡುವ ಉತ್ತರ ಹೂಡಿಕೆದಾರರಿಗೆ ಅಷ್ಟು ಸಮಾಧಾನ ತರುವುದಿಲ್ಲ ಎನ್ನುವುದು ಒಪ್ಪುವ ಮಾತೇ ಸರಿ.

ಆದರೆ, ತಮ್ಮ ಜೀವನದುದ್ದಕ್ಕೂ ಬಹಳಷ್ಟು ಮಾರುಕಟ್ಟೆಗಳ ಏರಿಳಿತ ಕಂಡಿರುವ ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್, ಪೇಟೆ ಕುಸಿದಾಗ ನಾವೇನು ಮಾಡಬೇಕು ಎನ್ನುವ ಬಗ್ಗೆ ನೀಡಿರುವ ಈ ಉತ್ತರವನ್ನು ಎಲ್ಲರೂ ಒಪ್ಪಲೇಬೇಕಾಗುತ್ತದೆ.

‘ಹೌದು. ನಿಮ್ಮ ಗುರಿ 10 ವರ್ಷದೆಡೆ ಇರಬೇಕೇ ವಿನಾ 10 ನಿಮಿಷದೆಡೆಯಲ್ಲ. ನೀವು ಖರೀದಿಸಿದ ಷೇರನ್ನು 10 ವರ್ಷಗಳಾದರೂ ಹಿಡಿದಿಟ್ಟುಕೊಳ್ಳುವ ತಾಳ್ಮೆ ನಿಮಗಿಲ್ಲದಿದ್ದರೆ ಷೇರುಪೇಟೆಗೆ ಹೆಜ್ಜೆ ಇಡಬೇಡಿ’ – ಇದು ಬಫೆಟ್ ಖಚಿತ ನುಡಿ. ಪೇಟೆಯಲ್ಲಿ ತ್ವರಿತ ಬದಲಾವಣೆಗಳಾಗುವುದು ಸರ್ವೇ ಸಾಮಾನ್ಯ. ಈ ವಿದ್ಯಮಾನಗಳಿಗೆ ಬೆದರಿ ಏನೋ ಆಗಿ ಹೋಯ್ತು ಎನ್ನುವ ರೀತಿ ಹೂಡಿಕೆದಾರರು ಚಿಂತೆ ಮಾಡುವುದರಲ್ಲಿ ಅರ್ಥವಿಲ್ಲ.

ಷೇರುಪೇಟೆ ಇತಿಹಾಸ ಏನು ಹೇಳುತ್ತದೆ. ಷೇರುಪೇಟೆ ಸೂಚ್ಯಂಕ ಮತ್ತು ನಿಫ್ಟಿಯು ಕಳೆದ 22 ವರ್ಷಗಳಲ್ಲಿ 16  ವರ್ಷಗಳ ಕಾಲ ಸಕಾರಾತ್ಮಕ ಫಲಿತಾಂಶ ನೀಡಿದ್ದರೆ, 7 ವರ್ಷಗಳ ಕಾಲ ನಕಾರಾತ್ಮಕ ಫಲಿತಾಂಶ ಕೊಟ್ಟಿದೆ. ಇದನ್ನು ಪರಿಗಣಿಸಿ ನೋಡಿದಾಗ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಹಣದುಬ್ಬರದ ಪರಿಸ್ಥಿತಿಯನ್ನು ಮೀರಿ ಮೌಲ್ಯ ಹೆಚ್ಚಿಸಿಕೊಂಡು ಹೂಡಿಕೆದಾರರಿಗೆ ಲಾಭ ನೀಡಿರುವುದು ಸ್ಪಷ್ಟವಾಗುತ್ತದೆ.

ಉದಾಹರಣೆಗೆ 2012 ರಿಂದ 2017ರ ವರೆಗಿನ ಅವಧಿಯನ್ನು ತೆಗೆದುಕೊಂಡರೆ ಷೇರು ಮಾರುಕಟ್ಟೆ ಶೇ 11 ರಷ್ಟು ಪ್ರಗತಿ ಸಾಧಿಸಿದೆ. ಅಂದರೆ ನೀವು ಹೂಡಿಕೆ ಮಾಡಿರುವ  ₹ 1 ಲಕ್ಷವು ಐದು ವರ್ಷಗಳ ಅವಧಿಯಲ್ಲಿ ₹ 1.60 ಲಕ್ಷ ಆಗಿದೆ.

ವೈರಸ್ ಬಂದಾಗ ಷೇರುಪೇಟೆಗಳು ಹೇಗೆ ವರ್ತಿಸಿವೆ: ‘ಕೋವಿಡ್‌–19’ ವೈರಸ್‌ನಿಂದಾಗಿ ಷೇರು ಮಾರುಕಟ್ಟೆಯು ಶುಕ್ರವಾರ ಒಂದೇ ದಿನ 1,448 ಅಂಶಗಳ ಕುಸಿತ ಕಂಡಿದೆ ಎನ್ನುವುದು ವಾಸ್ತವ. ಆದರೆ, ಈ ಹಿಂದೆಯೂ ಸಾಂಕ್ರಾಮಿಕ ಸೋಂಕುಗಳು ಜಗತ್ತನ್ನು ಬಾಧಿಸಿದಾಗ ಷೇರುಪೇಟೆ ಕುಸಿತ ಕಂಡು ನಂತರದಲ್ಲಿ ಪುಟುದೆದ್ದಿರುವ ಸಾಕಷ್ಟು ಉದಾಹರಣೆಗಳಿವೆ.

2002-03 ರಲ್ಲಿ ತೀವ್ರ ಉಸಿರಾಟದ ತೊಂದರೆಯ ‘ಸಾರ್ಸ್’ ಸೋಂಕಿಗ ಚೀನಾ ಸೇರಿದಂತೆ ಜಗತ್ತಿನ ಹಲವು ದೇಶಗಳು ತತ್ತರಿಸಿ ಹೋಗಿದ್ದವು. 2003ರಲ್ಲಿ 9 ಸಾವಿರಕ್ಕೂ ಹೆಚ್ಚು ಜನರಲ್ಲಿ ಸಾರ್ಸ್ ಸೋಂಕು ಕಂಡಬಂದಿತ್ತು. 774 ಕ್ಕೂ ಹೆಚ್ಚು ಮಂದಿ ಈ ಸೋಂಕಿನಿಂದ ಮೃತಪಟ್ಟಿದ್ದರು. ವಿಶ್ವ ಆರೋಗ್ಯ ಸಂಸ್ಥೆ ಈ ಸೋಂಕನ್ನು ಜಾಗತಿಕ ವೈದ್ಯಕೀಯ ತುರ್ತು ಎಂದು ಘೋಷಿಸಿತ್ತು, ಸಾರ್ಸ್ ಸೋಂಕು ವ್ಯಾಪಕವಾದಾಗ  2002-03ರ ನವೆಂಬರ್‌ನಲ್ಲಿ 3,400 ಅಂಶಗಳ ಆಸುಪಾಸಿನಲ್ಲಿದ್ದ ಸೆನ್ಸೆಕ್ಸ್ 2,850 ಅಂಶಗಳಿಗೆ ಕುಸಿತ ಕಂಡಿತು. ಅಂದರೆ ಶೇ 19 ರಷ್ಟು ಕುಸಿತ ದಾಖಲಿಸಿತ್ತು. ಆದರೆ ನಂತರದಲ್ಲಿ ಅಂದರೆ ಜನವರಿ 2, 2004 ರ ವೇಳೆಗೆ ಸೆನ್ಸೆಕ್ಸ್ 6,000 ಅಂಶಗಳ ಗಡಿ ದಾಟಿತ್ತು.

ಸರಳವಾಗಿ ಹೇಳುವುದಾದರೆ ಸೆನ್ಸೆಕ್ಸ್ ಮುಂದಿನ 14 ತಿಂಗಳ ಅವಧಿಯಲ್ಲಿ ಶೇ 100 ರಷ್ಟು ಅಧಿಕ ಬೆಳವಣಿಗೆ ಸಾಧಿಸಿತು. 2009 ರಲ್ಲಿ ಕಾಣಿಸಿಕೊಂಡ ಎಚ್‌1ಎನ್‌1, 2013 ರಲ್ಲಿ ಪತ್ತೆಯಾದ ಎಬೋಲಾ, 2015 ರಲ್ಲಿ ಕಂಡು ಬಂದ ಜೀಕಾ ವೈರಸ್‌ಗಳೆಲ್ಲವೂ ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ. ಆದರೆ, ನಂತರದಲ್ಲಿ ಮಾರುಕಟ್ಟೆಗಳು ಪುಟಿದೆದ್ದಿವೆ.

ಷೇರುಪೇಟೆ ಮುನ್ನೋಟ
ಷೇರುಪೇಟೆ ಸೂಚ್ಯಂಕಗಳು ಕಳೆದ ವಾರ ಭಾರಿ ಕುಸಿತ ಕಂಡಿವೆ. 38,297 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇ 6.98 ರಷ್ಟು ಕುಸಿದಿದ್ದರೆ, 11,201 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 7.28 ರಷ್ಟು ತಗ್ಗಿದೆ. 11 ವಲಯಗಳ ಸೂಚ್ಯಂಕಗಳು ನಕಾರಾತ್ಮಕ ಹಾದಿ ಹಿಡಿದಿವೆ. ಕಳೆದ ವಾರ ಹೂಡಿಕೆದಾರರು ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 11.63 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ‘ಕೋವಿಡ್‌–19’ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಜಾಗತಿಕ ಮಾರುಕಟ್ಟೆಗಳು ನಕಾರಾತ್ಮಕ ಹಾದಿ ಹಿಡಿದಿದ್ದು, ಭಾರತದ ಷೇರುಪೇಟೆಯ ಮೇಲೂ ಅದರ ನೇರ ಪರಿಣಾಮ ಆಗಿದೆ.

ಮಾರ್ಚ್ 2ರಿಂದ ಎಸ್‌ಬಿಐ ಕಾರ್ಡ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ನಡೆಯಲಿದೆ. ತಯಾರಿಕಾ ವಲಯದ ಸೂಚ್ಯಂಕ (ಪಿಎಂಐ) ಮತ್ತು ಸೇವಾ ವಲಯದ ಸೂಚ್ಯಂಕ (ಪಿಎಂಐ) ಗಳ ದತ್ತಾಂಶ ಈ ವಾರ ಪ್ರಕಟಗೊಳ್ಳಲಿದೆ. ಇದರ ಮಧ್ಯೆ ಒಪೆಕ್ (ಪೆಟ್ರೋಲಿಯಂ ರಫ್ತು ದೇಶಗಳ ಸಂಘ) ಸಭೆ ವಿಯೆನ್ನಾದಲ್ಲಿ ನಡೆಯಲಿದೆ. ‘ಕೋವಿಡ್‌–19’ ವೈರಸ್ ಯಾವ ರೀತಿ ಹತೋಟಿಗೆ ಬರಲಿದೆ ಎನ್ನುವುದು ಮಾರುಕಟ್ಟೆಯ ಗತಿ ನಿರ್ಧರಿಸಲಿದೆ.

ಕುಸಿತ ಎದುರಿಸಲು ಬಫೆಟ್ ಅಷ್ಟ ಸೂತ್ರಗಳು

1. ಷೇರು ಮಾರುಕಟ್ಟೆಯಲ್ಲಿ ಏರಿಳಿತ ಎನ್ನುವುದು ತ್ವರಿತ- ಹರಿತ
2. ಷೇರು ಮಾರುಕಟ್ಟೆಯಲ್ಲಿ ಏರಿಳಿತದ ಸ್ಥಿತಿ ಇರುವಾಗ ತಾಳ್ಮೆಯಿಂದಿರಬೇಕು. ಯಾಕಂದ್ರೆ ಷೇರು ಹೂಡಿಕೆ ಬುದ್ಧಿವಂತರ ಪ್ರತಿಭಾ ಪ್ರದರ್ಶನವಲ್ಲ.
3. ಮಾರುಕಟ್ಟೆಯಲ್ಲಿ ಯಾವಾಗ ಕುಸಿತ ಉಂಟಾಗುತ್ತದೆ ಎಂದು ಅಂದಾಜು ಮಾಡಲು ಹೋಗಬೇಡಿ. ಮಾರುಕಟ್ಟೆ ಅಂದ ಮೇಲೆ ಕುಸಿತ ಆಗುತ್ತದೆ ಎನ್ನುವುದು ಗೊತ್ತಿದ್ದರೆ ಸಾಕು
4. ಕಂಪನಿಯೊಂದರ ಷೇರಿನ ಬೆಲೆ ಕುಸಿದ ತಕ್ಷಣ ಕಂಪನಿ ಚೆನ್ನಾಗಿ ಸಾಧನೆ ತೋರಿಲ್ಲ ಎಂಬ ನಿರ್ಣಯಕ್ಕೆ ಬರಬೇಡಿ
5. ಕುಸಿತದ ಸಮಯದಲ್ಲೂ ಹೂಡಿಕೆ ಹಿಂದೆ ಪಡೆಯಬೇಡಿ ಎಚ್ಚರಿಕೆಯಿಂದ ಹೂಡಿಕೆ ಮುಂದುವರಿಸಿ. ಮಾರುಕಟ್ಟೆ ಏರಿಳಿತಗಳು ಸರ್ವೇ ಸಾಮಾನ್ಯ.
6. ‘ಇತರರು ಆಸೆಬುರುಕರಾಗಿದ್ದಾಗ ನೀವು ಭಯಭೀತರಾಗಿರಿ. ಬೇರೆಯವರು ಭಯಭೀತರಾಗಿದ್ದಾಗ ನೀವು ಆಸೆಬರುಕರಾಗಿ’– ಅಂದರೆ ಕುಸಿತದ ಕಾಲದಲ್ಲಿ ಅಳೆದು ತೂಗಿ ಒಳ್ಳೆಯ ಕಂಪನಿಗಳ ಷೇರುಗಳನ್ನು ಖರೀದಿಸಿ
7. ಎಲ್ಲ ಕಡೆ ಬರುವ ಸುದ್ದಿ, ಪತ್ರಿಕೆಗಳಲ್ಲಿನ ತಲೆಬರಹಗಳಿಗೆ ಬೆದರಬೇಡಿ. ಹೂಡಿಕೆ ವಿಚಾರದಲ್ಲಿ ಸಮಚಿತ್ತರಾಗಿರಿ
8. ಸಂಪತ್ತಿನೆಡೆಗೆ ನಿಧಾನದ ನಡಿಗೆ ಬಹಳ ಮುಖ್ಯ ಎನ್ನುವುದನ್ನು ಮರೆಯಬೇಡಿ

(ಲೇಖಕ: ‘ಇಂಡಿಯನ್ ಮನಿಡಾಟ್‌ಕಾಂ’ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು