ಕೃತಕ ಬುದ್ಧಿಮತ್ತೆಯ ಫೋನ್

7
ಏಸುಸ್‌ ಝೆನ್‌ಫೋನ್‌ 5 ಝಡ್‌

ಕೃತಕ ಬುದ್ಧಿಮತ್ತೆಯ ಫೋನ್

ಯು.ಬಿ. ಪವನಜ
Published:
Updated:

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಕೆಲವು ವಿಭಾಗಗಳಾಗಿ ವಿಂಗಡಿಸಬಹುದು. ಕಡಿಮೆ ಬೆಲೆಯ ಫೋನ್‌ಗಳಲ್ಲಿ ಮೊದಲನೆಯ ಸ್ಥಾನದಲ್ಲಿರುವುದು ಶಿಯೋಮಿ. ಅದಕ್ಕಿಂತ ಸ್ವಲ್ಪ ಹೆಚ್ಚು ಬೆಲೆಯ ಸ್ಥಾನದಲ್ಲಿ ಹೋನರ್, ಒಪ್ಪೊ, ವಿವೊಗಳಿವೆ. ನಂತರದ ಸ್ಥಾನದಲ್ಲಿ ಏಕೈಕ ರಾಜನಾಗಿ ಮೆರೆಯುತ್ತಿರುವುದು ಒನ್‌ಪ್ಲಸ್. ಅವರು 30 ರಿಂದ 40 ಸಾವಿರ ಬೆಲೆಯ ಫೋನ್‌ಗಳ ಕ್ಷೇತ್ರದಲ್ಲಿ ಗಟ್ಟಿಯಾಗಿ ಕುಳಿತಿದ್ದಾರೆ. ಒನ್‌ಪ್ಲಸ್‌ನಷ್ಟೇ ಅಥವಾ ಸ್ವಲ್ಪ ಅಧಿಕ ಗುಣಮಟ್ಟದ ಫೋನ್‌ಗಳಿಗೆ ಒನ್‌ಪ್ಲಸ್‌ ಫೋನ್‌ಗಳಿಗಿಂತ ಒಂದೂವರೆ ಅಥವಾ ಎರಡು ಪಟ್ಟು ಬೆಲೆಯಿದೆ. ಒನ್‌ಪ್ಲಸ್‌ಗೆ ಸೆಡ್ಡುಹೊಡೆಯಲು ಈಗ ಏಸುಸ್ ಝೆನ್‌ಫೋನ್ 5 ಝೆಡ್ (Asus Zenfone 5z) ಬಂದಿದೆ. ಇದು ನಮ್ಮ ಈ ವಾರದ ಗ್ಯಾಜೆಟ್.

ಇದರಲ್ಲಿ ಮೂರು ಮಾದರಿಗಳಿವೆ. ನನಗೆ ವಿಮರ್ಶೆಗೆ ಬಂದದ್ದು 6 + 64 ಗಿಗಾಬೈಟ್ ಮಾದರಿಯದು. ರಚನೆ ಮತ್ತು ವಿನ್ಯಾಸ ಅತ್ಯುತ್ತಮವಾಗಿದೆ. ಹಿಂದುಗಡೆ ಗಾಜಿನ ಲೇಪವಿದ್ದು ತುಂಬ ನಯವಾಗಿದೆ. ಕೈಯಿಂದ ಜಾರಿ ಬೀಳಬಾರದೆಂದು ಅವರೇ ಒಂದು ಪ್ಲಾಸ್ಟಿಕ್ ಕವಚ ನೀಡಿದ್ದಾರೆ. ಇದು ಕೂಡ ಅಂಚುರಹಿತ (bezelless) ಮಾತ್ರವಲ್ಲ ಪರದೆಯ ಕಚ್ಚು (screen notch) ಕೂಡ ಇದೆ. ಈ ಸವಲತ್ತು ಇಷ್ಟವಿಲ್ಲದಿದ್ದವರು ಅದನ್ನು ಆಫ್ ಮಾಡುವ ಆಯ್ಕೆಯನ್ನೂ ನೀಡಿದ್ದಾರೆ. ಹಿಂದುಗಡೆ ಬೆರಳಚ್ಚು ಸ್ಕ್ಯಾನರ್ ಸ್ವಲ್ಪ ಮೇಲೆ ಮಧ್ಯಭಾಗದಲ್ಲಿದೆ. ಹಿಂದೆ ಬಲ ಭಾಗದಲ್ಲಿ ಎರಡು ಕ್ಯಾಮೆರಾಗಳು ಒಂದರ ಕೆಳಗೆ ಒಂದು ಇವೆ ಮತ್ತು ಇನ್ನೂ ಕೆಳಗೆ ಫ್ಲಾಶ್ ಇದೆ. ಒಟ್ಟಿನಲ್ಲಿ ಕೈಯಲ್ಲಿ ಹಿಡಿದಾಗ ಒಂದು ಅತ್ಯುತ್ತಮ ಫೋನನ್ನು ಹಿಡಿದ ಭಾವನೆ ಬರುತ್ತದೆ. ಈ ವಿಭಾಗದಲ್ಲಿ ಇದಕ್ಕೆ ಒನ್‌ಪ್ಲಸ್‌ಗಿಂತ ಅಧಿಕ ಮಾರ್ಕ್‌ ನೀಡಬಹುದು.

ಇದರಲ್ಲಿರುವುದು ಒನ್‌ಪ್ಲಸ್ 6ನಲ್ಲಿರುವ ಪ್ರೊಸೆಸರ್‌ ಆಗಿದೆ. ಇದು ಅಧಿಕ ವೇಗದ ಫೋನ್. ಇದರ ಅಂಟುಟು ಬೆಂಚ್‌ಮಾರ್ಕ್ 1,89,106 (8 ಗಿಗಾಬೈಟ್ ಮಾದರಿಯದು 2,68,306) ಇದೆ (8 ಗಿಗಾಬೈಟ್‌ನ ಒನ್‌ಪ್ಲಸ್ 6 ನದ್ದು 2,83,877). ತುಂಬ ಶಕ್ತಿಯನ್ನು ಬೇಡುವ ಆಟಗಳನ್ನು ಆಡುವ ಅನುಭವ ಅತ್ಯುತ್ತಮವಾಗಿದೆ. ಹಲವು ಆ್ಯಪ್‌ಗಳನ್ನು ತೆರೆದರೂ ಕೆಲಸದ ವೇಗದಲ್ಲಿ ಯಾವುದೇ ವ್ಯತ್ಯಾಸ ಗೊತ್ತಾಗುವುದಿಲ್ಲ. ಇದರಲ್ಲಿ ಕೃತಕ ಬುದ್ಧಿಮತ್ತೆಯನ್ನು ಹಲವು ಕಡೆಗಳಲ್ಲಿ ಅಳವಡಿಸಿದ್ದಾರೆ. ಅಧಿಕ ಪ್ರೊಸೆಸರ್ ಶಕ್ತಿ ಬೇಕಾದಾಗ ಅದುವೇ ಆ ಆಯ್ಕೆಯನ್ನು ಮಾಡಿಕೊಳ್ಳುತ್ತದೆ.

ಈ ಫೋನಿನಲ್ಲಿರುವ ಕ್ಯಾಮೆರಾಗಳು ಚೆನ್ನಾಗಿವೆ. ಸೋನಿಯವರ ಸಂವೇದಕ (Sensor) ಇದೆ. ಹಲವು ದೃಶ್ಯಗಳ ಆಯ್ಕೆಯಿದೆ. ಕ್ಯಾಮೆರಾ ಕೂಡ ಕೃತಕ ಬುದ್ಧಿಮತ್ತೆಯನ್ನು ಬಳಸಿ ದೃಶ್ಯದ ಆಯ್ಕೆ ಮಾಡುತ್ತದೆ ಮಾತ್ರವಲ್ಲ ಯಾವುದನ್ನು ಬಳಸಬಹುದು ಎಂದು ಸೂಚಿಸುತ್ತದೆ ಕೂಡ. ನೀವು ಪರಿಣತ ಛಾಯಾಗ್ರಾಹಕರಾಗಿದ್ದಲ್ಲಿ ಸಂಪೂರ್ಣ ಮ್ಯಾನ್ಯುವಲ್ ಮೋಡ್ ಕೂಡ ಇದೆ. ಕಡಿಮೆ ಬೆಳಕಿನಲ್ಲೂ ಉತ್ತಮ ಚಿತ್ರೀಕರಣ ಮಾಡುತ್ತದೆ. ಈ ಫೋನಿನ ಕ್ಯಾಮೆರಾದಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ, ಬದಲಿಗೆ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ ನೀಡಿದ್ದಾರೆ. (ಒನ್‌ಪ್ಲಸ್ 6ರಲ್ಲಿ ಎರಡೂ ಇವೆ). ಆದುದರಿಂದ ವಿಡಿಯೊ ಚಿತ್ರೀಕರಣ ಮಾಡುವಾಗ ಕ್ಯಾಮೆರಾ ಅಲ್ಪಸ್ವಲ್ಪ ಅಲುಗಾಡಿದರೂ ವಿಡಿಯೊಕ್ಕೆ ಹೆಚ್ಚು ಪರಿಣಾಮ ಆಗುವುದಿಲ್ಲ. 4k ಚಿತ್ರೀಕರಣ ಕೂಡ ಮಾಡಬಹುದು. ವಿಡಿಯೊ ಚಿತ್ರೀಕರಣದಲ್ಲಿ ಅತಿ ನಿಧಾನ ಎಂಬ ಆಯ್ಕೆ ಇದೆ. ಇದು ಸೆಕೆಂಡಿಗೆ 240 ಫ್ರೇಂಗಳನ್ನು (fps) ಚಿತ್ರೀಕರಿಸಬಲ್ಲುದು (ಒನ್‌ಪ್ಲಸ್6 480 fps ನಲ್ಲಿ ಚಿತ್ರೀಕರಣ ಮಾಡಬಲ್ಲುದು). ಆದರೂ ಇದರ ಕ್ಯಾಮೆರಾವನ್ನು ಒನ್‌ಪ್ಲಸ್ 6ರ ಕ್ಯಾಮೆರಾಕ್ಕೆ ಹೋಲಿಸಿದರೆ ಅದರ ಅತಿ ಹತ್ತಿರಕ್ಕೆ ಬರುತ್ತದಷ್ಟೇ ವಿನಾ ಅದನ್ನು ಸೋಲಿಸುವುದಿಲ್ಲ.

ಮೇಲ್ದರ್ಜೆಯ ಹಲವು ಫೋನ್‌ಗಳಂತೆ ಈ ಫೋನಿನಲ್ಲೂ ವೇಗವಾಗಿ ಚಾರ್ಜಿಂಗ್ ವ್ಯವಸ್ಥೆ (quickcharge) ಇದೆ. ಅವರದೇ ಚಾರ್ಜರ್ ಮತ್ತು ಕೇಬಲ್ ಬಳಸಿ ಚಾರ್ಜ್ ಮಾಡಿದರೆ 90-100 ನಿಮಿಷದಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಚಾರ್ಜಿಂಗ್‌ಗೆ ಕೂಡ ಕೃತಕ ಬುದ್ಧಿಮತ್ತೆಯನ್ನು ಬಳಸಿದ್ದಾರೆ. ದಿನಾ ನೀವು ಫೋನನ್ನು ಬಳಸುವ ಮತ್ತು ಚಾರ್ಜ್ ಮಾಡುವ ವಿಧಾನವನ್ನು ಗಮನಿಸಿ ಅದು ಬುದ್ಧಿಯನ್ನು ಬಳಸಿ ತನ್ನದೇ ಚಾರ್ಜಿಂಗ್ ವಿಧಾನವನ್ನು ರೂಪಿಸಿಕೊಳ್ಳುತ್ತದೆ. ಉದಾಹರಣೆಗೆ ನೀವು ದಿನಾ ರಾತ್ರಿ ಮಲಗುವಾಗ ಫೋನನನ್ನು ಚಾರ್ಜಿಂಗ್‌ಗೆ ಹಾಕಿ ಮಲಗುವವರಾದರೆ ಶೇ 80 ತನಕ ವೇಗವಾಗಿ ಚಾರ್ಜ್ ಮಾಡುತ್ತದೆ. ನಂತರ ನಿಧಾನವಾಗಿ ಮಾಡುತ್ತದೆ. ಬೆಳಗಿನ ಹೊತ್ತಿಗೆ ಪೂರ್ತಿ ಚಾರ್ಜ್ ಆಗಿರುತ್ತದೆ. ಹೀಗೆ ಮಾಡುವುದರಿಂದ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿಯವರು ಹೇಳಿಕೊಂಡಿದ್ದಾರೆ. ಒಂದು ದಿನದ ಮಟ್ಟಿಗೆ ಬ್ಯಾಟರಿ ಬಾಳಿಕೆ ಬರುತ್ತದೆ. ಬ್ಯಾಟರಿ ಬಾಳಿಕೆ ಅದ್ಭುತವೇನೂ ಅಲ್ಲ.

ಫೋನಿನ ಆಡಿಯೊ ಇಂಜಿನ್ ಚೆನ್ನಾಗಿದೆ. ಒಂದು ಮಟ್ಟಿಗೆ ಉತ್ತಮ ಎನ್ನುವಂತಹ ಇಯರ್‌ಬಡ್ ನೀಡಿದ್ದಾರೆ. ಹೆಚ್ಚಿಗೆ ಕುಶನ್ ಕೂಡ ನೀಡಿದ್ದಾರೆ. ಇದರ ಆಡಿಯೊ ಇಂಜಿನ್ ಒನ್‌ಪ್ಲಸ್ 6ಗಿಂತ ಸ್ವಲ್ಪ ಉತ್ತಮವಾಗಿದೆ.

ಇತ್ತೀಚೆಗೆ ಮಾರುಕಟ್ಟೆಗೆ ಬರುತ್ತಿರುವ ಹಲವು ಫೋನ್‌ಗಳಂತೆ ಇದರಲ್ಲೂ ಮುಖವನ್ನು ಗುರುತುಹಿಡಿದು ಅದನ್ನೇ ಪಾಸ್‌ವರ್ಡ್‌ಮಾಡಿಕೊಳ್ಳುವ ವ್ಯವಸ್ಥೆ ಇದೆ. ಆದರೆ ಅದು ಅಷ್ಟು ವೇಗವಾಗಿ (ಒನ್‌ಪ್ಲಸ್‌ಗೆ ಹೋಲಿಸಿದಾಗ) ಕೆಲಸ ಮಾಡುವುದಿಲ್ಲ. ಕನ್ನಡದ ತೋರುವಿಕೆ ಸರಿಯಾಗಿದೆ. ಇದರಲ್ಲಿ ಎರಡು ಸಿಮ್‌ಗಳನ್ನು ಏಕಕಾಲದಲ್ಲಿ ಕ್ರಿಯಾತ್ಮಕವಾಗಿ ಬಳಸಬಹುದು. ಅಂದರೆ ಒಂದು ಸಿಮ್‌ನಲ್ಲಿ ಮಾತನಾಡುತ್ತಿದ್ದಾಗ ಇನ್ನೊಂದು ಸಿಮ್‌ಗೆ ಕರೆ ಬಂದರೆ ಅದು ತೋರಿಸುತ್ತದೆ. ಕರೆ ಮಾಡಿದವರಿಗೆ ಫೋನ್ ಸ್ವಿಚ್ ಆಫ್ ಆಗಿದೆ ಎಂಬ ತಪ್ಪು ಸಂದೇಶ ಕೇಳಿಸುವುದಿಲ್ಲ.

ಒಟ್ಟಿನಲ್ಲಿ ನೀಡುವ ಹಣಕ್ಕೆ ಉತ್ತಮ ಫೋನ್ ಎನ್ನಬಹುದು. ಒನ್‌ಪ್ಲಸ್ 6 ಕ್ಕಿಂತ ಸ್ವಲ್ಪ ಬೆಲೆ ಕಡಿಮೆ ಇಟ್ಟಿದ್ದಾರೆ. ಎರಡರ ಗುಣಮಟ್ಟಗಳನ್ನು ಹೋಲಿಸಿದಾಗ ಅದು ನ್ಯಾಯವೂ ಆಗಿದೆ.

***

ವಾರದ ಆಪ್ (app)
ಫೈರ್‌ಫಾಕ್ಸ್ ಫೋಕಸ್ (Firefox Focus: The privacy browser) 
ನೀವು ಫೋನಿನಲ್ಲಿ ಬ್ರೌಸರ್ ತೆರೆದು ಯಾವುದಾದರೂ ಜಾಲಮಳಿಗೆಗೆ (ಉದಾ – ಅಮೆಜಾನ್) ಭೇಟಿ ನೀಡಿ ಯಾವುದಾದರೂ ವಸ್ತುವನ್ನು ಹುಡುಕಾಡಿದ್ದೀರಾ? ಹಾಗೆ ಮಾಡಿದ ನಂತರ ದಿನಗಳ ಕಾಲ ನಿಮ್ಮ ಫೇಸ್‌ಬುಕ್‌ನಲ್ಲಿ ಅದೇ ವಸ್ತುವಿನ ಜಾಹೀರಾತು ನಿಮ್ಮನ್ನು ಪೀಡಿಸಿದೆಯಾ? ಹಾಗೆ ಪೀಡಿಸುವುದು ನಿಮಗೆ ಬೇಡವಾಗಿದ್ದಲ್ಲಿ ನೀವು ಗೌಪ್ಯ ಹಾಗೂ ಸುರಕ್ಷಿತ ಬ್ರೌಸರ್ ಬಳಸಬೇಕು. ಅಂತಹ ಒಂದು ಬ್ರೌಸರ್ ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Firefox Focus: The privacy browser ಎಂದು ಹುಡುಕಿ ಅಥವಾ http://bit.ly/gadgetloka340​​ ಜಾಲತಾಣಕ್ಕೆ ಭೇಟಿ ನೀಡಿ. ಜಾಹೀರಾತುಗಳನ್ನು ಪ್ರತ್ಯೇಕವಾಗಿ ತೆರೆಯುವುದನ್ನೂ, ಪಾಸ್‌ವರ್ಡ್‌ ಕದಿಯುವ ಜಾಲತಾಣಗಳನ್ನೂ, ಇದು ತಡೆಹಿಡಿಯುತ್ತದೆ.

ಗ್ಯಾಜೆಟ್ ಪದ: Update = ನವೀಕರಿಸು
ತಂತ್ರಾಂಶಗಳ (software) ಹೊಸ ಆವೃತ್ತಿಗೆ ಬದಲಾಯಿಸಿಕೊಳ್ಳುವುದು. ಉದಾಹರಣೆಗೆ ನಿಮ್ಮ ಫೋನಿನಲ್ಲಿ ಆ್ಯಂಡ್ರಾಯಿಡ್‌ ಆವೃತ್ತಿ 7 ಇತ್ತು. ಈಗ ಆವೃತ್ತಿ 8 ಬಂದಿದೆ. ಹೊಸ ಆವೃತ್ತಿಗೆ ಆಗ ನೀವು ನವೀಕರಿಸಿಕೊಳ್ಳಬಹುದು.

ಗ್ಯಾಜೆಟ್ ತರ್ಲೆ
ನಾವು ಬರೆದ ಪೋಸ್ಟನ್ನು ಎಲ್ಲರೂ ಓದುತ್ತಾರೆ ಎನ್ನುವುದು ನಂಬಿಕೆ.
ಓದಿದವರೆಲ್ಲ ಕಮೆಂಟ್ ಮಾಡುತ್ತಾರೆ ಎನ್ನುವುದು ಮೂಢನಂಬಿಕೆ.

ಗ್ಯಾಜೆಟ್ ಸಲಹೆ
ಅಶೋಕ ಮದ್ದೂರು ಅವರ ಪ್ರಶ್ನೆ:
ಒನ್‌ಪ್ಲಸ್ ಬಗ್ಗೆ ಬರೆಯುತ್ತ ಕ್ಯಾಮೆರಾ ಬಗ್ಗೆ manual mode ಅಂತ ಹೇಳಿದ್ದೀರಿ ಅದು ಗೊತ್ತಾಗ್ತಾ ಇಲ್ಲ. ಅದರ ಬಗ್ಗೆ ತಿಳಿಸಿಕೊಡಿ. ಅಂದರೆ ಫೋಟೊ ಎಡಿಟ್ ಮಾಡುವುದಾ ಅಥವಾ ಕ್ಯಾಮೆರಾದಲ್ಲಿ ಇರುವುದಾ ತಿಳಿಸಿ ಕೊಡಿ?
ಉ: ಮ್ಯಾನ್ಯುವಲ್ ಮೋಡ್ ಎಂದರೆ ಕ್ಯಾಮೆರಾದ ಎಲ್ಲ ಆಯ್ಕೆಗಳನ್ನು ನಾವೇ ಆಯ್ಕೆ ಮಾಡಿಕೊಳ್ಳುವುದು. ಉದಾ – ಐಎಸ್‌ಓ, ಷಟ್ಟರ್ ವೇಗ, ಫೋಕಸ್, ಇತ್ಯಾದಿ. ಒನ್‌ಪ್ಲಸ್ ಕ್ಯಾಮೆರಾದಲ್ಲಿ ಅದನ್ನು ಪ್ರೊ (Pro) ಎಂದು ಕರೆದಿದ್ದಾರೆ. ಕೆಲವು ಫೋನ್‌ಗಳಲ್ಲಿ ಅದನ್ನು Expert Mode ಎಂದು ಹೆಸರಿಸಿರುತ್ತಾರೆ.

ಬರಹ ಇಷ್ಟವಾಯಿತೆ?

 • 10

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !