ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣ ಸಾರ - ಭಾಗ 152| ಶಿವಸತೀ ಕಲ್ಯಾಣಕ್ಕೆ ಒಪ್ಪಿದ ದಕ್ಷ

ಅಕ್ಷರ ಗಾತ್ರ

ಶಿವನಿಗೆ ಸತೀದೇವಿಯೊಂದಿಗೆ ವಿವಾಹ ಮಾಡಿಕೊಡುವಂತೆ ಕೋರಲು ಬ್ರಹ್ಮ ಹಂಸರಥವನ್ನೇರಿ ಪ್ರಜಾಪತಿ ಬಳಿಗೆ ಹೊರಟ. ಅತ್ತ ಸತೀದೇವಿ ಮನೆಗೆ ಬಂದು ಶಿವನಿಂದ ವರವನ್ನು ಪಡೆದ ವಿಚಾರವನ್ನು ತನ್ನ ಸಖಿಯರ ಮೂಲಕ ತಂದೆ-ತಾಯಿಗೆ ತಿಳಿಸುತ್ತಾಳೆ. ಸತೀ ಸಖಿಯರಿಂದ ವಿಷಯ ತಿಳಿದ ದಕ್ಷ ಮತ್ತು ವೀರಿಣಿಯರಿಬ್ಬರೂ ತುಂಬಾ ಆನಂದಪಟ್ಟರು. ವೀರಿಣಿ ಪುತ್ರಿಯನ್ನು ಆಲಿಂಗಿಸಿ, ಶಿರಸ್ಸನ್ನಾಘ್ರಾಣಿಸಿ ಸಂತೋಷದಿಂದ ಅವಳನ್ನು ಹೊಗಳಿದಳು.

ಇಷ್ಟಾದನಂತರ ದಕ್ಷಪ್ರಜಾಪತಿ ಮನದಲ್ಲಿ ಅನುಮಾನಗಳ ಸುರುಳಿ ಸುತ್ತಿಕೊಳ್ಳುತ್ತದೆ. ಪುತ್ರಿಯನ್ನು ಶಂಕರನಿಗೆ ಹೇಗೆ ಮದುವೆಮಾಡಿ ಕೊಡಲಿ ಎಂಬುದರಿಂದ ಮೊದಲ್ಗೊಂಡು, ಸತೀಯನ್ನು ಮದುವೆಯಾಗಲು ಶಿವನೇ ಇಲ್ಲಿಗೆ ಬರುವನೋ? ಅಥವಾ ನನ್ನ ಪುತ್ರಿಯನ್ನು ಮದುವೆಯಾಗುವಂತೆ ತಿಳಿಸಲು ಯಾರನ್ನಾದರೂ ಶಿವನ ಬಳಿಗೆ ಕಳುಹಿಸಲೆ? ಅಥವಾ ಸತಿಯಂತೆ ನಾನೂ ಶಿವನನ್ನು ಭಕ್ತಿಯಿಂದ ಪೂಜಿಸಿ ನನ್ನ ಪುತ್ರಿಯನ್ನು ಮದುವೆ ಮಾಡಿಕೊಳ್ಳುವಂತೆ ಪ್ರಾರ್ಥಿಸಲೇ? – ಎಂಬಿತ್ಯಾದಿಯಾಗಿ ದಕ್ಷ ಚಿಂತಿಸುತ್ತಾ ಕುಳಿತಿದ್ದ. ಆ ಹೊತ್ತಿಗೆ ಸರಿಯಾಗಿ ಬ್ರಹ್ಮ ಸರಸ್ವತಿಯೊಡನೆ ಆಗಮಿಸಿದ. ದಕ್ಷ ಸಂತೋಷದಿಂದ ಬರಮಾಡಿಕೊಂಡು ‘ಓ ಬ್ರಹ್ಮಪಿತನೇ, ನೀನು ಯಾವ ನಿಮಿತ್ತವಾಗಿ ಇಲ್ಲಿಗೆ ಬಂದಿರುವೆ?’ ಎಂದುಕೇಳಿದ. ಬ್ರಹ್ಮ ‘ಎಲೈ ದಕ್ಷ, ನಿನ್ನ ಪುತ್ರಿಯಾದ ಸತಿಯು ಜಗತ್ಪ್ರಭುವಾದ ಮಹೇಶ್ವನನ್ನು ಆರಾಧಿಸಿ ಯಾವ ವರವನ್ನು ಅವನಿಂದ ಪಡೆದಿರುವಳೋ, ಆ ವರವು ಈಗ ಸಿದ್ಧಿಸುವಂತಹ ಸಮಯವು ಬಂದಿದೆ. ಶಂಕರನು ನಿನ್ನ ಪುತ್ರಿಯನ್ನ ವಿವಾಹವಾಗಬಯಸಿ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಈ ವಿಚಾರದಲ್ಲಿ ಶ್ರೇಯಸ್ಕರವಾದ ಯಾವ ಕಾರ್ಯವನ್ನು ಮಾಡಬೇಕು ಎಂಬುದನ್ನು ಹೇಳುವೆನು ಕೇಳು’ ಎನ್ನುತ್ತಾನೆ.

ತಂದೆ ಬ್ರಹ್ಮನ ಮಾತನ್ನು ಕೇಳಿ ದಕ್ಷಪ್ರಜಾಪತಿ ಆನಂದತಂದಿಲನಾಗುತ್ತಾನೆ. ತನ್ನ ಪುತ್ರಿ ಸತೀದೇವಿಯನ್ನು ವಿವಾಹ ಮಾಡಿಕೊಡಲು ಶಿವನ ಬಳಿಗೆ ಯಾರನ್ನು ಮಾತುಕತೆಗೆ ಕಳುಹಿಸಬೇಕೆಂದು ಯೋಚಿಸುತ್ತಿದ್ದ ತನಗೆ ತಂದೆಯೇ ರಾಯಭಾರಿಯಾಗಿ ಬಂದಿದ್ದು ಬಹಳ ಸಂತೋಷವಾಗುತ್ತದೆ. ‘ಸತೀದೇವಿಗೆ ವರವನ್ನು ಕೊಟ್ಟುಹೋದ ಶಂಕರ ಈಗ ಸತೀದೇವಿಯ ವಿರಹದಿಂದ ಬಳಲುತ್ತಿದ್ದಾನೆ. ಈಗ ನಾವು ಸತೀದೇವಿಯನ್ನು ಶಿವನಿಗೆ ಕೊಟ್ಟು ವಿವಾಹ ಮಾಡಿಕೊಡುವ ಕಾರ್ಯದತ್ತ ಗಮನ ಹರಿಸಬೇಕು. ಶಿವ ಗೃಹಸ್ಥನಾಗಲು ನಾವೆಲ್ಲಾ ಎಷ್ಟೆಲ್ಲಾ ಶ್ರಮಪಟ್ಟಿದ್ದೆವು. ಆದರೆ ನಮ್ಮಿಂದ ಆಗದ ಕಾರ್ಯವನ್ನು ಸತೀದೇವಿ ಮಾಡಿದ್ದಾಳೆ. ನಾವಿನ್ನು ತಡಮಾಡುವುದು ಬೇಡ, ಅವರಿಬ್ಬರ ವಿವಾಹವನ್ನು ವಿಧಿಯುಕ್ತವಾಗಿ ನೆರವೇರಿಸಬೇಕು’ ಎನ್ನುತ್ತಾನೆ ಬ್ರಹ್ಮ.

ಬ್ರಹ್ಮನ ಮಾತನ್ನು ಒಪ್ಪಿದ ದಕ್ಷ ಮತ್ತು ವೀರಿಣಿ ದಂಪತಿ ತಾವು ಸಹ ಶಿವನಲ್ಲಿಗೆ ಮದುವೆ ಸಂಧಾನಕ್ಕೆ ಯಾರನ್ನು ಕಳುಹಿಸುವುದೆಂಬ ಚಿಂತೆಯಲ್ಲಿದ್ದೆವು. ಈಗ ನಮಗೆ ಸಮಾಧಾನವಾಗಿದೆ. ಸತೀದೇವಿ ಮದುವೆ ಆಗಬಯಸಿ ಶಂಕರನನ್ನು ಆರಾಧಿಸಿದಳು. ಇದಕ್ಕೆ ಶಿವನೂ ಒಪ್ಪಿ ಅವಳನ್ನು ಪಡೆಯಬೇಕೆಂದು ಹಿಮಾಲಯದಲ್ಲಿ ಚಿಂತಿಸುತ್ತಿದ್ದಾನೆ. ಶಂಕರನಿಗಾಗಿಯೇ ಜನಿಸಿರುವ ಸತೀದೇವಿಯನ್ನು ಮದುವೆ ಮಾಡಿಕೊಡುವ ಮೂಲಕ ತಾವು ಕೃತಾರ್ಥರಾಗುತ್ತೇವೆ ಎಂದು ಹೇಳಿದರು.

ದಕ್ಷದಂಪತಿಗಳ ಮಾತನ್ನು ಕೇಳಿ ಬ್ರಹ್ಮನಿಗೂ ತನ್ನ ರಾಯಭಾರ ಕಾರ್ಯ ಸುಲಭವಾಗಿದ್ದರಿಂದ ತೃಪ್ತನಾಗಿ ‘ಶಂಕರನನ್ನು ನಿನ್ನ ಮನೆಗೆ ನಾರದನ ಮೂಲಕ ಕರತರುವೆ. ಅವನಿಗಾಗಿ ನಿಶ್ಚಿತಳಾಗಿರುವ ನಿನ್ನ ಪುತ್ರಿಯನ್ನು ಮದುವೆಮಾಡಿ ಕೊಡು’ ಎಂದ. ಇದಕ್ಕೆ ದಕ್ಷ ಮತ್ತವನ ಪತ್ನಿ ವೀರಿಣಿ ಸಂತೋಷದಿಂದ ಒಪ್ಪಿಕೊಂಡರು. ತನ್ನ ಮದುವೆ ಸಂಧಾನ ಯಶಸ್ವಿಯಾದ ನಂತರ ಬ್ರಹ್ಮ, ಮಗನಿಂದ ಯಥೋಚಿತವಾದ ಆತಿಥ್ಯ ಸ್ವೀಕರಿಸಿ ಅಲ್ಲಿಂದ ಬೀಳ್ಕೊಂಡ. ಸತೀದೇವಿಯನ್ನು ಮದುವೆ ಮಾಡಿಕೊಡಲು ದಕ್ಷ ದಂಪತಿ ಒಪ್ಪಿಕೊಂಡಿರುವ ವಿಷಯವನ್ನು ಶಂಕರನಿಗೆ ತಿಳಿಸಲು ಕೈಲಾಸಕ್ಕೆ ಹೊರಟ.

ಇತ್ತ ದಕ್ಷಪ್ರಜಾಪತಿ ಸಹ ತನ್ನ ಇಷ್ಟಾರ್ಥ ಕೈಗೂಡಿತೆಂದು ಪತ್ನಿ ಮತ್ತು ಪುತ್ರಿಯೊಡನೆ ತುಂಬಾ ಹರ್ಷಚಿತ್ತನಾದ ಎಂಬಲ್ಲಿಗೆ ವೇದವ್ಯಾಸರ ಶ್ರೀಶಿವಮಹಾಪುರಾಣದ ರುದ್ರಸಂಹಿತೆಯಲ್ಲಿನ ಸತೀಖಂಡದ ಹದಿನೇಳನೆ ಅಧ್ಯಾಯ ಮುಗಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT