ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ: ಮತ್ತೆ ಯಡಿಯೂರಪ್ಪ ಕೈಗೆ ಬಿಜೆಪಿ

ವಂಶಾಡಳಿತದ ಪೋಷಣೆ, ಸಂತೋಷ್‌ ಬಣಕ್ಕೆ ಸಿಗದ ಮನ್ನಣೆ
Published 15 ನವೆಂಬರ್ 2023, 19:55 IST
Last Updated 15 ನವೆಂಬರ್ 2023, 19:55 IST
ಅಕ್ಷರ ಗಾತ್ರ

‘ದೇಶದ ಅಭಿವೃದ್ಧಿಗೆ ಕುಟುಂಬ ರಾಜಕಾರಣ ಕಂಟಕ, ಪ್ರಜಾಪ್ರಭುತ್ವಕ್ಕೆ ಮಾರಕ. ಕುಟುಂಬ ರಾಜಕಾರಣವನ್ನು ಬೇರುಸಮೇತ ಕಿತ್ತುಹಾಕಬೇಕು...’ 

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ತಿಂಗಳ ಹಿಂದಷ್ಟೇ ಕೊಟ್ಟ ಕರೆ ಇದು. 

ಛತ್ತೀಸಗಢ ಮತ್ತು ತೆಲಂಗಾಣದಲ್ಲಿ ಕೈಗೊಂಡ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದ ಮೋದಿ, ‘ಕಾಂಗ್ರೆಸ್ ಪಕ್ಷವು ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಅಧಿಕಾರದಲ್ಲಿ ಇದ್ದರೂ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಹಲವು ವರ್ಷಗಳವರೆಗೆ ಜಾರಿಗೆ ತಂದಿರಲಿಲ್ಲ ಹಾಗೂ ಮಾದಿಗರ ಸಬಲೀಕರಣಕ್ಕಾಗಿ ಶೀಘ್ರದಲ್ಲೇ ಸಮಿತಿ ರಚಿಸಲಾಗುವುದು’ ಎಂದು ಘೋಷಿಸಿದ್ದರು. ಮಾದಿಗರ ಪರವಾಗಿ ಬಲಿಷ್ಠ ಹೋರಾಟ ರೂಪಿಸಿದ್ದ ಕೃಷ್ಣ ಮಾದಿಗ ಅವರನ್ನು ವೇದಿಕೆಯಲ್ಲಿಯೇ ತಬ್ಬಿಕೊಂಡು ಭಾವುಕರಾಗಿದ್ದರು.

ಈ ಎಲ್ಲ ಬೆಳವಣಿಗೆಗಳ ಮಗ್ಗುಲಲ್ಲೇ, ಬಿಜೆಪಿಯ ಕರ್ನಾಟಕ ಘಟಕಕ್ಕೆ ಬಿ.ವೈ. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮೋದಿಯವರು ಸಾರ್ವಜನಿಕ ಸಭೆಗಳಲ್ಲಿ ಆಡುವ ಮಾತಿಗೂ ನಿಜದ ನಡವಳಿಕೆಗೂ ಭಾರಿ ಅಂತರ ಇರುವುದನ್ನು ಇದು ತೋರಿಸುತ್ತದೆ. ವಂಶಾಡಳಿತ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿರುವ ಮೋದಿಯವರು, ಬಿಜೆಪಿ ಸಾರಥ್ಯವನ್ನು ಬಿ.ಎಸ್.ಯಡಿಯೂರಪ್ಪ ಅವರ ಕಿರಿಯ ಮಗ ಬಿ.ವೈ.ವಿಜಯೇಂದ್ರ ಅವರಿಗೆ ವಹಿಸಿದ್ದನ್ನು ಕಂಡು, ಮೋದಿಯವರನ್ನು ‘ದೈವೀಸ್ವರೂಪ’ದಲ್ಲಿ ನೋಡುವ ಕಮಲ ಪಡೆಯ ನಾಯಕರಿಗೆ ಮಾತೇ ಹೊರಡದಂತಾಗಿದೆ. 

ತಮ್ಮಲ್ಲಿ ಓಡಾಡುವ ಶಕ್ತಿ ಇರುವಾಗಲೇ ವಿಜಯೇಂದ್ರ ಅವರನ್ನು ದಡ ಮುಟ್ಟಿಸಬೇಕೆಂಬ ಯಡಿಯೂರಪ್ಪ ಅವರ ಹಟ ಗೆದ್ದಿದೆ. ‘ಮೋದಿಯವರ ನಾಮಬಲದಲ್ಲೇ ಗೆಲ್ಲುತ್ತೇವೆ’ ಎಂಬ ಹುಸಿ ಭರವಸೆಯಲ್ಲಿದ್ದ ಪಕ್ಷದ ವರಿಷ್ಠರು, ಯಡಿಯೂರಪ್ಪ ಅವರ ಎದುರು ಸಂಪೂರ್ಣ ಶರಣಾಗಿದ್ದಾರೆ. ರಾಷ್ಟ್ರೀಯ ನಾಯಕರನ್ನೇ ನೆಚ್ಚಿಕೊಳ್ಳುವ ಪರಿಪಾಟವು ಎಲ್ಲ ಕಡೆ ಫಲ ನೀಡದು, ಪ್ರಾದೇಶಿಕ ನಾಯಕತ್ವಕ್ಕೆ ಮಣೆ ಹಾಕುವುದು ಅನಿವಾರ್ಯ ಎಂಬುದನ್ನು ಒಪ್ಪಿಕೊಂಡಿರುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿ ಗೋಚರಿಸುತ್ತದೆ.

2018ರ ವಿಧಾನಸಭೆ ಚುನಾವಣೆಗೆ ಮುನ್ನವೇ, ಯಡಿಯೂರಪ್ಪ ಅವರನ್ನು ಹಣಿಯಬೇಕು ಎಂಬ ಸಂಚು ಬಿಜೆಪಿಯಲ್ಲಿ ಮೊಳಕೆಯೊಡೆದಿತ್ತು. ಪಕ್ಷವನ್ನು ತಮ್ಮ ಮುಷ್ಟಿಯಲ್ಲಿ ಅಮುಕಿಡಬೇಕು ಎಂಬ ಮಹದಾಸೆ ಹೊತ್ತಿದ್ದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಅವರು ಇದರ ಹಿಂದಿದ್ದುದು ರಹಸ್ಯವೇನಲ್ಲ. ಯಡಿಯೂರಪ್ಪ ಅವರ ವಿರುದ್ಧ ಪಕ್ಷನಿಷ್ಠರ ಹೆಸರಿನಲ್ಲಿ ಗುಂಪು ರೂಪುಗೊಂಡಿದ್ದು, ಕೆ.ಎಸ್‌.ಈಶ್ವರಪ್ಪ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆಯಾದದ್ದು ಇದರ ಮುಂದುವರಿದ ಭಾಗ ಎಂಬುದರಲ್ಲಿ ಅನುಮಾನ ಇಲ್ಲ. 

ಚುನಾವಣೆ ಫಲಿತಾಂಶ ಬಂದಾಗ ಬಿಜೆಪಿಗೆ ಬಹುಮತ ಸಿಗಲಿಲ್ಲ. ಯಡಿಯೂರಪ್ಪ ಅಧಿಕಾರದ ಛಲ ಬಿಡಲಿಲ್ಲ. ‘ಆಪರೇಷನ್‌ ಕಮಲ’ದ ಕಳ್ಳಮಾರ್ಗದಲ್ಲಿ, ಕಾಂಗ್ರೆಸ್, ಜೆಡಿಎಸ್ ಶಾಸಕರ ರಾಜೀನಾಮೆ ಕೊಡಿಸಿ 2019ರಲ್ಲಿ ಮುಖ್ಯಮಂತ್ರಿ ಗಾದಿಗೇರುವ ದಾರಿಯನ್ನು ನಿರ್ಮಿಸಿಕೊಂಡರು. ಅಷ್ಟುಹೊತ್ತಿಗೆ ಪಳಗಿದ್ದ ವಿಜಯೇಂದ್ರ, ಆಪರೇಷನ್ ಕಮಲದ ನೇತೃತ್ವ ವಹಿಸಿದ್ದರು. ಬಿಜೆಪಿಗೆ ಅಧಿಕಾರ ಹಿಡಿಯುವ ಅವಕಾಶವನ್ನು ಯಡಿಯೂರಪ್ಪ ಸೃಷ್ಟಿಸಿದ್ದರಾದರೂ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಮೋದಿ–ಶಾ ಜೋಡಿ ನಾಲ್ಕೈದು ದಿನ ಒಪ್ಪಿಗೆಯನ್ನೇ ನೀಡಲಿಲ್ಲ. ಇದಕ್ಕೆ ಬಗ್ಗದ ಯಡಿಯೂರಪ್ಪ, ರಾಜಭವನಕ್ಕೆ ಸಂದೇಶವನ್ನು ರವಾನಿಸಿದರು. ತಮ್ಮ ಮಾತಿಗೆ ಬೆಲೆ ಕೊಡಲಿಲ್ಲ ಎಂದು ಸಿಟ್ಟಿಗೆದ್ದ ಮೋದಿ–ಶಾ ಜೋಡಿ, ಸಂಪುಟ ವಿಸ್ತರಣೆಗೆ ಸಮ್ಮತಿ ನೀಡಲಿಲ್ಲ. ಯಡಿಯೂರಪ್ಪ ಒಂದು ತಿಂಗಳು ಏಕಾಂಗಿಯಾಗಿ ಸರ್ಕಾರವನ್ನು ನಿಭಾಯಿಸಿದರು. ಬಳಿಕವೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಗತ್ಯ ಸಹಕಾರ ಕೊಡಲಿಲ್ಲ. ಭೇಟಿಗೆ ಸಮಯ ಕೇಳಿದರೂ ಮೋದಿಯವರು ನೀಡುತ್ತಿರಲಿಲ್ಲ.

ಎರಡು ವರ್ಷ ಕಳೆಯುವ ಮುನ್ನವೇ, ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಇಳಿಸುವ ಕಸರತ್ತು ಶುರುವಾಯಿತು. ಅಷ್ಟುಹೊತ್ತಿಗಾಗಲೇ, ‘ಯಡಿಯೂರಪ್ಪ ಬದಲು ಅವರ ಮಗ ವಿಜಯೇಂದ್ರ ಅಧಿಕಾರ ನಡೆಸುತ್ತಿದ್ದಾರೆ. ನಾಲ್ಕೈದು ಕೋಟಿ ಅನುದಾನಕ್ಕೂ ಅವರ ಮುಂದೆ ಕೈಯೊಡ್ಡಿ ನಿಲ್ಲಬೇಕಾದ ಸ್ಥಿತಿ ಬಂದಿದೆ, ಭ್ರಷ್ಟಾಚಾರ ಮುಗಿಲುಮುಟ್ಟಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹಾದಿಬೀದಿಯಲ್ಲಿ ಹೇಳತೊಡಗಿದ್ದರು. ಏತನ್ಮಧ್ಯೆ, ವಿಜಯೇಂದ್ರ ಆಪ್ತ ಸಹಾಯಕ ಆಯನೂರು ಉಮೇಶ್ ಸೇರಿದಂತೆ ಹಲವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಯೂ ನಡೆಯಿತು. ಇದೆಲ್ಲದರ ಪರಿಣಾಮವಾಗಿ, ಯಡಿಯೂರಪ್ಪ ಕಣ್ಣೀರಿಡುತ್ತಲೇ ಕುರ್ಚಿಯಿಂದ ಇಳಿದರು.

ಬಳಿಕ, ರಚನೆಯಾದ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲಿ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಯಡಿಯೂರಪ್ಪ ಪಟ್ಟಿಗೆ ವರಿಷ್ಠರು ಬೆಲೆ ಕೊಡಲಿಲ್ಲ. ಅದಾದ ಬಳಿಕ, ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುವುದಾಗಿ ಯಡಿಯೂರಪ್ಪ ಹೇಳುತ್ತಲೇ ಬಂದರು. ಅದಕ್ಕೂ ವರಿಷ್ಠರು ತಡೆ ಹಾಕುತ್ತಲೇ ಬಂದರು.

ಈ ಬೆಳವಣಿಗೆಗಳ ಮಧ್ಯೆಯೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ನೆಲ ಕಚ್ಚಿತು. ‘ಹೊಂದಾಣಿಕೆ ರಾಜಕಾರಣದಿಂದ ಕೆಲವೆಡೆ ಸೋಲಬೇಕಾಯಿತು’ ಎಂದು ಸೋತವರು ಹೇಳಿಕೊಂಡರು. ‘ನಾಯಕರ ಮಧ್ಯೆ ಹೊಂದಾಣಿಕೆ ನಡೆದಿದ್ದರಿಂದ ಶಿಕಾರಿ‍ಪುರದಲ್ಲಿ ವಿಜಯೇಂದ್ರ ಗೆಲ್ಲುವಂತಾಯಿತು’ ಎಂದು ಕಾಂಗ್ರೆಸ್ ನಾಯಕರೇ ಹೇಳಿದ್ದುಂಟು. ಈಗ ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದು ಹಲವರ ಹುಬ್ಬೇರಿಸಿದೆ.

ವಿಧಾನಸಭೆ ಚುನಾವಣೆ ವೇಳೆ ಮೋದಿ–ಅಮಿತ್ ಶಾ ಇಲ್ಲಿಯೇ ಮೊಕ್ಕಾಂ ಹೂಡಿದ್ದರೂ ಪಕ್ಷ ಹೀನಾಯ ಸೋಲು ಅನುಭವಿಸಬೇಕಾಯಿತು. ಬಿಜೆಪಿ ನೇತೃತ್ವದ ಸರ್ಕಾರದ ಮೇಲಿನ ಭ್ರಷ್ಟಾಚಾರದ ಆರೋಪ, ಹದಗೆಟ್ಟ ಆಡಳಿತವು ಸೋಲಿಗೆ ಪ್ರಮುಖ ಕಾರಣಗಳಾಗಿದ್ದವು. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೂ ಅಪಜಯದ ಪ್ರಮುಖ ಕಾರಣಗಳಲ್ಲಿ ಒಂದು ಎಂಬುದು ಬಿಜೆಪಿ ವರಿಷ್ಠರಿಗೆ ಮನವರಿಕೆಯಾದಂತಿದೆ.

‘ಮಗನಿಗೆ ಅಧ್ಯಕ್ಷ ಸ್ಥಾನ ಇಲ್ಲವೇ ವಿರೋಧ ಪಕ್ಷದ ನಾಯಕನ ಸ್ಥಾನ ನೀಡದಿದ್ದರೆ ಪಕ್ಷ ತೊರೆಯಲು ಹಿಂಜರಿಯಲಾರೆ’ ಎಂದು ಯಡಿಯೂರಪ್ಪ ‘ಬೆದರಿಕೆ’ ಹಾಕಿದ್ದರು. ವಿಧಾನಸಭೆ ಚುನಾವಣೆ ವೇಳೆ, ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ, ಆಯನೂರು ಮಂಜುನಾಥ ಅವರು ಪಕ್ಷ ಬಿಟ್ಟಿದ್ದರಿಂದ ‘ಬಿಜೆಪಿ ಲಿಂಗಾಯತ ವಿರೋಧಿ’ ಎಂಬ ಹಣೆಪಟ್ಟಿಗೆ ಮತ್ತಷ್ಟು ಹೊಳಪು ಬಂದಿತ್ತು. ವಿಧಾನಸಭೆ ಚುನಾವಣೆಯಲ್ಲಿ ಸೋತವರು, ಗೆದ್ದ ಕೆಲವರು ಲೋಕಸಭೆ ಚುನಾವಣೆಗೆ ಮುನ್ನ ಪಕ್ಷ ಬಿಡಲಿದ್ದಾರೆ, ಅವರಲ್ಲಿ ಯಡಿಯೂರಪ್ಪ ಹಿಂಬಾಲಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಮಾಹಿತಿಯೂ ವಿಜಯೇಂದ್ರ ನೇಮಕದ ಹಿಂದೆ ಕೆಲಸ ಮಾಡಿದೆ. 

ಬಿಜೆಪಿ ನೇತೃತ್ವದ ಸರ್ಕಾರದ ಕೊನೆಯ ಎರಡು ವರ್ಷ ನಡೆಸಿದ ಧರ್ಮ ವಿಭಜನೆಯ, ಕೋಮುದ್ವೇಷದ ರಾಜಕೀಯವು ಕರ್ನಾಟಕದಲ್ಲಿ ಫಲ ನೀಡಲಿಲ್ಲ. ಜಾತಿ ಆಧಾರಿತ ರಾಜಕಾರಣವೇ ಇನ್ನೂ ರಾಜ್ಯದಲ್ಲಿ ಪ್ರಭಾವಿಯಾಗಿದೆ ಎಂಬುದೂ ಬಿಜೆಪಿ ವರಿಷ್ಠರಿಗೆ ಗೊತ್ತಾದಂತಿದೆ.

‘ವಿಜಯೇಂದ್ರ ಸಾಮರ್ಥ್ಯ ನೋಡಿ ಸ್ಥಾನ ನೀಡಲಾಗಿದೆ’ ಎಂದು ಜೆ.ಪಿ.ನಡ್ಡಾ ಹೇಳಿದ್ದಾರೆ. ಹಿಂದೆ ಯಾವತ್ತೂ ಚುನಾವಣಾ ರಾಜಕಾರಣ ನೋಡದ ವಿಜಯೇಂದ್ರ ಮೊದಲ ಬಾರಿಗೆ ಶಾಸಕರಾದವರು. ಅಪ್ಪ ಎರಡನೇ ಬಾರಿ ಅಧಿಕಾರಕ್ಕೇರಿದ ಮೇಲಷ್ಟೇ ಪಕ್ಷದ ಉಪಾಧ್ಯಕ್ಷ ಹುದ್ದೆ ನೋಡಿದವರು. ಅವರ ಸಾಮರ್ಥ್ಯವೇ ಹೆಚ್ಚೆಂದು ನಡ್ಡಾ ಒಪ್ಪುವುದಾದರೆ, ಬಸನಗೌಡ ಪಾಟೀಲ ಯತ್ನಾಳ, ಆರ್.ಅಶೋಕ, ವಿ.ಸೋಮಣ್ಣ, ಎಸ್‌.ಸುರೇಶ್‌ ಕುಮಾರ್ ಸಿ.ಟಿ.ರವಿ, ಮುರುಗೇಶ ನಿರಾಣಿ, ಗೋವಿಂದ ಕಾರಜೋಳ ಅವರನ್ನೆಲ್ಲ ಅವಮಾನಿಸಿದಂತೆ. ಹಾಗೆಂದು ವಿಜಯೇಂದ್ರ ಅವರಿಗೆ ಸಾಮರ್ಥ್ಯ ಇಲ್ಲವೆಂದಲ್ಲ. ಅಪ್ಪನ ವರ್ಚಸ್ಸು, ದುಡ್ಡಿನ ಬಲ, ಪ್ರಬಲ ಸಮುದಾಯವೊಂದು ಬೆನ್ನಿಗೆ ನಿಲ್ಲುವ ಅವಕಾಶವೂ ವಿಜಯೇಂದ್ರ ಅವರ ನೇಮಕದ ಹಿಂದಿನ ಕಾರಣವಿದ್ದೀತು.

ಒಂದಂತೂ ಸತ್ಯ; ಕೋಮುದ್ವೇಷವನ್ನೇ ಜನರಿಗೆ ಉಣಿಸಿ, ಅನ್ಯರ ಮೇಲೆ ಹಗೆ ಸಾಧಿಸುವ ಧರ್ಮಕೇಂದ್ರಿತ ರಾಜಕಾರಣಕ್ಕಿಂತ, ಹಣಬುರುಕತನ, ಅಧಿಕಾರ ರಾಜಕಾರಣ ಮಾಡುವವರು ಲೇಸು. ಹಾಗೆಂದು, ಅಕ್ರಮ ಹಣ ಸಂಪಾದನೆ ಸಹ್ಯವೆಂದಲ್ಲ. ಅವರು ಮನಸ್ಸು ಮನಸ್ಸುಗಳ ಮಧ್ಯೆ ವಿಷ ಹರಡಿ, ಸಾಮಾಜಿಕ ಕ್ಲೇಶ ಉಂಟು ಮಾಡುವುದಿಲ್ಲ. ವ್ಯಾಪಾರ ಮಾಡುವವನಿಗೆ ಬೀದಿಗಳು, ಅಂಗಡಿ ಬಾಗಿಲು ಮುಕ್ತವಾಗಿ ತೆರೆದಿದ್ದರಷ್ಟೇ ಲಾಭ. ಬಿಜೆಪಿ ವರಿಷ್ಠರ ಈ ನಡೆ, ಅಷ್ಟರಮಟ್ಟಿಗೆ ಸಮಾಧಾನ ಪಟ್ಟುಕೊಳ್ಳುವ ಸಂಗತಿಯಷ್ಟೆ.

ವೈ.ಗ ಜಗದೀಶ

ವೈ.ಗ ಜಗದೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT