ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ: ಬಿಜೆಪಿ ಈಗ ಹೆಡೆ ಮುರಿದ ಹಾವು– ವಿರೋಧಪಕ್ಷದ ನಾಯಕನಿಲ್ಲದ ದೈನೇಸಿ ಸ್ಥಿತಿ!

ತೆನೆಹೊತ್ತ ಮಹಿಳೆ ಮುಡಿಗೆ ‘ಕಮಲ’
Published 17 ಜುಲೈ 2023, 0:02 IST
Last Updated 17 ಜುಲೈ 2023, 0:02 IST
ಅಕ್ಷರ ಗಾತ್ರ

ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು ಎರಡು ತಿಂಗಳು ಕಳೆದು, ರಾಜ್ಯದ ಹಣೆಬರಹ ನಿರ್ಧರಿಸುವ ಬಜೆಟ್ ಮಂಡನೆ ಮುಗಿದರೂ ವಿರೋಧ ‍ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದ ದೈನೇಸಿ ಸ್ಥಿತಿಗೆ ಬಿಜೆಪಿ ತಲುಪಿದೆ. ಹೆಡೆ ಮುರಿದ ಹಾವೊಂದು ಬಿರುಸಾಗಿ ಬಾಲ ಅಲ್ಲಾಡಿಸುತ್ತಿರುತ್ತದೆ. ಇದನ್ನು ನೋಡಿದರೆ, ಅದಕ್ಕೆ ಇನ್ನೂ ಜೀವವಿದೆಯೇನೋ ಎಂಬಂತೆ ಅನಿಸುತ್ತದೆ. ಕರ್ನಾಟಕದ ಕಮಲ ಪಡೆಗೆ ಇದಕ್ಕಿಂತ ಬೇರೆ ಹೋಲಿಕೆ ಬೇಕಿಲ್ಲ. 

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಸೂತ್ರ ಹಿಡಿದಿದ್ದ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ನಾಗಪುರ ಮೂಲದ ಕೆಲವು ಪ್ರಮುಖರ ಮಾತು ಕೇಳಿದ್ದಕ್ಕೆ, ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪಶ್ಚಾತ್ತಾಪ ಪಡುತ್ತಿರುವುದು ರಹಸ್ಯವೇನಲ್ಲ. ನವಿಲು ಹುಳು–ಹುಪ್ಪಡಿ, ಕಾಳು ತಿನ್ನುತ್ತದೆಯಾದರೂ ಅದಕ್ಕೆ ಬಲು ಇಷ್ಟದ ಆಹಾರ ಹಾವು.  ಬಿಜೆಪಿಯಲ್ಲಿ ಬುಸುಗುಡುತ್ತಾ, ಕೆಲವೊಮ್ಮೆ ಎದುರಾಳಿಗಳನ್ನು ಕಚ್ಚುವಷ್ಟು ರೊಚ್ಚು ತೋರಿಸುತ್ತಿದ್ದ ನಾಯಕರನ್ನು ಚುನಾವಣೆ ವೇಳೆ ‘ಹಿರಿತನ’ದ ನೆವವೊಡ್ಡಿ ಮೂಲೆಗೆ ತಳ್ಳಲಾಯಿತು. ಸರ್ಕಾರದ ವಿರುದ್ಧ ಹರಿಹಾಯಬಲ್ಲ ತಾಕತ್ತಿದ್ದ ಹಾವುಗಳನ್ನು ಪ್ರಧಾನಿ ಮೋದಿಯವರ ‘ನವಿಲು’ ಹಿಡಿದು, ಹೆಡೆ ಮುರಿದುಬಿಟ್ಟಿದೆ. ಬಜೆಟ್ ಅಧಿವೇಶನ ವಾರಾಂತ್ಯದಲ್ಲಿ ಮುಗಿಯಲಿದ್ದು, ಎರಡೂ ಸದನಗಳಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಖಾಲಿಯೇ ಉಳಿದಿದೆ.

ವಿರೋಧ ಪಕ್ಷದ ನಾಯಕನನ್ನು ‘ಛಾಯಾ ಮುಖ್ಯಮಂತ್ರಿ’ ಎಂದೇ ಕರೆಯಲಾಗುತ್ತದೆ. ಮುಖ್ಯಮಂತ್ರಿಗಿರುವ ಆಡಳಿತಾತ್ಮಕ ಅಧಿಕಾರ ಇರುವುದಿಲ್ಲವಾದರೂ ಜನರ ದನಿಗೆ ಬಾಯಾಗುವ, ಸರ್ಕಾರದ ತಪ್ಪುನಡೆಯನ್ನು ಜಗಜ್ಜಾಹೀರು ಮಾಡುವ ಸಾಂವಿಧಾನಿಕ ಹೊಣೆ ಈ ಹುದ್ದೆಗೆ ಇದೆ. ರಾಜ್ಯದಲ್ಲಿ ಈ ಸ್ಥಾನದಲ್ಲಿದ್ದ ಅನೇಕರು, ಆ ಕುರ್ಚಿಯ ಮಹತ್ವವನ್ನು ತೋರಿಸಿದ್ದಲ್ಲದೆ, ಮತ್ತೆ ನಡೆದ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು ಸಾಮರ್ಥ್ಯವನ್ನೂ ಮೆರೆದಿದ್ದಾರೆ. ಈ ಸ್ಥಾನ, ಬಿಜೆಪಿ ವರಿಷ್ಠರು ಎಣಿಸಿರಬಹುದಾದಷ್ಟು ನಗಣ್ಯವಲ್ಲ. 

ಕರ್ನಾಟಕ ವಿಧಾನಮಂಡಲದ ಚರಿತ್ರೆಯನ್ನು ಗಮನಿಸಿದರೆ, ಕಲಾಪ ನಡೆಯುತ್ತಿದ್ದ ಸಮಯದಲ್ಲಿ ವಿರೋಧ ‍ಪಕ್ಷದ ನಾಯಕನ ಸ್ಥಾನ ಭರ್ತಿಯಾಗದೇ ಇದ್ದ ಅವಧಿಯೇ ಕಾಣಸಿಗುವುದಿಲ್ಲ. ಚುನಾವಣೆ ನಡೆದು ಹೊಸ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭಗಳಲ್ಲೆಲ್ಲ ಬಹುಬೇಗ ವಿರೋಧ ಪಕ್ಷದ ನಾಯಕನ ಆಯ್ಕೆಯೂ ಆಗಿದ್ದಿದೆ. ಗರಿಷ್ಠ ವಿಳಂಬವೆಂದರೆ ಅದು 20 ದಿನಗಳಷ್ಟೆ. 1978ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಸ್.ಆರ್.ಬೊಮ್ಮಾಯಿ ವಿರೋಧ ಪಕ್ಷದ ನಾಯಕರಾಗಲು 20 ದಿನ ವಿಳಂಬವಾಗಿತ್ತು. 1989ರಲ್ಲಿ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾದಾಗ ಡಿ.ಬಿ.ಚಂದ್ರೇಗೌಡರು ವಿರೋಧ ಪಕ್ಷದ ನಾಯಕರಾಗಲು 18 ದಿನದ ಅವಧಿ ಹಿಡಿದಿತ್ತು. ಮೊದಲ ಅಧಿವೇಶನ ನಡೆಯುವ ಹೊತ್ತಿಗೆ ವಿರೋಧ ಪಕ್ಷದ ನಾಯಕ‌ನ ಹೆಸರು ಆಖೈರಾಗಿರುತ್ತಿತ್ತು. ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿನ ಅನೇಕ ಉದಾತ್ತ ಪರಂಪರೆಯನ್ನು ‘ಆಪರೇಷನ್ ಕಮಲ’ದ ಮೂಲಕ ಮುರಿದಿದ್ದ ಬಿಜೆಪಿ, ಈಗ ವಿರೋಧಪಕ್ಷದ ನಾಯಕನ ಸ್ಥಾನವನ್ನು ಒಂದು ಅಧಿವೇಶನ ಪೂರ್ತಿ ಖಾಲಿ ಬಿಟ್ಟು, ಮತ್ತೊಂದು ಎಡವಟ್ಟು ಮಾಡಿದೆ. 

ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯತ್ವ ಹೊಂದಿದ ಏಕೈಕ ಪಕ್ಷ ಎಂದು ಬಿಜೆಪಿ ನಾಯಕರು ಬಣ್ಣಿಸಿಕೊಳ್ಳುವುದುಂಟು. ಚುನಾಯಿತ ಸರ್ಕಾರವನ್ನು ಅಪ್ರಜಾತಾಂತ್ರಿಕ ನೆಲೆಯಲ್ಲಿ ರಾತ್ರೋರಾತ್ರಿ ಹೊಡೆದುರುಳಿಸಿ, ತಮಗೆ ಬೇಕಾದವರನ್ನು ಮುಖ್ಯಮಂತ್ರಿ ಮಾಡುವ ‘ದಮ್ಮು–ತಾಕತ್ತು’ ಮೋದಿ– ಅಮಿತ್ ಶಾ ಅವರಿಗಿದೆ. ಸೋಲಿನ ಹತಾಶೆಯೇ ಉಂಡುಡುವಷ್ಟು ಇರುವಾಗ, ಕಾಂಗ್ರೆಸ್‌ ನೇತೃತ್ವದ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡುತ್ತಾ, ಜನರನ್ನು ಸೆಳೆಯುತ್ತಿರುವುದನ್ನು ಕಂಡು ಬಿಜೆಪಿ ನಾಯಕರೇ ಕಂಗಾಲಾಗಿ ಹೋಗಿದ್ದಾರೆ. ಅಂತಹ ಆತಂಕದ ಹೊತ್ತಿನಲ್ಲಿ, ವಿರೋಧಪಕ್ಷದ ನಾಯಕನಿಲ್ಲದೇ ಇರುವುದು ಶಾಸಕರು, ನಾಯಕರನ್ನು ಅಸಹಾಯಕತೆಯ ಕತ್ತಲಿಗೆ ದೂಡಿದಂತಾಗಿದೆ.

ಹಿರಿಯರನ್ನೆಲ್ಲ ಮೂಲೆಗೆ ಅಟ್ಟಿದ ಮೇಲೆ, ಸರ್ಕಾರವನ್ನು ಸಮರ್ಥವಾಗಿ ಎದುರಿಸುವ ಸದನವೀರರೇ ವಿರಳರಾಗಿದ್ದಾರೆ. ಹಾಗೆ ನೋಡಿದರೆ, ಸರ್ಕಾರವನ್ನು ಎದುರಿಸುವ ಸಾಮರ್ಥ್ಯ ಬಸವರಾಜ ಬೊಮ್ಮಾಯಿ ಅವರಿಗೆ ಇದೆ. ಆರೇಳು ಮುಖ್ಯಮಂತ್ರಿಗಳ ಜತೆಗಿನ ಒಡನಾಟ, ಗೃಹ, ನೀರಾವರಿ, ಕಾನೂನು, ಹಣಕಾಸು ಖಾತೆಗಳನ್ನು ನಿರ್ವಹಿಸಿದ ಅನುಭವ, ಆರ್ಥಿಕತೆ ಕುರಿತ ಜ್ಞಾನವೂ ಕಡಿಮೆಯೇನಿಲ್ಲ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ವಿಫಲರಾದರೆಂಬ ಕಾರಣಕ್ಕೆ ಅವರ ಮೇಲೆ ಮೋದಿ–ಶಾ ಅವರಿಗೆ ಪೂರ್ಣ ವಿಶ್ವಾಸ ಇದ್ದಂತಿಲ್ಲ. ಸ್ವಲ್ಪ ತಯಾರು ಮಾಡಿಕೊಂಡರೆ ಆರ್. ಅಶೋಕ, ವಿ. ಸುನಿಲ್ ಕುಮಾರ್‌ ಕೂಡ ಸಮರ್ಥ ಆಯ್ಕೆ ಆಗಬಲ್ಲರು. 

ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ದಡ ಮುಟ್ಟದೇ ಇರಲು ನೀವೇ ಕಾರಣ; ವಿರೋಧ ಪ‍ಕ್ಷದ ನಾಯಕನಿಲ್ಲದೇ ಸದನ ಎದುರಿಸುವ ಘೋರ ಅವಮಾನ ಸಹಿಸಿ ಹಾಳಾಗಿಹೋಗಿ ಎಂಬುದು ಬಿಜೆಪಿ ವರಿಷ್ಠರ ಭಾವನೆ ಇದ್ದಂತಿದೆ. ಏಕೆಂದರೆ, ಸರ್ಕಾರ ರಚನೆಯಾದ ಕೂಡಲೇ ವಿರೋಧಪಕ್ಷದ ನಾಯಕನ ಆಯ್ಕೆ ನಡೆಯುತ್ತದೆ ಎಂಬ ಮಾತು ಪಕ್ಷದೊಳಗೆ ಹರಿದಾಡಿತ್ತು. ಅದಾದ ಬಳಿಕ, ವೀಕ್ಷಕರು ಬಂದು ಅಭಿಪ್ರಾಯ ಪಡೆದು ವಾಪಸ್ ತೆರಳಿ ಹದಿನೈದು ದಿನಗಳೇ ಕಳೆದವು. ಬಿ.ಎಸ್‌. ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡ ಗೃಹ ಸಚಿವ ಅಮಿತ್ ಶಾ ಮಾತುಕತೆ ಆಡಿ ಕಳುಹಿಸಿದರು. ಅಭಿಪ್ರಾಯ ಪಡೆಯಲು ಕರೆಸಿದ್ದಲ್ಲ, ಸೋಲಿಗೆ ನೀವೇ ಕಾರಣ ಎಂದು ಧಮಕಿ ಹಾಕಲು ಕರೆಸಿಕೊಂಡಿದ್ದರು ಎಂಬ ವದಂತಿಗಳನ್ನು ಕೇಂದ್ರದ ನಾಯಕರೇ ಹಬ್ಬಿಸುತ್ತಿದ್ದಾರೆ.

ವಿರೋಧಪಕ್ಷದ ನಾಯಕರನ್ನು ಆಯ್ಕೆ ಮಾಡದೇ ಇರಲು ಬಿಜೆಪಿಗೆ ಹಲವು ಕಾರಣಗಳಿವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ದಾಖಲೆ ಸಮೇತ ಇಕ್ಕಟ್ಟಿಗೆ ಸಿಲುಕಿಸಬಲ್ಲ ಸಾಮರ್ಥ್ಯವನ್ನು ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮೋದಿ ಕಂಡಂತಿದೆ. ಅದಕ್ಕಾಗಿಯೇ, ‘ಪಕ್ಷವನ್ನು ವಿಲೀನಗೊಳಿಸಿ ನಿಮ್ಮನ್ನೇ ವಿರೋಧಪಕ್ಷದ ನಾಯಕನನ್ನಾಗಿ ಮಾಡುತ್ತೇವೆ’ ಎಂಬ ಆಮಿಷವನ್ನು ಅವರಿಗೆ ಒಡ್ಡಿದ್ದಾರೆ. ಅದಕ್ಕೆ ಕುಮಾರಸ್ವಾಮಿ ಸಿದ್ಧರಾಗಿಲ್ಲ. ವಿರೋಧಪಕ್ಷದ ನಾಯಕನ ಆಯ್ಕೆ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನ ಒಂದಕ್ಕೊಂದು ತಳುಕು ಹಾಕಿಕೊಂಡಿವೆ. ಪ್ರಾದೇಶಿಕ ಮತ್ತು ಜಾತಿಯ ಪ್ರಾತಿನಿಧ್ಯವನ್ನು ಪರಿಗಣಿಸಿ ಎರಡೂ ಸ್ಥಾನಗಳಿಗೆ ಆಯ್ಕೆ ಮಾಡಬೇಕಾಗಿದೆ. ಏತನ್ಮಧ್ಯೆ, ಯಡಿಯೂರಪ್ಪ ತಮ್ಮದೇ ಪಟ್ಟು ಹಾಕಿ ಕುಳಿತಿದ್ದಾರೆ. ಈ ಎಲ್ಲ ಗೊಂದಲವೂ ಬಿಜೆಪಿ ವರಿಷ್ಠರನ್ನು ಮುಂದಡಿ ಇಡದಂತೆ ಕಟ್ಟಿಹಾಕಿದೆ.

ಒಂದು ವೇಳೆ, ಕುಮಾರಸ್ವಾಮಿ ಅವರನ್ನು ಪ್ರತಿಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದರೆ, ಪಕ್ಷದೊಳಗಿನ ನಾಯಕರ ರಾಜಕೀಯ ಭವಿಷ್ಯ ತಲೆಕೆಳಗು ಆಗಲಿದೆ. ಈಗಲೇ ಒಂದು ಹೆಜ್ಜೆ ಆಚೆ ಇಟ್ಟಿರುವ ಲಿಂಗಾಯತರು, ಬಿಜೆಪಿಯಿಂದ ಹೊರ ನಡೆಯುವುದಕ್ಕೆ ಬಾಗಿಲನ್ನು ತೆರೆದುಕೊಟ್ಟಂತೆ ಆಗಬಹುದು. ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಹಿಡಿದ ಹಾದಿಯನ್ನು, ಉಳಿದ ಲಿಂಗಾಯತ ನಾಯಕರೂ ಹಿಡಿದರೆ ಅಚ್ಚರಿಯೇನಿಲ್ಲ. ಕುಮಾರಸ್ವಾಮಿ ಬರುವುದಕ್ಕಿಂತ ಹೊರಗಿದ್ದರೇ ಪಕ್ಷಕ್ಕೆ ಲಾಭ ಜಾಸ್ತಿ ಎಂಬ ವಾದವನ್ನೂ ರಾಜ್ಯದ ನಾಯಕರು ಮುಂದಿಡುತ್ತಿದ್ದಾರೆ. ಆದರೆ, ಇವರ ವಾದ ಹೋಗಲಿ, ರಾಜ್ಯ ನಾಯಕರನ್ನು ಕರೆಸಿ ಮಾತನಾಡುವ ಔದಾರ್ಯವನ್ನೂ ಮೋದಿ–ಅಮಿತ್ ಶಾ ಮಾಡುತ್ತಿಲ್ಲ. ಇದು ಬಿಜೆಪಿ ನಾಯಕರ ಜಂಘಾಬಲವನ್ನೇ ಉಡುಗಿಸಿದೆ.

ಅಧಿಕಾರದಲ್ಲಿ ಇದ್ದಷ್ಟು ದಿನ ಮತದ್ವೇಷ, ಸಾವಿನ ರಾಜಕಾರಣ ಮಾಡಿದ ಬಿಜೆಪಿಯ ಸ್ಥಳೀಯ ನಾಯಕರಿಗೆ ಈಗಲೂ ಬುದ್ಧಿ ಬಂದಂತಿಲ್ಲ. ಅಧಿವೇಶನದಲ್ಲಿ ನಾಯಕನಿಲ್ಲದೇ ಇದ್ದರೂ ಯಾವುದೋ ಕಾರಣಕ್ಕೆ ನಡೆದ ಹತ್ಯೆಗಳನ್ನು ಮುಂದಿಟ್ಟುಕೊಂಡು ಗಲಾಟೆ ಎಬ್ಬಿಸಿದರು. ಅಂತಹದೆಲ್ಲ ಈಗ ರಾಜ್ಯದ ಜನರಿಗೆ ಬೇಕಾಗಿಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಸಿದವರಿಗೆ ಅನ್ನ ಕೊಟ್ಟು, ತಾಯಂದಿರಿಗೆ ಘನತೆ, ಸ್ವಾಭಿಮಾನ ತಂದುಕೊಡುವಂತಹ ರಾಜಕಾರಣ ನಡೆಸುತ್ತಿರುವಾಗ, ದೇಶ ಬಿಟ್ಟು ದ್ವೇಷ ಕಟ್ಟುವ ಸಾವಿನ ರಾಜಕಾರಣ ನಡೆಯುವುದಿಲ್ಲ ಎಂಬುದು ಬಿಜೆಪಿ ನಾಯಕರಿಗೆ ಈಗಲಾದರೂ ಅರ್ಥವಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT