ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯವಾಗಿ ಅಸಂಗತ ಆಗಬಾರದೆಂದರೆ...

ಕಾಂಗ್ರೆಸ್ ಪಕ್ಷ ಇಂದು ಎದುರಿಸುತ್ತಿರುವ ಸವಾಲುಗಳಿಗೆ ಮೂರು ಆಯಾಮಗಳಿವೆ..
ಅಕ್ಷರ ಗಾತ್ರ

ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶವು ಮುಂದಿನ ದಿನಗಳಲ್ಲಿ ದೇಶದ ರಾಜಕಾರಣದ ಹಾದಿಯನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ವಿಧಾನಸಭೆಗಳ ಫಲಿತಾಂಶದ ಬಗ್ಗೆ ಬಹಳ ಚರ್ಚೆ ನಡೆದಿದೆ. ಆದರೆ, ಕಾಂಗ್ರೆಸ್ ಪಕ್ಷದ ಸಾಧನೆಯ ಬಗ್ಗೆ ತೀರಾ ಸೀಮಿತ ಗಮನಹರಿದಿದೆ. ಈ ಚುನಾವಣೆ ಫಲಿತಾಂಶವು ಕಾಂಗ್ರೆಸ್ಸಿಗೆ ಒಳ್ಳೆಯ ಸುದ್ದಿಯನ್ನು ತಂದಿಲ್ಲ. ಕೇರಳದಲ್ಲಿ ತನ್ನ ಪಾಲುದಾರಿಕೆ ಇರುವ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಲು ಕಾಂಗ್ರೆಸ್ಸಿಗೆ ಆಗಿಲ್ಲ. ಅಸ್ಸಾಂನಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಆಗಿಲ್ಲ. ಪುದುಚೇರಿಯಲ್ಲಿ ಅಧಿಕಾರಕ್ಕೆ ಮರಳಲು ಆಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಪಕ್ಷವು ಸ್ಪರ್ಧೆಯಲ್ಲೇ ಇರಲಿಲ್ಲ. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಗುರುತಿಸಿಕೊಂಡು, ಜಯದ ಅಲೆಯಲ್ಲಿ ತೇಲಿದೆ. ಕಾಂಗ್ರೆಸ್ ಪಕ್ಷವು ಈಗ ಪಂಜಾಬ್, ರಾಜಸ್ಥಾನ ಮತ್ತು ಛತ್ತೀಸಗಡ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಮೂರು ರಾಜ್ಯಗಳಲ್ಲಿ (ಜಾರ್ಖಂಡ್, ಮಹಾರಾಷ್ಟ್ರ ಮತ್ತು ಈಗ ತಮಿಳುನಾಡು) ಆಡಳಿತಾರೂಢ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ.

ಹೀಗೆ ಆಡಳಿತದಲ್ಲಿ ಇರುವ ರಾಜ್ಯಗಳ ಸಂಖ್ಯೆಯು ದೇಶದ ಒಟ್ಟು ರಾಜ್ಯಗಳಿಗೆ ಹೋಲಿಸಿದರೆ, ನಾಲ್ಕನೆಯ ಒಂದರಷ್ಟು. 2014ರ ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ನಂತರ ಕಾಂಗ್ರೆಸ್ ಪಕ್ಷವು ಕುಸಿತದ ಹಾದಿಯಲ್ಲಿಯೇ ಇರುವಂತೆ ಕಾಣುತ್ತಿದೆ. ಅದು ಪುನಶ್ಚೇತನವನ್ನು ಕಂಡೇ ಇಲ್ಲ ಅನಿಸುತ್ತಿದೆ. ‘ಕಾಂಗ್ರೆಸ್ ಮುಕ್ತ ಭಾರತ’ ನಿರ್ಮಿಸುವ ಬಿಜೆಪಿ ನಾಯಕರ ಕನಸನ್ನು ಕಾಂಗ್ರೆಸ್ಸಿನ ಹಲವರು ತಮಗರಿಯದಂತೆ ತಾವೇ ನನಸಾಗಿಸುತ್ತಿದ್ದಾರೆ!

ಬಿಜೆಪಿ ವಿರೋಧಿ ರಾಜಕೀಯ ಶಕ್ತಿಗಳ ನಾಯಕತ್ವದ ಸ್ಥಾನವನ್ನು ಕಾಂಗ್ರೆಸ್ ಪಕ್ಷವು ರಾಜ್ಯ ಮಟ್ಟದಲ್ಲಿ ಬಲಿಷ್ಠ
ವಾಗಿರುವ ಪಕ್ಷವೊಂದಕ್ಕೆ ಬಿಟ್ಟುಕೊಡಲಿದೆ ಎಂದು ಭಾಸವಾಗುತ್ತಿದೆ. ಕಾಂಗ್ರೆಸ್ ಇಂದು ಎದುರಿಸುತ್ತಿರುವ
ಸವಾಲುಗಳಿಗೆ ಮೂರು ಆಯಾಮಗಳು ಇವೆ. ಇವುಗಳನ್ನು ಸಮಗ್ರವಾಗಿ ನಿಭಾಯಿಸಲು ಪ್ರಯತ್ನ ನಡೆಸದಿದ್ದರೆ ಪಕ್ಷದ ಭವಿಷ್ಯ ನಿಜಕ್ಕೂ ಮಸುಕಾಗಲಿದೆ.

ಮೊದಲನೆಯದು, ಗೆಲುವಿನ ದವಡೆಯಿಂದ ಸೋಲಿನತ್ತ ಜಾರುವ ಅನನ್ಯ ಕೌಶಲವೊಂದು ಕಾಂಗ್ರೆಸ್‌ಗೆ ಸಿದ್ಧಿಸಿರುವಂತಿದೆ! ಈಚೆಗಿನ ಎರಡು ಉದಾಹರಣೆಗಳನ್ನು ಗಮನಿಸೋಣ. ಅಸ್ಸಾಂನಲ್ಲಿ ಪ್ರತಿರೋಧ ಒಡ್ಡುವಲ್ಲಿ ಪಕ್ಷ ವಿಫಲವಾಯಿತು. ಬಿಜೆಪಿಯ ಐದು ವರ್ಷಗಳ ಅಧಿಕಾರ ಅವಧಿಯಲ್ಲಿ ಕಾಂಗ್ರೆಸ್ ಗಾಢ ನಿದ್ರೆಯಲ್ಲಿ ಇದ್ದಂತಿತ್ತು. ಚುನಾವಣೆ ಘೋಷಣೆಯಾಗುವ ತುಸು ಮೊದಲು ಕಾಂಗ್ರೆಸ್ ಎಚ್ಚೆತ್ತುಕೊಂಡಿತು. ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ ಆಗುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಎಂಟು ಪಕ್ಷಗಳ ಮಹಾ ಮೈತ್ರಿಕೂಟವನ್ನು ಕಟ್ಟಿದರು. ಈ ಮೈತ್ರಿಕೂಟದಲ್ಲಿ ಎಐಯುಡಿಎಫ್ ಕೂಡ ಇತ್ತು, ಎಡಪಕ್ಷಗಳೂ ಇದ್ದವು. ಹೀಗಿದ್ದರೂ ಈ ಮೈತ್ರಿಕೂಟವು ಟೇಕ್‌ಆಫ್‌ ಆಗಲೇ ಇಲ್ಲ ಎಂಬುದನ್ನು ಪ್ರಚಾರ ಅಭಿಯಾನವೇ ತೋರಿಸಿತು. ಮೈತ್ರಿಕೂಟವನ್ನು ಯಾವ ಯೋಜನೆಯೂ ಇಲ್ಲದೆ, ಬಹಳ ತಡವಾಗಿ ರೂಪಿಸಲಾಗಿತ್ತು. ಗೆದ್ದೇ ಗೆಲ್ಲಬೇಕು ಎಂಬ ಛಲ ಕಾಣಿಸುತ್ತಿರಲಿಲ್ಲ.

ಎರಡನೆಯ ನಿದರ್ಶನ ಪುದುಚೇರಿಯದ್ದು. ಅಲ್ಲಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪಕ್ಷದಲ್ಲಿನ ಆಂತರಿಕ ಕಲಹವನ್ನು ಹತ್ತಿಕ್ಕಲು ಏನೂ ಮಾಡಲಿಲ್ಲ. ಆಡಳಿತಕ್ಕಿಂತ ಹೆಚ್ಚಿನ ಗಮನವನ್ನು ಮುಖ್ಯಮಂತ್ರಿಯು ಲೆಫ್ಟಿನೆಂಟ್ ಗವರ್ನರ್ ಜೊತೆ ನಡೆಸಿದ್ದ ಕದನದ ಮೇಲೆ ನೀಡಿತು. ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ನಂತರ, ಚುನಾವಣೆಗೂ ಮೊದಲು ಕಾಂಗ್ರೆಸ್ ಪಕ್ಷವು ತನ್ನದೇ ಪಕ್ಷದ ಮಾಜಿ ಮುಖ್ಯಮಂತ್ರಿಯನ್ನು ಚುನಾವಣೆಯಲ್ಲಿ ಅಭ್ಯರ್ಥಿ ಎಂದು ಘೋಷಿಸದೇ ಇರಲು ತೀರ್ಮಾನಿಸಿತು. ಮಿತ್ರಪಕ್ಷಗಳಿಂದ ಈ ವಿಚಾರದಲ್ಲಿ ಒತ್ತಡ ಇದ್ದಿರಬಹುದು. ಆದರೆ ಚುನಾವಣೆ ಆರಂಭವಾಗುವುದಕ್ಕೂ ಮೊದಲೇ ಪಕ್ಷವು ಸೋಲನ್ನು ಒಪ್ಪಿಕೊಂಡಂತಿತ್ತು. ಇದು ಎನ್‌ಡಿಎ ಮೈತ್ರಿಕೂಟದ ಕೆಲಸವನ್ನು ಸುಲಭಗೊಳಿಸಿತು.

ಎರಡನೆಯದಾಗಿ, ಏಕಪಕ್ಷದ ಪ್ರಾಬಲ್ಯ ಇದ್ದ ಸಂದರ್ಭದಲ್ಲಿ ತಾವು ಆಡಳಿತ ನಡೆಸುತ್ತಿದ್ದೆವು ಎಂಬ ‘ನಶೆ’ಯಿಂದ ಹೊರಬರಲು ಕಾಂಗ್ರೆಸ್ ನಾಯಕರಿಗೆ (ಬೇರೆ ಬೇರೆ ಹಂತಗಳಲ್ಲಿನ ನಾಯಕರಿಗೆ) ಸಾಧ್ಯವಾಗುತ್ತಿಲ್ಲ. ವಿರೋಧ ಪಕ್ಷದಲ್ಲಿ ಇರುವಾಗಲೂ ಅವರು, ತಾವು ಅಲ್ಪ ಅವಧಿಗೆ ಮಾತ್ರ ‘ಸರ್ಕಾರದಿಂದ ಹೊರಗಡೆ ಇದ್ದೇವೆ’, ಅಧಿಕಾರಕ್ಕೆ ಖಂಡಿತವಾಗಿಯೂ ಮರಳಲಿದ್ದೇವೆ ಎಂಬಂತೆ ವರ್ತಿಸುತ್ತಿದ್ದಾರೆ. ಕಾಂಗ್ರೆಸ್ಸಿನ ಹಲವರಿಗೆ, ಜನರ ಆಯ್ಕೆಯ ಪಕ್ಷವಾಗಿ ಅಧಿಕಾರಕ್ಕೆ ಮರಳುವುದಕ್ಕೆ ತಮ್ಮ ಪ್ರಯತ್ನ ಬೇಕು ಎಂದು ಅನಿಸುತ್ತಿಲ್ಲ. ಎದುರಾಳಿ ಪಕ್ಷದ ಅಧಿಕಾರ ಅವಧಿ ಪೂರ್ಣಗೊಂಡ ನಂತರ ತಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬಂತೆ ವರ್ತಿಸುತ್ತಾರೆ. ಅಥವಾ ಎದುರಾಳಿ ಪಕ್ಷದ ತಪ್ಪುಗಳ ಪರಿಣಾಮವಾಗಿ ಜನ ತಮ್ಮನ್ನೇ ಅನಿವಾರ್ಯವಾಗಿ ಆಯ್ಕೆ ಮಾಡುತ್ತಾರೆ ಎಂದೂ ಭಾವಿಸಿದ್ದಾರೆ. ಪಕ್ಷದೊಳಗಿನ ಕಲಹವು ಇದನ್ನು ಸ್ಪಷ್ಟವಾಗಿ ಹೇಳುತ್ತದೆ.

ಎರಡು ಉದಾಹರಣೆಗಳ ಮೂಲಕ ಇದನ್ನು ಹೇಳಬಹುದು. ಕೇರಳದಲ್ಲಿ ಈಚೆಗೆ ಆಗಿರುವ ಬೆಳವಣಿಗೆಗಳು ಮೊದಲ ಉದಾಹರಣೆ. ಸಂಯುಕ್ತ ಪ್ರಜಾತಾಂತ್ರಿಕ ಒಕ್ಕೂಟದ (ಯುಡಿಎಫ್‌) ನಾಯಕನ ಸ್ಥಾನದಲ್ಲಿರುವ ಕಾಂಗ್ರೆಸ್, ನಾಲ್ಕು ದಶಕಗಳಿಂದ ಬಂದಿರುವ ಪದ್ಧತಿಯಂತೆ ಎದುರಾಳಿ ಮೈತ್ರಿಕೂಟದ ಅಧಿಕಾರ ಅವಧಿ ಮುಗಿದ ನಂತರ, ಜನ ತನ್ನ ಮೈತ್ರಿಕೂಟಕ್ಕೆ ಮತ್ತೆ ಅಧಿಕಾರ ನೀಡುತ್ತಾರೆ ಎಂದು ಭಾವಿಸಿತು. ಆದರೆ, ಪಕ್ಷದೊಳಗಿನ ಕಲಹ ಅದೆಷ್ಟು ತೀವ್ರವಾಗಿತ್ತೆಂದರೆ, ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಘೋಷಿಸಲು ಆಗಲಿಲ್ಲ. ಪಕ್ಷದೊಳಗಿನ ಒಂದು ಬಣವು, ಎದುರಾಳಿ ಬಣಕ್ಕೆ ಹಾನಿ ಮಾಡಲು ಪಣ ತೊಟ್ಟಂತಿತ್ತು. ಇಲ್ಲಿ ಮಧ್ಯಪ್ರದೇಶದ ಉದಾಹರಣೆಯನ್ನೂ ನೀಡಬಹುದು. ಸವಾಲಿನ ಚುನಾವಣೆಯನ್ನು ಎದುರಿಸಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಆದರೆ, ಪಕ್ಷದಲ್ಲಿನ ಆಂತರಿಕ ಕಚ್ಚಾಟ ಹಾಗೂ ನಾಯಕರ ಸೊಕ್ಕು ಪಕ್ಷಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಲಿಲ್ಲ. ಸರ್ಕಾರದ ಆತ್ಮಘಾತುಕ ನಡೆಗಳು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಕಾಣುತ್ತಿದ್ದವು.

ಕೊನೆಯದಾಗಿ, ಪಕ್ಷ ಎದುರಿಸುತ್ತಿರುವ ನಾಯಕತ್ವದ ಗಂಭೀರ ಬಿಕ್ಕಟ್ಟಿನ ಬಗ್ಗೆ ಎರಡು ಮಾತು. ನಾಯಕತ್ವಕ್ಕಾಗಿ ಗಾಂಧಿ ಕುಟುಂಬದ ಆಚೆಗೆ ನೋಟ ಹರಿಸಲು ಪಕ್ಷಕ್ಕೆ ಸಾಧ್ಯವೇ ಆಗುತ್ತಿಲ್ಲ. ಗಾಂಧಿ ಕುಟುಂಬದಲ್ಲಿಯೂ ನಾಯಕತ್ವವನ್ನು ವಹಿಸಿಕೊಂಡು, ಏಕ ಮನಸ್ಸಿನಿಂದ ಕೆಲಸ ಮಾಡಲು ರಾಹುಲ್ ಗಾಂಧಿ ಅವರು ಹಿಂದೇಟು ಹಾಕುತ್ತಿದ್ದಾರೆ. ರಾಜಕೀಯ ನಾಯಕತ್ವ ಅಂದರೆ ಹಗಲು–ರಾತ್ರಿ ಅದರ ಬಗ್ಗೆಯೇ ಗಮನ ನೀಡಬೇಕು, ಸಮಗ್ರ ದೃಷ್ಟಿಕೋನ ಹೊಂದಿರಬೇಕು. ಇವೆರಡೂ ಕಾಣುತ್ತಿಲ್ಲ.

ರಾಷ್ಟ್ರೀಯ ನಾಯಕರಿಗೆ ಚುನಾವಣೆಗಳನ್ನು ಗೆದ್ದುಕೊಡಲು ಸಾಧ್ಯವಾಗುತ್ತಿಲ್ಲ ಎಂಬುದು ಪಕ್ಷಕ್ಕೆ ಅರಿವಾದ ನಂತರ, ಜನಸಮೂಹದ ಬೆಂಬಲ ಹೊಂದಿರುವ, ರಾಜ್ಯ ಮಟ್ಟದಲ್ಲಿನ ನಾಯಕರನ್ನು ಸಶಕ್ತರನ್ನಾಗಿಸಬೇಕು. ಆದರೆ ಪಕ್ಷದಲ್ಲಿನ ನಾಯಕರು ಹಾಗೂ ಸರ್ಕಾರವನ್ನು ನಡೆಸುತ್ತಿರುವವರು ಪಕ್ಷದಲ್ಲಿನ ಬಂಡಾಯಗಾರರಂತೆ, ತಮ್ಮ ಎದುರಾಳಿಗಳನ್ನು ತುಳಿಯುವುದಕ್ಕೆ ಹೆಚ್ಚು ಗಮನ ನೀಡುತ್ತಿರುವವರಂತೆ ಕಾಣುತ್ತಾರೆ. ಪಕ್ಷದಲ್ಲಿನ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗುವ ಬಗ್ಗೆ ಗಮನ ಇಟ್ಟಿರುವವರಂತೆ ಕಾಣಿಸುತ್ತಿಲ್ಲ. ಬದಲಿಗೆ, ತಮ್ಮ ರಾಜಕೀಯ ಗುಂಪುಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವಂತೆ ಕಾಣುತ್ತಿದೆ.

ಈಗ ಪ್ರಕಟವಾಗಿರುವ ಚುನಾವಣಾ ಫಲಿತಾಂಶವು ಕಾಂಗ್ರೆಸ್ ಪಾಲಿಗೆ ಎಚ್ಚರಿಕೆಯ ಕರೆಗಂಟೆ. ಈ ಎಚ್ಚರಿಕೆಯ ಗಂಟೆಯು ಗಟ್ಟಿಯಾಗಿ, ಸ್ಪಷ್ಟವಾಗಿ ಸದ್ದು ಮಾಡಿದೆ. ಗಂಟೆಯ ಸದ್ದನ್ನು ತಕ್ಷಣಕ್ಕೆ ಅಡಗಿಸಿ, ಎಲ್ಲವೂ ಸರಿಯಾಗಿದೆ ಎಂಬಂತೆ ಪಕ್ಷ ವರ್ತಿಸುತ್ತದೆಯೇ? ಆಳವಾಗಿ ಆತ್ಮಾವಲೋಕನ ನಡೆಸಬೇಕು, ಆಗ ಮಾತ್ರ ಜಯದ ಹಾದಿಗೆ ತಾನು ಮರಳಬಹುದು ಎಂಬುದನ್ನು ಒಪ್ಪಿಕೊಳ್ಳುವ ಮನಸ್ಸು ಪಕ್ಷಕ್ಕೆ ಇದೆಯೇ? ರಾಜಕೀಯವಾಗಿ ಅಸಂಗತ ಆಗಬಾರದು ಎಂದಾದಲ್ಲಿ ಈ ವಿಚಾರದಲ್ಲಿ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕು.

ಪ್ರೊ. ಸಂದೀಪ್ ಶಾಸ್ತ್ರಿ
ಪ್ರೊ. ಸಂದೀಪ್ ಶಾಸ್ತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT