ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ | ಗಣರಾಜ್ಯ ಭಾರತ: ಒಂದು ಅವಲೋಕನ

Published 25 ಜನವರಿ 2024, 18:50 IST
Last Updated 25 ಜನವರಿ 2024, 18:50 IST
ಅಕ್ಷರ ಗಾತ್ರ

ದೇಶವು ತನ್ನ 75ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿರುವುದು ನಿಜಕ್ಕೂ ಒಂದು ಸಂಭ್ರಮದ ಸಂದರ್ಭ. ಇದು ದೇಶದ ಸಾಧನೆಗಳನ್ನು ಹಾಗೂ ಸವಾಲುಗಳನ್ನು ಗುರುತಿಸಬೇಕಿರುವ ಹೊತ್ತು ಕೂಡ ಹೌದು. ದೇಶದ ಈಗಿನ ಜನಸಂಖ್ಯೆಯಲ್ಲಿ ಶೇಕಡ 2ಕ್ಕಿಂತ ಕಡಿಮೆ ಜನ 1950ರ ಜನವರಿ 26ಕ್ಕಿಂತ ಮೊದಲು ಜನಿಸಿದವರು. ಅಂದರೆ, ಬಹುತೇಕರು ದೇಶವು ಗಣರಾಜ್ಯವಾದ ನಂತರದಲ್ಲಿ ಜನಿಸಿದವರು. ನಾವು ಅಂಗೀಕರಿಸಿದ ಸಂವಿ ಧಾನಕ್ಕೆ ಅನುಗುಣವಾಗಿ, ಸಂಸದೀಯ ಮಾದರಿಯ ಸರ್ಕಾರವನ್ನು ರೂಪಿಸಿಕೊಳ್ಳಲಾಯಿತು. ಕೇಂದ್ರದಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಚುನಾಯಿತ ರಾಷ್ಟ್ರಪತಿಯನ್ನು ಹೊಂದಲಾಯಿತು.

ಸಂಸದೀಯ ಮಾದರಿಯ ಸರ್ಕಾರವನ್ನು ಹೊಂದಿದ ಗಣರಾಜ್ಯವಾಗಿ ನಾವು ಪ್ರಧಾನಿ ನೇತೃತ್ವದ ಸಚಿವ ಸಂಪುಟ ವನ್ನು ಹೊಂದಿದ್ದೇವೆ. ಪ್ರಧಾನಿಯವರು ಲೋಕಸಭೆಯಲ್ಲಿ ಬಹುಮತ ಹೊಂದಿರುತ್ತಾರೆ.

ನಾವು ಗಣರಾಜ್ಯವಾದ ನಂತರದಲ್ಲಿ, ಹೆಚ್ಚಿನ ಲೋಕಸಭಾ ಚುನಾವಣೆಗಳ ವಿಷಯವು ಪ್ರಧಾನಿ ಸ್ಥಾನಕ್ಕೆ ಯಾರು ಬರಬೇಕು ಎಂಬುದರ ಸುತ್ತ ಅಥವಾ ಪ್ರಧಾನಿ ಸ್ಥಾನದಲ್ಲಿ ಇರುವವರನ್ನು ಸೋಲಿಸಬೇಕು ಎಂಬುದರ ಸುತ್ತವೇ ಗಿರಕಿ ಹೊಡೆದಿದೆ. ದೇಶದ ಚುನಾವಣೆಗಳು ‘ಅಧ್ಯಕ್ಷೀಯ’ ಮಾದರಿಗೆ ಹೊರಳಿಕೊಂಡಿವೆ ಎಂದು ಹಲ ವಾರು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ‘ಅಧ್ಯಕ್ಷೀಯ’ ಎಂಬುದಕ್ಕಿಂತಲೂ ಹೆಚ್ಚಾಗಿ, ಅವು ‘ಪ್ರಧಾನಿ’ಯ ಸುತ್ತ ಕೇಂದ್ರೀಕೃತವಾಗಿವೆ ಎನ್ನಬಹುದು.

ಈಗ ಕೆಲವು ವರ್ಷಗಳಿಂದ ನಾವು ಕೇಂದ್ರ ಸರ್ಕಾರವನ್ನು ಆಡಳಿತಾರೂಢ ಪಕ್ಷದ ಮೂಲಕ ಗುರುತಿ ಸುತ್ತಿಲ್ಲ. ಬದಲಿಗೆ, ಪ್ರಧಾನಿ ಹುದ್ದೆಯಲ್ಲಿ ಇರುವವರ ಮೂಲಕ ಸರ್ಕಾರವನ್ನು ಗುರುತಿಸಲಾಗುತ್ತಿದೆ. ಇದು ಈಚೆಗಿನ ವಿದ್ಯಮಾನವಷ್ಟೇ ಅಲ್ಲ. ನಾವು ಗಣರಾಜ್ಯವಾದಾ ಗಿನಿಂದ ಬಹುತೇಕ ಹೀಗೇ ಆಗಿದೆ. ಸಂಸದೀಯ ಆಡಳಿತ ವ್ಯವಸ್ಥೆಯ ಮಹತ್ವವನ್ನು ನಮ್ಮ ಸಂವಿಧಾನವು ಕೇಂದ್ರದ ಮಟ್ಟದಲ್ಲಿ ಮಾತ್ರವಲ್ಲದೆ, ರಾಜ್ಯಗಳ ಮಟ್ಟದಲ್ಲಿಯೂ ಒತ್ತಿ ಹೇಳಿದೆ. ಹೀಗಿದ್ದರೂ ಇಲ್ಲಿ ಒಂದು ಮಹತ್ವದ ವ್ಯತ್ಯಾಸ ಇದೆ. ರಾಜ್ಯಗಳ ಮಟ್ಟದಲ್ಲಿ, ವಿಧಾನಸಭೆಗೆ ಉತ್ತರದಾಯಿ ಆಗಿರುವ ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟ ಇರುತ್ತದೆ. ರಾಷ್ಟ್ರಪತಿಯು ಚುನಾಯಿತ ಆಗಿರುತ್ತಾರಾ ದರೂ, ರಾಜ್ಯದ ಮೊದಲ ಪ್ರಜೆಯಾದ ರಾಜ್ಯಪಾಲ ಚುನಾಯಿತ ವ್ಯಕ್ತಿ ಅಲ್ಲ; ಅವರು ನೇಮಕಗೊಂಡ ವ್ಯಕ್ತಿ. ಕೇಂದ್ರದಲ್ಲಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರದಲ್ಲಿರಲಿ, ರಾಜ್ಯಪಾಲರ ಹುದ್ದೆಯು ವಿವಾದ ಗಳಲ್ಲಿ ಮುಳುಗಿಕೊಂಡೇ ಇದೆ.

ಇಲ್ಲಿ ಸಮಸ್ಯೆಗೆ ಮೂರು ಆಯಾಮಗಳಿವೆ. ಮೊದಲನೆ ಯದು, ರಾಜ್ಯಪಾಲರ ಹೊಣೆಗಾರಿಕೆಗಳ ವಿಚಾರವಾಗಿ ಸ್ಪಷ್ಟತೆ ಇಲ್ಲ. ರಾಜ್ಯಪಾಲರು ಕೇಂದ್ರದ ಪ್ರತಿನಿಧಿಯೋ ಅಥವಾ ಕೇಂದ್ರ ಮತ್ತು ರಾಜ್ಯದ ನಡುವೆ ಕೊಂಡಿಯೋ? ರಾಜ್ಯಗಳ ಮಟ್ಟದಲ್ಲಿ ನಿಜವಾದ ಅಧಿಕಾರವಿರುವುದು ಮುಖ್ಯಮಂತ್ರಿ ನೇತೃತ್ವದ ಸಂಪುಟಕ್ಕೋ (ಇದು ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ವಿಧಾನಸಭೆಗೆ ಉತ್ತರ ದಾಯಿ) ಅಥವಾ ರಾಜ್ಯಪಾಲರು ರಾಜ್ಯದ ಆಡಳಿತದಲ್ಲಿ ಸಕ್ರಿಯ ಪಾತ್ರ ನಿಭಾಯಿಸಬಹುದೋ? ರಾಜ್ಯ ಹಾಗೂ ಕೇಂದ್ರದಲ್ಲಿ ಆಡಳಿತಾರೂಢ ಪಕ್ಷಗಳು ಬೇರೆ ಬೇರೆ ಆಗಿದ್ದಾಗ ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷವು ಗಣರಾಜ್ಯದ ಕಾರ್ಯಗಳಲ್ಲಿ ದೊಡ್ಡ ಉಪದ್ರವದಂತೆ ಇದೆ.

ಸಮಸ್ಯೆಯ ಎರಡನೆಯ ಆಯಾಮ ಇರುವುದು ರಾಜ್ಯಪಾಲರನ್ನಾಗಿ ಯಾರನ್ನು ನೇಮಕ ಮಾಡಬೇಕು ಎಂಬ ವಿಚಾರದಲ್ಲಿ. ಈ ವಿಚಾರವಾಗಿ ಸಂವಿಧಾನ ರಚನಾ ಸಭೆಯು ವಿಸ್ತೃತವಾಗಿ ಚರ್ಚಿಸಿದೆ. ಸಂವಿಧಾನವು ರಾಜ್ಯಪಾಲರಾಗಿ ನೇಮಕವಾಗುವವರ ಅರ್ಹತೆಗೆ ಸಂಬಂಧಿಸಿದಂತೆ ಸಾಮಾನ್ಯವಾದ ಕೆಲವು ಅಂಶಗಳನ್ನು ಉಲ್ಲೇಖಿಸಿದೆ. ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯ‍ಪಾಲರ ಹುದ್ದೆಗೆ ರಾಜಕಾರಣಿಗಳನ್ನು ನೇಮಿಸಬಾರದು ಎಂದು ನೆಹರೂ ಮತ್ತು ಅಂಬೇಡ್ಕರ್ ಹೇಳಿದ್ದರು. ಸಮಾಜದ ವಿವಿಧ ಕ್ಷೇತ್ರಗಳ ಹಿರಿಯರನ್ನು ಅಲ್ಲಿಗೆ ನೇಮಕ ಮಾಡಬೇಕು ಎಂದಿದ್ದರು. ಆದರೆ ಸಂವಿಧಾನ ಜಾರಿಯಾದಾಗಿನಿಂದಲೂ ಇದನ್ನು ಪಾಲಿಸಿರುವುದು ಕಡಿಮೆ. ರಾಜ್ಯಪಾಲರಾಗಿ ನೇಮಕಗೊಂಡ ಪ್ರತಿ 10 ಮಂದಿಯಲ್ಲಿ ಎಂಟು ಮಂದಿ ಸಕ್ರಿಯ ರಾಜಕಾರಣಿಗಳಾಗಿದ್ದವರು ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ.

ಕಳೆದ 74 ವರ್ಷಗಳಲ್ಲಿ ಅತ್ಯಂತ ಹೆಚ್ಚಾಗಿ ದುರ್ಬಳಕೆ ಯಾದ ಸಂವಿಧಾನದ ವಿಧಿಗಳಲ್ಲಿ 356ನೇ ವಿಧಿಯೂ ಒಂದು. ಇದು ಕೇಂದ್ರ ಸರ್ಕಾರಕ್ಕೆ ರಾಜ್ಯವೊಂದರಲ್ಲಿ, ಸಾಂವಿಧಾನಿಕ ವ್ಯವಸ್ಥೆ ಕುಸಿದುಬಿದ್ದಾಗ ರಾಷ್ಟ್ರಪತಿ ಆಡಳಿತವನ್ನು ಹೇರಲು ಅವಕಾಶ ಕಲ್ಪಿಸುತ್ತದೆ. ಸಾಂವಿಧಾನಿಕ ವ್ಯವಸ್ಥೆ ‘ಕುಸಿದುಬಿದ್ದಿದೆ’ ಎಂಬುದನ್ನು ತೀರ್ಮಾನಿಸುವವರು ರಾಜ್ಯಪಾಲರು. ಸರ್ಕಾರಕ್ಕೆ ಸದನದಲ್ಲಿ ಬಹುಮತ ಇಲ್ಲ ಎಂದು ತೀರ್ಮಾನಿಸಿ, ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆಗೆ ಕಾಯದೆ, ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿ ರಾಜ್ಯಪಾಲರು ಕೇಂದ್ರಕ್ಕೆ ಪತ್ರ ರವಾನಿಸುತ್ತಿದ್ದರು. ಆದರೆ ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಬಂದ ನಂತರದಲ್ಲಿ ಈ ವಿಧಿಯ ದುರ್ಬಳಕೆ ತಗ್ಗಿದೆ. ಹೀಗಿದ್ದರೂ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ನಡುವಿನ ಸಂಘರ್ಷಗಳು ದೇಶದ ಎಲ್ಲೆಡೆ ಇವೆ. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುವ ಪಕ್ಷಗಳು ಬೇರೆ ಬೇರೆ ಆಗಿದ್ದಾಗ ಇದು ಕಣ್ಣಿಗೆ ರಾಚುತ್ತದೆ.

ಇದು ಮೂರನೆಯ ಆಯಾಮದ ಬಗ್ಗೆ ನಮ್ಮ ಗಮನ ವನ್ನು ಸೆಳೆಯುತ್ತದೆ. ಅಂದರೆ, ರಾಜ್ಯಪಾಲರ ನೇಮಕದ ವಿಧಾನದ ಬಗ್ಗೆ. ರಾಷ್ಟ್ರಪತಿಯವರು ರಾಜ್ಯಪಾಲರನ್ನು ನೇಮಕ ಮಾಡಬೇಕು ಎಂದು ಸಂವಿಧಾನ ಹೇಳುತ್ತದೆ. ಅಂದರೆ, ಆಚರಣೆಯಲ್ಲಿ ಕೇಂದ್ರ ಸಂಪುಟದ ಸಲಹೆಯನ್ನು ಆಧರಿಸಿ ಈ ನೇಮಕ ಆಗಬೇಕು. ಸಂವಿಧಾನ ರಚನಾ ಸಭೆಯಲ್ಲಿದ್ದ ನಾಯಕರು, ರಾಜ್ಯಪಾಲರ ನೇಮಕಕ್ಕೂ ಮೊದಲು ಮುಖ್ಯಮಂತ್ರಿಯ ಜೊತೆ ಸಮಾಲೋಚನೆ ನಡೆಸಲಾಗುತ್ತದೆ ಎಂಬ ಭರವಸೆ ಹೊಂದಿದ್ದರು. ಆರಂಭದ ವರ್ಷಗಳಲ್ಲಿ ಇದನ್ನು ಪಾಲಿಸಲಾಯಿತಾದರೂ, ನಂತರದಲ್ಲಿ ಈ ಪದ್ಧತಿಯನ್ನು ಕೈಬಿಡಲಾಯಿತು. ಮುಖ್ಯಮಂತ್ರಿ ಜೊತೆ ಸಮಾಲೋಚನೆ ನಡೆಸುವ ಬದಲು, ರಾಜ್ಯಪಾಲರ ನೇಮಕದ ಬಗ್ಗೆ ಮುಖ್ಯಮಂತ್ರಿಗೆ ಮಾಹಿತಿ ನೀಡಲಾಗುತ್ತಿದೆ. ಹಲವು ಸಂದರ್ಭಗಳಲ್ಲಿ, ರಾಜ್ಯವೊಂದರ ರಾಜ್ಯಪಾಲರ ನೇಮಕದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಗುವ ರೀತಿಯಲ್ಲಿಯೇ ಮುಖ್ಯಮಂತ್ರಿಗೂ ಮಾಹಿತಿ ಸಿಗುತ್ತದೆ. ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಪಕ್ಷ ಹಾಗೂ ರಾಜ್ಯ ಗಳಲ್ಲಿ ಆಡಳಿತಾರೂಢ ಪಕ್ಷ ಬೇರೆ ಬೇರೆ ಆಗಿದ್ದಾಗ ಈ ರೀತಿ ಆಗುವುದು ಹೆಚ್ಚು.

ಇದರ ಉದ್ದೇಶ ಸ್ಪಷ್ಟ. ರಾಜ್ಯಪಾಲರು ಕೇಂದ್ರವನ್ನು ಪ್ರತಿನಿಧಿಸುತ್ತಾರೆ ಹಾಗೂ ರಾಜ್ಯ ಸರ್ಕಾರವನ್ನು ವಜಾಗೊಳಿಸುವ ಅವಕಾಶ ಎಷ್ಟು ಬೇಗ ಬರುತ್ತದೆ ಎಂಬುದಕ್ಕೆ ಕಾದು, ಅದನ್ನು ಬಳಸಿಕೊಳ್ಳುತ್ತಾರೆ. ದೇಶವು ಗಣರಾಜ್ಯವಾದ ಮೊದಲ 4 ದಶಕಗಳ ಅವಧಿಗೆ ಈ ಮಾತು ಹೆಚ್ಚು ಅನ್ವಯವಾಗುತ್ತದೆ. ಆದರೆ ಬೊಮ್ಮಾಯಿ ಪ್ರಕರಣದ ತೀರ್ಪು ಹೊರಬಿದ್ದ ನಂತರದಲ್ಲಿ ರಾಜ್ಯಪಾಲರು ರಾಜ್ಯ ಸರ್ಕಾರಗಳಿಗೆ ಅಡ್ಡಿ ಉಂಟುಮಾಡಲು ಹೊಸ ವಿಧಾನಗಳನ್ನು ಹುಡುಕಿಕೊಂಡರು. 

ದೇಶವು ಗಣರಾಜ್ಯವಾಗಿ ಬದಲಾದ 74 ವರ್ಷಗಳ ನಂತರವಾದರೂ, ರಾಜಕೀಯ ಮುಖಂಡರು ಪ್ರಮುಖ ರಾಜಕೀಯ ಸಂಸ್ಥೆಗಳು ಸುಗಮವಾಗಿ ಕೆಲಸ ನಿರ್ವಹಿಸುವಂತೆ ಮಾಡಲು ಒಮ್ಮತಕ್ಕೆ ಬರಬೇಕು. ಈ ಸಂಸ್ಥೆಗಳನ್ನು ರಾಜಕೀಯ ಹಗೆ ಸಾಧಿಸಿಕೊಳ್ಳಲು ಬಳಸಬಾರದು. ಗಣರಾಜ್ಯವು 75 ವರ್ಷಗಳನ್ನು ಪೂರೈಸಿ, ಅದರ ಆಚೆಗೆ ಹೆಜ್ಜೆ ಇರಿಸುವ ಸಂದರ್ಭದಲ್ಲಿ, ಗಣರಾಜ್ಯದ ನಿಯಮಗಳನ್ನು ಅವುಗಳ ಆಶಯಕ್ಕೆ ಅನುಗುಣವಾಗಿ ಪಾಲಿಸುವಂತೆ ಆಗಲು ಇದು ಬಹಳ ಮುಖ್ಯವಾದ ಸುಧಾರಣಾ ಕ್ರಮವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT