ಬುಧವಾರ, ಜನವರಿ 20, 2021
16 °C
ಬಿಕ್ಕಟ್ಟುಗಳನ್ನು ಮೆಟ್ಟಿ ನಿಂತು, ರಾಜಕೀಯವಾಗಿ ಪ್ರಸ್ತುತವಾಗಿ ಉಳಿದುಕೊಳ್ಳಲು ಸಾಧ್ಯವಾದ ಬಗೆ...

ಸಂದೀಪ್ ಶಾಸ್ತ್ರಿ ಲೇಖನ: ಬಿಜೆಪಿಗೆ ಯಡಿಯೂರಪ್ಪ ಏಕೆ ಮುಖ್ಯ?

ಪ್ರೊ. ಸಂದೀಪ್ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ರಾಜಕೀಯವಾಗಿ ಉಳಿದುಕೊಳ್ಳಬೇಕು ಎಂದಾದರೆ ಏನು ಮಾಡಬೇಕು ಎಂಬ ವಿಚಾರವಾಗಿ ಬಿ.ಎಸ್. ಯಡಿಯೂರಪ್ಪ ಅವರಂತೆ ಅರಿವು ಹೊಂದಿರುವ ಮುಖ್ಯಮಂತ್ರಿಗಳ ಸಂಖ್ಯೆ ಸಮಕಾಲೀನ ಭಾರತದಲ್ಲಿ ಕಡಿಮೆಯೇ. ಯಡಿಯೂರಪ್ಪ ಅವರ ರಾಜಕೀಯ ಅವನತಿ ಶುರುವಾಯಿತು ಎಂದು ಮತ್ತೆ ಮತ್ತೆ ಭವಿಷ್ಯ ನುಡಿಯಲಾಗಿದೆ. ಆದರೆ, ಯಡಿಯೂರಪ್ಪ ಅವರು ಆ ರೀತಿಯ ಮಾತುಗಳನ್ನು ಸುಳ್ಳಾಗಿಸಿ ರಾಜಕೀಯದ ಮುಖ್ಯಭೂಮಿಕೆಯಲ್ಲಿ ಉಳಿದುಕೊಂಡಿದ್ದಾರೆ. ಈಗ ಕೆಲವು ದಿನಗಳಿಂದ ಕರ್ನಾಟಕದ ರಾಜಕೀಯವಿಶ್ಲೇಷಕರು, ರಾಜ್ಯದಲ್ಲಿ ನಾಯಕತ್ವ ಬದಲಾಗುವ ಮಾತುಗಳನ್ನು ಆಡುತ್ತಿದ್ದಾರೆ.

ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸಾಧಿಸಿದ ಗೆಲುವು ಈ ಎಲ್ಲ ಮಾತು ಗಳನ್ನು ಸದ್ಯಕ್ಕೆ ತಣ್ಣಗಾಗಿಸಿದೆ. ಒಂದಾದ ನಂತರ ಒಂದರಂತೆ ಬಂದ ಬಿಕ್ಕಟ್ಟುಗಳನ್ನು ಮೆಟ್ಟಿ ನಿಂತು, ರಾಜಕೀಯವಾಗಿ ಪ್ರಸ್ತುತವಾಗಿ ಉಳಿದುಕೊಳ್ಳಲು ಯಡಿಯೂರಪ್ಪ ಅವರಿಗೆ ಸಾಧ್ಯವಾಗಿದ್ದು ಹೇಗೆ ಎಂಬುದನ್ನು ಪರಿಶೀಲಿಸಬಹುದು. ಯಡಿಯೂರಪ್ಪ ಅವರ ವಿಚಾರದಲ್ಲಿ ಬಿಜೆಪಿಯು ಕೆಲವು ನಿಯಮಗಳನ್ನು ಬದಿಗೆ ಇರಿಸಬೇಕಾಯಿತು ಎಂಬುದು ಸ್ಪಷ್ಟ.

ನರೇಂದ್ರ ಮೋದಿ ಅವರು ಬಿಜೆಪಿಯ ನಾಯಕತ್ವ ವಹಿಸಿಕೊಂಡ ನಂತರ, ‘75 ವರ್ಷ ವಯಸ್ಸು’ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ಸರ್ಕಾರ ಅಥವಾ ಪಕ್ಷದಲ್ಲಿ ಪ್ರಮುಖ ಸ್ಥಾನಗಳಿಂದ ನಾಯಕರನ್ನು ಹೊರಗಿ ರಿಸಲು ಈ ನಿಯಮವನ್ನು ಬಳಸಿಕೊಳ್ಳಲಾಗಿದೆ. 75 ವರ್ಷ ವಯಸ್ಸಾದವರು ರಾಜಕೀಯ ಹುದ್ದೆ ಹೊಂದಲು ಅರ್ಹರಲ್ಲ ಎಂದು ಪರಿಗಣಿಸಲಾಗುತ್ತಿದೆ. ಯಡಿಯೂರಪ್ಪ ಅವರು 2018ರ ವಿಧಾನಸಭಾ ಚುನಾವಣೆಗೂ ತುಸು ಮೊದಲು 75 ವರ್ಷ ವಯಸ್ಸಿನ ಗಡಿಯನ್ನು ದಾಟಿದರು. ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅದಾಗಲೇ ಬಿಂಬಿಸಿಯಾಗಿತ್ತು. ಯಡಿಯೂರಪ್ಪ ಅವರ ಬೆಂಬಲಿಗರು ಅವರ 75ನೆಯ ಜನ್ಮದಿನವನ್ನು 2018ರ ಫೆಬ್ರುವರಿಯಲ್ಲಿ ಆಚರಿಸಿದರು. ಆಗ ಅವರಿಗೆ, ಯಡಿಯೂರಪ್ಪ ಅವರ ವಯಸ್ಸನ್ನು ಯಾವುದೇ ಬ್ಯಾನರ್‌ನಲ್ಲಿ ಉಲ್ಲೇಖಿಸಬಾರದು ಎಂದು ಸೂಚಿಸಲಾಗಿತ್ತು. ಅವರ ವಯಸ್ಸಿನ ಉಲ್ಲೇಖವು ಯಾವುದೇ ಭಾಷಣಗಳಲ್ಲೂ ಬರಲಿಲ್ಲ. ನಿವೃತ್ತಿಯ ಅನಧಿಕೃತ ವಯಸ್ಸನ್ನು ದಾಟಿದ ನಂತರವೂ ಮುಖ್ಯಮಂತ್ರಿ ಸ್ಥಾನಕ್ಕೆ ಮರಳಿದ ಬಿಜೆಪಿಯ ಕೆಲವೇ ನಾಯಕರಲ್ಲಿ ಯಡಿಯೂರಪ್ಪ ಅವರೂ ಒಬ್ಬರು.

ಕಾಂಗ್ರೆಸ್ ವಿರುದ್ಧದ ಹೋರಾಟದಲ್ಲಿ ಬಿಜೆಪಿಯು ವಂಶಪಾರಂಪರ್ಯ ರಾಜಕಾರಣವನ್ನು ಬಲವಾಗಿ ವಿರೋಧಿಸಿದೆ. ನೆಹರೂ–ಗಾಂಧಿ ಕುಟುಂಬಕ್ಕೆ ಜೋತು ಬಿದ್ದಿರುವ ಪಕ್ಷ ಎಂದು ಬಿಜೆಪಿಯು ಕಾಂಗ್ರೆಸ್ಸನ್ನು ಹಾಸ್ಯ ಮಾಡಿದೆ. ಬಿಜೆಪಿಯ ಹಿರಿಯರ ಮಟ್ಟದಲ್ಲಿ ವಂಶಪಾರಂಪರ್ಯ ರಾಜಕಾರಣದ ಉದಾಹರಣೆಗಳು ಹೆಚ್ಚಿಲ್ಲ. ಆದರೆ, ಈ ವಿಚಾರದಲ್ಲಿ ಕೂಡ ಯಡಿಯೂರಪ್ಪ ಅವರು ಒಂದು ಅಪವಾದ. ಅವರ ಒಬ್ಬ ಪುತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ. ಯಡಿಯೂರಪ್ಪ ಅವರು ಆ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾಗ ಅವರ ಪುತ್ರ, ಹಿಂದೆ ಯಡಿಯೂರಪ್ಪ ಪ್ರತಿನಿಧಿಸುತ್ತಿದ್ದ ವಿಧಾನಸಭಾ ಕ್ಷೇತ್ರದ ಸದಸ್ಯ ಆಗಿದ್ದರು. ಕಳೆದ ಕೆಲವು ವರ್ಷಗಳಿಂದ ಯಡಿಯೂರಪ್ಪ ಅವರ ಕಿರಿಯ ಪುತ್ರ ಮುಖ್ಯ ಅಧಿಕಾರ ಕೇಂದ್ರವಾಗಿ ಬದಲಾಗಿದ್ದಾರೆ.

ಇವರಿಗೆ 2018ರಲ್ಲಿ ವಿಧಾನಸಭಾ ಚುನಾವಣಾ ಟಿಕೆಟ್ ನಿರಾಕರಿಸಲಾಯಿತಾದರೂ ಪಕ್ಷದಲ್ಲಿ ಸ್ಥಾನ ನೀಡಲಾಯಿತು. ಮುಖ್ಯಮಂತ್ರಿಯನ್ನು ಬದಲಾಯಿಸ ಲಾಗುತ್ತದೆ ಎಂಬ ಮಾತುಗಳು ಕೇಳಿಬಂದಾಗಲೆಲ್ಲ, ‘ಅವರ ಕಿರಿಯ ಪುತ್ರನಿಗೆ ಸೂಕ್ತ ಸ್ಥಾನ ನೀಡಲಾಗುತ್ತದೆ’ ಎಂಬ ಮಾತುಗಳು ಕೂಡ ಬರುತ್ತವೆ.

ರಾಜಕೀಯ ನಾಯಕನೊಬ್ಬ ಪಕ್ಷದ ವಿರುದ್ಧ ಬಂಡೆದ್ದು, ಪಕ್ಷ ತೊರೆದು, ನಂತರ ಪಕ್ಷಕ್ಕೆ ಪುನಃ ಸೇರ್ಪಡೆ ಯಾಗಿ ಮುಖ್ಯ ಸ್ಥಾನವನ್ನು ಪಡೆದುಕೊಂಡ ನಿದರ್ಶನಗಳು ಶಿಸ್ತಿಗೆ ಹೆಸರಾದ ಬಿಜೆಪಿಯಲ್ಲಿ ಕಡಿಮೆಯೇ. 2011ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಯಡಿಯೂರಪ್ಪ ಅವರನ್ನು ಒತ್ತಾಯಿಸಿದಾಗ, ಅವರಿಗೆ ತಮ್ಮ ಉತ್ತರಾಧಿಕಾರಿಯಾಗಿ ಡಿ.ವಿ. ಸದಾನಂದ ಗೌಡರನ್ನು ಆಯ್ಕೆ ಮಾಡಲು ಅವಕಾಶ ಕೊಡಲಾಯಿತು. ನಂತರ, ಜಗದೀಶ ಶೆಟ್ಟರ್ ಅವರನ್ನು ಗೌಡರ ಬದಲಿಗೆ ಆಯ್ಕೆ ಮಾಡುವ ಅವಕಾಶವನ್ನೂ ಕೊಡಲಾಯಿತು. 2012ರಲ್ಲಿ ಬಿಜೆಪಿ ತೊರೆದ ಯಡಿಯೂರಪ್ಪ, ಕರ್ನಾಟಕ ಜನತಾ ಪಕ್ಷವನ್ನು ಮುನ್ನಡೆಸಿದರು.

2013ರ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಯು ಒಳ್ಳೆಯ ಸಾಧನೆಯನ್ನೇನೂ ತೋರಲಿಲ್ಲ. ಆದರೆ, ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅವಕಾಶ ಹಾಳುಮಾಡುವ ಪಾತ್ರ ನಿಭಾಯಿಸಿತು. ನರೇಂದ್ರ ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ, ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಆರಂಭಿಸಲು ಮೋದಿ ಅವರು ರಾಜ್ಯದ ನಾಯಕರ ಎದುರು ಇರಿಸಿದ ಒಂದು ಷರತ್ತು ‘ಯಡಿಯೂರಪ್ಪ ಪಕ್ಷಕ್ಕೆ ಮರಳಬೇಕು’ ಎಂಬುದಾಗಿತ್ತು ಎಂದು ಹೇಳಲಾಗುತ್ತಿದೆ. ಮೋದಿ ಅವರು ಕರ್ನಾಟಕದಲ್ಲಿ ಪ್ರಚಾರ ಆರಂಭಿಸಿದ ಕಾರ್ಯಕ್ರಮದಲ್ಲಿಯೇ ಯಡಿಯೂರಪ್ಪ ಅವರು ಬಿಜೆಪಿಗೆ ಮರಳಿ ಸೇರಿದರು.

ಬಿಜೆಪಿಗೆ ಮರಳಿದ ನಾಲ್ಕೇ ವರ್ಷಗಳಲ್ಲಿ ಯಡಿಯೂರಪ್ಪ ಅವರು, ಕಿರು ಅವಧಿಗಾದರೂ, ಮತ್ತೆ ಮುಖ್ಯಮಂತ್ರಿಯಾದರು. ಹಾಗಾದರೆ, ಯಡಿಯೂರಪ್ಪ ಅವರು ಬಿಜೆಪಿಗೆ ಅಷ್ಟೊಂದು ಮಹತ್ವದ ವ್ಯಕ್ತಿಯಾಗಲು ಕಾರಣವೇನು? ಅವರು ಸಂಘಟನೆಯ ತಳಹಂತದಿಂದ ಬೆಳೆದುಬಂದವರು ಎಂಬುದರಲ್ಲಿ ಲವಲೇಶದ ಅನುಮಾನವೂ ಇಲ್ಲ. ಅವರ ಸಂಘಟನಾ ಕೌಶಲ ಹಾಗೂ ಪಕ್ಷವನ್ನು ಕಟ್ಟುವಲ್ಲಿ ಅವರ ಪಾತ್ರ ಸುಸ್ಪಷ್ಟವಾಗಿದೆ. ಕೇಂದ್ರದ ಮಾಜಿ ಸಚಿವ ಅನಂತ ಕುಮಾರ್ ಜೊತೆಯಾಗಿ ಪಕ್ಷವನ್ನು ಕಟ್ಟುವಲ್ಲಿ ಯಡಿಯೂರಪ್ಪ ಮಹತ್ವದ ಪಾತ್ರ ವಹಿಸಿದವರು.

ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಸ್ತಿತ್ವ ಇರುವುದರಲ್ಲಿ, ವಿಂಧ್ಯ ಪರ್ವತದ ದಕ್ಷಿಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವಲ್ಲಿ ಯಡಿಯೂರಪ್ಪ ಅವರ ಪಾತ್ರ ದೊಡ್ಡದು. ಅವರು ಲಿಂಗಾಯತ ಸಮುದಾಯದ ಗೌರವಾನ್ವಿತ ನಾಯಕ, ಈ ಸಮುದಾಯವು ಹಿಂದಿನಿಂದಲೂ (ಅದರಲ್ಲೂ ಮುಖ್ಯವಾಗಿ 90ರ ದಶಕದ ಮಧ್ಯ ಭಾಗದಿಂದ) ಬಿಜೆಪಿಯನ್ನು ಬೆಂಬಲಿಸುತ್ತ ಬಂದಿದೆ ಎಂಬುದು ಯಡಿಯೂರಪ್ಪ ಅವರ ಸ್ಥಾನ ಏನು, ಅವರು ಹೊಂದಿರುವ ಬಲಿಷ್ಠ ರಾಜಕೀಯ ಅಸ್ತಿತ್ವ ಏನು ಎಂಬುದನ್ನು ಹೇಳುತ್ತದೆ. ಪಕ್ಷವನ್ನು ಕಟ್ಟುವಲ್ಲಿ ಯಡಿಯೂರಪ್ಪ ವಹಿಸಿದ ಪಾತ್ರವು, ಮುಖ್ಯವಾಗಿ ಕಳೆದ ಮೂರು ದಶಕಗಳಲ್ಲಿ (1990ರ ನಂತರ), ಬಿಜೆಪಿಯು ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಂಡ ಯಶಸ್ಸಿನಲ್ಲಿ ಪ್ರಮುಖವಾಗಿತ್ತು. 2018ರ ವಿಧಾನಸಭಾ ಚುನಾವಣೆಗೆ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿ ಇದ್ದಾ ಗಲೇ ಬಿಜೆಪಿ ನಾಯಕತ್ವವು ಯಡಿಯೂರಪ್ಪ ಅವರನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು, ಅವರ ಪ್ರಾಮುಖ್ಯ ಏನು, ಅಧಿಕಾರಕ್ಕೆ ಮರಳುವ ಕಾರ್ಯತಂತ್ರದಲ್ಲಿ ಅವರ ಪಾತ್ರ ಏನು ಎಂಬುದಕ್ಕೆ ಸಾಕ್ಷಿ.

ಆದರೆ, 2019ರಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ನಂತರ, ಅವರು ದುರ್ಬಲಗೊಂಡಿದ್ದನ್ನು ಜನ ಕಂಡಿರಬಹುದು. ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡ ನಂತರ, ರಾಜ್ಯದಲ್ಲಿ ಸರ್ಕಾರ ರಚಿಸಲು ಕೇಂದ್ರ ನಾಯಕರ ಅನುಮತಿ ಪಡೆಯುವುದು ವಿಳಂಬವಾಯಿತು. ಕೇಂದ್ರದ ನಾಯಕತ್ವವು ಮೂವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಕೂರಿಸಿತು.


ಪ್ರೊ. ಸಂದೀಪ್ ಶಾಸ್ತ್ರಿ

ಯಾರನ್ನು ಸಚಿವರನ್ನಾಗಿ ನೇಮಿಸಬೇಕು ಎಂಬ ವಿಚಾರದಲ್ಲಿ ಅನುಮತಿ ಕೊಡಲು ಕೂಡ ಕೇಂದ್ರದ ನಾಯಕರು ವಿಳಂಬ ನೀತಿ ಅನುಸರಿಸಿದರು. ಇದ ರಿಂದಾಗಿ ಸಂಪುಟ ವಿಸ್ತರಣೆಯೂ ವಿಳಂಬವಾಯಿತು. ಮುಖ್ಯಮಂತ್ರಿ ಸೂಚಿಸಿದ್ದ ಹೆಸರುಗಳನ್ನು ಕಡೆಗಣಿಸಿದ ಪಕ್ಷದ ವರಿಷ್ಠರು ರಾಜ್ಯಸಭಾ ಚುನಾವಣೆಗೆ ಅಚ್ಚರಿಯ ಹೆಸರುಗಳನ್ನು ಘೋಷಿಸಿದರು. ಮುಖ್ಯಮಂತ್ರಿಯಾಗಿ ಈಗಿನ ಅವಧಿಯಲ್ಲಿ, ಅವರಲ್ಲಿ ರಾಜಕೀಯವಾಗಿ ಶಕ್ತಿಗುಂದಿರುವುದು ಹೆಚ್ಚೆಚ್ಚು ಕಾಣುತ್ತಿದೆ. ಪಕ್ಷದ ಕೇಂದ್ರ ನಾಯಕತ್ವದ ಜೊತೆ ವ್ಯವಹರಿಸುವಾಗ ಈ ಹಿಂದೆ ತೋರುತ್ತಿದ್ದ ತಾಕತ್ತನ್ನು ಯಡಿಯೂರಪ್ಪ ಈಗ ತೋರಿಸುತ್ತಿರುವಂತಿಲ್ಲ.

ಕರ್ನಾಟಕದಲ್ಲಿ ನಾಯಕತ್ವದ ಬದಲಾವಣೆ ಆಗು ವುದು ಸ್ಪಷ್ಟ. ಆದರೆ, ಮುಖ್ಯಮಂತ್ರಿಯೇ ಅಂತಿಮ ನಗೆ ಬೀರುವ ಸಾಧ್ಯತೆಯನ್ನೂ ಅಲ್ಲಗಳೆಯಲು ಆಗದು!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು