ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವರಿಸಿಕೊಳ್ಳುತ್ತಿರುವ ‘ಮೀ ಟೂ’ ಆಂದೋಲನ

ಲೈಂಗಿಕ ಕಿರುಕುಳಗಳ ಕಥನಗಳು ಸಮಾಜದ ಸಭ್ಯ ಮುಖವಾಡಗಳನ್ನು ತೀವ್ರವಾಗಿ ಅಲುಗಾಡಿಸಿವೆ
Last Updated 30 ಅಕ್ಟೋಬರ್ 2018, 20:22 IST
ಅಕ್ಷರ ಗಾತ್ರ

‘ಮೀ ಟೂ’ ಆಂದೋಲನದ ಅಲೆಯ ರಭಸ ತಗ್ಗುತ್ತಿಲ್ಲ. ಪ್ರತಿದಿನ ಒಂದಲ್ಲ ಒಂದು ವಿದ್ಯಮಾನಗಳು ವರದಿಯಾಗುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ 48 ಉದ್ಯೋಗಿಗಳನ್ನು ವಜಾ ಮಾಡಿರುವುದಾಗಿ ಗೂಗಲ್ ಸಂಸ್ಥೆ ಹೇಳಿದೆ.

ಪ್ರಸಿದ್ಧ ಸಲಹೆಗಾರ ಸುಹೇಲ್ ಸೇಠ್ ಜೊತೆಗಿನ ವ್ಯವಹಾರ ಸಂಬಂಧವನ್ನು ಟಾಟಾ ಸನ್ಸ್ ಕೊನೆಗೊಳಿಸಿರುವುದು ಹೊಸ ಸುದ್ದಿ. ನಟ ಅರ್ಜುನ್ ಸರ್ಜಾ ವಿರುದ್ಧ ಸಹನಟಿ ಶ್ರುತಿ ಹರಿಹರನ್ ಆರೋಪವು ಕೋರ್ಟ್ ಹಾಗೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ. ಕೇಂದ್ರ ಸಚಿವ ಎಂ.ಜೆ. ಅಕ್ಬರ್ ರಾಜೀನಾಮೆ ನೀಡಿದ್ದಾರೆ. ಹಲವು ಸಶಕ್ತ ವ್ಯಕ್ತಿಗಳು ಉದ್ಯೋಗ ಕಳೆದುಕೊಳ್ಳುವುದು ಮುಂದುವರಿದಿದೆ.

ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್‍ಸ್ಟೀನ್ ವಿರುದ್ಧ ಹಾಲಿವುಡ್ ನಟಿ ಅಸ್ಲಿ ಜುಡ್ ಲೈಂಗಿಕ ಕಿರುಕುಳದ ಆರೋಪ ಮಾಡಿ ಈ ಅಕ್ಟೋಬರ್‌ಗೆ ಒಂದು ವರ್ಷವಾಗುತ್ತಿರುವಂತೆಯೇ ಭಾರತದಲ್ಲಿ ‘ಮೀ ಟೂ’ ಆಂದೋಲನ ವೇಗ ಪಡೆದುಕೊಳ್ಳುತ್ತಿದೆ. ಕಳೆದ ತಿಂಗಳು ಸೆಪ್ಟೆಂಬರ್‌ನಲ್ಲಿ ಬಾಲಿವುಡ್ ನಟಿ ತನುಶ‍್ರೀ ದತ್ತಾ, ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದರು. ಆ ನಂತರ, ನಮ್ಮ ರಾಷ್ಟ್ರದ ವಿವಿಧ ದಿಕ್ಕುಗಳಿಂದ ವಿವಿಧ ವಲಯಗಳಿಂದ ಕೇಳಿಬರುತ್ತಿರುವ ಲೈಂಗಿಕ ಕಿರುಕುಳಗಳ ಕಥೆಗಳು, ಸಮಾಜದ ಸಭ್ಯ ಮುಖವಾಡಗಳನ್ನು ತೀವ್ರವಾಗಿ ಅಲುಗಾಡಿಸಿವೆ. ದೇವಸ್ಥಾನ, ಚರ್ಚ್, ಮಠಗಳು, ಸಿನಿಮಾ ಸೆಟ್‌ಗಳು, ಕ್ರೀಡಾಂಗಣಗಳು, ವಿಜ್ಞಾನ ಪ್ರಯೋಗಾಲಯಗಳು, ಶಾಲಾ- ಕಾಲೇಜುಗಳ ತರಗತಿಗಳು, ಸಂಗೀತ ಶಾಲೆಗಳು, ಸುದ್ದಿ ಮನೆಗಳು, ಪೌರ ಕಾರ್ಮಿಕರು... ಈ ಪಟ್ಟಿ ಬೆಳೆಯುತ್ತಲೇ ಇದೆ. ವಿಭಿನ್ನ ಹಿನ್ನೆಲೆಗಳ ಮಹಿಳೆಯರು ‘ಮೀ ಟೂ’ ಅಭಿಯಾನಕ್ಕೆ ದನಿ ಸೇರಿಸುತ್ತಿದ್ದಾರೆ. ‘ತನಗೆ ಸಿಗಬೇಕಾದ ಹಕ್ಕು’ ಎಂದು ಭಾವಿಸುವ ಪುರುಷ ಪ್ರಾಧಾನ್ಯ ಮನಸ್ಥಿತಿ ಈ ಕಥನಗಳಲ್ಲಿ ಗೋಚರ.

ಮಹಾಭಾರತದ ದ್ರೌಪದಿಯೂ ಕೀಚಕನಿಂದ ಲೈಂಗಿಕ ಕಿರಕುಳ ಅನುಭವಿಸಬೇಕಾಯಿತು. 900 ವರ್ಷಗಳ ಹಿಂದೆ ಇದ್ದಂತಹ ಅಕ್ಕ ಮಹಾದೇವಿಯ ಕೆಲವು ವಚನಗಳೂ ಲೈಂಗಿಕ ಕಿರುಕುಳಗಳಿಗೆ ದಿಟ್ಟ ಉತ್ತರ ನೀಡಿದಂತಿವೆ. ಒಂದು ವಚನವನ್ನು ಇಲ್ಲಿ ಉದಾಹರಿಸಬಹುದು:

ಬಟ್ಟಿಹ ಮೊಲೆಯ ಭರದ ಜವ್ವನದ

ಚೆಲುವ ಕಂಡು ಬಂದಿರಣ್ಣಾ

ಅಣ್ಣಾ ನಾನು ಹೆಂಗೂಸಲ್ಲ/ಅಣ್ಣಾ ನಾನು ಸೂಳೆಯಲ್ಲ

ಅಣ್ಣಾ ಮತ್ತೆ ನನ್ನ ಕಂಡುಕಂಡು/ಆರೆಂದು ಬಂದಿರಣ್ಣಾ

ಚೆನ್ನಮಲ್ಲಿಕಾರ್ಜುನನಲ್ಲದ/ಮಿಕ್ಕಿನ ಪರಪುರುಷನು

ನಮಗಾಗದ ಮೋರೆ ನೋಡಣ್ಣಾ !

ಬಿಡುಬೀಸಾದ ಪ್ರಶ್ನೆಗಳನ್ನು ಎತ್ತಿರುವ ಈ ವಚನದೊಳಗಿನ ಸಂವೇದನೆ ಇಂದಿನ ‘ಮೀ ಟೂ’ ಕಥನಗಳಲ್ಲಿ ಬಿತ್ತರಗೊಳ್ಳುತ್ತಿದೆ. ಈವರೆಗೆ ಮೌನದ ಚಿಪ್ಪಿನೊಳಗೆ ಬಚ್ಚಿಟ್ಟುಕೊಂಡಿದ್ದ ಅಂತರಂಗದ ಬೇಗುದಿಗಳು ಬಟಾಬಯಲಾಗುತ್ತಿರುವ ಪರಿಗೆ ಪಿತೃಪ್ರಧಾನ ಮೌಲ್ಯ ವ್ಯವಸ್ಥೆಯ ಸಮಾಜ ಕಸಿವಿಸಿಗೊಂಡಿರುವುದೂ ಎದ್ದು ಕಾಣಿಸುವಂತಹದ್ದು.

ಮಹಿಳೆ ತನ್ನನ್ನು ಕಂಡುಕೊಳ್ಳುವ ಪರಿ ಬದಲಾಗುತ್ತಿದೆ ಎಂಬುದು ನಿಜ. ‘ಮೌನ ಮುರಿದಾಕ್ಷಣವೇ ನೀವು ಬರೀ ಸಂತ್ರಸ್ತೆಯಾಗಿರುವುದಿಲ್ಲ. ಒಂದಷ್ಟು ವಿಚಾರಗಳನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತೀರಿ. ಇದು ಸಂತ್ರಸ್ತೆತನಕ್ಕೆ ವಿರುದ್ಧವಾದುದು’ ಎಂದು ಬರೆಯುತ್ತಾರೆ ಲೇಖಕಿ ಹಾಗೂ ಕಾದಂಬರಿಕಾರ್ತಿ ಸೊಹೈಲಾ ಅಬ್ದುಲಾಲಿ. ‘ವಾಟ್ ವಿ ಟಾಕ್ ಅಬೌಟ್ ವೆನ್ ವಿ ಟಾಕ್ ಅಬೌಟ್ ರೇಪ್’ ಎಂಬ ಅವರ ಹೊಸ ಪುಸ್ತಕ ಪೆಂಗ್ವಿನ್ ಪ್ರಕಾಶನದಿಂದ ಪ್ರಕಟವಾಗಿದೆ. ಅತ್ಯಾಚಾರದ ಬಗ್ಗೆ ಭಾರತದಲ್ಲಿ ಸಾರ್ವಜನಿಕವಾಗಿ ಮಾತನಾಡಿದ ಮೊದಲ ಅತ್ಯಾಚಾರ ಸಂತ್ರಸ್ತೆ ಅವರು. ಹದಿಹರೆಯದ 17ನೇ ವಯಸ್ಸಿನಲ್ಲಿ ಬಾಂಬೆ
ಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದವರು ಅವರು. ಅತ್ಯಾಚಾರದ ಸುತ್ತಲಿನ ಮೌನ ಹಾಗೂ ತಪ್ಪು ಗ್ರಹಿಕೆಗ
ಳಿಂದ ಕೆರಳಿದ ಸೊಹೈಲಾ ಅಬ್ದುಲಾಲಿ ಅವರು ಮೂರು ವರ್ಷಗಳ ನಂತರ 1983ರಲ್ಲಿ ‘ಮಾನುಷಿ’ ಪತ್ರಿಕೆಗೆ ತೀಕ್ಷ್ಣ ಲೇಖನವೊಂದನ್ನು ತಮ್ಮದೇ ಹೆಸರಿನಲ್ಲಿ ಬರೆದಿದ್ದರು. ಅತ್ಯಾಚಾರ ಹಾಗೂ ಅತ್ಯಾಚಾರ ಸಂತ್ರಸ್ತೆಯರನ್ನು ಸಮಾಜ ನೋಡುವ ದೃಷ್ಟಿಕೋನವನ್ನು ಅವರು ಆಗ ಪ್ರಶ್ನಿಸಿದ್ದರು.

‘ಅತ್ಯಾಚಾರದ ಬಗ್ಗೆ ಮೌನ ವಹಿಸುವುದು ವಿಷಮಯ ಪರಿಣಾಮಗಳಿಗೆ ಕಾರಣವಾಗುವಂತಹದ್ದು. ದೌರ್ಜನ್ಯ ಮಾಡುವವರನ್ನು ಸಿಲುಕಿಸದೇ ಬಿಟ್ಟುಬಿಡುವಂತಹದ್ದು. ಅತ್ಯಾಚಾರದ ಗಾಸಿಯಿಂದ ಹೊರಬರಬೇಕಾದದ್ದು ಸಂತ್ರಸ್ತೆಯ ಮೊದಲ ಜವಾಬ್ದಾರಿ ಎಂಬುದು ನಿಜ. ಆದರೆ ಅತ್ಯಾಚಾರದ ಸುತ್ತಲ ಮೌನಕ್ಕಾಗಿ ನಾವೆಲ್ಲಾ ದೂಷಣೆಗೂ ಒಳಪಡಬೇಕು, ‘ವಿಸ್ತೃತ ಅಂತರರಾಷ್ಟ್ರೀಯ ಕುತಂತ್ರ’
ವೇನಾದರೂ ಇದ್ದರೆ ಅದೇ ಇದು. ಇಂತಹದೇ ಕುತಂತ್ರದಿಂದಾಗಿಯೇ ಅಮೆರಿಕದ ಒಲಿಂಪಿಕ್ ಮಟ್ಟದ ಜಿಮ್ನಾಸ್ಟ್‌ಗಳ ಸ್ಪೋರ್ಟ್ಸ್ ಡಾಕ್ಟರ್‌ ಆಗಿದ್ದ ಲ್ಯಾರಿ ನಾಸರ್ ವರ್ಷಾನುಗಟ್ಟಲೆ ನೂರಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಅನುವು ಮಾಡಿಕೊಟ್ಟಂತಾಗಿತ್ತು. ಆತನಿಂದ ದೌರ್ಜನ್ಯಕ್ಕೊಳಗಾದವರ ಮಾತುಗಳು ಕಡೆಗೂ ಆತನ ಬಂಧನಕ್ಕೆ ಕಾರಣವಾಯಿತು. ಉಸ್ತುವಾರಿ ಹೊತ್ತಿದ್ದ ದೊಡ್ಡವರು ಈ ವಿಚಾರದ ಬಗ್ಗೆ ಕಣ್ಣುಬಾಯಿ ಮುಚ್ಚಿಕೊಂಡಿದ್ದರು. ಇದು ಅಸಂಗತವಲ್ಲದಿದ್ದಲ್ಲಿ, ವ್ಯವಸ್ಥೆಯೊಳಗಿನ ಸುದೀರ್ಘ ಕಾಲದ ನಂಬಿಕೆದ್ರೋಹ’ ಎಂದು ಸೊಹೈಲಾ ಬರೆಯುತ್ತಾರೆ.

ಮಾತಾಡದಂತೆ ಮಹಿಳೆಗೆ ನಿರ್ಬಂಧಿಸುವುದು ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂದು ಕೇಂಬ್ರಿಜ್ ಯೂನಿವರ್ಸಿಟಿ ಪ್ರೊಫೆಸರ್ ಹಾಗೂ ಲೇಖಕಿ ಮೇರಿ ಬಿಯರ್ಡ್ ಹೇಳುತ್ತಾರೆ. ಮೌನ ಸಶಕ್ತವಾದುದೇ. ಆದರೆ ಮಾತುಗಳ ಶಕ್ತಿ, ‘ಮೀ ಟೂ’ ಅಭಿಯಾನದಲ್ಲಿ ವ್ಯಕ್ತವಾಗುತ್ತಿರುವುದೂ ನಿಜ. ‘ಯಾವುದೇ ಸ್ವರೂಪದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡುವುದಕ್ಕೆ ಧೈರ್ಯ ಬೇಕು. ಮಾತನಾಡುವುದೇ ಅನೇಕ ಮಹಿಳೆಯರಿಗೆ ವಿನಾಶಕಾರಿಯಾಗಬಹುದು. ಇದಕ್ಕೆ ದಿಟ್ಟತನ ಬೇಕು. ಮಾತನಾಡಿದ ಹಾಲಿವುಡ್‍ನ ಶ‍್ರೀಮಂತ, ಶ್ವೇತವರ್ಣೀಯ ಮಹಿಳೆಯರು ಅಭಿನಂದನಾರ್ಹರು. ಆದರೆ ಮಕ್ಕಳನ್ನು ಸಾಕಲು ಮುಂಬೈನ ಅಪಾರ್ಟ್‍ಮೆಂಟ್‍ನಲ್ಲಿ ಮನೆಗೆಲಸ ಮಾಡುತ್ತಾ ಸಂಬಳ ಎಣಿಸುವ ಮಹಿಳೆ, ಮನೆಯಾತನ ಲೈಂಗಿಕ ದೌರ್ಜನ್ಯದ ಬಗ್ಗೆ ದಿಟ್ಟವಾಗಿ ಬಾಯಿ ಬಿಡಲು ನೂರು ಬಾರಿ ಯೋಚಿಸಬೇಕಾಗುತ್ತದೆ. ಹಳ್ಳಿಗಳಲ್ಲಿ ಒಟ್ಟು ಕುಟುಂಬಗಳಲ್ಲಿ ಮನೆಯೊಳಗೇ ನಡೆಯಬಹುದಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮಹಿಳೆಯರು ಮಾತನಾಡಿದಲ್ಲಿ ಬದುಕೇ ನಾಶವಾದಂತೆ. ಹಾಗಾಗಿ ಮೂಕವಾಗಿರುವುದನ್ನು ಮಹಿಳೆಯರು ಅಭ್ಯಾಸ ಮಾಡಿಕೊಳ್ಳುತ್ತಾರೆ. ಹಾಗೆಯೇ ಇದು ಮುಂದುವರಿಯುತ್ತದೆ’ ಎಂಬಂಥ ಸೊಹೈಲಾ ಅವರ ಮಾತುಗಳು ಕಹಿ ವಾಸ್ತವಗಳಿಗೆ ಕನ್ನಡಿ ಹಿಡಿಯುತ್ತವೆ. ‘ಮೀ ಟೂ’, ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದ ಮೇಲ್ವರ್ಗದ ಮಹಿಳೆಯರ ಅಭಿಯಾನ ಎಂಬಂಥ ಮಾಮೂಲಾದ ಟೀಕೆಗಳಿಗೆ ಇಲ್ಲಿ ಒಂದಿಷ್ಟು ಉತ್ತರವಿದೆ. ಆದರೆ 2006ರಷ್ಟು ಹಿಂದೆಯೇ ‘ಮೀ ಟೂ’ ನುಡಿಗಟ್ಟು ಬಳಸಿದಂತಹ ತರಾನಾ ಬರ್ಕ್, ಕರಿಯರ ಹಕ್ಕುಗಳ ಹೋರಾಟಗಾರ್ತಿ ಎಂಬುದು ನಮಗೆ ನೆನಪಿರಬೇಕು.

ಭಾರತದ ಸಂದರ್ಭದಲ್ಲಿ ಒಂದು ರೀತಿಯಲ್ಲಿ ‘ಮೀ ಟೂ’ಆಂದೋಲನಕ್ಕೆ ಬೀಜ ಬಿತ್ತಿದ್ದು ರಾಜಸ್ಥಾನದ ಗ್ರಾಮೀಣ ಮಹಿಳೆ ಭಾಂವ್ರಿ ದೇವಿ ಎಂದೂ ವ್ಯಾಖ್ಯಾನಿಸಬಹುದು. 1992ರಲ್ಲಿ ಬಾಲ್ಯವಿವಾಹದ ಬಗ್ಗೆ ಜಾಗೃತಿ ಮೂಡಿಸುವ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಭಾಂವ್ರಿ ದೇವಿ, ಲೈಂಗಿಕ ದೌರ್ಜನ್ಯದ ವಿರುದ್ಧ ಬಹಿರಂಗವಾಗಿ ಕಾನೂನು ಹೋರಾಟಕ್ಕಿಳಿದ ಮೊದಲ ಮಹಿಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶಾಖ ಹೆಸರಲ್ಲಿ ಮಹಿಳಾ ಸಂಘಟನೆಗಳ ಸಾಮೂಹಿಕ ವೇದಿಕೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಂಬಂಧಿಸಿದಂತೆ ‘ದುಡಿಯುವ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗೆ ಮಾರ್ಗದರ್ಶಿ ಸೂತ್ರ’ ಗಳನ್ನು 1997ರಲ್ಲಿ ಸುಪ್ರೀಂಕೋರ್ಟ್ ಪ್ರಕಟಿಸಿತು. ವಿಶಾಖಾ ಮಾರ್ಗದರ್ಶಿ ಸೂತ್ರಗಳೆಂದೇ ಇವು ಹೆಸರಾದವು. ಆ ನಂತರ ದುಡಿಯುವ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆ ಕಾನೂನು ಸಹ ರಾಷ್ಟ್ರದಲ್ಲಿ ಈಗ ಜಾರಿಯಾಗಿದೆ. ಆದರೆ, ಭಾಂವ್ರಿ ದೇವಿ ಮೇಲೆ ದೌರ್ಜನ್ಯ ಎಸಗಿದವರು ಬಿಡುಗಡೆಯಾಗಿದ್ದಾರೆ. ರಾಜಸ್ಥಾನ ಹೈಕೋರ್ಟ್‌ನಲ್ಲಿ 26 ವರ್ಷಗಳು ಕಳೆದರೂ ಪ್ರಕರಣ ಇತ್ಯರ್ಥವಾಗಿಲ್ಲ. ಹೀಗಿದ್ದೂ ತಮ್ಮೆಲ್ಲಾ ನೋವು, ಹತಾಶೆ, ಹಿನ್ನಡೆಗಳ ಪ್ರಕ್ರಿಯೆಯಲ್ಲಿಯೇ ಲೈಂಗಿಕ ಕಿರುಕುಳಗಳ ವಿರುದ್ಧ ಕಿಡಿಯೊಂದನ್ನು ಹಚ್ಚಿದ್ದರು ಭಾಂವ್ರಿ ದೇವಿ. ಅದೀಗ ದೊಡ್ಡದಾಗಿ ಪಸರಿಸಿದೆ ಎಂದೂ ನಾವು ವ್ಯಾಖ್ಯಾನಿಸಬಹುದು.

ನಮ್ಮ ರಾಷ್ಟ್ರದ ಇತಿಹಾಸದಲ್ಲಿ ‘ಮೀ ಟೂ’ ಅಭಿಯಾನ ಹೊಸ ಮೈಲುಗಲ್ಲು. ಈ ಆಂದೋಲನವನ್ನು ಮುಂದಕ್ಕೊ
ಯ್ಯುವುದು ಹೇಗೆ? ಆಂತರಂಗಿಕವಾಗಿಸಿಕೊಳ್ಳುವುದು ಹೇಗೆ? ಎಂಬುದು ಮುಂದಿರುವ ಮುಖ್ಯ ಪ್ರಶ‍್ನೆಗಳು. ಗಂಡು ಹುಡುಗರನ್ನು ಬೆಳೆಸುವ ಕ್ರಮದಲ್ಲಿ ಸಮಾಜದಲ್ಲಿ ಮುಂದಿನ ದಿನಗಳಲ್ಲಿ ಬದಲಾವಣೆ ಕಾಣಿಸಬಹುದೇ? ಪುರುಷತ್ವದ ಪರಿಕಲ್ಪನೆಗಳು ಬದಲಾಗುವವೇ? ಲೈಂಗಿಕ ಸಂಬಂಧಗಳಲ್ಲಿ ಒಪ್ಪಿಗೆಯ (ಕನ್ಸೆಂಟ್) ಅಗತ್ಯವನ್ನು ಅರ್ಥಮಾಡಿಕೊಳ್ಳಲಾಗುವುದೇ? ಮಹಿಳೆಯ ವೈಯಕ್ತಿಕ ಆವರಣವನ್ನು ಭೇದಿಸಿ ಆಕೆಯ ಒಪ್ಪಿಗೆ ಇಲ್ಲದೆ ಆಕೆಯ ದೇಹವನ್ನು ಅತಿಕ್ರಮಿಸುವುದು ತಪ್ಪು ಎಂಬುದು ಮನವ
ರಿಕೆ ಆಗುವುದೇ? ಕೆಲವೇ ವರ್ಷಗಳ ಹಿಂದೆ ಸಮಾಜವಾದಿ ಪಕ್ಷದ ನೇತಾರ, ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಅವರು ಅತ್ಯಾಚಾರಕ್ಕೆ ಪ್ರತಿಕ್ರಿಯೆ ನೀಡಿದ ರೀತಿ ನೆನಪಿದೆ ತಾನೇ? ‘ಹುಡುಗರು ಹುಡುಗರಾಗಿರುತ್ತಾರೆ’! ಎಂದಿದ್ದರು ಅವರು. ನಮ್ಮ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪೊನ್ ರಾಧಾಕೃಷ್ಣನ್ ಅವರು‘‘ ‘ಮೀ ಟೂ’ ಅಭಿಯಾನ ವಕ್ರ ಮನಸ್ಸುಗಳ ಸೃಷ್ಟಿ’’ ಎಂದು ತಿರಸ್ಕಾರದಿಂದ ಕರೆದಿದ್ದಾರೆ. ‘5ನೇ ತರಗತಿಯಲ್ಲಿ ನಾವೇನಾದರೂ ಮಾಡಿದ್ದರೆ ಆ ಬಗ್ಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು’ ಎಂದು ಈ ಸಚಿವ ಕೇಳಿದ್ದಾರೆ. ಆದರೆ, ‘ಹುಡುಗರು ತಡವಾಗಿ ಮನೆಗೆ ಬಂದರೆ ಯಾಕೆ ತಡ ಎಂದು ಗಂಡುಮಕ್ಕಳಿಗೂ ಪ್ರಶ್ನೆ ಕೇಳಿ’ ಎಂದು ಸ್ವಾತಂತ್ರ್ಯೋತ್ಸವಭಾಷಣವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಭಾಷಣದ ಪಾಠವನ್ನು ಈ ಸಚಿವರಿಗೆ ಮತ್ತೆ ಕೇಳಿಸಬೇಕಿದೆ.

ಪೂರ್ಣವಾಗಿ ನಿಖರವಾಗಿಲ್ಲದಿದ್ದರೂ ಒಳ್ಳೆಯ ಉದ್ದೇಶದಿಂದ ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಆರೋಪಗಳನ್ನು ಮಾಡಿದ್ದಲ್ಲಿ ಅದು ಮಾನನಷ್ಟ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ನ್ಯೂಯಾರ್ಕ್ ಟೈಮ್ಸ್ ವರ್ಸಸ್ ಸುಲೈವಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಹಾಗೂ ರೆನಾಲ್ಡ್ಸ್ ವರ್ಸಸ್ ಟೈಮ್ಸ್ ಪ್ರಕರಣದಲ್ಲಿ ಬ್ರಿಟನ್‍ನಲ್ಲಿ ವ್ಯಕ್ತವಾಗಿದೆ. ಮುಚ್ಚಿದ ಬಾಗಿಲುಗಳ ಹಿಂದೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಯಾರೊಬ್ಬರ ಜೊತೆಗಾದರೂ ಯಾರಾದರೂ ಸಂಪಾದಕ, ರಾಜಕಾರಣಿ ಅಥವಾ ನಟ ಹೇಗೆ ವರ್ತಿಸುತ್ತಾನೆ, ಅದೂ ನಿರ್ದಿಷ್ಟವಾಗಿ ತನ್ನ ಅಧೀನದಲ್ಲಿ ಕೆಲಸ ಮಾಡುವವರು ಹಾಗೂ ಇಷ್ಟವಿಲ್ಲದವರ ಜೊತೆಗೆ ಹೇಗೆ ವರ್ತಿಸುತ್ತಾನೆ ಎಂಬುದು ಸಾರ್ವಜನಿಕ ಹಿತಾಸಕ್ತಿಯ ವಿಷಯ ಎಂಬುದು ಸ್ಪಷ್ಟ.

ಯಾವುದು ಅಪೇಕ್ಷಣೀಯ ವರ್ತನೆ, ಯಾವುದು ಅಲ್ಲ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕಿರುಕುಳ ಎಂಬುದನ್ನು ನಿಖರವಾಗಿ ಇದು ಕಪ್ಪು, ಅದು ಬಿಳುಪು ಎಂದು ವಿಭಜಿಸಲಾಗದು. ಇಬ್ಬರು ವಯಸ್ಕ ವ್ಯಕ್ತಿಗಳ ನಡುವಿನ ಸಂಬಂಧ ಪರಸ್ಪರ ಒಪ್ಪಿಗೆಯದಾಗಿರಬೇಕು ಎಂಬುದು ಇಲ್ಲಿ ಮುಖ್ಯ. 1979ರ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಕಾನೂನು ತಜ್ಞ ಉಪೇಂದ್ರ ಭಕ್ಷಿ ಮತ್ತಿತರರು ಬರೆದ ಬಹಿರಂಗ ಪತ್ರದಲ್ಲಿ ಲೈಂಗಿಕ ಸಂಬಂಧಗಳಲ್ಲಿ ‘ಒಪ್ಪಿಗೆ’ಯ ಮಹತ್ವವನ್ನು ತಾತ್ವಿಕವಾಗಿ ನಿರ್ವಚಿಸಿದ ಬಗೆಯನ್ನು ಮರೆಯುವುದು ಹೇಗೆ ಸಾಧ್ಯ? ಭಾರತದ ಮಹಿಳಾ ನಾಗರಿಕರ ಸಮಾನತೆ ಹಾಗೂ ಸ್ವಾತಂತ್ರ್ಯದ ಹಕ್ಕಿನ ಪ್ರಶ್ನೆಯನ್ನು ಲಾಗಾಯ್ತಿನಿಂದಲೂ ನಿರ್ಲಕ್ಷಿಸಿಕೊಂಡೇ ಬರಲಾಗಿದೆ. ಈಗಲೂ ಶ್ರೇಣೀಕೃತ ಅಧಿಕಾರ ವ್ಯವಸ್ಥೆಯನ್ನು ಮತ್ತಷ್ಟು ಜಬರಿನಿಂದ ಪುನರ್‍ ಪ್ರತಿಷ್ಠಾಪಿಸುವಂತಹ ವರ್ತನೆಗಳು ಆರೋಪಕ್ಕೊಳಗಾದವರ ಕಡೆಯಿಂದ ವ್ಯಕ್ತವಾಗುತ್ತಿವೆ, ಈ ಪ್ರಕ್ರಿಯೆಯಲ್ಲಿ ಹೆಣ್ಣುಮಕ್ಕಳ ಧ್ವನಿಗಳನ್ನು ಕುಗ್ಗಿಸುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT