ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ | ರೈತಪರ ‘ಕ್ಷೇತ್ರಪತಿ’: ನಿರ್ಲಕ್ಷ್ಯ ನ್ಯಾಯವೇ?

ರೈತರನ್ನು ಒಂಟಿಯಾಗಿಸಿದೆವು, ಇದು ರೈತಪರ ಸಿನಿಮಾ ನಿರ್ಲಕ್ಷ್ಯದ ಸಮಯ
Published 10 ಮಾರ್ಚ್ 2024, 22:30 IST
Last Updated 10 ಮಾರ್ಚ್ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಹದಿನೈದನೇ ಆವೃತ್ತಿಯಲ್ಲಿ ಕೇಸರಿ ಹರವೂ ನಿರ್ದೇಶನದ ‘ಕಿಸಾನ್‌ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಅನುಮತಿ ನಿರಾಕರಿಸಿದ್ದು ಸುದ್ದಿಯಾಯಿತು. ‘ಕಿಸಾನ್‌ ಸತ್ಯಾಗ್ರಹ’ದ ಜನಪ್ರಿಯ ಆವೃತ್ತಿ ಎನ್ನಬಹುದಾದ ಕನ್ನಡದ ‘ಕ್ಷೇತ್ರಪತಿ’ ಸಿನಿಮಾ ಚಿತ್ರೋತ್ಸವದಲ್ಲಿ ಸದ್ದಿಲ್ಲದೆ ಪ್ರದರ್ಶನ ಕಂಡಿದ್ದು ಹೆಚ್ಚಿನ ಜನರ ಗಮನಸೆಳೆಯಲಿಲ್ಲ. ‘ಕಿಸಾನ್‌ ಸತ್ಯಾಗ್ರಹ’ದ ಪರವಾಗಿ ವಕೀಲಿಕೆ ವಹಿಸಿದ ಎಷ್ಟು ಮಂದಿ ‘ಕ್ಷೇತ್ರಪತಿ’ ನೋಡಿದ್ದಾರೆ ಹಾಗೂ ಅದರ ಬಗ್ಗೆ ಚರ್ಚಿಸಿದ್ದಾರೆ ಎನ್ನುವುದು ತಿಳಿಯದು. ಆದರೆ, ಕಳೆದ ಆಗಸ್ಟ್‌ ತಿಂಗಳಲ್ಲಿ ಸಿನಿಮಾ ತೆರೆಕಂಡಾಗ ಅದರ ಬಗ್ಗೆ ಯಾವ ಗಮನಾರ್ಹ ಚರ್ಚೆಯೂ ನಡೆದಿರುವ ಉದಾಹರಣೆಯಂತೂ ಇಲ್ಲ. ಮಾಧ್ಯಮಗಳ ಕಣ್ಣು–ಹೃದಯಗಳಿಗೂ ‘ಕ್ಷೇತ್ರಪತಿ’ಯ ಸಮಕಾಲೀನತೆ ಅರಿವಿಗೆ ಬಂದಂತಿಲ್ಲ. ರೈತರ ಬಗೆಗಿನ ಸಿನಿಮಾ ಕುರಿತ ಈ ಸಾಮೂಹಿಕ ನಿರ್ಲಕ್ಷ್ಯ ಆಕಸ್ಮಿಕ ಎಂದು ಹೇಳಲಾಗದು. ಸಮುದಾಯಗಳನ್ನು ಒಡೆದು ಆಳುವ ಸ್ವಾರ್ಥ ರಾಜಕೀಯದ ಎದುರು, ರೈತರ ಬಗೆಗಿನ ಸಮಾಜದ ಹೇಳಿಕೆಗಳು ಹಾಗೂ ಭಾವುಕತೆ ಎಷ್ಟು ಟೊಳ್ಳು ಎನ್ನುವುದಕ್ಕೆ ಕಳೆದ ಮೂರ್ನಾಲ್ಕು ವರ್ಷಗಳ ವಿದ್ಯಮಾನಗಳು ನಿದರ್ಶನದಂತಿವೆ. ಆ ವಿದ್ಯಮಾನಗಳ ಭಾಗವಾಗಿಯೇ ‘ಕ್ಷೇತ್ರಪತಿ’ ಸಿನಿಮಾ ಕುರಿತ
ನಿರ್ಲಕ್ಷ್ಯವನ್ನೂ ಗಮನಿಸಬೇಕು. 

ಶ್ರೀಕಾಂತ ಕಟಗಿ ನಿರ್ದೇಶನದ ‘ಕ್ಷೇತ್ರಪತಿ’ ರೈತರ ಸಮಸ್ಯೆಗಳ ಬಗ್ಗೆ ಸಮಾಜದ ಗಮನಸೆಳೆಯಲು ಪ್ರಯತ್ನಿಸುವ ಸಿನಿಮಾ. ರೈತಪರ, ದಲಿತರಪರ, ಮಹಿಳಾಪರ – ಇಂಥ ಲೇಬಲ್‌ಗಳನ್ನು ಹಚ್ಚಿಕೊಂಡ ಸಿನಿಮಾಗಳು ಎಷ್ಟರಮಟ್ಟಿಗೆ ವಸ್ತುನಿಷ್ಠವಾಗಿರುತ್ತವೆ ಹಾಗೂ ದೃಶ್ಯಮಾಧ್ಯಮದ ವ್ಯಾಕರಣವನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಂಡಿರುತ್ತವೆ ಎನ್ನುವುದು ಜಾಣಪ್ರೇಕ್ಷಕರಿಗೆ ತಿಳಿಯದ ಗುಟ್ಟೇನಲ್ಲ. ಯಾವುದೇ ಅಭಿವ್ಯಕ್ತಿ ಸಮಕಾಲೀನವಾಗಿರಬೇಕು ಎನ್ನುವ ಹಂಬಲ ಹಟವಾಗಿ ಬದಲಾದಾಗ, ಅದು ಕಲೆಯಾಗದೆ ಘೋಷಣೆಯಾಗಿ, ಗದ್ದಲವಾಗಿ ಕೊನೆಗೊಂಡಿರುವ ಸಾಲು ಸಾಲು ಉದಾಹರಣೆಗಳು ನಮ್ಮ ಮುಂದಿವೆ. ಕನ್ನಡ ಸಿನಿಮಾದ ಮಟ್ಟಿಗಂತೂ ‘ಕಲಾತ್ಮಕ’ ಎನ್ನುವ ವಿಶೇಷಣಕ್ಕೆ ಸಹೃದಯರನ್ನು ಸಿನಿಮಾಗಳಿಗೆ ಬೆನ್ನುಮಾಡಿಸುವಷ್ಟು ಶಕ್ತಿಯಿದೆ. ‘ಕ್ಷೇತ್ರಪತಿ’ ಸಿನಿಮಾದ ವಿಶೇಷ ಇರುವುದೇ ಇಲ್ಲಿ; ಈ ಸಿನಿಮಾದ ಪಾಲಿಗೆ ರೈತಪರ ಎನ್ನುವುದು ಸ್ಲೋಗನ್‌ ಆಗಿಲ್ಲ; ಸಿನಿಮಾದ ಆತ್ಮವೇ ಆಗಿದೆ. ವಸ್ತುನಿಷ್ಠತೆ ಎನ್ನುವುದು ಸ್ಟೇಟ್‌ಮೆಂಟ್‌ ಆಗುವ ಬದಲು ಸಿನಿಮಾ ಆಗಿದೆ, ಕಲೆಯಾಗುವ ಪ್ರಯತ್ನ ನಡೆಸಿದೆ. 

‘ರೈತ ನಮ್ಮ ದೇಶದ ಬೆನ್ನೆಲುಬು, ಲಿವರ್‌, ಕಿಡ್ನಿ, ಜಠರ ಎಂದೆಲ್ಲ ಹೇಳಿ ನಮ್ಮನ್ನು ಉಬ್ಬಿಸಿಬಿಟ್ಟಿದ್ದಾರೆ.
ಆದರೆ, ನಮಗೇನು ಬೇಕು ಎಂದು ಈವರೆಗೆ ಯಾರಾದರೂ ನಮ್ಮನ್ನು ಕೇಳಿದ್ದಾರೇನು?’ ಎನ್ನುವುದು ಚಿತ್ರದ ಕಥಾನಾಯಕ ಬಸವ ಕೇಳುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಹೇಳಬಲ್ಲ ನೈತಿಕತೆ ಯಾರಿಗಿದೆ? ರಾಜಧಾನಿಯ ಗಡಿಗಳಲ್ಲಿ ಸಾವಿರಾರು ರೈತರು ತಿಂಗಳುಗಟ್ಟಲೆ ಬಯಲಲ್ಲಿ ಬೀಡುಬಿಟ್ಟು ಚಳವಳಿ ನಡೆಸಿದರೂ, ಅವರ ಬಳಿಗೆ ಬಂದು ಕೂತು ಅಳಲನ್ನು  ಕೇಳಿಸಿಕೊಳ್ಳಲಿಕ್ಕೆ ಪ್ರಧಾನಮಂತ್ರಿಗೇ ಸಾಧ್ಯವಾಗಿಲ್ಲ ಎನ್ನುವುದು ಈ ದೇಶದ ಆತ್ಮಸಾಕ್ಷಿಯ ಜೀವಂತಿಕೆಯ ಬಗ್ಗೆ ಅನುಮಾನ ಮೂಡಿಸುವಂತಿದೆ. ರೈತರ ಒಡಲಾಳವನ್ನು ಕೇಳಿಸಿಕೊಳ್ಳುವ ಮಾತಿರಲಿ, ಕಾನೂನು ಸುವ್ಯವಸ್ಥೆಯ ನೆಪದಲ್ಲಿ ರಾಜಧಾನಿಯ ಗಡಿಯಲ್ಲೇ ಅವರನ್ನು ಸರ್ಕಾರ ತಡೆದು ನಿಲ್ಲಿಸಿದ್ದನ್ನೂ ಮೌನವಾಗಿ ನೋಡಿದ್ದೇವೆ.  

ಕಳೆದ ಎರಡು– ಮೂರು ವರ್ಷಗಳಲ್ಲಿ ಉತ್ತರ ಭಾರತವನ್ನು ಕೇಂದ್ರವಾಗಿರಿಸಿಕೊಂಡು ನಡೆದ ರೈತರ ಪ್ರತಿಭಟನೆಯು ಸ್ವಾತಂತ್ರ್ಯಾನಂತರ ದೇಶ ಕಂಡ ಬಹು ದೊಡ್ಡ ಚಳವಳಿ. ಚಳವಳಿನಿರತ ರೈತರು ಗಾಂಧಿಯ ವಿವೇಕ ಹಾಗೂ ಅಹಿಂಸೆಯ ಅನುಸಂಧಾನದಂತೆ ಕಾಣಿಸಿದರೆ, ಸತ್ಯಾಗ್ರಹವನ್ನು ಹತ್ತಿಕ್ಕಲು ಪ್ರಯತ್ನಿಸಿದ ಅಧಿಕಾರಿಶಾಹಿಯು ಬ್ರಿಟಿಷ್‌ ಪ್ರಭುತ್ವದ ಪಳೆಯುಳಿಕೆಯಂತೆ ಕಾಣಿಸುತ್ತದೆ. ಈ ವಿರೋಧಾಭಾಸ ‘ಕ್ಷೇತ್ರಪತಿ’ ಸಿನಿಮಾದಲ್ಲೂ ಇದೆ. 

ಕಥಾನಾಯಕ ಬಸವ ಎಂಜಿನಿಯರಿಂಗ್‌ ವಿದ್ಯಾರ್ಥಿ. ಅಮೆರಿಕದಲ್ಲಿ ಬದುಕು ಕಟ್ಟಿಕೊಳ್ಳುವ ಮಹದಾಸೆ ಹೊಂದಿರುವ ಜಾಣ ತರುಣ. ತಂದೆಯ ಸಾವಿನಿಂದಾಗಿ ಬಸವ ಹಳ್ಳಿಗೆ ಬರುವಂತಾಗುತ್ತದೆ. ಈರುಳ್ಳಿ ಬೆಲೆ ಕುಸಿತದಿಂದ ಕಂಗೆಟ್ಟು, ಬ್ಯಾಂಕ್‌ ಸಾಲದ ಶೂಲಕ್ಕೆ ಅಂಜಿ, ಬಸವನ ತಂದೆ ಉರುಳು ಹಾಕಿಕೊಂಡಿದ್ದಾನೆ. ಅಪ್ಪನ ಸಂಸ್ಕಾರಕ್ಕೆ ಬರುವ ಬಸವ ಊರಿನಲ್ಲಿಯೇ ಉಳಿಯಲು ನಿಶ್ಚಯಿಸುತ್ತಾನೆ. ಎಂಜಿನಿಯರಿಂಗ್ ಬಿಟ್ಟು ಕೃಷಿಯಲ್ಲಿ ತೊಡಗುತ್ತೇನೆನ್ನುವ ಕಥಾನಾಯಕನ ನಿರ್ಧಾರವನ್ನು ಊರಿನೊಂದಿಗೆ ಮಲತಾಯಿಯೂ ವಿರೋಧಿಸುತ್ತಾಳೆ. ಅಪ್ಪನ ಸಾವಿಗೆ ಬಂದಿರುವ ಪರಿಹಾರ ಧನ ಬಳಸಿಕೊಂಡು ಎಂಜಿನಿಯರಿಂಗ್ ಮುಗಿಸಿ ಒಳ್ಳೆಯ ಕೆಲಸ ಹಿಡಿದು, ತಂಗಿಯ ಮದುವೆ ಮಾಡಿದ ನಂತರ ಏನಾದರೂ ಮಾಡಿಕೊ ಎನ್ನುವುದು ತಾಯಿಯ ಒತ್ತಾಯ. ಬಸವ ಯಾರ ಮಾತಿಗೂ ಕಿವಿಗೊಡದೆ ಕಾಲೇಜು ತೊರೆದು ಮಣ್ಣಿನ ಅಂಗಳಕ್ಕೆ ಬರುತ್ತಾನೆ. 

ರೈತರ ಜೊತೆ ಸೇರಿದ ಬಸವನ ಎದುರು ಎರಡು ಸವಾಲುಗಳಿವೆ. ಮೊದಲನೆಯದು, ಕೃಷಿ ಉತ್ಪನ್ನಗಳಿಗೆ
ಇಲ್ಲದಿರುವ ನಿಶ್ಚಿತ ಬೆಲೆ. ಎರಡನೆಯದು, ಭೂಮಿ ಆಕ್ರಮಿಸಲು ಹೊಂಚುಹಾಕುತ್ತಿರುವ ದುಷ್ಟ ರಾಜಕಾರಣಿ. ಸೂಪರ್‌ ಮಾರ್ಕೆಟ್‌ಗಳಿಗೆ ರೈತರನ್ನು ಒತ್ತೆಯಿಡುವ ರಾಜಕಾರಣಿಯ ಪ್ರಯತ್ನವನ್ನು ವಿರೋಧಿಸುವ ಬಸವ, ದಲ್ಲಾಳಿಗಳ ಎಪಿಎಂಸಿಗಳಿಗೆ ಪರ್ಯಾಯವಾಗಿ, ರೈತನೇ ತನ್ನ ಉತ್ಪನ್ನಗಳನ್ನು ಮಾರುವ ‘ರೈತ ಮಾರುಕಟ್ಟೆ’ಯ ಕನಸು ಕಾಣುತ್ತಾನೆ. ಬಸವನ ಪ್ರಯತ್ನಕ್ಕೆ ಮತ್ತಷ್ಟು
ರೈತರು ಒತ್ತಾಸೆಯಾಗಿ, ‘ರೈತ ಮಾರುಕಟ್ಟೆ’ಯ ಪರಿಕಲ್ಪನೆ ಯಶಸ್ಸು ಕಾಣತೊಡಗಿದಾಗ, ಸೂಪರ್‌ ಮಾರ್ಕೆಟ್ ಮಾಫಿಯಾ ಸಕ್ರಿಯವಾಗುತ್ತದೆ. ಮುಂದಿನದು ಕಾರ್ಪೊರೇಟ್‌ ವ್ಯವಸ್ಥೆಯನ್ನು ಹಿಂದಿಕ್ಕಿಕೊಂಡ ಸರ್ಕಾರ ಹಾಗೂ ರೈತರ ನಡುವಿನ ಸಂಘರ್ಷದ ಕಥನ.

ಎತ್ತಿನಗಾಡಿಗಳ ಮೂಲಕ ನಗರಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸುವ ರೈತರಿಗೆ ಪೊಲೀಸರ ತಡೆಗೋಡೆ, ಬಲಪ್ರಯೋಗ, ಆದಾಯ ತೆರಿಗೆ ಇಲಾಖೆಯ ಮೂಲಕ ನಾಯಕನ ಚಾರಿತ್ರ್ಯಹನನ–ಬಂಧನ, ಚಳವಳಿಯನ್ನು ಒಳಗಿನಿಂದಲೇ ದುರ್ಬಲಗೊಳಿಸುವ ಷಡ್ಯಂತ್ರ, ರೈತನ ಕೊಲೆ, ಮಾಧ್ಯಮಗಳ ಭಜನೆ – ‘ಕ್ಷೇತ್ರಪತಿ’ಯಲ್ಲಿನ ಇವೆಲ್ಲ ಘಟನೆಗಳು ಸಿನಿಮಾದ ದೃಶ್ಯಗಳಷ್ಟೇ ಆಗದೆ ವರ್ತಮಾನದ ಘಟನಾವಳಿಗಳಾಗಿಯೂ ಸಹೃದಯರನ್ನು ತಾಕುತ್ತವೆ. ಪ್ರವಾಹಕ್ಕೆ ವಿರುದ್ಧವಾಗಿ ಈಜುವ ಪತ್ರಕರ್ತರೂ ಸಿನಿಮಾದಲ್ಲಿದ್ದಾರೆ. ಕೊನೆಗೆ, ಸಾಮಾಜಿಕ ಮಾಧ್ಯಮದ ಮೂಲಕ ರೈತ ಚಳವಳಿ ರಾಜ್ಯವ್ಯಾಪಿಯಾಗುತ್ತದೆ. ರೈತರ ಸತ್ಯಾಗ್ರಹ ಅಸಹಕಾರದ ರೂಪ ಪಡೆಯುತ್ತದೆ. ಬಸ್‌ ಪ್ರಯಾಣಕ್ಕೆ ಶುಲ್ಕ ನೀಡಲು, ವಿದ್ಯುತ್ ಶುಲ್ಕ ಪಾವತಿಸಲು ನಿರಾಕರಿಸುವ ರೈತರು, ತಮ್ಮ ಜಮೀನುಗಳನ್ನು ಮುಖ್ಯಮಂತ್ರಿ ಹೆಸರಿಗೆ ಬರೆದುಕೊಡುವ ಮೂಲಕ ಚಳವಳಿಯನ್ನು ನಿರ್ಣಾಯಕ ಹಂತಕ್ಕೆ ಒಯ್ದು ಸರ್ಕಾರವನ್ನು ಮಣಿಸುತ್ತಾರೆ. 

ಉತ್ತರ ಕರ್ನಾಟಕದ ಜವಾರಿ ಭಾಷೆಯ ಸಿನಿಮಾ ಯಾವ ಹಂತದಲ್ಲೂ ಕುಸಿಯದಂತೆ, ತೀವ್ರತೆ ಕಳೆದುಕೊಳ್ಳದಿರುವಂತೆ, ಸಿನಿಮಾ ವ್ಯಾಕರಣಕ್ಕೆ ಆದಷ್ಟೂ ನ್ಯಾಯ ದೊರೆಯುವಂತೆ ನೋಡಿಕೊಂಡಿರುವ ನಿರ್ದೇಶಕ ಶ್ರೀಕಾಂತ ಕಟಗಿ ಮೆಚ್ಚುಗೆಗೆ ಅರ್ಹರು. ಈ ಮೆಚ್ಚುಗೆಯಲ್ಲಿ ನಾಯಕನಟ ನವೀನ್‌ ಶಂಕರ್‌
ಅವರಿಗೂ ಪಾಲಿದೆ. ‘ಕ್ಷೇತ್ರಪತಿ’ಯ ಮೂಲಕ ಶ್ರೀಕಾಂತ್‌ ಹಾಗೂ ನವೀನ್‌ ಮೂಡಿಸಿರುವ ಭರವಸೆ ದೊಡ್ಡದು ಹಾಗೂ ಮಹತ್ವದ್ದು. ಬೆಂಗಳೂರು ಚಿತ್ರೋತ್ಸವದ ಸ್ಪರ್ಧಾತ್ಮಕ ಕನ್ನಡ ಚಿತ್ರಗಳ ವಿಭಾಗದಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಈ ಸಿನಿಮಾಕ್ಕೆ ಜನಮೆಚ್ಚುಗೆಯೂ ಸಿಗಬೇಕಿತ್ತು; ರೈತರು ಹಾಗೂ ರೈತ ಸಂಘಟನೆಗಳ ಬೆಂಬಲವಾದರೂ ದೊರೆಯಬೇಕಿತ್ತು. 

ಗುಟುಕು ಜೀವ ಯಾವ ಕ್ಷಣದಲ್ಲಾದರೂ ತಣ್ಣಗಾಗಬಹುದು ಎನ್ನುವಂಥ ನಿರಾಶಾದಾಯಕ
ಸಂದರ್ಭಗಳಲ್ಲಿ, ಈ ಘಟಕ್ಕೆ ಇನ್ನೂ ಶಕ್ತಿ ಉಳಿದಿದೆ ಎಂದು ಅಚ್ಚರಿಯೊಂದನ್ನು ನೀಡುವುದು ಕನ್ನಡ ಚಿತ್ರರಂಗದ ಪರಂಪರೆಯೇ ಆಗಿದೆ. ಈಚಿನ ದಿನಗಳ ಅಂಥದೊಂದು ಅಚ್ಚರಿ ‘ಕ್ಷೇತ್ರಪತಿ.’ ಜನಪ್ರಿಯ
ನೆಲೆಗಟ್ಟಿನಲ್ಲಿಯೇ ಜನಪರ ಗಂಭೀರ ಸಿನಿಮಾವೊಂದನ್ನು ರೂಪಿಸುವ ಮಾದರಿಯಾಗಿಯೂ ನೋಡಬಹುದಾದ ‘ಕ್ಷೇತ್ರಪತಿ’, ಕನ್ನಡ ಚಿತ್ರರಸಿಕರು ಹೆಮ್ಮೆಯಿಂದ ಹೇಳಿಕೊಳ್ಳಬೇಕಾಗಿದ್ದ ಚಲನಚಿತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT