ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕಸ್ತೂರಿಗೆ ಬೇಕಿದೆ ಹೊಸ ತುತ್ತೂರಿ

ಪಡಸಾಲೆ
Last Updated 23 ಜೂನ್ 2018, 19:39 IST
ಅಕ್ಷರ ಗಾತ್ರ

ಮುಂಗಾರಿಗೆ ಚಿಗುರುವ ಹಸಿರಿನಂತೆ, ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ಕನ್ನಡ ಶಾಲೆಗಳ ಕುರಿತ ಕಾಳಜಿ ಜಾಗೃತಗೊಳ್ಳುತ್ತದೆ. ಮಕ್ಕಳ ಹಾಜರಾತಿಯ ಕೊರತೆಯಿಂದಾಗಿ ಕನ್ನಡ ಶಾಲೆಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿರುವ ಕಥೆಗಳನ್ನು ವ್ಯಥೆಯಿಂದ ಆಲಿಸಿ ನಿಟ್ಟುಸಿರು ಹೊಮ್ಮುತ್ತದೆ. ಆದರೆ, ಈ ಆತಂಕ– ನಿಟ್ಟುಸಿರು ಕನ್ನಡದ ಮಕ್ಕಳ ಓದಿನ ಸಖ್ಯಕ್ಕೆ ಒಳ್ಳೆಯ ಕಥೆ– ಪದ್ಯಗಳು ದೊರೆಯುತ್ತಿಲ್ಲ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಹೊರಹೊಮ್ಮುತ್ತಿಲ್ಲವೇಕೆ? ಕನ್ನಡದ ಶಾಲೆಗಳು ಮುಚ್ಚುತ್ತಿರುವ ಆತಂಕದ ಜೊತೆಜೊತೆಗೇ ಕನ್ನಡದ ಮಕ್ಕಳ ಸಾಹಿತ್ಯ ಕೃಶವಾಗುತ್ತಿರುವುದೂ ಮುಖ್ಯವಾಗಬೇಕಲ್ಲವೇ?

ಕಳೆದ ಎರಡು ವಾರಗಳಲ್ಲಿ ಕನ್ನಡದ ಫೇಸ್‌ಬುಕ್‌ ಪಡಸಾಲೆಯಲ್ಲಿ ನೂರಾರು ಓದುಗರು ತಾವು ಓದಿ ಮೆಚ್ಚಿದ ಪುಸ್ತಕಗಳ ಮುಖಪುಟಗಳನ್ನು, ಆ ಪುಸ್ತಕಗಳ ಕುರಿತ ಟಿಪ್ಪಣಿಗಳನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕ ಅಭಿಯಾನವನ್ನು ಗಮನವಿಟ್ಟು ನೋಡಿದರೆ, ಓದುಗರು ಹಂಚಿಕೊಂಡ ಪುಸ್ತಕಗಳಲ್ಲಿ ಮಕ್ಕಳ ಕೃತಿಗಳ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಮಕ್ಕಳ ಸಾಹಿತ್ಯದ ಈ ಮರೆವಿನ ಹಿನ್ನೆಲೆಯಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆ – ಮಕ್ಕಳ ಸಾಹಿತ್ಯ ಓದುಗರಿಗೆ ಬೇಡವಾಗಿದೆಯೇ ಎನ್ನುವುದು. ಈ ಪ್ರಶ್ನೆಯನ್ನು ಇನ್ನೊಂದು ರೀತಿಯಲ್ಲೂ ನೋಡಬಹುದು: ಮಕ್ಕಳ ಸಾಹಿತ್ಯ ರಚನೆ ಲೇಖಕರಿಗೇ ಬೇಡವಾಗಿದೆಯೇ?

ಮಕ್ಕಳ ಸಾಹಿತ್ಯದ ಕುರಿತು ನಮ್ಮಲ್ಲಿ ಕೆಲವು ಸರಳ ಗ್ರಹಿಕೆಗಳಿವೆ. ಮಕ್ಕಳಿಗೆ ಕಥೆ ಹೇಳುವುದು ಸುಲಭ, ಮಕ್ಕಳ ಸಾಹಿತ್ಯ ಮಕ್ಕಳಿಗಷ್ಟೇ ಸೀಮಿತವಾದುದು, ಮಕ್ಕಳ ಸಾಹಿತ್ಯ ರಚನೆ ಎರಡನೇ ದರ್ಜೆಯದು, ಎಳೆಯರಲ್ಲಿ ನೈತಿಕತೆಯನ್ನು ಬೆಳೆಸುವುದು ಮಕ್ಕಳ ಸಾಹಿತ್ಯದ ಪ್ರಮುಖ ಉದ್ದೇಶ – ಇಂಥ ನಂಬಿಕೆಗಳು ಓದುಗರಲ್ಲೂ ಇವೆ, ಲೇಖಕರಲ್ಲೂ ಇವೆ.

ಮಕ್ಕಳಿಗೆ ಕಥೆ ಹೇಳುವುದು ಎಷ್ಟು ಕಷ್ಟ ಎನ್ನುವುದು ತಿಳಿಯಬೇಕಾದರೆ ಕಥೆ ಹೇಳಿಯೇ ತಿಳಿಯಬೇಕು. ಎಷ್ಟೋ ಸಂದರ್ಭಗಳಲ್ಲಿ ಮಕ್ಕಳು ಕೇಳುವ ಪ್ರಶ್ನೆಗಳು ಕಥೆಗಾರನ ತಿಳಿವಳಿಕೆಯನ್ನೇ ಪ್ರಶ್ನೆ ಮಾಡುವಂತಿರುತ್ತವೆ. ಹೇಳುವ ಕಥೆಯಲ್ಲಿ ಹೊಸತನ ಕಾಣಿಸದೆ ಮಕ್ಕಳು ಆಕಳಿಸುವುದೂ ಇದೆ. ಮಕ್ಕಳಿಗೆ ಕಥೆ ಹೇಳಲು ಬೇಕಾದುದು ಬುದ್ಧಿವಂತಿಕೆಯಲ್ಲ, ಭಾವತೀವ್ರತೆ. ಆ ಕಾರಣದಿಂದಲೇ ಮಕ್ಕಳನ್ನು ಹೂಂಗುಟ್ಟಿಸುವವರಲ್ಲಿ ಅಜ್ಜಿಯರನ್ನು ಮೀರಿಸುವವರಿಲ್ಲ.

ಮಕ್ಕಳ ಸಾಹಿತ್ಯ ರಚನೆ ಅಷ್ಟೇನೂ ಮುಖ್ಯವಾದುದಲ್ಲ ಎಂದು ಭಾವಿಸುವುದು ಬೇಜವಾಬ್ದಾರಿತನವಷ್ಟೇ ಅಲ್ಲ, ಸಾಂಸ್ಕೃತಿಕ ಹೊಣೆಗೇಡಿತನವೂ ಹೌದು. ಮಕ್ಕಳ ಸಾಹಿತ್ಯದ ಬಗ್ಗೆ ಲೇಖಕರು ಬಹಿರಂಗವಾಗಿ ನಿರ್ಲಕ್ಷ್ಯ ವ್ಯಕ್ತಪಡಿಸದಿದ್ದರೂ, ಬರೆಯದೆ ಇರುವ ಅವರ ಧೋರಣೆಯಲ್ಲೇ ಆ ನಿರ್ಲಕ್ಷ್ಯ ಕಾಣಿಸುತ್ತದೆ. ಎಚ್‌.ಎಸ್‌. ವೆಂಕಟೇಶಮೂರ್ತಿ, ಕೆ.ವಿ. ತಿರುಮಲೇಶ, ನಾ. ಡಿಸೋಜ, ಶ್ರೀನಿವಾಸ ಉಡುಪ, ಆನಂದ ಪಾಟೀಲ ಅವರಂಥ ಬೆರಳೆಣಿಕೆಯ ಸಾಹಿತಿಗಳನ್ನು ಬಿಟ್ಟರೆ ಈಗ ಬರೆಯುತ್ತಿರುವ ಯಾವ ಹಿರಿಯರೂ ಮಕ್ಕಳ ಸಾಹಿತ್ಯ ರಚನೆಯನ್ನು ಆದ್ಯತೆಯ ವಿಷಯವನ್ನಾಗಿ ಪರಿಗಣಿಸಿದಂತಿಲ್ಲ. ನವೋದಯ ಕಾಲದ ಅನೇಕ ಹಿರಿಯರು ಮಕ್ಕಳಿಗಾಗಿ ಬರೆಯುವುದರ ಮಹತ್ವವನ್ನು ಗ್ರಹಿಸಿದಂತಿತ್ತು. ಸೃಜನಶೀಲ ಕೃತಿಗಳ ಮೂಲಕ ಕುವೆಂಪು, ಸೃಜನೇತರ ಸಂಪುಟಗಳ ಮೂಲಕ ಶಿವರಾಮ ಕಾರಂತರು ಕನ್ನಡದ ಮಕ್ಕಳ ಮನಸ್ಸನ್ನು ಕಟ್ಟುವ ಕೆಲಸ ಮಾಡಿದರು. ಮಕ್ಕಳ ಕೈ– ಬಾಯಿಗೆ ಬಣ್ಣದ ತಗಡಿನ ತುತ್ತೂರಿಯನ್ನು ಕೊಟ್ಟ ಜಿ.ಪಿ. ರಾಜರತ್ನಂ ಅವರಂತೂ ಮಕ್ಕಳಿಗಾಗಿ ಬರೆಯುವುದನ್ನು ವ್ರತದಂತೆ ಜೀವನದುದ್ದಕ್ಕೂ ಪಾಲಿಸಿದರು. ಬಹುಶಃ ಇವರೆಲ್ಲರಿಗೆ ಮಕ್ಕಳಿಗಾಗಿ ಬರೆಯುವುದು ನೈತಿಕ ಹೊಣೆಗಾರಿಕೆಯಾಗಿ ಕಾಣಿಸಿರಬೇಕು. ಕುವೆಂಪು ಅವರಂತೂ ಮಕ್ಕಳಿಗೆ ಬರೆಯುವ ಕ್ರಿಯೆಯನ್ನು ಮನುಜಪಶು ದಿವಿಜತ್ವಕೆ ಏರುವ ಪ್ರಯತ್ನವಾಗಿ ಕಂಡರು.

ಎಲ್ಲ ದೊಡ್ಡವರ ಹೃದಯದಲ್ಲಿ ನಿತ್ಯ ಕಿಶೋರತೆ ನಿದ್ರಿಸುತ್ತಿದೆ ಎನ್ನುವ ಕುವೆಂಪು, ‘ಮಕ್ಕಳ ಸಂಗದೊಳೆಚ್ಚರಗೊಳ್ಳಲಿ ಆನಂದದ ಆ ದಿವ್ಯಶಿಶು’ ಎಂದು ಹಂಬಲಿಸುತ್ತಾರೆ. ತಾನು ಮಕ್ಕಳಿಗಾಗಿ ಬರೆಯುತ್ತಿದ್ದೇನೆ ಎನ್ನುವ ಹಮ್ಮನ್ನು ಲೇಖಕ ಬಿಡಬೇಕು ಎಂದವರು ಹೇಳುತ್ತಿರುವಂತಿದೆ. ನಮ್ಮ ಹೃದಯದೊಳಗೆ ಒಂದು ಮಗುವಿದೆಯಲ್ಲ, ಆ ಮಗುವನ್ನು ಜಾಗೃತಗೊಳಿಸಲಿಕ್ಕಾಗಿ ನಾವು ಬರೆಯಬೇಕು ಎನ್ನುವುದು ಕವಿಯ ಆಶಯ. ಆದರೆ, ಮಕ್ಕಳಿಗೆ ಬರೆಯುವ ಬಹುತೇಕ ಸಂದರ್ಭಗಳಲ್ಲಿ ನಾವು ದೊಡ್ಡವರ ಸ್ಥಾನದಲ್ಲಿ ನಿಲ್ಲುತ್ತೇವೆ. ಕುವೆಂಪು ಅವರು ತಮ್ಮೊಳಗಿನ ಮಗುವನ್ನು ರಮಿಸಲು ಬರೆದುಕೊಂಡ ಕಾರಣದಿಂದಲೇ ‘ಬೊಮ್ಮನಹಳ್ಳಿಯ ಕಿಂದರಜೋಗಿ’, ‘ಮೋಡಣ್ಣನ ತಮ್ಮ’, ‘ನನ್ನ ಗೋಪಾಲ’ ಎಲ್ಲ ವಯೋಮಾನದವರಿಗೂ ಇಷ್ಟವಾಗುವುದು. ಕಿಂದರಜೋಗಿಯನ್ನೋ ಪಂಜೆಯವರ ಹಾವೊಳು ಹೂವನ್ನು ಕಂಡ ಹಾವಿನ ಹಾಡನ್ನು ಬರಿಯ ಮಕ್ಕಳ ರಚನೆಗಳೆನ್ನುವುದು ಸಾಧ್ಯವೇ? ‘ಗೋವಿನ ಹಾಡು’ ಯಾವ ಮಹಾಕಾವ್ಯಕ್ಕೆ ಕಡಿಮೆಯಾದುದು? ಕುವೆಂಪು ಅವರ ಸಾಹಿತ್ಯಶ್ರೇಣಿಯಲ್ಲಿ ‘ಮಲೆಗಳಲ್ಲಿ ಮದುಮಗಳು’ ಕೃತಿಯಷ್ಟೇ ಉನ್ನತವಾದುದು ‘ಬೊಮ್ಮನಹಳ್ಳಿಯ ಕಿಂದರಜೋಗಿ’. ‘ಮಲೆಗಳಲ್ಲಿ ಮದುಮಗಳು’ ಕೃತಿಯ ಓದುಗನನ್ನು ಸಿದ್ಧಪಡಿಸಲು ಕಿಂದರಜೋಗಿ ಅತ್ಯಗತ್ಯ. ಎಚ್‌.ಎಸ್‌. ವೆಂಕಟೇಶಮೂರ್ತಿಯವರ ಅತ್ಯುತ್ತಮ ಕವಿತೆಗಳಲ್ಲಿ ಅವರ ‘ಹಕ್ಕಿ ಸಾಲು’ ಸಂಕಲನದ ಪದ್ಯಗಳೂ ಸೇರಿವೆ. ತಾತ್ಪರ್ಯ ಇಷ್ಟೇ: ಒಂದು ಒಳ್ಳೆಯ ಮಕ್ಕಳ ಕಥೆ ಅಥವಾ ಪದ್ಯ ಅದು ದೊಡ್ಡವರೂ ಆಸ್ವಾದಿಸಬಹುದಾದ, ಆಸ್ವಾದಿಸಬೇಕಾದ ರಚನೆಯಾಗಿರುತ್ತದೆ.

ನೈತಿಕತೆಯ ಬೊಜ್ಜು ಮಕ್ಕಳ ಸಾಹಿತ್ಯದ ಅಪೌಷ್ಟಿಕತೆಗೆ ಮುಖ್ಯವಾದ ಕಾರಣ. ಮಕ್ಕಳ ಕಥೆಗಳ ಕೊನೆಗೆ ‘ನೀತಿ’ ಎನ್ನುವ ಬಾಲವನ್ನು ಹಚ್ಚುವ ಬರಹಗಾರರೂ ಇದ್ದಾರೆ. ನೈತಿಕತೆ ರೂಪುಗೊಳ್ಳಬೇಕಾದುದು ಶಿಕ್ಷಣದ ಮೂಲಕ. ನಾವೋ ಶಾಲೆಗಳನ್ನು ಸ್ಪರ್ಧೆಗೆ ಗರಡಿಯಾಳುಗಳನ್ನು ತಯಾರಿಸುವ ಗರಡಿಮನೆಗಳನ್ನಾಗಿಸಿದ್ದೇವೆ, ನೈತಿಕತೆಯನ್ನು ಸಾಹಿತ್ಯಕ್ಕೆ ಆರೋಪಿಸಿಬಿಟ್ಟಿದ್ದೇವೆ. ಈ ನೈತಿಕತೆ ಆರ್ಭಟಿಸತೊಡಗಿದಾಗ ಮಕ್ಕಳ ಸಾಹಿತ್ಯದ ಮುಖ್ಯ ಉದ್ದೇಶಗಳಾದ ಮನೋರಂಜನೆ ಹಾಗೂ ಮನೋವಿಕಾಸ ಹಿಂದಾಗಿಬಿಡುತ್ತವೆ.

ಪ್ರಸ್ತುತ ಮಕ್ಕಳ ಸಾಹಿತ್ಯದ ಆಮ್ಲಜನಕದ ಸಿಲಿಂಡರ್ ಶಿಕ್ಷಕರ ಕೈಯಲ್ಲಿದೆ. ಮಕ್ಕಳ ಜೊತೆ ನಿತ್ಯ ಒಡನಾಡುವ ಕಾರಣದಿಂದಾಗಿ ಎಳೆಯರಿಗೆ ಬೇಕಾದ ಕಥೆ– ಪದ್ಯಗಳನ್ನು ಬರೆಯುವುದು ಮೇಷ್ಟರುಗಳ ಕರ್ತವ್ಯ ಎಂದು ಉಳಿದ ಲೇಖಕರು ಭಾವಿಸಿರುವಂತಿದೆ. ಯಾವ ಕೆಲಸ ಹೇಳಿದರೂ ಒಲ್ಲೆ ಎನ್ನುವುದನ್ನು ತಿಳಿಯದ ಶಿಕ್ಷಕರು ಚಿಣ್ಣರ ಸಾಹಿತ್ಯರಚನೆಯನ್ನೂ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಆದರೆ, ಇದರ ಫಲವಾಗಿ ಬೇರೆ ಬೇರೆ ಕ್ಷೇತ್ರಗಳ ಅನುಭವಗಳು ಕಥೆಗಳಾಗಿ ಹಾಡುಗಳಾಗಿ ಮಕ್ಕಳಿಗೆ ದೊರೆಯುವುದು ತಪ್ಪಿಹೋಗಿದೆ. ವಿವಿಧ ಕ್ಷೇತ್ರಗಳ ಅನುಭವಗಳು ಕನ್ನಡ ಸಾಹಿತ್ಯದಲ್ಲೀಗ ಅನಾವರಣಗೊಳ್ಳುತ್ತಿವೆ. ಈ ವೈವಿಧ್ಯ ಮಕ್ಕಳ ಸಾಹಿತ್ಯದಲ್ಲೂ ಸಾಧ್ಯವಾಗಬೇಕು.

‘ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಕ್ಕಳ ಸಾಹಿತ್ಯ ರಚಿಸದ ಸಾಹಿತಿಯನ್ನು ಯಾವುದೇ ಸಾಹಿತ್ಯ ಪುರಸ್ಕಾರಕ್ಕೆ ಪರಿಗಣಿಸುವುದಿಲ್ಲ. ಮಕ್ಕಳ ಸಾಹಿತ್ಯದ ಉಳಿವಿನ ದೃಷ್ಟಿಯಿಂದ ಇಂಥ ನಿರ್ಧಾರವನ್ನು ರಾಜ್ಯದಲ್ಲೂ ಕೈಗೊಳ್ಳುವ ಅಗತ್ಯವಿದೆ’ ಎಂದು ನಾ. ಡಿಸೋಜ ಒಮ್ಮೆ ಹೇಳಿದ್ದರು. ಇದು ವಾಸ್ತವ ಅಲ್ಲದಿರಬಹುದಾದರೂ, ಇದರ ಹಿಂದಿನ ಆಶಯ ಮುಖ್ಯವಾದುದು. ಒತ್ತಡದ ರೂಪದಲ್ಲಿ ಅಲ್ಲವಾದರೂ ಬದ್ಧತೆಯ ರೂಪದಲ್ಲಾದರೂ ಚಿಣ್ಣರ ಜಗತ್ತಿಗೆ ಕನ್ನಡ ಸಾಹಿತ್ಯಲೋಕದ ಹಿರಿಯರು ತೆರೆದುಕೊಳ್ಳಬೇಕಾಗಿದೆ. ಒಂದು ಮಕ್ಕಳ ಕೃತಿ, ಮತ್ತೊಂದು ಅನುವಾದ ಕೃತಿ ತಮ್ಮ ಸಾಹಿತ್ಯ ರಚನೆಯ ಭಾಗವಾಗಬೇಕು ಎನ್ನುವ ನಿಲುವು ಸಾಹಿತಿಯನ್ನೂ ಸಾಹಿತ್ಯವನ್ನೂ ಪೊರೆಯಬಲ್ಲದು. ಮಗುವೊಂದು ಕಥೆ ಕೇಳಿ ಕಣ್ಣರಳಿಸುವುದು, ಕಂದಮ್ಮಗಳ ಕೊರಳಲ್ಲಿ ಪದ್ಯ ಜೀವಗೊಳ್ಳುವುದು– ಇಂಥ ಸುಖವನ್ನು ಯಾವ ಪುರಸ್ಕಾರ ತಾನೆ ಲೇಖಕನಿಗೆ ನೀಡಬಲ್ಲದು? ಇತರ ಮಕ್ಕಳ ಮಾತಿರಲಿ, ಲೇಖಕರು ತಂತಮ್ಮ ಮಕ್ಕಳು ಹಾಡಿಕೊಳ್ಳಲೆಂದು ಹೇಳಿಕೊಳ್ಳಲೆಂದು ಕಥೆಗಳನ್ನೋ ಪದ್ಯಗಳನ್ನೋ ಬರೆದರೂ ಕನ್ನಡದ ಮಕ್ಕಳ ಸಾಹಿತ್ಯ ಸಮೃದ್ಧವಾಗುತ್ತದೆ.

ಕನ್ನಡ ಶಾಲೆಗಳು ಉಳಿಯಬೇಕು, ಕನ್ನಡ ಶಾಲೆಗಳು ಬಲಗೊಳ್ಳಬೇಕು ಎನ್ನುವ ಹಂಬಲದ ಜೊತೆಗೆ ಕನ್ನಡದ ಮಕ್ಕಳ ಸಾಹಿತ್ಯ ಸಮೃದ್ಧಗೊಳ್ಳಬೇಕು ಎನ್ನುವ ಆಶಯವೂ ಸೇರಿಕೊಳ್ಳಬೇಕಿದೆ. ಕನ್ನಡದ ಶಾಲೆಗಳು ಉಳಿಯಲಿಕ್ಕೆ, ಎಳೆಯರ ಮನಸ್ಸು ವಿಕಸನಗೊಳ್ಳಲಿಕ್ಕೆ ಮಕ್ಕಳ ಸಾಹಿತ್ಯ ಬೀಜರೂಪವಾದುದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT