7

ಹಿಂದಿ ಚಿತ್ರೋದ್ಯಮದ ‘ದರ್ಬಾರಿ ಸಂಸ್ಕೃತಿ’

ಶೇಖರ್‌ ಗುಪ್ತ
Published:
Updated:

ಈ ಅಂಕಣದಲ್ಲಿ ನಾನು ಈ ವಾರ ಚರ್ಚಿಸಿರುವ ವಿಷಯಕ್ಕೆ ವಿಧು ವಿನೋದ್‌ ಚೋಪ್ರಾ ಮತ್ತು ರಾಜಕುಮಾರ್‌ ಹಿರಾನಿ ಅವರು ನಿರ್ಮಿಸಿರುವ ಹಿಂದಿ ಚಲನಚಿತ್ರ ‘ಸಂಜು’ ಸ್ಫೂರ್ತಿಯಾಗಿದೆ.

‘ವೃತ್ತಿ ಕಸುಬು ಗೊತ್ತಿಲ್ಲದ ಪತ್ರಕರ್ತರು ಸಂಜಯ್‌ ದತ್‌ ಅವರನ್ನು ಅಪ್ರಾಮಾಣಿಕವಾಗಿ ಮತ್ತು ಸಿನಿಕತೆಯಿಂದ ಅಪರಾಧಿ ಎಂದು ಬಿಂಬಿಸಿದರು ಎಂಬ ಭಾವನೆ ಮೂಡಿಸುವ ಸಿನಿಮಾ ಇದಾಗಿದೆ’ ಎಂದು ನಾನು ಮೊನ್ನೆಯಷ್ಟೇ ಹೇಳಿದ್ದೆ.

ಈ ವಾದವು ಬೇರೆಯೇ ಆದ ಹಲವು ಪ್ರಶ್ನೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ದೇಶದ ಪ್ರತಿಭಾನ್ವಿತ ಮತ್ತು ಯಶಸ್ವಿ ಚಲನಚಿತ್ರ ನಿರ್ಮಾಪಕರಲ್ಲಿ ವ್ಯವಸ್ಥೆಯ ಮುಂದೆ ಅಂಗಲಾಚುವ ಪ್ರವೃತ್ತಿ ಕಂಡು ಬರುತ್ತಿರುವುದು ಏಕೆ? ಅಮೆರಿಕದ ಪತ್ರಕರ್ತ ರಾಬರ್ಟ್‌ ಡೆ ನಿರೊ, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಸಾರ್ವಜನಿಕ ಸಮಾರಂಭದಲ್ಲಿ ಅತ್ಯಂತ ಕಟುವಾಗಿ ಟೀಕಿಸುವ ಧೈರ್ಯ ತೋರುತ್ತಿದ್ದರೆ, ಭಾರತದ ಶ್ರೀಮಂತ ಚಿತ್ರ ನಿರ್ಮಾಪಕರಲ್ಲಿ ರಾಜ್‌ ಠಾಕ್ರೆಗೆ ಕೃತಜ್ಞತೆ ಸಲ್ಲಿಸುವ ಅನಪೇಕ್ಷಿತ ಪ್ರವೃತ್ತಿ ಕಂಡು ಬರಲು ಕಾರಣ ಏನು. ಈ ರಾಜ್‌ ಠಾಕ್ರೆ, ಪ್ರಭಾವಿ ವ್ಯಕ್ತಿಯೇನಲ್ಲ.

ಅವರು ಎಷ್ಟೇ ಅಬ್ಬರಿಸಿದರೂ ರಾಜ್ಯದಲ್ಲಿನ 288 ವಿಧಾನ ಸಭಾ ಕ್ಷೇತ್ರಗಳ ಪೈಕಿ ಒಂದನ್ನು ಮತ್ತು 227 ಸದಸ್ಯ ಬಲದ ಮುಂಬೈ ಮಹಾನಗರ ಪಾಲಿಕೆಯಲ್ಲಿ 7 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಮಹತ್ವಾಕಾಂಕ್ಷೆಯ ಚಿತ್ರವೊಂದು ರಾಜಕೀಯವಾಗಿ ಪ್ರಭಾವಿ ಅಲ್ಲದ, ನೈತಿಕ ನಿಲುವೂ ಇಲ್ಲದ ಮತ್ತು ಅವರ ಚಿಕ್ಕಪ್ಪ ಬಾಳಾಸಾಹೇಬ್‌ ಅವರಿಗೆ ಇದ್ದಂತಹ ಚಿತ್ರ ರಂಗದ ಸಂಪರ್ಕವೂ ಹೊಂದಿಲ್ಲದ ರಾಜ್‌ ಠಾಕ್ರೆಗೆ ತಲೆಬಾಗಿರುವುದು ಏಕೆ? ಮುಂಬೈನ ಆರಾಧ್ಯ ದೇವತೆ ಮತ್ತು ವಿಘ್ನ ನಿವಾರಕನಾಗಿರುವ ಗಣೇಶನಿಗೆ ಮಾತ್ರ ಇದೆಲ್ಲವೂ ಅರ್ಥವಾಗಬಹುದು.

ರಾಜ್‌ ಠಾಕ್ರೆಗೆ ಗೆಲ್ಲಲು ಸಾಧ್ಯವಾಗಿರಲಿಕ್ಕಿಲ್ಲ, ಆದರೆ ಬಹಳಷ್ಟನ್ನು ನಾಶಪಡಿಸಬಲ್ಲ. ನಿಮ್ಮ ಅಂಗಡಿಗೆ ಬೆಂಕಿ ಬೀಳಬಹುದು, ಕಾರ್‌ಗೆ ಕಲ್ಲು ಬೀಳಬಹುದು ಮತ್ತು ಈ ನಿರ್ದಿಷ್ಟ ಪ್ರಕರಣದಲ್ಲಿ ಥಿಯೇಟರ್‌ಗೆ ಹಾನಿ ಸಂಭವಿಸಬಹುದು. ಹೀಗಾಗಿ ಇಂತಹವರನ್ನು ಎದುರು ಹಾಕಿಕೊಳ್ಳಲು ಯಾರೂ ಮುಂದಾಗುವುದಿಲ್ಲ. ನಗರದ ಪ್ರಶ್ನಾತೀತ ದೊರೆಯ ವಿರುದ್ಧ ಮಂಡಿಯೂರುವುದಕ್ಕೆ ಏನು ಕಾರಣ ಇರಬಹುದು ಎನ್ನುವುದು ಊಹೆಗೆ ನಿಲುಕದು.

ಮುಂಬೈ ಸಿನಿಮಾ ರಂಗದ ಜತೆ (ಸಾಧ್ಯವಾದಷ್ಟು ಮಟ್ಟಿಗೆ ನಾನು ‘ಬಾಲಿವುಡ್‌’ ಶಬ್ದ ಬಳಸಲು ಹಿಂದೇಟು ಹಾಕುವೆ) ನನಗೆ ಹಳೆಯ ಸಂಬಂಧ ಇದೆ. ಮುಂಬೈ ಚಿತ್ರರಂಗದವರು, ಭೂಗತ ಮತ್ತು ಭೂಗತರಲ್ಲದ ಪಾತಕಿಗಳು ಮತ್ತು ರಾಜಕೀಯವಾಗಿ ಪ್ರಭಾವಶಾಲಿಯಾದವರ ಜತೆ ಮೊದಲಿನಿಂದಲೂ ಸಹಜೀವನ ನಡೆಸುತ್ತಲೇ ಬಂದಿದ್ದಾರೆ. ಆ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯುವೆ. ಸರ್ಕಾರವೂ ಸೇರಿದಂತೆ ಪ್ರಭಾವಿಗಳ ಜತೆಗಿನ ಈ ಕಪಟತನದ ಸಹಬಾಳ್ವೆಯ ಬಾಂಧವ್ಯದಲ್ಲಿ ವಿಧೇಯತೆ, ಗುಲಾಮಗಿರಿ, ಅಂಗಲಾಚುವ ಪ್ರವೃತ್ತಿಗಳು ಎದ್ದು ಕಾಣುತ್ತವೆ.

ಸೃಜನಶೀಲ ವರ್ಗದವರು ಸ್ಥಾಪಿತ ಹಿತಾಸಕ್ತಿಗಳಿಗೆ ಶರಣಾಗುತ್ತಿರುವುದು ನಮ್ಮ ಸಮಾಜದ ಇನ್ನೊಂದು ಮುಖವನ್ನು ತೋರಿಸುತ್ತದೆ. ಅದು ನಿಜಕ್ಕೂ ದುರದೃಷ್ಟಕರ. ನಮ್ಮಲ್ಲಿ ಶಿಕ್ಷಣ ತಜ್ಞರು, ಚಿತ್ರ ಕಲಾವಿದರು ಮತ್ತು ಕೆಲ ಪತ್ರಕರ್ತರನ್ನು ಹೊರತುಪಡಿಸಿದರೆ ಸೃಜನಶೀಲ ವರ್ಗದ ಬಹುತೇಕರು ಮತ್ತು ಸಾಂಸ್ಕೃತಿಕ ಲೋಕದ ಖ್ಯಾತನಾಮರು ಅಧಿಕಾರದಲ್ಲಿ ಇದ್ದವರ, ಸರ್ಕಾರದ ಅಥವಾ ಪಾತಕಿಗಳ ಮರ್ಜಿ ಕಾಯುತ್ತ, ಅವರ ಅಡಿಯಾಳಾಗಿ, ಕೋಡಂಗಿಗಳಂತೆ ವರ್ತಿಸುವುದರಲ್ಲಿಯೇ ಧನ್ಯತಾ ಭಾವ ಕಾಣುತ್ತಾರೆ.

ಕೋಟ್ಯಂತರ ರೂಪಾಯಿಗಳ ಸ್ಟುಡಿಯೊಗಳ ಮಾಲೀಕರು ಮತ್ತು ಮೊದಲ ವಾರದಲ್ಲಿಯೇ ಹಲವು ಕೋಟಿಗಳನ್ನು ಬಾಚಿಕೊಳ್ಳುವ ಭರ್ಜರಿ ಯಶಸ್ಸಿನ ಚಲನಚಿತ್ರಗಳನ್ನು ನಿರ್ಮಿಸುವವರು ಕೂಡ ಅವಮಾನಕರವಾದ ಮತ್ತು ಕಳಂಕ ಮೆತ್ತಿಕೊಳ್ಳುವ ಬಗೆಯಲ್ಲಿ ಹಲ್ಲು ಗಿಂಜುವ ರೀತಿಯಲ್ಲಿ ವರ್ತಿಸುವುದರಿಂದ ಗಳಿಸುವುದಾದರೂ ಏನು ಎನ್ನುವ ಪ್ರಶ್ನೆ ಕಾಡುತ್ತದೆ.

ಬಹಳ ಹಿಂದಿನಿಂದಲೂ ನಮ್ಮಲ್ಲಿ ಪಾಲಿಸಿಕೊಂಡು ಬಂದಿರುವ ‘ದರ್ಬಾರಿ ಸಂಸ್ಕೃತಿ’ಯಲ್ಲಿಯೇ ಇದರ ಬೇರುಗಳಿವೆ. ಮಹಾರಾಜರು, ಸುಲ್ತಾನರು ಇತಿಹಾಸದ ಉದ್ದಕ್ಕೂ ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಸಂಗೀತಗಾರರು, ನೃತ್ಯ ಪಟುಗಳು, ಚಿತ್ರ ಕಲಾವಿದರು ತಮ್ಮ ಪ್ರತಿಭೆಯನ್ನು ನಗದನ್ನಾಗಿ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಜತೆಗೆ ಗೌರವ, ಸನ್ಮಾನ, ಪ್ರಸಿದ್ಧಿಯನ್ನೂ ಗಳಿಸಿದ್ದಾರೆ.

‘ಭಾರತ್ ಸರ್ಕಾರ್‌’ ಕೂಡ ಕಲಾವಿದರಿಗೆ ಗೌರವ ಧನ ನೀಡುವುದನ್ನು ಮುಂದುವರೆಸಿಕೊಂಡು ಬಂದಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯ‌ಲ್ಲಿ ರಾಜ– ಮಹಾರಾಜರ ಕಾಲದ ‘ಆಸ್ಥಾನ ಸಂಸ್ಕೃತಿ’ ಹಾಗೆಯೇ ಉಳಿದುಕೊಂಡು ಬಂದಿದೆ. ಸರ್ಕಾರವು ಅನುದಾನ, ವಿದ್ಯಾರ್ಥಿ ವೇತನ, ವಿದೇಶ ಪ್ರವಾಸ, ಸಂಸ್ಕೃತಿ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಲಾಭದಾಯಕ ಸ್ಥಾನ, ಪ್ರದರ್ಶನಕ್ಕೆ ಅವಕಾಶ, ದೆಹಲಿಯ ಪ್ರತಿಷ್ಠಿತ ಪ್ರದೇಶದಲ್ಲಿ ಬಂಗಲೆ ಮತ್ತು ಪದ್ಮ ಪ್ರಶಸ್ತಿಗಳನ್ನು ನೀಡುತ್ತಲೇ ಬಂದಿದೆ.

ಸೃಜನಶೀಲ ಪ್ರತಿಭಾನ್ವಿತರ ಪೈಕಿ ಚಿತ್ರಕಲಾವಿದರು ಮತ್ತು ಬರಹಗಾರರು ಮಾತ್ರ ಆರಂಭದಿಂದಲೂ ಇಂತಹ ಆಮಿಷಗಳಿಂದ ದೂರ ಉಳಿದಿದ್ದಾರೆ. ಬರಹಗಾರರ ಎಡಪಂಥೀಯ ವಿಚಾರಧಾರೆ ಮತ್ತು ಪೇಂಟಿಂಗ್‌ಗಳ ಮಾರಾಟ ಈಗ ಲಾಭದಾಯಕ ವಹಿವಾಟಾಗಿ ಬೆಳೆದಿರುವುದರಿಂದ ಅವರಿಗೆ ಸರ್ಕಾರದ ಆಶ್ರಯ ಬೇಕಾಗಿಲ್ಲ.

ಪ್ರಭಾವಶಾಲಿಯಾದ ಮತ್ತು ಹಣದ ಥೈಲಿಯನ್ನೇ ಬಿತ್ತಿ ಬೆಳೆಯುವ ಸಿನಿಮಾ ರಂಗವು ಹೇಡಿಯಂತೆ ವರ್ತಿಸುತ್ತಿರುವುದು ಮಾತ್ರ ದುರದೃಷ್ಟಕರ ಬೆಳವಣಿಗೆಯಾಗಿದೆ. ಎಡಪಂಥೀಯ ವಿಚಾರಧಾರೆಯ ಬೆರಳೆಣಿಕೆಯಷ್ಟು ಕಲಾವಿದರು ತಮ್ಮತನ ಕಾಯ್ದುಕೊಂಡು ಬಂದಿದ್ದಾರೆ, ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಕವಿ ಗುಲ್ಜಾರ್‌ (83) ಅವರೂ ಒಬ್ಬರಾಗಿದ್ದಾರೆ.

ಮೊದಲ ತಲೆಮಾರಿನ ಖ್ಯಾತನಾಮ ಕಲಾವಿದರ ಮಕ್ಕಳು ಆಸ್ಥಾನದ ಗಾಯಕರು ಮತ್ತು ಕಲಾವಿದರಾಗಿ ಇರುವುದರಲ್ಲಿಯೇ ಸಂತೋಷ ಕಾಣುತ್ತಿದ್ದಾರೆ. ಬೆರಳೆಣಿಕೆಯಷ್ಟು ಕಲಾವಿದರು ರಾಜಕೀಯದಲ್ಲಿ ಅದೃಷ್ಟ ಪರೀಕ್ಷಿಸಿದ್ದಾರೆ.

ಅಮಿತಾಭ್‌ ಬಚ್ಚನ್‌ ಅವರು ಮೂರೇ ವರ್ಷಗಳಲ್ಲಿ ರಾಜಕೀಯದಿಂದ ಬೇಸತ್ತು ನಿವೃತ್ತಿ ಘೋಷಿಸಿದರು. ಮತ್ತೆ ಯಾವತ್ತೂ ರಾಜಕಾರಣಕ್ಕೆ ಮರಳಲಿಲ್ಲ. ಅಷ್ಟೇ ಅಲ್ಲ, ಅಧಿಕಾರದಲ್ಲಿ ಇದ್ದವರನ್ನು ಒಂದು ಬಾರಿಯೂ ಅವರು ಪ್ರಶ್ನಿಸಿಲ್ಲ. ‘ನಿರ್ಭಯಾ’ ಪ್ರಕರಣ ಒಳಗೊಂಡಂತೆ ಕೆಲವೇ ಕೆಲ ಆಯ್ದ ವಿಷಯಗಳ ಬಗ್ಗೆ ಮಾತ್ರ ಅವರು ಬಾಯಿ ಬಿಟ್ಟಿದ್ದಾರೆ.

ಚಿತ್ರದಲ್ಲಿ ನೀವು ‘ಸರ್ಕಾರ’ದ ಪಾತ್ರ ನಿಭಾಯಿಸಬಹುದು. ಆದರೆ, ವಾಸ್ತವಿಕ ಬದುಕಿನ ಸರ್ಕಾರವನ್ನು ಎದುರು ಹಾಕಿಕೊಳ್ಳಲು ಯಾರೂ ಮನಸ್ಸು ಮಾಡುವುದಿಲ್ಲ. ಇದಕ್ಕೆ ಕೆಲವರು ಅಪವಾದವಾಗಿದ್ದಾರೆ. ಅವರಲ್ಲಿ ರಾಜ್‌ ಬಬ್ಬರ್‌, ಶತ್ರುಘ್ನ ಸಿನ್ಹಾ, ಹೇಮಾ ಮಾಲಿನಿ, ಸ್ಮೃತಿ ಇರಾನಿ, ದಿವ್ಯ ಸ್ಪಂದನಾ (ರಮ್ಯಾ) ಅವರಂಥವರು ಮಾತ್ರ ರಾಜಕೀಯದಲ್ಲಿ ಧೈರ್ಯದಿಂದ ಮುನ್ನುಗ್ಗುತ್ತಿದ್ದಾರೆ. ಉಳಿದವರು ರಾಜ್ಯಸಭೆಗೆ ನಾಮಕರಣಗೊಳ್ಳುವುದರಲ್ಲೇ ಸಂತೃಪ್ತಿ ಕಾಣುತ್ತಾರೆ.

ಚಿತ್ರರಂಗದ ಕೆಲವರು ತಮ್ಮ ನಿಲುವಿನಲ್ಲಿ ಆಷಾಢಭೂತಿತನವನ್ನೇನೂ ತೋರುವುದಿಲ್ಲ. ಹಿರಾನಿ ಅವರು ಸಮಾಜಕ್ಕೆ ಸಂದೇಶ ನೀಡುವ ‘3 ಈಡಿಯಟ್ಸ್‌’, ‘ಪಿಕೆ’ ಮತ್ತು ‘ಮುನ್ನಾಭಾಯಿ’ ಸರಣಿ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ‘ಮಿಷನ್‌ ಕಾಶ್ಮೀರ್‌’ ಚಿತ್ರದ ಮೂಲಕ ಚೋಪ್ರಾ ಅವರು ದೇಶಾಭಿಮಾನದ ಬಗ್ಗೆ ನಮಗೆ ಬೋಧನೆ ನೀಡಿದ್ದಾರೆ. ಐಎಸ್‌ಐ ಎಸಗಿದ ಕುತಂತ್ರಗಳನ್ನು ದೇಶಭಕ್ತರು ವಿಫಲಗೊಳಿಸಿದ್ದನ್ನು ತೋರಿಸಿದ್ದಕ್ಕೆ ಚಿತ್ರ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಸಿನಿಮಾ ವೀಕ್ಷಿಸಿ ಬೆಂಬಲಿಸಿದ್ದಾರೆ.

ಈ ಯಶಸ್ವಿ ಚಿತ್ರ ನಿರ್ಮಾಪಕರು, ತಾವು ನೆಲೆಸಿರುವ ಮುಂಬೈ ನಗರದಲ್ಲಿನ ಪಾತಕಿಗಳ ಬಗ್ಗೆ ಕಠೋರ ನಿಲುವು ತಳೆದಿಲ್ಲ. ‘ದಾವೂದ್‌ ಇಬ್ರಾಹಿಂನ ಸೋದರ ಅನೀಸ್‌ನಿಂದ ರೈಫಲ್ಸ್‌, ಗುಂಡುಗಳನ್ನು ಪಡೆದುಕೊಂಡಿದ್ದೆ’ ಎಂದು ಸಂಜಯ್‌ ದತ್‌ ಅವರೇ ಹೇಳಿಕೊಂಡಿದ್ದಾರೆ. ಮುಂಬೈ ಸ್ಫೋಟ ನಡೆದ ಇಷ್ಟು ವರ್ಷಗಳ ನಂತರವೂ ಮುಂಬೈನಲ್ಲಿ ಪಾತಕಿಗಳು ಸಕ್ರಿಯವಾಗಿದ್ದಾರೆ.

ಕರಾಚಿಯಿಂದಲೇ ತಮ್ಮ ಸಾಮ್ರಾಜ್ಯವನ್ನು ನಿಯಂತ್ರಿಸುತ್ತಿದ್ದಾರೆ. ಇಂತಹವರನ್ನು ಎದುರು ಹಾಕಿಕೊಳ್ಳಲು ಯಾರೂ ಸಿದ್ಧರಿಲ್ಲ. ಶೀಘ್ರದಲ್ಲಿಯೇ ‘ಭಾಯಿ ಸಲ್ಮಾನ್‌’, ‘ಬಡಾ ಭಾಯಿ’ ಚಿತ್ರ ನಿರ್ಮಿಸಬಹುದು. ದೊಡ್ಡ ನಟನಲ್ಲದ ಜಾನ್‌ ಅಬ್ರಹಾಂ ಅವರನ್ನು ಹಾಕಿಕೊಂಡು ದೇಶಭಕ್ತರು ಇನ್ನೊಂದು ಚಿತ್ರ ನಿರ್ಮಿಸಬಹುದು.

ದೊಡ್ಡ ನಟರನ್ನು ಸುಲಭವಾಗಿ ಕ್ಷಮಿಸಿಬಿಡಲಾಗುತ್ತದೆ. ಅವರಿಗಾಗಿ ಇಡೀ ಚಿತ್ರೋದ್ಯಮ ದೊಡ್ಡ ಮೊತ್ತವನ್ನೇ ಪಣಕ್ಕೆ ಒಡ್ಡಿರುತ್ತದೆ. ಆಮಿರ್‌ ಖಾನ್‌, ಒಂದು ಬಾರಿ ಮುಕ್ತವಾಗಿ ಮಾತನಾಡಿದ ‘ತಪ್ಪು’ ಎಸಗಿದ್ದರು. ಅವರು ಸಂಪೂರ್ಣವಾಗಿ ಮೌನಕ್ಕೆ ಶರಣಾಗುವಂತೆ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಯಿತು. ಅವರ ಅತಿದೊಡ್ಡ ಬ್ರ್ಯಾಂಡ್‌ ಪ್ರಾಯೋಜಕತ್ವವನ್ನು ರದ್ದು ಪಡಿಸಲಾಯಿತು.

ಶಾರೂಖ್‌ ಖಾನ್‌ ಅವರ ದನಿಯನ್ನೂ ಹತ್ತಿಕ್ಕಲಾಯಿತು, ಅಲ್ಲಿಂದಾಚೆಗೆ ಅವರೂ ಮೌನಕ್ಕೆ ಶರಣಾಗಿದ್ದಾರೆ. ಇದಕ್ಕೆ ಅವರು ಅನೇಕ ಚಿತ್ರಗಳಲ್ಲಿ ಮುಸ್ಲಿಂ ಹೆಸರಿನ ಪಾತ್ರ ನಿರ್ವಹಿಸುವ ಮೂಲಕ ಮೌನವಾಗಿಯೇ ತಮ್ಮ ನಿಲುವು ಸ್ಪಷ್ಟಪಡಿಸಿದರು. ಸಲ್ಮಾನ್‌ ಖಾನ್‌ ಉತ್ತಮ ಪಾತ್ರಗಳಲ್ಲಿ ಅಭಿನಯಿಸುತ್ತ ಹಿಂದೂಗಳ ಮನ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಸಂಜುಗೆ ಎದುರಾದ ಸಮಸ್ಯೆಗಳು ಸಲ್ಮಾನ್‌ ಅವರಿಗೆ ಯಾವತ್ತೂ ಎದುರಾಗಿಲ್ಲ.

ಜನಪ್ರಿಯ ಸಂಸ್ಕೃತಿಯು, ವರ್ತಮಾನ ಕಾಲದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ ಎನ್ನುವುದು ಸಾಂಪ್ರದಾಯಿಕ ತರ್ಕವಾಗಿದೆ. ಭಾರತದಲ್ಲಿ ರಾಜಕಾರಣಿಗಳು ಮತ್ತು ಮಾರುಕಟ್ಟೆ ಪ್ರವೀಣರಿಗಿಂತ ಮೊದಲೇ ಸಿನಿಮಾಗಳು ಇದನ್ನು ಗ್ರಹಿಸುತ್ತವೆ. ಈ ವಿಷಯದಲ್ಲಿ ಪತ್ರಕರ್ತರು ಯಾವಾಗಲೂ ಹಿಂದೆ ಬಿದ್ದಿರುತ್ತಾರೆ.

ಸಾಮಾಜಿಕವಾಗಿ ಪ್ರಸ್ತುತವಾಗಿರುವ ವಿಷಯಗಳನ್ನು ಆಧರಿಸಿ ಚಿತ್ರಗಳನ್ನು ತಯಾರಿಸುವ ಸಂದರ್ಭದಲ್ಲಿಯೂ ಚಿತ್ರದ ನಾಯಕನನ್ನು ಸೂಪರ್‌ಮ್ಯಾನ್‌ನಂತೆ ಬಿಂಬಿಸಲಾಗುತ್ತಿದೆ. ಈ ಸೂಪರ್‌ಮ್ಯಾನ್‌ ಎಲ್ಲರ ಕೆಲಸಗಳನ್ನು ಹೊಗಳಿ ತನ್ನ ಋಣ ತೀರಿಸುತ್ತಾನೆ.

ಪತ್ರಕರ್ತರನ್ನು ಸಂಜು ಕೆಟ್ಟ ಭಾಷೆಯಲ್ಲಿ ನಿಂದಿಸಿರುವುದಕ್ಕೆ ನಾನು ದೂರುವುದಿಲ್ಲ. ಸಿನಿಮಾದ ಜನರು ದಿನಪತ್ರಿಕೆಗಳಲ್ಲಿ ಜಾಹೀರಾತಿಗೆ, ಹೊಗಳಿಕೆಗೆ ಹಣ ಪಾವತಿಸುವಾಗ ಅವರು ಪತ್ರಕರ್ತರನ್ನು ತಿರಸ್ಕಾರದಿಂದ ನೋಡುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ.

ಸಮಾಜದ ಮೇಲೆ ಪ್ರಭಾವ ಬೀರುವ ಚಿತ್ರವೊಂದು ಬದಲಾವಣೆಗೆ ನೆರವಾಗುತ್ತದೆ. ಅವಕಾಶವಂಚಿತರು, ದುರ್ಬಲರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ನೆರವಾಗುತ್ತದೆ. ಅಧಿಕಾರದಲ್ಲಿ ಇರುವವರಿಗೆ, ಸರ್ಕಾರಕ್ಕೆ ಮತ್ತು ಖಾಸಗಿ ಸೇನೆ ಸಾಕಿಕೊಂಡಿರುವ ರಾಜ್‌ ಠಾಕ್ರೆ ಅಥವಾ ದಾವೂದ್‌ ಇಬ್ರಾಹಿಂನಂಥವರಿಗೆ ಶರಣಾಗಿರುವ ಚಿತ್ರೋದ್ಯಮದಿಂದ ಹೆಚ್ಚಿನದ್ದೇನನ್ನೂ ನಿರೀಕ್ಷಿಸಲು ಸಾಧ್ಯವಾಗಲಾರದು.

ಸರ್ಕಾರಕ್ಕೆ ಇಷ್ಟವಾಗುವ ಕಾರಣಕ್ಕೆ ಇಂಥವರು ಶೌಚಾಲಯದ ಬಗ್ಗೆ ಚಿತ್ರ ನಿರ್ಮಿಸಬಹುದು. ಹಿಂದಿ ಸಿನಿಮಾಗಳ ಮುಂಚೂಣಿಯ 10 ಮಂದಿ ನಟರು ಬಹಳ ಸಮಯದಿಂದ ದಲಿತ ಅಥವಾ ಸಂಕಷ್ಟಕ್ಕೆ ಗುರಿಯಾಗಿರುವ ರೈತನ ಪಾತ್ರ ಮಾಡದೇ ವರ್ಷಗಳೇ ಗತಿಸಿವೆ. ದಕ್ಷಿಣದ ರಜನಿಕಾಂತ್‌ ಮಾತ್ರ ಇಂತಹ ಪಾತ್ರವನ್ನು ಹೆಮ್ಮೆಯಿಂದ ನಿರ್ವಹಿಸಿದ್ದಾರೆ.

ಅತ್ಯಂತ ಪ್ರಭಾವಿ ಮುಂಬೈ ಚಿತ್ರೋದ್ಯಮವು ಭಾಯಿಗಳ ಎದುರು ಶರಣಾಗತವಾಗಿದೆ. ಪಾತಕಿಗಳನ್ನು ಕೊಂದು ಹಾಕಿದ ಎನ್‌ಕೌಂಟರ್ ಖ್ಯಾತಿಯ ಪೊಲೀಸ್‌ ಅಧಿಕಾರಿಗಳಿಗೂ ಅವರು ಹೆದರುತ್ತಾರೆ ಎನ್ನುವುದೂ ಕಟು ಸತ್ಯ. ಮುಂಬೈ ಪೊಲೀಸರಲ್ಲಿನ ಎನ್‌ಕೌಂಟರ್‌ ಪರಿಣತರಾದ ದಯಾ ನಾಯಕ್‌ ಮತ್ತು ಪ್ರದೀಪ್‌ ಶರ್ಮಾ ಅವರನ್ನು ನನ್ನ ವಾಕ್‌ ದಿ ಟಾಕ್‌ ಕಾರ್ಯಕ್ರಮದಲ್ಲಿ ಸಂದರ್ಶಿಸಿದ್ದೆ.

ತಮ್ಮ ಹಳ್ಳಿಯಲ್ಲಿ ನಿರ್ಮಿಸಿದ ಆಸ್ಪತ್ರೆಗೆ ಸೂಪರ್‌ಸ್ಟಾರ್‌ ಒಬ್ಬರು ಹಣಕಾಸಿನ ನೆರವು ನೀಡಿದ್ದನ್ನು ಮತ್ತು ಆಸ್ಪತ್ರೆ ಉದ್ಘಾಟಿಸಲು ಹಳ್ಳಿಗೆ ಭೇಟಿ ಕೊಟ್ಟು, ಪೊಲೀಸ್‌ ಉನ್ನತ ಅಧಿಕಾರಿಗಳನ್ನೂ ದಿಗಿಲುಗೊಳಿಸಿದ್ದನ್ನು ನಾಯಕ್‌ ಅವರು ನನ್ನೊಂದಿಗೆ ಹೇಳಿಕೊಂಡಿದ್ದರು.

ಇದೇ ನಾಯಕ್‌, ಪ್ರಕರಣವೊಂದರ ಸಂಬಂಧದಲ್ಲಿ ಕೋರ್ಟ್‌ ವಿಚಾರಣೆಯಲ್ಲಿ ಸಿಲುಕಿಕೊಂಡು ಸೇವೆಯಿಂದ ಸಸ್ಪೆಂಡ್‌ ಆದಾಗ (ಆನಂತರ ಅವರನ್ನು ನಿರ್ದೋಷಿ ಎಂದು ಘೋಷಿಸಲಾಗಿತ್ತು) ಯಾವ ನಟನೂ ಅವರ ನೆರವಿಗೆ ಬಂದಿರಲಿಲ್ಲ.

ಚಿತ್ರರಂಗದ ಹೊಸಬರಲ್ಲಿ ಕೆಲಮಟ್ಟಿಗೆ ಭರವಸೆ ಇಡಬಹುದು. ಯುವ ಜನತೆ ತಮಗೆ ಅನಿಸಿದ್ದನ್ನು ಮುಚ್ಚಿಟ್ಟುಕೊಳ್ಳದೇ ವ್ಯಕ್ತಪಡಿಸುವ ಧೈರ್ಯ ತೋರುತ್ತಿದೆ. ಅಧಿಕಾರದಲ್ಲಿ ಇದ್ದವರನ್ನು ಪ್ರಶ್ನಿಸುವ ಮನೋಭಾವ ಅವರಲ್ಲಿ ಕಂಡು ಬರುತ್ತಿದೆ. ಇಂತಹವರ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಡು ನಾವು ಸಂಭ್ರಮಿಸಬೇಕಾಗಿದೆ. ಅವರೆಲ್ಲ ಜನಪ್ರಿಯತೆಯ ಉತ್ತುಂಗಕ್ಕೆ ಏರಿಲ್ಲ.

ಬಹುಶಃ ಆ ಹಂತಕ್ಕೆ ಯಾವತ್ತೂ ಏರಲಿಕ್ಕಿಲ್ಲ. ಆದರೆ, ಅವರು ಪ್ರಭಾವಶಾಲಿಯಾಗಿ ಬೆಳೆಯುತ್ತಿದ್ದಾರೆ. ಅವರ ಅಸ್ತಿತ್ವ ಎಲ್ಲರ ಅನುಭವಕ್ಕೆ ಬರುತ್ತಿದೆ. ಅವಹೇಳನಕ್ಕೆ ಗುರಿಯಾಗಿರುವ ‘ಬಾಲಿವುಡ್‌’ ದೊಡ್ಡ ನಟರು ಮತ್ತು ಸ್ಟುಡಿಯೊಗಳನ್ನು ಪ್ರತಿನಿಧಿಸಬಹುದು. ಉಳಿದವರು ಹಿಂದಿ ಸಿನಿಮಾದ ನಿಜವಾದ ಸೃಜನಶೀಲ ವರ್ಗವಾಗಿ ಉಳಿಯಬಹುದು.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !