ಶುಕ್ರವಾರ, ಡಿಸೆಂಬರ್ 6, 2019
18 °C

ಧರ್ಮ ಧ್ವಜದ ಅಡಿ ಮೋಸ

ಗುರುರಾಜ ಕರಜಗಿ
Published:
Updated:

ಹಿಂದೆ ವಾರಾಣಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಒಂದು ಇಲಿಯಾಗಿ ಹುಟ್ಟಿದ. ಅವನು ಬೆಳೆದು ಅತ್ಯಂತ ಬಲಶಾಲಿಯಾಗಿ ಒಂದು ಹಂದಿಯಷ್ಟು ಎತ್ತರ ಬೆಳೆದುಬಿಟ್ಟ. ಅವನು ಐದು ನೂರು ಇಲಿಗಳಿಗೆ ರಾಜನಾಗಿ ಕಾಡಿನಲ್ಲಿ ಇರುತ್ತಿದ್ದ.

ಅದೇ ಕಾಡಿನಲ್ಲಿ ಒಂದು ನರಿ ಇತ್ತು. ಒಮ್ಮೆ ಕಾಡಿಗೆ ಬೆಂಕಿ ಬಿದ್ದಾಗ ಇದು ಸಿಕ್ಕಿಕೊಂಡು ಮೈಮೇಲಿನ ಕೂದಲುಗಳು ಸುಟ್ಟು ಹೋಗಿ ತಲೆಯ ಮೇಲಿನ ಕೂದಲುಗಳು ಮಾತ್ರ ಋಷಿಗಳ ಜುಟ್ಟಿನಂತೆ ಉಳಿದಿದ್ದವು. ಈ ನರಿ ಬೋಧಿಸತ್ವನ ಪರಿವಾರದ ಇಲಿಗಳನ್ನು ನೋಡಿ ಅವುಗಳನ್ನು ತಿನ್ನಲು ಹೊಂಚುಹಾಕಿತು. ಇಲಿಗಳ ಬಿಲದ ಮುಂದೆಯೇ ಸೂರ್ಯನಿಗೆ ಮುಖಮಾಡಿ, ಬಾಯಿಯನ್ನು ಅಗಲವಾಗಿ ತೆರೆದುಕೊಂಡು, ಒಂದೇ ಕಾಲಿನಲ್ಲಿ ನಿಂತಿತು. ಬೋಧಿಸತ್ವ ಇದನ್ನು ನೋಡಿ ಕುತೂಹಲದಿಂದ ಹತ್ತಿರ ಬಂದು, ‘ತಾವು ಯಾರು?’ ಎಂದು ಕೇಳಿತು.

‘ನಾನೊಬ್ಬ ಧರ್ಮಿಷ್ಠ, ಧರ್ಮಗುರು. ನನ್ನ ಹೆಸರು ಅಗ್ನಿ ಭಾರದ್ವಾಜ’ ಎಂದಿತು ನರಿ.
‘ಹೀಗೇಕೆ ಒಂದೇ ಕಾಲಿನ ಮೇಲೆ ನಿಂತಿದ್ದೀರಿ?’
‘ನನ್ನಿಂದ ಭೂತಾಯಿಗೆ ತೊಂದರೆಯಾಗಬಾರದಲ್ಲವೇ? ಅದಕ್ಕೇ ನಾಲ್ಕು ಕಾಲುಗಳ ಭಾರವನ್ನು ಹಾಕದೆ ಒಂದೇ ಕಾಲ ಮೇಲೆ ನಿಂತಿದ್ದೇನೆ’.
‘ಬಾಯಿ ಏಕೆ ತೆರೆದಿದ್ದೀರಿ? ಮತ್ತು ಸೂರ್ಯನಿಗೆ ಮುಖವಾಗಿ ಏಕೆ ನಿಂತಿದ್ದೀರಿ?’
‘ನಾನು ಗಾಳಿಯ ಹೊರತು ಏನನ್ನೂ ಸೇವಿಸಲಾರೆ. ಅದು ನನ್ನ ವ್ರತ. ನನಗೆ ಸೂರ್ಯನೇ ದೇವರು. ಯಾವಾಗಲೂ ಅವನ ಕುರಿತೇ ಧ್ಯಾನ ಮಾಡುತ್ತೇನೆ, ನಮಸ್ಕಾರ ಮಾಡುತ್ತೇನೆ’.

ಬೋಧಿಸತ್ವ ಈ ಪ್ರಾಣಿ ಸದಾಚಾರಿಯಾದದ್ದು ಎಂದು ತೀರ್ಮಾನಿಸಿ ತನ್ನ ಪರಿವಾರದವರೊಂದಿಗೆ ಇದರ ಸೇವೆಗೆ ಬರತೊಡಗಿದ. ಸೇವೆಯನ್ನು ಮುಗಿಸಿ ಮರಳಿ ಹೋಗುವಾಗ ನರಿ, ಎಲ್ಲಕ್ಕಿಂತ ಕೊನೆಯದಾಗಿ ಹೋಗುವ ಇಲಿಯನ್ನು ಗಪ್ಪೆಂದು ಹಿಡಿದು ನುಂಗಿ ಏನೂ ಆಗದಂತೆ ಕುಳಿತುಕೊಳ್ಳುತ್ತಿತ್ತು. ಎರಡು ವಾರಗಳ ನಂತರ ಇಲಿಗಳಿಗೆ ತಮ್ಮ ಸಂಖ್ಯೆ ಕಡಿಮೆಯಾಗುತ್ತಿರುವುದು ಗೋಚರವಾಯಿತು. ಒಂದು ಇಲಿ ನಾಯಕ ಬೋಧಿಸತ್ವನಿಗೆ ಕೇಳಿತು, ‘ಮೊದಲು ನಮ್ಮ ಬಿಲದಲ್ಲಿ ಜಾಗವೇ ಸಾಕಾಗುತ್ತಿರಲಿಲ್ಲ. ಮಲಗಲು ಸ್ಥಳವಿಲ್ಲವೆಂದು ಒತ್ತಿಕೊಂಡು ಎದ್ದು ನಿಲ್ಲುತ್ತಿದ್ದೆವು. ಈಗ ನೋಡಿದರೆ ಎಲ್ಲರಿಗೂ ಮಲಗುವಷ್ಟು ಜಾಗವಿದೆ. ನಮ್ಮ ಸಂಖ್ಯೆ ಹೇಗೆ ಕಡಿಮೆಯಾಗುತ್ತಿದೆ?’.

ಬೋಧಿಸತ್ವ ಚಿಂತಿಸಿದ. ನಾಲ್ಕಾರು ವಯಸ್ಸಾದ ಇಲಿಗಳು ಸತ್ತದ್ದು ಗೊತ್ತು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಇಲಿಗಳು ಕಾಣೆಯಾಗುವುದಕ್ಕೆ ಏನು ಕಾರಣವಿದ್ದಿರಬಹುದು? ಅದಕ್ಕೆ ನಿಧಾನವಾಗಿ ನರಿಯ ಬಗ್ಗೆ ಸಂಶಯ ಮೂಡತೊಡಗಿತು. ಮರುದಿನ ನಿತ್ಯದಂತೆ ಇಲಿಗಳೊಂದಿಗೆ ಸೇವೆ ಮಾಡಿ ಮರಳಿ ಬರುವಾಗ ಇಲಿಗಳನ್ನೆಲ್ಲ ಮುಂದಿಟ್ಟುಕೊಂಡು ತಾನೇ ಕೊನೆಗೆ ಬರತೊಡಗಿತು. ನರಿಗೆ ಮತ್ತೂ ಸಂತೋಷ. ಇಷ್ಟು ದೊಡ್ಡದಾದ ಇಲಿಯೇ ನನಗೆ ಇಂದು ಸಿಕ್ಕರೆ ಮರುದಿನದಿಂದ ಉಳಿದ ಇಲಿಗಳನ್ನು ಅನಾಯಾಸವಾಗಿ ಹಿಡಿಯಬಹುದು ಎಂದುಕೊಂಡು ಅದರ ಮೇಲೆ ಹಾರಿತು. ಅದನ್ನು ನಿರೀಕ್ಷಿಸಿದ್ದ ಬೋಧಿಸತ್ವ ಥಟ್ಟನೇ ಹಾರಿ ನೆಗೆದು ನರಿಯ ಕುತ್ತಿಗೆಗೆ ಬಾಯಿ ಹಾಕಿ ಅದರ ಕಂಠನಾಳವನ್ನು ಕತ್ತರಿಸಿ ಕೊಂದು ಹಾಕಿತು. ಅದು ಸಾಯುವ ಮೊದಲು ಹೇಳಿತು, ‘ಎಲೆ ಠಕ್ಕ, ನೀನು ಧಾರ್ಮಿಕನಂತೆ ನಟಿಸುತ್ತ, ಅನ್ಯರನ್ನು ಹಿಂಸಿಸುವುದಕ್ಕಾಗಿಯೇ ಧರ್ಮವನ್ನು ನೆಪವಾಗಿಸಿಕೊಂಡಿದ್ದೀಯಾ. ನಿನಗೆ ಇದೇ ಶಿಕ್ಷೆ’. ಮುಂದೆ ಇಲಿಗಳು ಸಂತೋಷವಾಗಿ ನಿರ್ಭಯವಾಗಿ ಬದುಕಿದವು.

ಮೋಸಮಾಡುವುದು ಅಪರಾಧ. ಅದಲ್ಲದೆ ಧರ್ಮದ ಧ್ವಜವನ್ನು ಹಾರಿಸಿಕೊಂಡು, ಮುಗ್ಧರಲ್ಲಿ ವಿಶ್ವಾಸವನ್ನು ಹುಟ್ಟಿಸಿ ಮೋಸಮಾಡುವುದು ಕ್ಷಮಾರ್ಹವಲ್ಲದ ಅಪರಾಧ. ಅಂಥವರಿಗೆ ಬದುಕಿನಲ್ಲಿ ಮುಂದೆ ಅನೂಹ್ಯವಾದ ಶಿಕ್ಷೆ ಕಾದಿರುತ್ತದೆ.

ಪ್ರತಿಕ್ರಿಯಿಸಿ (+)